Advertisment

4 ಸಾವಿರ ಕೋಟಿ ವೆಚ್ಚದಲ್ಲಿ 500 ಕಿ.ಮೀ ರಸ್ತೆಗೆ ವೈಟ್‌ ಟಾಪಿಂಗ್ ಗೆ ಡಿಪಿಆರ್ ಸಿದ್ಧತೆ: ಡಿಸಿಎಂ ಡಿ.ಕೆ. ಶಿವಕುಮಾರ್

ಬೆಂಗಳೂರು ಮಹಾನಗರದಲ್ಲಿ ರಸ್ತೆಗಳಿಗೆ ವೈಟ್ ಟ್ಯಾಪಿಂಗ್ ಮಾಡಲಾಗುತ್ತಿದೆ. ಬರೋಬ್ಬರಿ 500 ಕಿ.ಮೀ. ವರೆಗೂ ರಸ್ತೆಗಳನ್ನು ವೈಟ್ ಟ್ಯಾಪಿಂಗ್ ಮಾಡಲು ಈಗ ರಾಜ್ಯ ಸರ್ಕಾರ ಸಿದ್ದತೆ ನಡೆಸಿದೆ. ಇದಕ್ಕಾಗಿ 4 ಸಾವಿರ ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

author-image
Chandramohan
WHITE TOPPING ROADS

ಬೆಂಗಳೂರಿನಲ್ಲಿ 500 ಕಿ.ಮೀ. ರಸ್ತೆ ವೈಟ್ ಟ್ಯಾಪಿಂಗ್ ಗೆ ನಿರ್ಧಾರ

Advertisment
  • ಬೆಂಗಳೂರಿನಲ್ಲಿ 500 ಕಿ.ಮೀ. ರಸ್ತೆ ವೈಟ್ ಟ್ಯಾಪಿಂಗ್ ಗೆ ನಿರ್ಧಾರ
  • 4 ಸಾವಿರ ಕೋಟಿ ರೂ ವೆಚ್ಚದಲ್ಲಿ ರಸ್ತೆಗಳ ವೈಟ್ ಟ್ಯಾಪಿಂಗ್‌
  • ಇದಕ್ಕಾಗಿ ಡಿಪಿಆರ್ ಸಿದ್ದಪಡಿಸುತ್ತಿರುವ ರಾಜ್ಯ ಸರ್ಕಾರ


"4 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ನಗರದ 500 ಕಿ.ಮೀ. ಉದ್ದದ ರಸ್ತೆಗಳನ್ನು ವೈಟ್ ಟಾಪಿಂಗ್ ಮಾಡಲು ಡಿಪಿಆರ್ ಸಿದ್ಧಪಡಿಸುತ್ತಿದ್ದೇವೆ. ನಗರದಲ್ಲಿ 1650 ಕಿ.ಮೀ ಉದ್ದದ ಪ್ರಮುಖ ರಸ್ತೆಗಳಿದ್ದು, ಹೊಸದಾಗಿ 104 ಕಿಮೀ ರಸ್ತೆಗೆ ವೈಟ್ ಟಾಪಿಂಗ್ ಮಾಡಲಾಗುತ್ತಿದೆ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದರು.

Advertisment

ಬೆಂಗಳೂರಿನ ಗಾಂಧಿನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ವೈಟ್ ಟಾಪಿಂಗ್ ಮತ್ತು ಸಮಗ್ರ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಮಂಗಳವಾರ ಚಾಲನೆ ನೀಡಿ DCM DK ಶಿವಕುಮಾರ್‌ ಮಾತನಾಡಿದರು.

"ವೈಟ್ ಟಾಪಿಂಗ್ ರಸ್ತೆಗಳು ಸುಮಾರು 25-30 ವರ್ಷಗಳ ಕಾಲ ಬಾಳಿಕೆ ಬರುತ್ತವೆ. ಈಗಾಗಲೇ 148 ಕಿ.ಮೀ ಉದ್ದದ ರಸ್ತೆಗಳ ವೈಟ್ ಟಾಪಿಂಗ್ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಒಟ್ಟು 83 ರಸ್ತೆಗಳ ಅಭಿವೃದ್ದಿಗೆ 1,800 ಕೋಟಿ ಹಣ ವ್ಯಯಿಸಲಾಗುತ್ತಿದೆ. 350 ಕಿಲೋ ಮೀಟರ್ ಉದ್ದದ 182 ರಸ್ತೆಗಳಲ್ಲಿ ಬ್ಲಾಕ್ ಟಾಪಿಂಗ್ ಕಾಮಗಾರಿ ನಡೆಯುತ್ತಿದೆ. ಇದಕ್ಕೆ 695 ಕೋಟಿ ರೂಪಾಯಿ ವ್ಯಯಿಸಲಾಗುತ್ತಿದೆ. ಮುಖ್ಯಮಂತ್ರಿಯವರು ಹೊಸದಾಗಿ 1100 ಕೋಟಿ ರೂಪಾಯಿ ಅನುದಾನ ನೀಡಿದ್ದು, ಇದರಿಂದ 550 ಕಿ.ಮೀ. ಉದ್ದದ ರಸ್ತೆಗಳ ಡಾಂಬರೀಕರಣ ಕೈಗೆತ್ತಿಕೊಂಡಿದ್ದೇವೆ" ಎಂದು ವಿವರಿಸಿದರು.

"ಕಳೆದ ಸಚಿವ ಸಂಪುಟ ಸಭೆಯಲ್ಲಿ 117 ಕಿಮೀ ಉದ್ದದ ಬೆಂಗಳೂರು ಬಿಜಿನೆಸ್ ಕಾರಿಡಾರ್ ನಿರ್ಮಾಣಕ್ಕೆ ತೀರ್ಮಾನಿಸಲಾಗಿದೆ. ಬಿಡಿಎ ಕಾಯ್ದೆ ಪ್ರಕಾರ ದುಪ್ಪಟ್ಟು ಪರಿಹಾರ ನೀಡಲು ಅವಕಾಶವಿಲ್ಲ. ಆದರೂ ನಮ್ಮ ಸರ್ಕಾರ ರೈತರಿಗೆ ಬಂಪರ್ ಪರಿಹಾರ ನೀಡಲು ಮುಂದಾಗಿದೆ. ಮೂರು ಪಟ್ಟು ಪರಿಹಾರ, ಟಿಡಿಆರ್ ಅಥವಾ ಎಫ್ ಎಆರ್ ‌ನೀಡಲು ತೀರ್ಮಾನ ಮಾಡಿದ್ದೇವೆ. ಹಿಂದಿನ ಯಾವ ಸರ್ಕಾರವೂ ಈ ವಿಚಾರದಲ್ಲಿ ಧೈರ್ಯ ತೋರಿಸಿರಲಿಲ್ಲ. 2007-08 ರಲ್ಲಿ ತೀರ್ಮಾನವಾಗಿದ್ದರೂ  ಅನುಷ್ಠಾನ ಸಾಧ್ಯವಾಗಿರಲಿಲ್ಲ" ಎಂದು  ಡಿ.ಕೆ.ಶಿವಕುಮಾರ್ ತಿಳಿಸಿದರು. 

Advertisment

ಪ್ರಧಾನಿಯವರಿಂದ ಇನ್ನೂ ಉತ್ತರ ಬಂದಿಲ್ಲ

"ಪ್ರಧಾ‌ನಿ ನರೇಂದ್ರ ಮೋದಿಯವರು ಮೆಟ್ರೋ ಹಳದಿ ಮಾರ್ಗ ಉದ್ಘಾಟನೆಗೆ ಬಂದಿದ್ದ ಸಂದರ್ಭದಲ್ಲಿ, ನಗರದ ಅಭಿವೃದ್ದಿಗೆ 1.5 ಲಕ್ಷ ಕೋಟಿ ರೂ. ಮೊತ್ತದ ಯೋಜನೆಗಳಿಗೆ ಅನುದಾನ ನೀಡಬೇಕು, ಮುಂಬೈ ನಂತರ ಬೆಂಗಳೂರು ಅತಿ ಹೆಚ್ಚು ತೆರಿಗೆ ನೀಡುತ್ತಿದೆ‌ ಎಂದು ಮನವಿ ಮಾಡಿದ್ದೆ. ಆದರೆ ಅವರಿಂದ ಇದುವರೆಗೂ ಉತ್ತರ ಬಂದಿಲ್ಲ"ಎಂದರು.

"ನಗರದಲ್ಲಿ 113 ಕಿಲೋಮೀಟರ್ ಉದ್ದದ ಎಲಿವೇಟೆಡ್ ಕಾರಿಡಾರ್ ಗಳ ನಿರ್ಮಾಣಕ್ಕೆ ಸರ್ಕಾರ ತೀರ್ಮಾನ ತೆಗೆದುಕೊಂಡಿದೆ. ಮೊದಲ ಹಂತದಲ್ಲಿ 40 ಕಿಲೋಮೀಟರ್ ಉದ್ದದ ಟನಲ್ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದೇವೆ. ಇದಕ್ಕೆ ಖಾಲಿಡಬ್ಬ ಸಂಸದನೊಬ್ಬ ಬರೀ ಟ್ವೀಟ್ ಮಾಡಿಕೊಂಡು ಟೀಕೆ ಮಾಡುತ್ತಿದ್ದಾನೆ" ಎಂದು ಕಿಡಿಕಾರಿದರು.

"ಐದು ಜನ ಸಂಸದರನ್ನು ಬೆಂಗಳೂರು ಜನತೆ ಗೆಲ್ಲಿಸಿದ್ದಾರೆ. ನಿರ್ಮಲ ಸೀತಾರಾಮನ್ ಕೇಂದ್ರ ಹಣಕಾಸು ಸಚಿವರಾಗಿದ್ದಾರೆ‌. ಒಬ್ಬನೇ ಒಬ್ಬ ಸಂಸದ ಹತ್ತು ರೂಪಾಯಿ ಅನುದಾನವನ್ನು ಕರ್ನಾಟಕಕ್ಕೆ ತಂದಿದ್ದರೆ ಜನರು ನೀಡುವ ಶಿಕ್ಷೆಗೆ ನಾನು ತಲೆಬಾಗುತ್ತೇನೆ" ಎಂದು ಕಿಡಿಕಾರಿದರು.

Advertisment

ಮನಮೋಹನ್ ಸಿಂಗ್ ಅವರ ಸರ್ಕಾರದಲ್ಲಿ ಅನುದಾನ ಸಿಕ್ಕಿತ್ತು

"ಪ್ರಧಾನಿ ಮನಮೋಹನ್ ಸಿಂಗ್ ಅವರ ಕಾಲದಲ್ಲಿ  ಜೆ- ನರ್ಮ್ ಯೋಜನೆಯಡಿ ಎಲ್ಲದಕ್ಕೂ ಅನುದಾನ ಬರುತ್ತಿತ್ತು. ಈಗಿನ ಸಂಸದರು ಒಂದು ಯೋಜನೆಗೂ ಅರ್ಜಿ ಕೊಟ್ಟಿಲ್ಲ. ಒಬ್ಬರಾದರೂ ಪ್ರಧಾನಿ ಅವರನ್ನು ಭೇಟಿ ಮಾಡಿ ಚರ್ಚೆ ಮಾಡಿದ್ದಾರೆಯೇ? ಬಿಜೆಪಿ ಸಂಸದರ ಕೊಡುಗೆ ರಾಜ್ಯಕ್ಕೆ ಶೂನ್ಯ. ರಾಜ್ಯಸಭಾ ಸಂಸದ ಲೆಹರ್ ಸಿಂಗ್ ಅವರು ಮಂಗಳವಾರ (ಇಂದು) ನನ್ನನ್ನು ಭೇಟಿ ಮಾಡಿದ್ದರು. ದೇಶಕ್ಕೆ ಬೆಂಗಳೂರು ಇಷ್ಟೆಲ್ಲಾ ಕೊಡುಗೆ ನೀಡುತ್ತಿದೆ. ಕೇಂದ್ರ ಸರ್ಕಾರಕ್ಕೆ ಸೂಕ್ತ ಅನುದಾನ ನೀಡುವಂತೆ ಹೇಳಿ ಎಂದು ಅವರಿಗೆ ಹೇಳಿದೆ" ಎಂದರು.

10 ಸಾವಿರ ಗುಂಡಿ ಮುಚ್ಚಿದ್ದೇವೆ

"ನಗರದಾದ್ಯಂತ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ರಸ್ತೆ ಗುಂಡಿಗಳನ್ನು ಮುಚ್ಚಿದ್ದೇವೆ. ಹಿಂದಿನ ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ನಗರದಾದ್ಯಂತ 20 ಸಾವಿರ ಗುಂಡಿಗಳಿವೆ ಎಂದು ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಿದ್ದರು. ನ್ಯಾಯಾಲಯ ಇದರ ಬಗ್ಗೆ ಪರಿಶೀಲನೆ ಮಾಡುತ್ತಿತ್ತು. ಆದರೆ ನಿಮ್ಮ ಕಾಂಗ್ರೆಸ್ ಸರ್ಕಾರ ಸಮಸ್ಯೆ ತಿಳಿಸುವ ಅಧಿಕಾರವನ್ನು ಜನರಿಗೆ‌ ನೀಡಿದೆ. ನೀವು ಓಡಾಡುವ ರಸ್ತೆಯಲ್ಲಿ ಗುಂಡಿ ಬಿದ್ದಿದ್ದರೆ, ನಿಮ್ಮ ಮನೆ ಬಳಿ ಕಸವಿದ್ದರೆ ಅದರ ಫೋಟೋ ತೆಗೆದು ಸರ್ಕಾರದ ಗಮನಕ್ಕೆ ತನ್ನಿ ಎಂದು ಇದುವರೆಗೂ ಯಾರು ಹೇಳಿದ್ದಾರೆ. ಈ ಕೆಲಸವನ್ನು ನಿಮ್ಮ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಸರ್ಕಾರ ಮಾಡಿದೆ" ಎಂದು ವಿವರಿಸಿದರು.

dk shivakumar (6)
ಡಿಕೆ ಶಿವಕುಮಾರ್, ಉಪಮುಖ್ಯಮಂತ್ರಿ



10 ವರ್ಷಗಳ ಬಳಿಕ ನಮ್ಮ ಕೆಲಸ ಸ್ಮರಿಸುತ್ತೀರಿ

"ಹಳೆಯದನ್ನು ಮರೆಯಬೇಕು, ಹೊಸ ರೂಪ ನೀಡಬೇಕು ಎಂದು ನಾಡಪ್ರಭು ಕೆಂಪೇಗೌಡರು ಕಟ್ಟಿದ ಬೆಂಗಳೂರಿನ ಬದಲಾವಣೆಗೆ ನಾವು ಹೆಜ್ಜೆ ಇಟ್ಟಿದ್ದೇವೆ. ಅಂತರರಾಷ್ಟ್ರೀಯ ಮಟ್ಟಕ್ಕೆ ಬೆಂಗಳೂರನ್ನು ಬೆಳೆಸಬೇಕು ಎಂದು ಪಣತೊಟ್ಟಿದ್ದೇವೆ. ಬೆಂಗಳೂರಿನ ಅಭಿವೃದ್ಧಿಗೆ ನಮ್ಮ ಸರ್ಕಾರ ತೆಗೆದುಕೊಳ್ಳುವ ತೀರ್ಮಾನಗಳನ್ನು ಇಲ್ಲಿನ ಜನತೆ ಮುಂದಿನ 10 ವರ್ಷಗಳ ನಂತರ ನೆನಪಿಸಿಕೊಳ್ಳುತ್ತಾರೆ. ಒಂದೇ ದಿನದಲ್ಲಿ ಬದಲಾವಣೆ ಮಾಡಲು ಸಾಧ್ಯವಿಲ್ಲ. ಆದರೆ‌ ಹಂತವಾಗಿ  ನಾವು ನಮ್ಮ ಜವಾಬ್ದಾರಿ ನಿರ್ವಹಿಸುತ್ತೇವೆ" ಎಂದು ಡಿಕೆ ಶಿವಕುಮಾರ್ ಹೇಳಿದ್ದರು.

Advertisment

"ಇತ್ತೀಚಿಗೆ ಮೋದಿ ಅವರು ಬೆಂಗಳೂರನ್ನು ಗ್ಲೋಬಲ್ ಸಿಟಿ ಎಂದು ಕರೆದರು. ವಾಜಪೇಯಿ ಅವರು ಬೆಂಗಳೂರು ಮೂಲಕ ಭಾರತವನ್ನು ನೋಡಲಾಗುತ್ತಿದೆ ಎಂದರು. . ಅಮೇರಿಕಾ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರು ಬೆಂಗಳೂರು ಅಮೆರಿಕಾದ ಜೊತೆ ಸ್ಪರ್ಧಿಸುತ್ತಿದೆ ಎಂದು ಶ್ಲಾಘಿಸಿದ್ದಾರೆ" ಎಂದರು.

ಜನರ ಮನೆಯ ಬಾಗಿಲಿಗೆ ಸರ್ಕಾರದ ಆಡಳಿತ ತಲುಪಬೇಕು ಎಂದು ಬೆಂಗಳೂರಿನ್ನು ಐದು ಪಾಲಿಕೆಗಳನ್ನಾಗಿ ವಿಭಜಿಸಿ ಐತಿಹಾಸಿಕ ತೀರ್ಮಾನ ಕೈಗೊಂಡು ಜಿಬಿಎ ರಚಿಸಿದ್ದೇವೆ. ನಮ್ಮ ಈ ತೀರ್ಮಾನ ಭವಿಷ್ಯದಲ್ಲಿ ಉತ್ತಮ ಫಲ ನೀಡುತ್ತದೆ. ಬೆಂಗಳೂರು ಡಿ.ಕೆ. ಶಿವಕುಮಾರ್ ಗೆ ಸೇರಿದ್ದಲ್ಲ, ಜನರಿಗೆ ಸೇರಿದ್ದು" ಎಂದರು.

"ಕಾಂಗ್ರೆಸ್ ಸರ್ಕಾರ ಹಲವಾರು ಜನಪರ ಕಾರ್ಯಕ್ರಮಗಳನ್ನು ಜನರಿಗಾಗಿ ರೂಪಿಸಿದೆ. ಜಿಬಿಎ ರಚಿಸುವಾಗ ವಿರೋಧ ಪಕ್ಷದವರು ಸಹಕಾರ ನೀಡಿದ್ದಾರೆ. ಏಕೆಂದರೆ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಸರ್ಕಾರ ಯಾವುದೇ ತೀರ್ಮಾನ ತೆಗೆದುಕೊಂಡರು ಅಚ್ಚುಕಟ್ಟಾಗಿ ಮಾಡಿರುತ್ತಾರೆ ಎನ್ನುವ ಭಾವನೆ ಅವರಲ್ಲಿದೆ. ರಾಜಕೀಯ ಕಾರಣಕ್ಕೆ ವಿರೋಧ ಮಾಡಿದ್ದಾರೆ. ಶಾಸಕ ರಿಜ್ವಾದ್ ಹರ್ಷದ್ ಅವರ ನೇತೃತ್ವದಲ್ಲಿ ಸಭೆ ರಚಿಸಿ ಎಲ್ಲರನ್ನು ವಿಶ್ವಾಸಕ್ಕೆ ಪಡೆದು ಜಿಬಿಯ ರಚನೆ ಮಾಡಿದ್ದೇವೆ" ಎಂದರು.

Advertisment

"ಕಸ ವಿಲೇವಾರಿಗೆ, ಜಾಹೀರಾತು ನೀತಿಗೆ, ಬಿಜೆಪಿ ಸಮಯದಲ್ಲಿ ತೀರ್ಮಾನ ಮಾಡಿದ ಪ್ರೀಮಿಯಂ ಎಫ್ಎಆರ್‌ ಗೆ ನ್ಯಾಯಾಲಯದಿಂದ ತಡೆಯಾಜ್ಞೆ ತರಲಾಗಿದೆ. ಆದರೂ ನಮ್ಮ ಸರ್ಕಾರ ಧೈರ್ಯ ಗಿಡವೇ ನ್ಯಾಯಾಲಯದ ಮುಂದೆ ನಮ್ಮ ಪ್ರಸ್ತಾವನೆಯನ್ನು ಸಲ್ಲಿಸಿದ್ದೇವೆ" ಎಂದರು.

"ಬೆಂಗಳೂರಿನ ಜನತೆ ಉತ್ತಮರಿದ್ದಾರೆ, ಅತಿ ಹೆಚ್ಚು ತೆರಿಗೆ ಕಟ್ಟುತ್ತಿದ್ದಾರೆ. ಆದರೆ ಮತದಾನದ ವಿಚಾರದಲ್ಲಿ ಸ್ವಲ್ಪ ಹೆಚ್ಚು ಕಡಿಮೆ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಈ ರೀತಿ ಮಾಡದಿರಿ. ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇರುವುದೇ ಪ್ರತಿಯೊಬ್ಬರ ಬದುಕಿನಲ್ಲಿ ಬದಲಾವಣೆ ತರಬೇಕು ಎನ್ನುವ ದೃಷ್ಟಿಯಿಂದ. ನಾವು ಜನರ ಭಾವನೆ ಬದಲು ಬದುಕಿನ ಜೊತೆ ರಾಜಕಾರಣ ಮಾಡುತ್ತೇವೆ" ಎಂದರು. 

"ದಿನೇಶ್ ಗುಂಡೂರಾವ್ ಅವರು ಆರೋಗ್ಯ ಸಚಿವರಾಗಿ ಈ ರಾಜ್ಯದ ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ತಂದಿದ್ದಾರೆ. ಇವರು ತರುತ್ತಿರುವ ಬದಲಾವಣೆಗಳನ್ನು ಯಾವ ಆರೋಗ್ಯ ಮಂತ್ರಿಯೂ ತಂದಿಲ್ಲ. ಮುಂದಿನ ಚುನಾವಣೆಯಲ್ಲಿ ಕನಿಷ್ಠ 25 ಸಾವಿರ ಮತಗಳ ಅಂತರದಿಂದ ಅವರನ್ನು ಗೆಲ್ಲಿಸಬೇಕು. ಗಾಂಧಿನಗರದ ಜನತೆಯ ಬಗ್ಗೆ ಮಾತನಾಡಲು ನನಗೆ ಹಕ್ಕಿದೆ. ಏಕೆಂದರೆ ನಾನು ಸಹ ಗಾಂಧಿನಗರದವನೇ, ಮುಂದಕ್ಕೂ ಇರುವವನೇ, ನಿಮ್ಮನ್ನು ಬಿಟ್ಟು ಹೋಗುವನಲ್ಲ. 1981 ರಿಂದ ಇದೇ ಗಾಂಧಿನಗರದಲ್ಲಿ ವಿದ್ಯಾಭ್ಯಾಸ ಮಾಡಿ, ವಿದ್ಯಾರ್ಥಿ ನಾಯಕನಾಗಿ ಬೆಳೆದವನು ನಾನು. ಇಲ್ಲಿನ ಒಂದೊಂದು ಗಲ್ಲಿಯ ಪರಿಚಯವೂ ನನಗಿದೆ. ನೂರಾರು ಜನ ಸ್ನೇಹಿತರು ಇಲ್ಲಿದ್ದಾರೆ" ಎಂದರು.

"1999 ರಿಂದ ದಿನೇಶ್ ಗುಂಡೂರಾವ್ ಅವರನ್ನು ಗಾಂಧಿನಗರ ಜನತೆ ಗೆಲ್ಲಿಸಿಕೊಂಡು ಬರುತ್ತಿದ್ದಾರೆ. ಆದರೆ ಈ ಬಾರಿಯ ಚುನಾವಣೆಯಲ್ಲಿ ಇಲ್ಲಿನ ಮತದಾರರು ತಮಗೆ ತಾವೇ ದ್ರೋಹ ಬಗೆದುಕೊಂಡಿದ್ದಾರೆ. ಇವರ ಜನಪರ ಕೆಲಸಗಳಿಗೆ ಕನಿಷ್ಠ 25,000 ಮತಗಳ ಅಂತರದಿಂದ ಗೆಲ್ಲಿಸಬೇಕಾಗಿತ್ತು. ಸಣ್ಣ ಕಳಂಕವನ್ನು ಹೊತ್ತುಕೊಳ್ಳಲು ಕ್ಷೇತ್ರದ ಅಭಿವೃದ್ಧಿಗಾಗಿ ಕೆಲಸ ಸಮಾಜವನ್ನು ಒಟ್ಟಿಗೆ ಕರೆದುಕೊಂಡು ಮುನ್ನಡೆಯುತ್ತಿದ್ದಾರೆ. ಇವರನ್ನು ಶಾಸಕರಾಗಿ ಪಡೆದಿರುವುದೇ ಗಾಂಧಿನಗರದ ಜನತೆಯ ಪುಣ್ಯ" ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದರು. 

Buffer zone.. ರಾಜ್ಯ ಸರ್ಕಾರದ ತೀರ್ಮಾನಕ್ಕೆ ಪರಿಸರವಾದಿಗಳು ತೀವ್ರ ವಿರೋಧ; ಕಾರಣವೇನು?




ನಿಮ್ಮ ಭೂಮಿ ದಾಖಲೆ ನೀಡುವುದು ನಮ್ಮ 6ನೇ ಗ್ಯಾರಂಟಿ

"ಸಚಿವರಾದ ಕೃಷ್ಣಬೈರೇಗೌಡ ಹಾಗೂ ಪ್ರಿಯಾಂಕ್ ಖರ್ಗೆ ಅವರ ನೇತೃತ್ವದಲ್ಲಿ ಹಟ್ಟಿ, ತಾಂಡಗಳಲ್ಲಿ ವಾಸಿಸುವ ಜನರಿಗೆ ಹಕ್ಕು ಪತ್ರ ನೀಡುತ್ತಿದ್ದೇವೆ. ಜನಸಾಮಾನ್ಯರ ಆಸ್ತಿಗಳನ್ನ ರಕ್ಷಣೆ ಮಾಡುವುದೇ ಕಾಂಗ್ರೆಸ್ ಸರ್ಕಾರದ ಆರನೇ ಗ್ಯಾರಂಟಿ" ಎಂದರು.

"ಈ ಹಿಂದೆ 'ಬಿ' ಖಾತೆ ನೀಡುತ್ತಿದ್ದರು. ಇದರಿಂದ ಯಾರಿಗೂ ಸಹ ಬ್ಯಾಂಕ್ ನಲ್ಲಿ ಸಾಲ ದೊರೆಯುತ್ತಿರಲಿಲ್ಲ. ಆದಕಾರಣಕ್ಕೆ ಜನಸಾಮಾನ್ಯರ ಸಮಸ್ಯೆಗಳನ್ನು ಬಗೆಹರಿಸಲು ಎಲ್ಲರಿಗೂ 'ಎ' ಖಾತೆ ನೀಡುವ ಐತಿಹಾಸಿಕ ತೀರ್ಮಾನವನ್ನ ಸರ್ಕಾರ ಮಾಡಿದೆ. ಈ ಕೆಲಸವನ್ನು ನೋಡಿದ ಕೇಂದ್ರ‌ ಸರ್ಕಾರವು ನಮ್ಮ ಅಧಿಕಾರಿಗಳನ್ನು ಕರೆಸಿ ಇಡೀ ದೇಶಕ್ಕೆ ಮಾದರಿ ಕೆಲಸ ಮಾಡುತ್ತಿದ್ದೀರಾ ಎಂದು ಶ್ಲಾಘಿಸಿದ್ದಾರೆ" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

DCM DKS ON BANGALORE POTHOLES
Advertisment
Advertisment
Advertisment