/newsfirstlive-kannada/media/media_files/2025/08/22/ananya_bhat-2025-08-22-07-54-55.jpg)
ದೂರುದಾರೆ ಸುಜಾತ ಭಟ್
ಧರ್ಮಸ್ಥಳದಲ್ಲಿ ತಮ್ಮ ಮಗಳು ಅನನ್ಯ ಭಟ್ ಕಾಣೆಯಾಗಿದ್ದಾರೆ ಎಂದು ವೃದ್ಧೆ ಸುಜಾತ ಭಟ್ ಜುಲೈ 20 ರಂದು ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿಗೆ ಮೂರು ಪುಟಗಳ ಲಿಖಿತ ದೂರು ನೀಡಿದ್ದಾರೆ. ಆದಾದ ಬಳಿಕ ಆಗ್ಗಾಗ್ಗೆ ಮಾಧ್ಯಮಗಳ ಮುಂದೆ ಅನನ್ಯ ಭಟ್ ಬಗ್ಗೆ ಹೇಳಿಕೆ ನೀಡಿದ್ದಾರೆ. ತಮ್ಮ ಗೊಂದಲಕಾರಿ, ಅಸ್ಪಷ್ಟ ಹೇಳಿಕೆಯಿಂದಲೇ ಸುಜಾತ ಭಟ್ ಇಡೀ ರಾಜ್ಯದ ಗಮನ ಸೆಳೆದಿದ್ದಾರೆ.
ಈಗ ಸುಜಾತ ಭಟ್ ಬಗ್ಗೆ ಸ್ಪೋಟಕ, ಅಶ್ಚರ್ಯಕರ ಹೇಳಿಕೆಯನ್ನು ಅವರ ಸ್ವಂತ ಸಹೋದರ ಉಡುಪಿಯಲ್ಲಿ ನೀಡಿದ್ದಾರೆ. ಆದರೇ, ಅವರ ಸಹೋದರ ತಮ್ಮ ಹೆಸರು ಹಾಗೂ ಮುಖವನ್ನು ಬಹಿರಂಗಪಡಿಸಬಾರದು ಎಂದು ಮಾಧ್ಯಮಗಳಿಗೆ ಷರತ್ತು ವಿಧಿಸಿ ಹೇಳಿಕೆ ನೀಡಿದ್ದಾರೆ. ಹೀಗಾಗಿ ನಾವು ಇಲ್ಲಿ ಸುಜಾತ ಭಟ್ ಸೋದರನ ಹೆಸರು ಅನ್ನು ಬಹಿರಂಗಪಡಿಸುತ್ತಿಲ್ಲ. ಸುಜಾತ ಭಟ್ ಬಗ್ಗೆ ಅವರ ಸ್ವಂತ ಸಹೋದರ ಹೇಳಿದ್ದೇನು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಸುಜಾತ ಭಟ್ ಒಂಬತ್ತನೇ ಕ್ಲಾಸ್ ನಲ್ಲಿ ಇರುವಾಗಲೇ ಮನೆ ಬಿಟ್ಟು ಓಡಿ ಹೋಗಿದ್ದಾಳೆ. 9 ನೇ ಕ್ಲಾಸ್ ನಲ್ಲಿ ಸುಜಾತಾ ಆರೇಳು ತಿಂಗಳ ಬಸುರಿ ಆಗಿದ್ದಳು. ಕ್ಲಿನಿಕ್ ನಲ್ಲಿ ತಂದೆ ಅಬಾರ್ಷನ್ ಮಾಡಿಸಿದರು. ನಮ್ಮ ಕುಟುಂಬದ ಜೊತೆ ಅವಳು ಸಂಪರ್ಕದಲ್ಲೇ ಇಲ್ಲ. ಶಿವಮೊಗ್ಗದ ರಿಪ್ಪನ್ ಪೇಟೆಯಲ್ಲಿ ಯಾರದ್ದೋ ಜೊತೆಗೆ ಇದ್ದೇನೆ ಎಂದು ಹೇಳಿದಳು. ಶಿವಮೊಗ್ಗದಿಂದ ಬೆಂಗಳೂರಿಗೆ ಹೋಗಿ ಈಗ ನೆಲೆಸಿದ್ದೇನೆ ಎಂದು ಹೇಳಿದಳು. ಕಳೆದ 40 ವರ್ಷದಲ್ಲಿ ಎರಡು ಮೂರು ಬಾರಿ ಮಾತ್ರ ಉಡುಪಿಗೆ ಬಂದಿದ್ದಾಳೆ. ಎರಡು ಬಾರಿ ಡ್ರೈವರ್ ಜೊತೆ ಕಾರಿನಲ್ಲಿ ಉಡುಪಿಗೆ ಬಂದಿದ್ದಳು. ನಾನೀಗ ಕೋಟ್ಯಾಧೀಶೆ ಎಂದು ಕುಟುಂಬದ ಮುಂದೆ ಹೇಳಿಕೊಳ್ಳುತ್ತಿದ್ದಳು. ಅನನ್ಯ ಭಟ್ ಎಂಬ ಮಗಳು ಇರಲು ಸಾಧ್ಯವೇ ಇಲ್ಲ ಎಂದು ಸುಜಾತ ಭಟ್ ಸೋದರ ಹೇಳಿದ್ದಾರೆ.
ಮದುವೆಯಾದ ಬಗ್ಗೆ, ಮಗಳು ಇರುವ ಬಗ್ಗೆ ಒಂದು ಬಾರಿಯೂ ನಮ್ಮ ಬಳಿ ಹೇಳಿಲ್ಲ ಎಂದು ಸುಜಾತ ಭಟ್ ಸೋದರ ನ್ಯೂಸ್ ಫಸ್ಟ್ ಗೆ ತಿಳಿಸಿದ್ದಾರೆ. ಧರ್ಮಸ್ಥಳದವರಿಂದ ನಮಗೆ ಯಾವುದೇ ಅನ್ಯಾಯವಾಗಿಲ್ಲ. ನಮ್ಮ ಚಿಕ್ಕಪ್ಪ ನಮ್ಮ ಜಮೀನನ್ನು ದಾನ ಕೊಟ್ಟಿದ್ದಾರೋ, ಮಾರಿದಾರೋ ನಮಗೆ ಗೊತ್ತಿಲ್ಲ . ಆ ಕಾಲದಲ್ಲಿ ನಮ್ಮ ತಂದೆಗೆ ಒಂದುವರೆಯಿಂದ ಎರಡು ಲಕ್ಷ ರೂಪಾಯಿ ಕೊಟ್ಟಿದ್ದಾರೆ. ಆ ಹಣದಲ್ಲಿ ನಾವು ಮನೆ ಕಟ್ಟಿ ವಾಸ ಮಾಡುತ್ತಿದ್ದೇವೆ. ಅನಿಲ್ ಭಟ್ ಯಾರೆಂದು ನಮಗೆ ಗೊತ್ತಿಲ್ಲ . ರಂಗಪ್ರಸಾದ್ ಬಗ್ಗೆಯೂ ನಮಗೆ ಮಾಹಿತಿ ಇಲ್ಲ . ಎಸ್ಐಟಿ ಮುಂದೆ ತನಿಖೆಗಾಗಿ ಹೇಳಿಕೆ ಕೊಡಲು ನಾನು ಸಿದ್ಧ. ನಾನು ನನ್ನ ಕೆಲಸ ಬಿಟ್ಟು ಬಂದು ಹೇಳಿಕೆ ಕೊಡಲ್ಲ . ಪೊಲೀಸರು ನನಗೆ ಸಂಬಳ ಕೊಟ್ರೆ ನಾನು ಬಂದು ಹೇಳಿಕೆ ಕೊಡುತ್ತೇನೆ ಎಂದು ಸುಜಾತ ಭಟ್ ಸೋದರ ಹೇಳಿದ್ದಾರೆ.
ಪರೀಕಾಕ್ಕೆ ಹೋಗಿ ಜಾಗದ ಬಗ್ಗೆ ಸುಜಾತ ಭಟ್ ವಿಚಾರಣೆ ಮಾಡುತ್ತಿದ್ದಳು ಎಂಬ ಮಾಹಿತಿ ಸಿಕ್ಕಿತ್ತು. ಸುಜಾತಾ ವರ್ತನೆ ಮತ್ತು ಜೀವನ ಸರಿ ಇಲ್ಲ ಎಂದು ಸುಜಾತ ಭಟ್ ಸೋದರನೇ ಹೇಳಿಕೆ ನೀಡಿರುವುದು ಅಚ್ಚರಿಗೆ ಕಾರಣವಾಗಿದೆ. ಮನೆ ಬಿಟ್ಟು ಓಡಿ ಹೋಗಿದ್ದವಳನ್ನು ಕರೆದುಕೊಂಡು ಬಂದದ್ದು ನಾವೇ. ಮನೆಯಲ್ಲಿ ಕೂಡಿ ಹಾಕಿ ಬುದ್ದಿ ಹೇಳಿದರೂ ಮತ್ತೆ ಓಡಿ ಹೋದಳು ಎಂದು ಸುಜಾತ ಭಟ್ ಸೋದರ ನ್ಯೂಸ್ ಫಸ್ಟ್ ಗೆ ತಿಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ