/newsfirstlive-kannada/media/media_files/2025/08/26/e-khataha-documents-2025-08-26-17-35-08.jpg)
ಬಿಬಿಎಂಪಿ ಯಿಂದ ಎಲ್ಲ ಆಸ್ತಿಗಳಿಗೆ ಇ-ಖಾತಾ ವಿತರಣೆ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮಹತ್ವಾಕಾಂಕ್ಷೆ ಸ್ಕೀಮ್ ಇ-ಖಾತಾ ಯೋಜನೆ. ಆಸ್ತಿ ದಾಖಲೆಗಳ ಡಿಜಿಟಲೀಕರಣ ಮತ್ತು ಆಸ್ತಿ ತೆರಿಗೆ ಮೌಲ್ಯಮಾಪನ ಇದರ ಮುಖ್ಯ ಉದ್ದೇಶ. ಆಸ್ತಿ ಮಾಲೀಕರಿಗೆ ತಮ್ಮ ಆಸ್ತಿ ದಾಖಲೆಗಳನ್ನು ಆನ್ಲೈನ್ನಲ್ಲೇ ನಿರ್ವಹಿಸಲು ಇ-ಖಾತಾ ಅನುವು ಮಾಡಿಕೊಡುತ್ತೆ. ಆಸ್ತಿ ವಹಿವಾಟು ಮತ್ತು ತೆರಿಗೆ ಪಾವತಿಗಳಲ್ಲಿ ಪಾರದರ್ಶಕತೆ ಇದರ ಮೊದಲ ಆದ್ಯತೆ. ಹಾಗಾದ್ರೆ ಏನಿದು ಇ-ಖಾತಾ ಮತ್ತು ಇದಕ್ಕೆ ಬೇಕಾದ ದಾಖಲೆಗಳೇನು ಅಂತಾ ನೋಡೋಣ ಬನ್ನಿ.
ಮೊದಲಿಗೆ ಇ-ಖಾತಾ ಅಂದ್ರೇನು? ಅಂತಾ ನೋಡೋದಾದ್ರೆ..!
ಇ-ಖಾತಾ ಅನ್ನೋದು ಸಾಂಪ್ರದಾಯಿಕವಾಗಿ ನಮ್ಮ ಬಳಿ ಇರ್ತಿದ್ದ ಖಾತಾ ಪ್ರಮಾಣಪತ್ರ ಹಾರ್ಡ್ ಕಾಪಿ ಅಥವಾ ಪೇಪರ್ ಡಾಕ್ಯುಮೆಂಟ್ ಬದಲಿಗೆ, ಅದ್ರ ಎಲೆಕ್ಟ್ರಾನಿಕ್ ವರ್ಷನ್ ಆಗಿರುತ್ತೆ. ಇದು ಆಸ್ತಿಯ ಮಾಲೀಕತ್ವ ಮತ್ತು ಬಿಬಿಎಂಪಿಯ ನಿಯಮಗಳ ಅನುಸರಣೆಯ ಅಧಿಕೃತ ಪುರಾವೆಯಾಗಿದೆ. ಬೆಂಗಳೂರಿನ ಆಸ್ತಿ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಲು ಅಭಿವೃದ್ಧಿಪಡಿಸಲಾದ ಆನ್‌ಲೈನ್ ವ್ಯವಸ್ಥೆಯೇ ಇ-ಖಾತಾ ಎನ್ನಬಹುದು. ಇದು ಮಾಲೀಕತ್ವ ಸೇರಿದಂತೆ ಅಗತ್ಯ ಆಸ್ತಿ ವಿವರಗಳನ್ನು ಡಿಜಿಟಲ್ ರೂಪದಲ್ಲಿ ಒಳಗೊಂಡಿರುತ್ತದೆ. ಆಸ್ತಿ ದಾಖಲೆಗಳ ನಿಖರತೆಯನ್ನು ಹೆಚ್ಚಿಸುವುದು ಇದರ ಮೈನ್ ಪರ್ಪಸ್.
ಇಂದು ಬೆಂಗಳೂರಿನ ನಾಗರಿಕರಿಗೆ ಆಸ್ತಿ ದಾಖಲೆಗಳನ್ನು ನಿರ್ವಹಿಸುವುದು ಸವಾಲಿನ ಕೆಲಸ. ಅದ್ರಲ್ಲೂ ಆಸ್ತಿ ಕಾಗದ ಪತ್ರಗಳಿಗಾಗಿ ಅಲ್ಲಿಂದಿಲ್ಲಿ, ಇಲ್ಲಿಂದಲ್ಲಿ ಅಂತ ಕಚೇರಿಗಳಿಗೆ ಅಲೆಯಬೇಕಾಗುತ್ತದೆ. ಆದರೀಗ ಬಿಬಿಎಂಪಿ ಇ-ಖಾತಾ ಸ್ಕೀಮ್ ಜಾರಿ ಮಾಡಿದ್ದು, ಆಸ್ತಿ ನಿರ್ವಹಣೆಯನ್ನು ಡಿಜಿಟಲೀಕರಣದ ಮೂಲಕ ಸರಳಗೊಳಿಸಲಿದೆ.
ಇನ್ನು, ಇ-ಖಾತಾಗೆ ಅರ್ಹತಾ ಮಾನದಂಡಗಳೇನು? ಅಂತಾ ನೋಡೋದಾದ್ರೆ..!
Obiviously ಮೊದಲಿಗೆ ನಿಮ್ಮ ಆಸ್ತಿ ಬಿಬಿಎಂಪಿ ವ್ಯಾಪ್ತಿಯಲ್ಲಿರಬೇಕು. ಆಮೇಲೆ, ಕಾನೂನು ಮತ್ತು ನಿಯಮಗಳನ್ನು ಅನುಸರಿಸೋ ವಸತಿ, ವಾಣಿಜ್ಯ ಮತ್ತು ಕೈಗಾರಿಕಾ ಆಸ್ತಿಗಳಿಗೆ ಮಾತ್ರ ಇದು ಅನ್ವಯವಾಗುತ್ತೆ. ಎಲ್ಲಾ ಆಸ್ತಿ ತೆರಿಗೆಗಳನ್ನು ಪುರಾವೆಯಾಗಿ ಲಭ್ಯವಿರುವ ರಸೀದಿಗಳೊಂದಿಗೆ ನವೀಕರಿಸಬೇಕು. ಯಾವುದೇ ಆಸ್ತಿಯಾಗಲೀ, ಕಟ್ಟಡವಾಗಲೀ BBMP, BDA ಅಥವಾ BMRDA ಯಂತಹ ಸಂಬಂಧಿತ ಅಧಿಕಾರಿಗಳಿಂದ ಅನುಮೋದನೆ ಪಡೆದಿರಬೇಕು. ಮಾರಾಟ ಪತ್ರಗಳು, ಮಾನ್ಯವಾದ ಮಾಲೀಕತ್ವದ ದಾಖಲೆಗಳು, ಅರ್ಜಿದಾರರ ಹೆಸರಿನಲ್ಲಿರಬೇಕು.
ಆಸ್ತಿಯು ಕಾನೂನು ತೊಡಕುಗಳಿಂದ ಮುಕ್ತವಾಗಿರಬೇಕು. ಉಪ ನೋಂದಣಾಧಿಕಾರಿಗಳ ಕಚೇರಿಯ ಇ.ಸಿ. ಪ್ರಮಾಣಪತ್ರದೊಂದಿಗೆ ಸ್ಪಷ್ಟ ಹಕ್ಕುಸ್ವಾಮ್ಯ ಹೊಂದಿರಬೇಕು. ಆಸ್ತಿ ದಾಖಲೆಗಳು ಮತ್ತು ತೆರಿಗೆ ಉದ್ದೇಶಗಳನ್ನು ಪತ್ತೆಹಚ್ಚಲು ಬಿಬಿಎಂಪಿ ನೀಡಿದ ವಿಶಿಷ್ಟ PID ಅಗತ್ಯವಿದೆ. ಹೊಸದಾಗಿ ನಿರ್ಮಿಸಲಾದ ಕಟ್ಟಡಗಳಿಗೆ, ಬಿಬಿಎಂಪಿ ಅಥವಾ ಬಿಡಿಎಯಿಂದ ವಸತಿ ಪ್ರಮಾಣಪತ್ರ ನೀಡಿರಬೇಕು. ವ್ಯಾಜ್ಯ ರಹಿತ ಆಸ್ತಿಯು, ಕಾನೂನು ವಿವಾದಗಳು ಅಥವಾ ಅತಿಕ್ರಮಣಗಳಿಂದ ಮುಕ್ತವಾಗಿರಬೇಕು.
ಇದೆಲ್ಲಾ ಓಕೆ ಆಯ್ತು, ಅಂದ್ಮೇಲೆ ಮುಂದಿನ ಪ್ರಶ್ನೆ.
ಇ-ಖಾತಾ ಪಡೆಯೋದಕ್ಕೆ ಬೇಕಿರೋ ದಾಖಲೆಗಳು ಏನೇನು?
ಆಸ್ತಿ ಮಾಲೀಕರು, ಇ-ಖಾತಾ ಪಡೆಯಲು ಕನಿಷ್ಠ ಈ ಐದು ದಾಖಲೆಗಳು ಇರಬೇಕು.
ಕಡ್ಡಾಯವಾಗಿ ನೋಂದಾಯಿತ ಆಸ್ತಿ ಪತ್ರ ಇರಲೇಬೇಕು. ಸ್ವಯಂ ಮೌಲ್ಯಮಾಪನ ಯೋಜನೆ (SAS) ಆಸ್ತಿ ತೆರಿಗೆ ರಶೀದಿ ಇರಲೇಬೇಕು. ಬೆಸ್ಕಾಂ RR ಸಂಖ್ಯೆನೂ ಬೇಕೇ ಬೇಕು. ಕಟ್ಟಡ ಅಥವಾ ಅಪಾರ್ಟ್‌ಮೆಂಟ್‌ನ GPS ಫೋಟೋ ಇರಬೇಕು. ಮಾಲೀಕರು, A-ಖಾತಾ ಅಥವಾ B-ಖಾತಾ ಹೊಂದಿರಬೇಕು.
A-ಖಾತಾ ಎಂಬುದು BDA ಅಥವಾ BBMPಯಿಂದ ಅಧಿಕೃತಗೊಳಿಸಲಾದ ಮನೆಗಳು ಅಥವಾ ಪ್ಲಾಟ್‌ಗಳನ್ನು ಹೊಂದಿರುವ ಜನರಿಗೆ ನೀಡಲಾದ ಕಾನೂನುಬದ್ಧ ಆಸ್ತಿ ದಾಖಲೆ. ಬಿ-ಖಾತಾ ದಾಖಲೆಯನ್ನು ಹಿಂದೆ, ಬಿಬಿಎಂಪಿ ಅಥವಾ ಬಿಡಿಎ ಮಿತಿಯಲ್ಲಿಲ್ಲದ ಪ್ರದೇಶಗಳಲ್ಲಿನ ಆಸ್ತಿಗಳಿಗೆ ನೀಡಲಾಗುತ್ತದೆ. ಈ ದಾಖಲೆಗಳು ನೀಡಿದ್ರೆ ನಿಮಗೆ ಇ-ಖಾತಾ ಸಿಗುತ್ತದೆ.
ಹಾಗಿದ್ರೆ, ಆನ್‌ಲೈನ್ ಮೂಲಕ ಇ-ಖಾತಾ ಪಡೆಯುವುದು ಹೇಗೆ?
ಬಿಬಿಎಂಪಿ ಇ-ಆಸ್ತಿ ವೆಬ್‌ಸೈಟ್ (bbmpeaasthi.karnataka.gov.in)ಗೆ ಭೇಟಿ ನೀಡಿ. ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಮತ್ತು ಪೋರ್ಟಲ್‌ಗೆ ಲಾಗಿನ್ ಆಗಲು OTP ಪಡೆಯಿರಿ. ಬಳಿಕ ಅಗತ್ಯ ಮಾಹಿತಿ ಭರ್ತಿ ಮಾಡಿ ದಾಖಲೆಗಳನ್ನು ಅಪ್ಲೋಡ್ ಮಾಡಿ. ನಿಮಗೆ ಗೊತ್ತಾಗಲಿಲ್ಲ ಅನ್ನೋದಾದ್ರೆ BBMPಯ ಅಧಿಕೃತ ವೀಡಿಯೊ ಟ್ಯುಟೋರಿಯಲ್ ವೀಕ್ಷಿಸುವ ಮೂಲಕ ನೀವು ಕಾರ್ಯವಿಧಾನವನ್ನು ಅನುಸರಿಸಬಹುದು. ಬಿಬಿಎಂಪಿ ದಾಖಲೆ ಪರಿಶೀಲನೆ ಮಾಡಿ ಅಂತಿಮ ಇ-ಖಾತಾ ದಾಖಲೆಯನ್ನು ಸಾಮಾನ್ಯವಾಗಿ 48 ಗಂಟೆಗಳು ಅಥವಾ ಗರಿಷ್ಠ 15 ದಿನಗಳಲ್ಲಿ ನೀಡಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.