/newsfirstlive-kannada/media/media_files/2026/02/02/devanahalli-foxconn-company-2026-02-02-20-31-52.jpg)
ದೇವನಹಳ್ಳಿ ತಾಲ್ಲೂಕಿನ ಫಾಕ್ಸ್ ಕಾನ್ ಕಂಪನಿ
ಬೆಂಗಳೂರು ಹೊರವಲಯದ ದೇವನಹಳ್ಳಿ ತಾಲ್ಲೂಕಿನಲ್ಲಿರುವ ಆ್ಯಪಲ್ ಐಪೋನ್ ಉತ್ಪಾದಿಸುವ ಪ್ರತಿಷ್ಠಿತ ಫಾಕ್ಸ್ ಕಾನ್ ಕಂಪನಿಯು ಸ್ಥಳೀಯ ಗ್ರಾಮ ಪಂಚಾಯಿತಿಗೆ ತೆರಿಗೆ ಕಟ್ಟದೇ ನಡೆಯುತ್ತಿದೆ. ಜೊತೆಗೆ ಸ್ಥಳೀಯ ಗ್ರಾಮ ಪಂಚಾಯಿತಿಯಿಂದ ಕಟ್ಟಡ ನಿರ್ಮಾಣ, ಪ್ಲ್ಯಾನ್ ಅನುಮೋದನೆ ಸೇರಿದಂತೆ ಯಾವುದಕ್ಕೂ ಒಪ್ಪಿಗೆ ಮತ್ತು ಎನ್‌ಓಸಿ ಕೂಡ ಪಡೆದಿಲ್ಲವಂತೆ.
ದೇವನಹಳ್ಳಿ ತಾಲ್ಲೂಕಿನ ಕೊಯಿರಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 136 ಎಕರೆ ಜಾಗದಲ್ಲಿ ಫ್ಯಾಕ್ಸ್ ಕಾನ್ ಕಂಪನಿಯು ನಿರ್ಮಾಣವಾಗಿದೆ. ಜೊತೆಗೆ ವಿಶ್ವನಾಥಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ 170 ಎಕರೆ ಜಾಗವನ್ನು ಫಾಕ್ಸ್ ಕಾನ್ ಕಂಪನಿ ಪಡೆದುಕೊಂಡಿದೆ. ಫಾಕ್ಸ್ ಕಾನ್ ಕಂಪನಿಯಲ್ಲಿ ಸದ್ಯ 40 ಸಾವಿರ ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ. ಇಲ್ಲೇ ಆ್ಯಪಲ್ ಐಪೋನ್ ಅನ್ನು ಉತ್ಪಾದಿಸಿ ಈಗಾಗಲೇ ವಿದೇಶಗಳಿಗೆ ರಫ್ತು ಮಾಡಲಾಗುತ್ತಿದೆ. ಕೆಐಎಡಿಬಿಯಿಂದ 300 ಎಕರೆ ಭೂಮಿಯನ್ನು ಫಾಕ್ಸ್ ಕಾನ್ ಕಂಪನಿ ನಿರ್ಮಾಣಕ್ಕಾಗಿ ನೀಡಲಾಗಿದೆ. ಫಾಕ್ಸ್ ಕಾನ್ ಕಂಪನಿಯು ಆರಂಭವಾಗಿ 2 ವರ್ಷ ಕಳೆದಿದೆ. ಆದರೇ, ಕಳೆದ 2 ವರ್ಷದ ಅವಧಿಯಲ್ಲಿ ಇದುವರೆಗೂ ಸ್ಥಳೀಯ ಪಂಚಾಯಿತಿಯಲ್ಲಿ ಎನ್‌ಓಸಿ ಪಡೆದಿಲ್ಲ. ಎನ್‌ಓಸಿ ಪಡೆದು ತೆರಿಗೆ ಕಟ್ಟುವಂತೆ ಸ್ಥಳೀಯ ಗ್ರಾಮ ಪಂಚಾಯಿತಿಯಿಂದ ಹಲವು ಭಾರಿ ನೋಟೀಸ್ ನೀಡಲಾಗಿದೆ. ನೋಟೀಸ್ ಕೊಟ್ಟರೂ ಕ್ಯಾರೆ ಎನ್ನದೇ ಫಾಕ್ಸ್ ಕಾನ್ ಕಂಪನಿಯು ಮೊಂಡಾಟವಾಡುತ್ತಿದೆ ಎಂದು ಸ್ಥಳೀಯ 2 ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಹಾಗೂ ಅಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಂಚಾಯಿತಿಗೆ ಕಟ್ಟಬೇಕಾದ 5 ಕೋಟಿ ರೂಪಾಯಿ ತೆರಿಗೆಯನ್ನು ಕಟ್ಟುವಂತೆ ಗಡುವು ನೀಡಲಾಗಿದೆ. ಫೆಬ್ರವರಿ 7 ರೊಳಗೆ ತೆರಿಗೆ ಕಟ್ಟುವಂತೆ ಫಾಕ್ಸ್ ಕಾನ್ ಕಂಪನಿಗೆ ಪಂಚಾಯಿತಿಯಿಂದ ಡೆಡ್ ಲೈನ್ ನೀಡಲಾಗಿದೆ.
ತೆರಿಗೆ ಕಟ್ಟದಿದ್ದಲ್ಲಿ ಪಂಚಾಯ್ತಿ ವ್ಯಾಪ್ತಿಯ ಹಳ್ಳಿ ಜನರು ಹಾಗೂ ಪಂಚಾಯ್ತಿ ಅಧ್ಯಕ್ಷರು, ಅಧಿಕಾರಿಗಳಿಂದ ಕಂಪನಿ ವಿರುದ್ದ ಪ್ರತಿಭಟನೆಗೆ ನಿರ್ಧಾರ ಮಾಡಲಾಗಿದೆ. ಪ್ರತಿಷ್ಠಿತ ಪಾಕ್ಸ್ ಕಾನ್ ಕಂಪನಿ ವಿರುದ್ದ ಎರಡು ಗ್ರಾಮಪಂಚಾಯ್ತಿಗಳು ಟ್ಯಾಕ್ಸ್ ಸಮರ ಆರಂಭಿಸಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us