/newsfirstlive-kannada/media/post_attachments/wp-content/uploads/2025/04/Siddaramaiah-Cabinet-Meet.jpg)
ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಕ್ಯಾಬಿನೆಟ್ ಸಭೆ
ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಇಂದು ರಾಜ್ಯ ಸಚಿವ ಸಂಪುಟ ಸಭೆ ನಡೆಯಿತು. ವಿಧಾನಸೌಧದ ಕ್ಯಾಬಿನೆಟ್ ಹಾಲ್ ನಲ್ಲಿ ಬರೋಬ್ಬರಿ ಎರಡೂವರೆ ಗಂಟೆಗಳ ಕಾಲ ಸುದೀರ್ಘ ಕ್ಯಾಬಿನೆಟ್ ಸಭೆ ನಡೆಯಿತು. ಈ ಸಭೆಯಲ್ಲಿ ಕೆಲವೊಂದು ಮಹತ್ವದ ತೀರ್ಮಾನ ಕೈಗೊಂಡಿದೆ.
ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸಕ್ಷಮ ಪ್ರಾಧಿಕಾರದ ಅನುಮೋದನೆ ಪಡೆಯದೆ ರಚಿಸಿರುವ ಬಡಾವಣೆಗಳಲ್ಲಿನ 'ಬಿ-ಖಾತಾ' ನಿವೇಶನ/ಕಟ್ಟಡ/ ಅಪಾರ್ಟ್ ಮೆಂಟ್/ ಫ್ಲಾಟ್ ಗಳಿಗೆ ಎ-ಖಾತಾ" ನೀಡಲು ಕ್ಯಾಬಿನೆಟ್ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. GBA ಮಾದರಿಯಲ್ಲೆ ನಿಯಮ ರೂಪಿಸಿ ಎ ಖಾತಾ ನೀಡಲು ನಿರ್ಧಾರ ಕೈಗೊಳ್ಳಲಾಗಿದೆ. ಇದರಿಂದ ಬೆಂಗಳೂರು ಹೊರತುಪಡಿಸಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿರುವ ಪುರಸಭೆ, ಪಟ್ಟಣ ಪಂಚಾಯಿತಿ, ನಗರಸಭೆ, ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಬಿ ಖಾತಾ ಆಸ್ತಿಗಳನ್ನು ಎ ಖಾತಾ ಆಸ್ತಿಗಳಾಗಿ ಪರಿವರ್ತಿಸಿಕೊಳ್ಳಲು ಅವಕಾಶ ಸಿಗಲಿದೆ. ಗ್ರೇಟರ್ ಬೆಂಗಳೂರು ಅಥಾರಿಟಿ ಮಾದರಿಯಲ್ಲೇ ನಿಯಮ ರೂಪಿಸಿ ರಾಜ್ಯದಾದ್ಯಂತ ಬಿ ಖಾತಾ ಆಸ್ತಿಗಳಿಗೆ ಎ ಖಾತಾ ನೀಡಲಾಗುತ್ತೆ ಎಂದು ಕ್ಯಾಬಿನೆಟ್ ಸಭೆಯ ಬಳಿಕ ಕಾನೂನು, ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ ಪಾಟೀಲ್ ಹೇಳಿದ್ದಾರೆ.
ಇನ್ನೂ ರಾಜ್ಯದ ವಿವಿಧ ಕೇಂದ್ರ ಕಾರಾಗೃಹಗಳಲ್ಲಿರುವ 33 ಜೀವಾವಧಿ ಶಿಕ್ಷಾ ಬಂದಿಗಳನ್ನು ಸನ್ನಡತೆ ಆಧಾರದ ಮೇಲೆ ಅವಧಿಪೂರ್ವ ಬಿಡುಗಡೆ ಮಾಡಲು ಒಪ್ಪಿಗೆ ನೀಡಲಾಗಿದೆ. ಆದರೇ, ಇದಕ್ಕೆ ಕೇಂದ್ರ ಸರ್ಕಾರದ ಅನುಮತಿ ಪಡೆದುಕೊಂಡು ಬಿಡುಗಡೆ ಮಾಡಲು ನಿರ್ಧಾರ ಮಾಡಲಾಗಿದೆ.
‘ಬೆಂಗಳೂರಿನ ಜಯನಗರದಲ್ಲಿ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ 2ನೇ ಹಂತದ ಕಟ್ಟಡ ಕಾಮಗಾರಿಯನ್ನು ಅಂದಾಜು ರೂ.24 ಕೋಟಿಗಳ ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ಚಿಕ್ಕಬಳ್ಳಾಪುರದ ನಂದಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ನೂತನ ಆಸ್ಪತ್ರೆ ಹಾಗೂ ಜಿಲ್ಲಾಸ್ಪತ್ರೆಗೆ ಅವಶ್ಯವಿರುವ ಯಂತ್ರೋಪಕರಣ ಮತ್ತು ಪೀಠೋಪಕರಣಗಳನ್ನು 40 ಕೋಟಿಗಳ ಅಂದಾಜು ಮೊತ್ತದಲ್ಲಿ ಖರೀದಿಸಲು ಆಡಳಿತಾತ್ಮಕ ಅನುಮೋದನೆ ಸಿಕ್ಕಿದೆ.
ಹೊಳೆನರಸೀಪುರ ಪಟ್ಟಣದಲ್ಲಿ ತಾಲ್ಲೂಕು ಪಂಚಾಯಿತಿ ಕಛೇರಿ ಕಟ್ಟಡ ನಿರ್ಮಾಣ ಕಾಮಗಾರಿಯ ರೂ.12.30 ಕೋಟಿಗಳ ಪರಿಷ್ಕೃತ ಮೊತ್ತಕ್ಕೆ ಅನುಮೋದನೆ ನೀಡಲಾಗಿದೆ.
ಭಾರತಿ ಎಜುಕೇಷನ್ ಟ್ರಸ್ಟ್(ರಿ) ಇವರಿಗೆ ಮಂಜೂರು ಮಾಡಿರುವ ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಮಳ್ಳಹಳ್ಳಿ ಗ್ರಾಮದ ಸ.ನಂ.26 ರಲ್ಲಿ 17-06 ಎಕರೆ/ಗುಂಟೆ ಜಮೀನಿಗೆ ವಿಧಿಸಿರುವ ಮೊತ್ತವನ್ನು ಪರಿಷ್ಕರಿಸಲು ಒಪ್ಪಿಗೆ ನೀಡಲಾಗಿದೆ.
ತುಮಕೂರು ಜಿಲ್ಲೆ, ಶಿರಾ ತಾಲ್ಲೂಕು, ಕಲ್ಲುಕೋಟೆ ಗ್ರಾಮದ ಸ.ನಂ.49 ರಲ್ಲಿ 72 ಗುಂಟೆ ಜಮೀನನ್ನು ಕಾಂಗ್ರೆಸ್ ಭವನ ನಿರ್ಮಾಣಕ್ಕಾಗಿ 'ಕಾಂಗ್ರೆಸ್ ಭವನ ಟ್ರಸ್ಟ್, ಬೆಂಗಳೂರು" ಇವರಿಗೆ ಮಂಜೂರು ಮಾಡಲಾಗಿದೆ.
ರಾಯಚೂರು ಜಿಲ್ಲೆ, ಸಿರವಾರ ತಾಲ್ಲೂಕು, ಸಿರವಾರ ಸೀಮಾದ ಸ.ನಂ. 39// ರಲ್ಲಿ 10 ಗುಂಟೆ ಜಮೀನನ್ನು ಕಾಂಗ್ರೆಸ್ ಭವನ ನಿರ್ಮಾಣದ ಉದ್ದೇಶಕ್ಕಾಗಿ 'ಕಾಂಗ್ರೆಸ್ ಭವನ ಟ್ರಸ್ಟ್, ಬೆಂಗಳೂರು" ಇವರಿಗೆ ಮಂಜೂರು ಮಾಡಲಾಗಿದೆ.
ಕಲಬುರಗಿ ಮಹಾನಗರ ಪಾಲಿಕೆ ವ್ಯಾಪ್ತಿಯ ವಿವಿಧ ಸ್ಥಳಗಳಲ್ಲಿ ಮಹಾತ್ಮಾ ಗಾಂಧಿ, ಇಂದಿರಾ ಗಾಂಧಿ, ಜವಾಹರಲಾಲ್ ನೆಹರೂ ಮತ್ತು ರಾಜೀವ್ ಗಾಂಧಿ ಇವರ ಪುತ್ಥಳಿಗಳನ್ನು ಸ್ಥಾಪಿಸಲು ಒಪ್ಪಿಗೆ ನೀಡಲಾಗಿದೆ.
ಹಳಿಯಾಳ ಪಟ್ಟಣಕ್ಕೆ ಒಳಚರಂಡಿ ವ್ಯವಸ್ಥೆ ಕಲ್ಪಿಸುವ ಯೋಜನೆಯಡಿ ನಿರ್ಮಿಸಲಾಗಿರುವ ವಿವಿಧ ಘಟಕಗಳ 5 ವರ್ಷಗಳ ನಿರ್ವಹಣೆ ಮತ್ತು ದುರಸ್ಸಿ ಕಾಮಗಾರಿಯನ್ನು ರೂ.10.60 ಕೋಟಿಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸಕ್ಷಮ ಪ್ರಾಧಿಕಾರದ ಅನುಮೋದನೆ ಪಡೆಯದೆ ರಚಿಸಿರುವ ಬಡಾವಣೆಗಳಲ್ಲಿನ 'ಬಿ-ಖಾತಾ' ನಿವೇಶನ/ಕಟ್ಟಡ/ ಅಪಾರ್ಟ್ ಮೆಂಟ್/ ಫ್ಲಾಟ್ ಗಳಿಗೆ “ಎ-ಖಾತಾ" ನೀಡಲು ಒಪ್ಪಿಗೆ ನೀಡಲಾಗಿದೆ. GBA ಮಾದರಿಯಲ್ಲೆ ನಿಯಮ ರೂಪಿಸಿ ಎ ಖಾತಾ ನೀಡಲು ನಿರ್ಧಾರ ಮಾಡಲಾಗಿದೆ.
ಶಿವಮೊಗ್ಗ, ಮಹಾನಗರ ಪಾಲಿಕೆಯಿಂದ ಮಾಜಿ ಸೈನಿಕ ಆರ್.ಜಿ.ತೆಲಂಗ್ ಬಿನ್ ಗೋಪಾಲರಾಮಯ್ಯ ರವರಿಗೆ ವಿನೋಬನಗರ 1ನೇ ಹಂತದಲ್ಲಿ ಹಂಚಿಕೆಯಾಗಿರುವ 1200 ಚದರ ಅಡಿ ನಿವೇಶನ ಸಂಖ್ಯೆ: 586ರ ಬದಲಿಗೆ ಅದೇ ಬಡಾವಣೆಯಲ್ಲಿ 1350 ಚದರ ಅಡಿ ವಿಸ್ತೀರ್ಣದ ನಿವೇಶನ ಸಂಖ್ಯೆ: 385ನ್ನು ಬದಲಿ ನಿವೇಶನವನ್ನಾಗಿ ಮಂಜೂರಿಗೆ ಒಪ್ಪಿಗೆ ಸಿಕ್ಕಿದೆ.
"ಅಕ್ಕ ಪಡೆ" ಯೋಜನೆಯನ್ನು ಒಳಾಡಳಿತ ಇಲಾಖೆಯ ಸಹಯೋಗದೊಂದಿಗೆ ರಾಜ್ಯದ 31 ಜಿಲ್ಲೆ ಹಾಗೂ 05 ಪೊಲೀಸ್ ಆಯುಕ್ತಾಲಯಗಳಲ್ಲಿ ಅನುಷ್ಠಾನಗೊಳಿಸಲು ಒಪ್ಪಿಗೆ ನೀಡಲಾಗಿದೆ.
ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಮಂಡ್ಯ ಇಲ್ಲಿ "ಆಡಳಿತ ಭವನ'ವನ್ನು ಲೋಕೋಪಯೋಗಿ ಇಲಾಖೆಯ ಮೂಲಕ 70.70 ಕೋಟಿಗಳ ಅಂದಾಜು ಮೊತ್ತದಲ್ಲಿ ನಿರ್ಮಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ದುಬ್ಬನಶಶಿಯ ಮತ್ತು ಗಂಗಕೊಳ್ಳದ ಕಡಲ ತೀರದಲ್ಲಿ ಸಮುದ್ರ ಕೊರೆತ ಪ್ರತಿಬಂಧಕ ಕಾಮಗಾರಿಯ 11.03 ಕೋಟಿಗಳ ಪರಿಷ್ಕೃತ ಅಂದಾಜಿಗೆ ಅನುಮೋದನೆ ನೀಡಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆ ಉಳ್ಳಾಲ ತಾಲ್ಲೂಕು, ಬಾಳೆಪುಣಿ ಗ್ರಾಮದ ಸ.ನಂ. 87/4ರಲ್ಲಿ 5-00 ಎಕರೆ ಜಮೀನನ್ನು ಎಲೆಕ್ನಿಕ್ ಬಸ್‌ಗಳನ್ನು ಕಾರ್ಯಾಚರಿಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಮಂಗಳೂರು ವಿಭಾಗ ಇವರಿಗೆ ಮಂಜೂರಿಗೆ ಕ್ಯಾಬಿನೆಟ್ ನಿಂದ ಒಪ್ಪಿಗೆ ಸಿಕ್ಕಿದೆ.
ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ಉತ್ತರ ತಾಲ್ಲೂಕು, ದಾಸನಪುರ ಹೋಬಳಿ, ರಾವುತನಹಳ್ಳಿ ಗ್ರಾಮದ ಸ.ನಂ. 57 ಮತ್ತು 58ರಲ್ಲಿನ ಜಮೀನನ್ನು ದಲಿತ ಹಾಗೂ ಹಿಂದುಳಿದ ವರ್ಗಗಳ 22 ಮಠಗಳಿಗೆ ಮಂಜೂರಿಕೆ ವಿಚಾರವನ್ನು ಮುಂದೂಡಿಕೆ ಮಾಡಲಾಗಿದೆ
ಕೊಡಗು ಜಿಲ್ಲೆ, ಮಡಿಕೇರಿ ತಾಲ್ಲೂಕು, ಸಂಪಾಜೆ ಹೋಬಳಿ, ಮದೆ ಗ್ರಾಮದ ಸ.ನಂ. 98/1 ರಲ್ಲಿನ 2.00 ಅಥವಾ 3.00 ಎಕರೆ ಜಮೀನನ್ನು ಅರೆಭಾಷಿಕ ಗೌಡ ಜನಾಂಗಕ್ಕೆ ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಕ್ರೀಡಾ ಕೇಂದ್ರ ಸ್ಥಾಪನೆ ಉದ್ದೇಶಕ್ಕೆ "ಕೊಡಗು ಗೌಡ ಸಮಾಜ(ರಿ) ಇವರಿಗೆ ಮಂಜೂರಿಗೆ ಒಪ್ಪಿಗೆ ನೀಡಲಾಗಿದೆ.
ಮೈಸೂರು ಮತ್ತು ಸುತ್ತಮುತ್ತಲಿನ ಭಾಗದ ರೇಷ್ಮೆ ಬೆಳೆಗಾರರಿಗೆ ಅನುಕೂಲವಾಗುವಂತೆ ಮೈಸೂರಿನಲ್ಲಿ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ನಬಾರ್ಡ್ ಸಹಯೋಗದಲ್ಲಿ 20 ಕೋಟಿಗಳ ಮೊತ್ತದಲ್ಲಿ ಸ್ಥಾಪಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ರಾಜ್ಯ ಕಾನೂನು ಮತ್ತು ಸಂಸದೀಯ ವ್ಯವಹಾರ ಖಾತೆ ಸಚಿವ ಎಚ್.ಕೆ.ಪಾಟೀಲ್ ಕ್ಯಾಬಿನೆಟ್ ಸಭೆಯ ಬಳಿಕ ಹೇಳಿದ್ದಾರೆ.
ಇನ್ನೂ ರಾಜ್ಯದಲ್ಲಿ ಎಲೆಕ್ಟ್ರಿಕ್ ಬಸ್ ಗಳ ಖರೀದಿಗೆ ಒಪ್ಪಿಗೆ ನೀಡಲಾಗಿದೆ. ದಲಿತ, ಒಬಿಸಿ ಮಠಗಳಿಗೆ ಭೂಮಿ ನೀಡಿಕೆ ವಿಚಾರವನ್ನು ಮುಂದೂಡಲಾಗಿದೆ. ಬೆಂಗಳೂರು ದಾಸನಪುರ ಹೋಬಳಿ ರಾವುತನಹಳ್ಳಿ ಬಳಿ ಕೊಡಲು ಸರ್ಕಾರ ಉದ್ದೇಶಿಸಿತ್ತು. ಆದರೇ, ಕೆಲವೊಂದು ಗೊಂದಲಗಳ ಕಾರಣದಿಂದ ನಿರ್ಧಾರ ಕೈಗೊಳ್ಳದೇ ಮುಂದೂಡಲಾಗಿದೆ ಎಂದು ರಾಜ್ಯ ಕಾನೂನು ಮತ್ತು ಸಂಸದೀಯ ವ್ಯವಹಾರ ಖಾತೆ ಸಚಿವ ಎಚ್.ಕೆ.ಪಾಟೀಲ್ ಹೇಳಿದ್ದಾರೆ.
/filters:format(webp)/newsfirstlive-kannada/media/media_files/2025/09/11/state-cabinet-meeting-2025-09-11-20-18-45.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us