/newsfirstlive-kannada/media/media_files/2025/08/16/chandrashekaranatha-swamiji-2025-08-16-10-54-27.jpg)
ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾಗಿದ್ದ ಶ್ರೀ ಚಂದ್ರಶೇಖರನಾಥ ಸ್ವಾಮೀಜಿ (Chandrashekaranatha Swamiji) ಅವರು ತಡರಾತ್ರಿ ವಿಧಿವಶರಾಗಿದ್ದಾರೆ.
ಇದನ್ನೂ ಓದಿ: ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಚಂದ್ರಶೇಖರನಾಥ ಸ್ವಾಮೀಜಿ ವಿಧಿವಶ
ಕೆಂಗೇರಿಯಲ್ಲಿ ಶ್ರೀಮಠದ ಸ್ಥಾಪನೆ ಮಾಡಿ ಶಿಕ್ಷಣ ಕ್ಷೇತ್ರ, ಆಧ್ಯಾತ್ಮಿಕ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದ ಶ್ರೀಗಳು ತಡರಾತ್ರಿ 12:01 ಗಂಟೆ ಸುಮಾರಿಗೆ ಭೈರವೈಕ್ಯರಾಗಿದ್ದು, ಸ್ವಾಮೀಜಿಗಳ ಅಂತಿಮ ದರ್ಶನವನ್ನು ಇಂದು ಶ್ರೀಮಠದ ಆವರಣದಲ್ಲೇ ಏರ್ಪಡಿಸಲಾಗಿದೆ. ಚಂದ್ರಶೇಖರನಾಥ ಸ್ವಾಮೀಜಿ ಅವರಿಗೆ 81 ವರ್ಷ ವಯಸ್ಸಾಗಿತ್ತು. ಇವರು ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದರು.
ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಚಂದ್ರಶೇಖರನಾಥ ಸ್ವಾಮೀಜಿ ನಿಧನಕ್ಕೆ ರಾಜಕೀಯ ಗಣ್ಯರು ಸಂತಾಪ ಸೂಚಿಸಿದ್ದಾರೆ. ಹೆಚ್.ಡಿ ದೇವೇಗೌಡ, ಡಿಕೆ ಸುರೇಶ್, ಬಿ ವೈ ವಿಜಯೇಂದ್ರ, ಕೃಷಿ ಸಚಿವ ಎನ್. ಚಲುವರಾಯ, ಡಾ ಹೆಚ್ ಸಿ ಮಹದೇವಪ್ಪ,ಡಿಕೆ ಶಿವಕುಮಾರ್, ಬಿ ಕೆ ಹರಿಪ್ರಸಾದ್, ಆರ್ ಅಶೋಕ ಸೇರಿದಂತೆ ಸಾಕಷ್ಟು ಗಣ್ಯರು ಟ್ವೀಟ್ ಮಾಡುವ ಮೂಲಕ ಸಂತಾಪ ಸೂಚಿಸಿದ್ದಾರೆ.
ಇನ್ನೂ, ಶ್ರೀ ಚಂದ್ರಶೇಖರನಾಥ ಸ್ವಾಮೀಜಿ ನಿಧನದ ಸುದ್ದಿ ಕೇಳಿ ನಿರ್ಮಲಾನಂದ ಸ್ವಾಮೀಜಿ ಮಠಕ್ಕೆ ಆಗಮಿಸಿದ್ದಾರೆ. ಶ್ರೀಗಳ ಉತ್ತರಾಧಿಕಾರಿ ಪೀಠಾಧ್ಯಕ್ಷರಾದ ನಿಶ್ಚಲಾನಂದನಾಥ ಸ್ವಾಮೀಜಿ ಅವರಿಂದ ಇಂದು ಮಧ್ಯಾಹ್ನ 3 ಗಂಟೆಗೆ ಅಂತ್ಯಸಂಸ್ಕಾರ ವಿಧಿವಿಧಾನ ನೆರವೇರಲಿದೆ.
ಈ ಬಗ್ಗೆ ಮಾತಾಡಿದ ಶ್ರೀಗಳ ಉತ್ತಾರಧಿಕಾರಿ ಪೀಠಾಧ್ಯಕ್ಷ ನಿಶ್ಚಲಾನಂದನಾಥ ಸ್ವಾಮೀಜಿ, 81 ವಯಸ್ಸು, ಮಧ್ಯರಾತ್ರಿ 12.01 ಕ್ಕೆ ಭೈರವೈಕ್ಯರಾದರು. ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದರು. ಶಿಕ್ಷಣ ಕ್ಷೇತ್ರದಲ್ಲಿ, ಧಾರ್ಮಿಕ ಕ್ಷೇತ್ರದಲ್ಲಿ ಅಪಾರ ಕೊಡುಗೆಯನ್ನು ನಮ್ಮ ಗುರುಗಳು ನೀಡಿದ್ದಾರೆ. ನಿರ್ಗತಿಕ ಮಕ್ಕಳ ಬಗ್ಗೆ ವಿಶೇಷ ಪ್ರೀತಿಯನ್ನು ಹೊಂದಿದ್ದರು. ತಾವೇ ಕೃಷಿ ಮಾಡಿ, ಅನ್ನದಾಸೋಹ ಮಾಡುತ್ತಿದ್ದರು. ಶಿಕ್ಷಣ ಅತಿ ಮುಖ್ಯ ಎಂಬ ಧ್ಯೇಯ ಹೊಂದಿದ್ದರು. ಊರು ಊರುಗಳಿಗೆ ಹೋಗಿ ತಾವೇ ಬಸ್ ಚಾಲನೆ ಮಾಡಿ ಮಕ್ಕಳನ್ನ ಶಾಲೆಗೆ ಕರೆದುಕೊಂಡು ಬರ್ತಿದ್ದರು. ಸಮಾಜದ ನಾಯಕರಿಗೆ ಸಮುದಾಯದ ರಕ್ಷಣೆಗೆ ಕಿವಿ ಮಾತು ಹೇಳುತ್ತಿದ್ದರು. ನಾನು ತಹಶೀಲ್ದಾರ್ ಆಗಿದ್ದಾಗ ಮೊದಲ ಸಲ ಭೇಟಿಯಾಗಿದ್ದೆ. ನಮ್ಮ ಮಠಕ್ಕೆ ಒಬ್ಬರು ಸಾಧು ಬೇಕು ಅಂತ ಕೇಳಿದ್ರು. ಆ ಕ್ಷಣಕ್ಕೆ ನಾನೇ ಬರ್ತೇನೆ ಅಂತ ಹೇಳಿಬಿಟ್ಟೆ. ಅದಾದ ಮೇಲೆ ಮಠದ ಜೊತೆ ಶ್ರೀಗಳ ಜೊತೆ ನನ್ನ ಒಡನಾಟ ಆರಂಭವಾಯ್ತು. ನಾಥ ಪರಂಪರೆಯಂತೆ ವಿಧಿವಿಧಾನ ನೆರವೇರಿಸಲಾಗುವುದು ಎಂದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ