/newsfirstlive-kannada/media/media_files/2025/12/17/bm-nemanna-gowda-and-forest-dept-case-2025-12-17-12-51-01.jpg)
M.B.ನೇಮಣ್ಣಗೌಡ ಬಂಧಿಸಿದ ಮೂಡಿಗೆರೆ ಪೊಲೀಸರು
ನಕಲಿ ದಾಖಲೆಗಳನ್ನು ಸೃಷ್ಟಿಸಿ ನ್ಯಾಯಾಲಯದ ಆದೇಶಗಳನ್ನು ಪಡೆದು 512 ಎಕರೆ ಅರಣ್ಯ ಭೂಮಿಯನ್ನು ಕಬಳಿಸಲು ಯತ್ನಿಸಿದ ವ್ಯಕ್ತಿಯನ್ನು ಮೂಡಿಗೆರೆ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಆ ವ್ಯಕ್ತಿಯನ್ನು ಎಂ. ಬಿ ನೇಮಣ್ಣ ಗೌಡ ಅಲಿಯಾಸ್ ಎಂ.ಬಿ.ಮನ್ಮಥ ಎಂದು ಕರೆಯಲಾಗುತ್ತೆ.
"ಈ ಸಂಬಂಧ, ನವೆಂಬರ್ 28 ರಂದು, ಅರಣ್ಯ ಇಲಾಖೆಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು, ಮತ್ತು ನಂತರ ಮೂಡಿಗೆರೆ ತಹಶೀಲ್ದಾರ್ ಕೂಡ ಈ ಸಂಬಂಧ ದೂರು ದಾಖಲಿಸಿದ್ದರು" ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಮಂಗಳವಾರ ತಿಳಿಸಿದ್ದಾರೆ.
ಡಿಸೆಂಬರ್ 13 ರಂದು ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳ ಅಡಿಯಲ್ಲಿ ಹಾಗೂ ಕರ್ನಾಟಕ ಭೂ ಕಂದಾಯ ಕಾಯ್ದೆ, 1964 ರ ಅಡಿಯಲ್ಲಿ ಎಂ.ಬಿ.ನೇಮಣ್ಣ ಗೌಡರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು.
ಎಂ.ಬಿ.ನೇಮಣ್ಣಗೌಡ ಅಲಿಯಾಸ್ ಮನ್ಮಥ ಬೆಂಗಳೂರಿನ ಕೆಂಗೇರಿ ಬಳಿ ಇರುವ ಬಿ.ಎಂ.ಕಾವಲ್ ಮೀಸಲು ಅರಣ್ಯ ಪ್ರದೇಶದಲ್ಲಿ 512 ಎಕರೆ ಅರಣ್ಯ ಭೂಮಿ ಕಬಲಿಸಲು ಹೈಕೋರ್ಟ್ ನಿಂದ ಅನುಕೂಲಕರವಾದ ಆದೇಶ ಪಡೆದಿದ್ದ.
ಇದೇ ರೀತಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನಲ್ಲೂ ಅರಣ್ಯ ಭೂಮಿಯನ್ನು ತನ್ನ ಹೆಸರಿಗೆ ವರ್ಗಾಯಿಸಲು ಉಪವಿಭಾಗಾಧಿಕಾರಿ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದ. ಆದರೇ, ನಕಾಶೆ, ಕೋರ್ಟ್ ಆದೇಶಗಳು ಸೇರಿದಂತೆ ಕೆಲವೊಂದು ನಕಲಿ ದಾಖಲೆ, ಸೃಷ್ಟಿಸಿದ ದಾಖಲೆಗಳನ್ನು ಸಲ್ಲಿಸಿರುವುದು ಉಪವಿಭಾಗಾಧಿಕಾರಿ ಗಮನಕ್ಕೆ ಬಂದಿತ್ತು. ಹೀಗಾಗಿ ಈತನ ವಿರುದ್ಧ ದೂರು ದಾಖಲಿಸಲು ಮೂಡಿಗೆರೆ ತಹಸೀಲ್ದಾರ್ ಗೆ ಆದೇಶ ನೀಡಿದ್ದರು. ಅದರಂತೆ ಮೂಡಿಗೆರೆ ತಹಸೀಲ್ದಾರ್ ಪೊಲೀಸ್ ಠಾಣೆಯಲ್ಲಿ ನೇಮಣ್ಣಗೌಡ ವಿರುದ್ದ ದೂರು ದಾಖಲಿಸಿದ್ದರು. ಈ ದೂರಿನ ಆಧಾರದ ಮೇಲೆ ಈಗ ಎಂ.ಬಿ.ನೇಮಣ್ಣಗೌಡ ಅಲಿಯಾಸ್ ಮನ್ಮಥ ಎಂಬಾತನನ್ನು ಮೂಡಿಗೆರೆ ಪೊಲೀಸರು ಬಂಧಿಸಿದ್ದಾರೆ.
ಇನ್ನೂ ಇದೇ ನೇಮಣ್ಣಗೌಡ 11 ಕೇಸ್ ದಾಖಲಿಸಿದ್ದು, ಒಟ್ಟಾರೆ 20 ಸಾವಿರ ಎಕರೆ ಅರಣ್ಯ ಭೂಮಿ ತನಗೆ ಸೇರಿದ್ದು, ತನ್ನ ಹೆಸರಿಗೆ ವರ್ಗಾಯಿಸಬೇಕೆಂದು ಅರ್ಜಿ ಸಲ್ಲಿಸಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ.
ಚಿಕ್ಕಮಗಳೂರು ಮತ್ತು ಬೆಂಗಳೂರಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಸರ್ಕಾರಿ ಮತ್ತು ಅರಣ್ಯ ಭೂಮಿಯನ್ನು ನಕಲಿ ದಾಖಲೆಗಳ ಆಧಾರದ ಮೇಲೆ ನ್ಯಾಯಾಲಯದ ಆದೇಶಗಳನ್ನು ಪಡೆದು ಕಬಳಿಸಲು ಯತ್ನಿಸಿದ್ದರಲ್ಲಿ ಅಧಿಕಾರಿಗಳು ಮತ್ತು ಸರ್ಕಾರಿ ವಕೀಲರ ಪಾತ್ರದ ಬಗ್ಗೆ ಅಪರಾಧ ತನಿಖಾ ಇಲಾಖೆ (ಸಿಐಡಿ) ಅಥವಾ ವಿಶೇಷ ತನಿಖಾ ತಂಡ (ಎಸ್‌ಐಟಿ) ತನಿಖೆ ನಡೆಸಬೇಕೆಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದರು.
ದಕ್ಷಿಣ ಬೆಂಗಳೂರಿನ ಕೆಂಗೇರಿ ಬಳಿಯ ಬಿ.ಎಂ. ಕಾವಲ್‌ನಲ್ಲಿರುವ 532 ಎಕರೆ ಮೀಸಲು ಅರಣ್ಯ ಭೂಮಿ ಸೇರಿದಂತೆ ಭೂಕಬಳಿಕೆಯಲ್ಲಿ ಒಳಗೊಂಡಿರುವ ಭೂಮಿಯ ಮೌಲ್ಯ ₹25,000 ಕೋಟಿಗಿಂತ ಹೆಚ್ಚು ಎಂದು ಸಚಿವರು ಹೇಳಿದರು.
ಎಂ.ಬಿ. ಮನ್ಮಥ ಅಲಿಯಾಸ್ ಎಂ.ಬಿ. ನೇಮಣ್ಣ ಗೌಡ ಅವರು ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದಾರೆ . ಇನಾಂ ನಿರ್ಮೂಲನ ಕಾಯ್ದೆಯಡಿಯಲ್ಲಿ ಅವರಿಗೆ ನೀಡಲಾಗಿದೆ ಎಂದು ಹೇಳಲಾದ 482 ಎಕರೆ ಮೀಸಲು ಅರಣ್ಯ ಭೂಮಿ ಸೇರಿದಂತೆ ಒಟ್ಟು 532 ಎಕರೆ ಭೂಮಿಯ ದಾಖಲೆಗಳನ್ನು ಮೂರು ತಿಂಗಳೊಳಗೆ ತಮ್ಮ ಹೆಸರಿಗೆ ವರ್ಗಾಯಿಸಲು ಆದೇಶವನ್ನು ಪಡೆದಿದ್ದಾರೆ ಎಂದು ಅರಣ್ಯ ಸಚಿವರು ಹೇಳಿದ್ದರು.
/filters:format(webp)/newsfirstlive-kannada/media/post_attachments/wp-content/uploads/2024/03/Eshwar-Khandre.jpg)
ಹೈಕೋರ್ಟ್ ಆದೇಶಕ್ಕೆ ಕಾರಣವಾದ ವಿಚಾರಣೆಯ ಸಮಯದಲ್ಲಿ ರಾಜ್ಯ ಸರ್ಕಾರಕ್ಕೆ, ರಾಜ್ಯ ಅರಣ್ಯ ಇಲಾಖೆಗೆ ಈ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಭೂಕಬಳಿಕೆ ಪ್ರಯತ್ನದ ಕುರಿತು ಮೇಲ್ಮನವಿ ಸಲ್ಲಿಸಲು 90 ದಿನ ಅವಧಿ ಮುಗಿದ ನಂತರ ಮಾತ್ರ ತಿಳಿಸಲಾಯಿತು ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಮುಖ್ಯಮಂತ್ರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಭೂಕಬಳಿಕೆ ಪ್ರಯತ್ನದ ಬಗ್ಗೆ ಮಾಹಿತಿ ಪಡೆದ ಅರಣ್ಯ ಇಲಾಖೆ ಮೇಲ್ಮನವಿ ಸಲ್ಲಿಸಲು ಆದೇಶಗಳನ್ನು ಹೊರಡಿಸಿದೆ. "ಮನ್ಮಥ ಅಲಿಯಾಸ್ ನೇಮಣ್ಣ ಗೌಡ ಕೂಡ ಈ ಹಿಂದೆ ಸುಳ್ಳು ಮತ್ತು ನಕಲಿ ದಾಖಲೆಗಳನ್ನು ನೀಡುವ ಮೂಲಕ ಸರ್ಕಾರಿ ಭೂಮಿಯನ್ನು ಕಬಳಿಸಲು ಪ್ರಯತ್ನಿಸಿದ್ದಾರೆ" ಎಂದು ಸಚಿವರು ಹೇಳಿದ್ದಾರೆ.
"ಈ ವಿಷಯ ನನ್ನ ಗಮನಕ್ಕೆ ಬಂದ ತಕ್ಷಣ, ನಾನು ದೂರು ದಾಖಲಿಸಲು ಆದೇಶಿಸಿದೆ. 28.11.2025 ರಂದು ದೂರು ಸ್ವೀಕರಿಸಿದ ಮೂಡಿಗೆರೆ ಪೊಲೀಸ್ ವೃತ್ತ ನಿರೀಕ್ಷಕರು ಇಲ್ಲಿಯವರೆಗೆ ಎಫ್ಐಆರ್ ದಾಖಲಿಸದಿರುವುದು ಸಹ ಅನುಮಾನಕ್ಕೆ ಕಾರಣವಾಗಿದೆ" ಎಂದು ಖಂಡ್ರೆ ಹೇಳಿದರು.
"ಕೆಲವು ಅಧಿಕಾರಿಗಳು ಮತ್ತು ಸರ್ಕಾರಿ ವಕೀಲರು ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಸರ್ಕಾರಿ ಮತ್ತು ಅರಣ್ಯ ಭೂಮಿಯನ್ನು ಕಬಳಿಸುತ್ತಿರುವವರಿಗೆ ನೇರವಾಗಿ ಮತ್ತು ಪರೋಕ್ಷವಾಗಿ ಸಹಾಯ ಮಾಡುತ್ತಿರುವಂತೆ ತೋರುತ್ತಿದೆ" ಎಂದು ಅರಣ್ಯ ಸಚಿವರು ಪತ್ರದಲ್ಲಿ ತಿಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us