/newsfirstlive-kannada/media/media_files/2025/08/09/bng_accident-2025-08-09-15-28-49.jpg)
ಬೆಂಗಳೂರು: ವರಮಹಾಲಕ್ಷ್ಮಿ ಹಬ್ಬದಂದು ನಾದಿನಿ ಮನೆಗೆ ಕುಂಕುಮಕ್ಕೆ ಎಂದು ಬೈಕ್ನಲ್ಲಿ ಹೋಗುತ್ತಿದ್ದ ದಂಪತಿಗೆ ಲಾರಿಯೊಂದು ಗುದ್ದಿದೆ. ಇದರ ಪರಿಣಾಮ ಮಹಿಳೆ ಜೀವ ಕಳೆದುಕೊಂಡಿದ್ದು ಪತಿಗೆ ಸಣ್ಣಪುಟ್ಟ ಗಾಯಗಳು ಆಗಿವೆ. ಲಗ್ಗೆರೆ ಬ್ರಿಡ್ಜ್ ಬಳಿ ಈ ಘಟನೆ ನಡೆದಿದೆ.
ಲಗ್ಗೆರೆ ನಿವಾಸಿ ಗೀತಾ (23) ಜೀವ ಕಳೆದುಕೊಂಡ ಮಹಿಳೆ. ಈಕೆಯ ಗಂಡ ಸುನೀಲ್ಗೆ ಗಾಯಗಳು ಆಗಿವೆ. ಈ ದಂಪತಿ ಕಳೆದ 3 ತಿಂಗಳ ಹಿಂದೆ ಮದುವೆಯಾಗಿದ್ದರು. ಲಗ್ಗೆರೆ ಬಳಿ 1 ವಾರದ ಹಿಂದಷ್ಟೇ ಮನೆ ಮಾಡಿಕೊಂಡಿದ್ದರು. ಕಳೆದ ಭಾನುವಾರ ಹಾಲು ಉಕ್ಕಿಸಿದ್ದ ಪತಿ-ಪತ್ನಿ ಸಂಭ್ರಮಿಸಿದ್ದರು. ವರಮಹಾಲಕ್ಷ್ಮೀ ಹಬ್ಬಕ್ಕೆ ತವರು ಮನೆಗೆಂದು ಪತ್ನಿಯನ್ನ ಚಂದ್ರ ಲೇಔಟ್ನಲ್ಲಿರುವ ಅವರ ಅಮ್ಮನ ಮನೆಗೆ ಪತಿ ಕರೆತಂದಿದ್ದರು.
ಹಬ್ಬದ ಹಿನ್ನೆಲೆಯಲ್ಲಿ ಮಲ್ಲೇಶ್ವರಂನಲ್ಲಿರುವ ನಾದಿನಿ (ಗಂಡನ ಅಕ್ಕ) ಮನೆಗೆ ಕುಂಕುಮಕ್ಕಾಗಿ ಹೋಗುತ್ತಿದ್ದರು. ಮಲ್ಲೇಶ್ವರಂನ ನಾದಿನಿ ಮನೆಗೆ ತೆರಳುವಾಗ ಲಗ್ಗೆರೆ ಬಳಿ ಅಪಘಾತ ಸಂಭವಿಸಿದೆ. ಲಗ್ಗೆರೆ ಬ್ರಿಡ್ಜ್ ಬಳಿ ಬೈಕ್ ಮತ್ತು 12 ವ್ಹೀಲ್ ಲಾರಿ ನಡುವೆ ಅಪಘಾತವಾಗಿದೆ. ತಲೆಗೆ ಗಂಭೀರ ಗಾಯವಾದ ಕಾರಣ ಪತ್ನಿ ಸ್ಥಳದಲ್ಲೇ ಜೀವ ಬಿಟ್ಟಿದ್ದಾರೆ. ರಾಜಾಜಿನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದ್ದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಯುತ್ತಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ