/newsfirstlive-kannada/media/media_files/2026/02/14/indian-bank-gold-theft-2026-02-14-13-53-45.jpg)
ಬೆಂಗಳೂರು: ಬ್ಯಾಂಕ್‌ನಲ್ಲಿ ಚಿನ್ನ ಅಡವಿಟ್ಟು ಸಾಲ ಪಡೆಯುವ ಗ್ರಾಹಕರು ಈ ಸುದ್ದಿಯನ್ನು ಓದಲೇಬೇಕು. ಜನರ ನಂಬಿಕೆಗೆ ಅರ್ಹರಾಗಬೇಕಿದ್ದ ಬ್ಯಾಂಕ್ ಅಧಿಕಾರಿಯೇ ಆನ್‌ಲೈನ್ ಬೆಟ್ಟಿಂಗ್ ದಂಧೆಗೆ ಸಿಲುಕಿ ಗ್ರಾಹಕರ ಕೋಟಿ ಕೋಟಿ ಮೌಲ್ಯದ ಚಿನ್ನಕ್ಕೆ ಕನ್ನ ಹಾಕಿರುವ ಘಟನೆ ಗಿರಿನಗರದಲ್ಲಿ ನಡೆದಿದೆ.
ಗಿರಿನಗರದ ಇಂಡಿಯನ್ ಬ್ಯಾಂಕ್ (Indian Bank) ಶಾಖೆಯಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಆಗಿದ್ದ ಕಿರಣ್ ಕುಮಾರ್ ಎಂಬಾತನೇ ಈ ಕೃತ್ಯ ಎಸಗಿದ ಆರೋಪಿ. ಈತನನ್ನು ಗಿರಿನಗರ ಪೊಲೀಸರು ಬಂಧಿಸಿದ್ದಾರೆ.
ಬರೋಬ್ಬರಿ 2.7 ಕೆಜಿ ಚಿನ್ನ ಕಳವು!
ಆರೋಪಿ ಕಿರಣ್ ಕುಮಾರ್, ಬ್ಯಾಂಕ್ ಲಾಕರ್‌ನಲ್ಲಿದ್ದ ಗ್ರಾಹಕರಿಗೆ ಸೇರಿದ ಬರೋಬ್ಬರಿ 2 ಕೆಜಿ 787 ಗ್ರಾಂ ಚಿನ್ನಾಭರಣಗಳನ್ನು ಕದ್ದಿದ್ದಾನೆ. ಇದರ ಮಾರುಕಟ್ಟೆ ಮೌಲ್ಯ ಸುಮಾರು 4 ಕೋಟಿ 12 ಲಕ್ಷದ 65 ಸಾವಿರ ರೂಪಾಯಿಗಳು ಎಂದು ಅಂದಾಜಿಸಲಾಗಿದೆ.
ಬ್ಯಾಂಕ್‌ನಲ್ಲಿ ಗ್ರಾಹಕರು ಅಡವಿಡುವ ಚಿನ್ನದ ಲಾಕರ್ ಕೀ (Key) ಮ್ಯಾನೇಜರ್ ಹಾಗೂ ಅಸಿಸ್ಟೆಂಟ್ ಮ್ಯಾನೇಜರ್ ಇಬ್ಬರ ಬಳಿಯೂ ಇರುತ್ತಿತ್ತು. ಇದನ್ನೇ ಬಂಡವಾಳ ಮಾಡಿಕೊಂಡ ಕಿರಣ್, ಮ್ಯಾನೇಜರ್ ಇಲ್ಲದ ಸಮಯ ನೋಡಿಕೊಂಡು ಲಾಕರ್ ತೆರೆಯುತ್ತಿದ್ದ. ಯಾರಿಗೂ ಅನುಮಾನ ಬಾರದಂತೆ, ಚಿನ್ನದ ಪ್ಯಾಕೇಟ್‌ಗಳಿಂದ ಸ್ವಲ್ಪ ಸ್ವಲ್ಪವೇ ಚಿನ್ನವನ್ನು ಎಗರಿಸುತ್ತಿದ್ದ.
ಇದನ್ನೂ ಓದಿ:ಬಾಂಗ್ಲಾದೇಶದ ಪಾರ್ಲಿಮೆಂಟ್ ಚುನಾವಣೆಯಲ್ಲಿ ಒಂದು ಸ್ಥಾನ ಗೆದ್ದ ಬಿಜೆಪಿ!!
ಸಿಕ್ಕಿಬಿದ್ದಿದ್ದು ಹೇಗೆ?
ಇದೇ ಫೆಬ್ರವರಿ 2 ರಂದು ಗ್ರಾಹಕರೊಬ್ಬರು ತಾವು ಅಡವಿಟ್ಟಿದ್ದ ಚಿನ್ನವನ್ನು ಬಿಡಿಸಿಕೊಳ್ಳಲು ಬ್ಯಾಂಕ್‌ಗೆ ಬಂದಿದ್ದರು. ಈ ವೇಳೆ ಚೀಫ್ ಮ್ಯಾನೇಜರ್ ದಿಲೀಪ್ ಕುಮಾರ್ ಲಾಕರ್ ಪರಿಶೀಲಿಸಿದಾಗ ಆಭರಣ ನಾಪತ್ತೆಯಾಗಿರುವುದು ಕಂಡುಬಂದಿದೆ. ಗಾಬರಿಗೊಂಡ ಅವರು, ಕೂಡಲೇ ಇತರೆ ಆಭರಣಗಳ ಪ್ಯಾಕೇಟ್ ಪರಿಶೀಲಿಸಿದಾಗ, ಬರೋಬ್ಬರಿ 2 ಮುಕ್ಕಾಲು ಕೆಜಿಗೂ ಅಧಿಕ ಚಿನ್ನ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.
ಕದ್ದ ಚಿನ್ನ ಖಾಸಗಿ ಫೈನಾನ್ಸ್‌ಗೆ!
ತಕ್ಷಣವೇ ಮ್ಯಾನೇಜರ್ ದಿಲೀಪ್ ಕುಮಾರ್ ಗಿರಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ತನಿಖೆ ನಡೆಸಿ ಅಸಿಸ್ಟೆಂಟ್ ಮ್ಯಾನೇಜರ್ ಕಿರಣ್ ಕುಮಾರ್‌ನನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ, ತಾನು ಕದ್ದ ಚಿನ್ನವನ್ನು ಮಣಪ್ಪುರಂ ಫೈನಾನ್ಸ್ (Manappuram Finance) ಹಾಗೂ ಮುತ್ತೂಟ್ ಫೈನಾನ್ಸ್‌ನಲ್ಲಿ (Muthoot Finance) ಅಡವಿಟ್ಟು, ಬಂದ ಹಣವನ್ನು ಆನ್‌ಲೈನ್ ಬೆಟ್ಟಿಂಗ್ (Online Betting) ಮತ್ತು ಜೂಜಾಟದಲ್ಲಿ ಕಳೆದುಕೊಂಡಿರುವುದಾಗಿ ಬಾಯಿಬಿಟ್ಟಿದ್ದಾನೆ. ಸದ್ಯ ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ: ಭಾರತೀಯ ಸೇನೆಯಿಂದ ಅಗ್ನಿವೀರ್ 2026ರ ನೇಮಕಾತಿಗೆ ಅರ್ಜಿ ಆಹ್ವಾನ: 25 ಸಾವಿರ ಹುದ್ದೆ ಭರ್ತಿಗೆ ನಿರ್ಧಾರ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us