ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆಗೆ ಕಾಂಗ್ರೆಸ್ ನಾಯಕ ರಾಜೀವ್ ಗೌಡನಿಂದ ನಿಂದನೆ : ಪೊಲೀಸ್ ಠಾಣೆಗೆ ದೂರು

ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಾಗೌಡರನ್ನು ಕಾಂಗ್ರೆಸ್ ನಾಯಕ ರಾಜೀವ್ ಗೌಡ ನಿಂದಿಸಿ, ಪ್ರಾಣ ಬೆದರಿಕೆ ಹಾಕಿದ್ದಾರೆ. ಕೇಂದ್ರ ಸಚಿವ ಕುಮಾರಸ್ವಾಮಿ ಈ ಬಗ್ಗೆ ಸಿಎಸ್ ಶಾಲಿನಿ ರಜನೀಶ್ ಜೊತೆ ಮಾತನಾಡಿದ್ದಾರೆ. ಇನ್ನೂ ಪೊಲೀಸ ಠಾಣೆಗೆ ಅಮೃತಾಗೌಡ ದೂರು ನೀಡಿದ್ದಾರೆ.

author-image
Chandramohan
COmplaiant against Rajeev gowda

ರಾಜೀವ್ ಗೌಡ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ ಅಮೃತಾಗೌಡ

Advertisment
  • ರಾಜೀವ್ ಗೌಡ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ ಅಮೃತಾಗೌಡ
  • ಪೌರಾಯುಕ್ತೆ ಅಮೃತಾಗೌಡರನ್ನು ನಿಂದಿಸಿ ಪ್ರಾಣ ಬೆದರಿಕೆ ಹಾಕಿದ ಆರೋಪ
  • ತಮ್ಮ ಬ್ಯಾನರ್ ತೆಗೆದಿದ್ದಕ್ಕೆ ರಾಜೀವ್ ಗೌಡರಿಂದ ನಿಂದನೆ, ಬೆದರಿಕೆ

ಚಿಕ್ಕಬಳ್ಳಾಪುರ ಜಿಲ್ಲೆಯ  ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆಗೆ ಕಾಂಗ್ರೇಸ್ ಮುಖಂಡನಿಂದ ಪ್ರಾಣ ಬೆದರಿಕೆ ಹಾಕಲಾಗಿದೆ. ಜೊತೆಗೆ  ಅವ್ಯಾಚ್ಯ ಶಬ್ದಗಳು,  ಅಶ್ಲೀಲ ಶಬ್ದಗಳಿಂದ ನಿಂದಿಸಿ ಪ್ರಾಣಬೆದರಿಕೆ ಹಾಕಲಾಗಿದೆ. ನಗರಸಭೆ ಪೌರಾಯುಕ್ತೆ ಆಗಿರುವ ಅಮೃತಾಗೌಡಗೆ ಕಳೆದ  ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ರಾಜೀವ್ ಗೌಡ ನಿಂದಿಸಿ, ಬೆದರಿಕೆ ಹಾಕಿದ್ದಾರೆ. 
ಶಿಡ್ಲಘಟ್ಟ ಪಟ್ಟಣದಲ್ಲಿ ಬ್ಯಾನರ್ ಹಾಕಿದ್ದನ್ನು ತೆರವುಗೊಳಿಸಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಪೌರಾಯುಕ್ತೆಯನ್ನು ರಾಜೀವ್ ಗೌಡ ಪೋನ್ ಮಾಡಿ ನಿಂದಿಸಿದ್ದಾರೆ. ನನ್ನ ಬ್ಯಾನರ್, ಬಂಟಿಂಗ್ಸ್ ತೆರವುಗೊಳಿಸಿ, ಆ ಬೋ.. ಮಗಾ ಎಂಎಲ್‌ಎ ಬ್ಯಾನರ್ ಹಾಕಲು ಬಿಟ್ಟಿದ್ದೀರಿ. ನನ್ನ ಬ್ಯಾನರ್ ಬಿಚ್ಚಿ ಎಂಎಲ್‌ಎ ಬೋ... ಮಗಾ, ಸೂ... ಮಗನ ಬ್ಯಾನರ್ ಕಟ್ಟುತ್ತೀಯಾ ಎಂದು ಬೈದ್ದಿದ್ದಾರೆ. ಇದರ ಆಡಿಯೋ ಮೊಬೈಲ್ ನಲ್ಲಿ ರೆಕಾರ್ಡ್ ಆಗಿದೆ. 
ಜೊತೆಗೆ ಪೌರಾಯುಕ್ತೆ  ಅಮೃತಾಗೌಡಗೆ  ಬೆಂಕಿ ಹಾಕಿ ಸುಟ್ಟು ಹಾಕುವುದಾಗಿ, ಚಪ್ಪಲಿಯಲ್ಲಿ ಹೊಡೆಸುವುದಾಗಿ, ದಂಗೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.  ಸ್ಥಳಿಯ ಶಾಸಕ ಬಿ.ಎನ್ ರವಿಕುಮಾರ್ ಗೂ  ಅವ್ಯಾಚ್ಯ,  ಅಶ್ಲೀಲ  ಪದಗಳಿಂದ ನಿಂದಿಸಿದ್ದಾರೆ.  ಪರೋಕ್ಷವಾಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ. ಸಿ.ಸುಧಾಕರ್ ಗೂ ನಿಂದಿಸಿದ್ದಾರೆ. 

ಕೇಂದ್ರ ಸಚಿವ ಕುಮಾರಸ್ವಾಮಿ ಆಕ್ರೋಶ

ಶಿಡ್ಲಘಟ್ಟದ ನಗರಸಭೆ ಆಯುಕ್ತೆಗೆ ಕಾಂಗ್ರೆಸ್ ನಾಯಕ ಅವಾಜ್ ಪ್ರಕರಣವು ಶಿಡ್ಲಘಟ್ಟದಿಂದ ದೆಹಲಿವರೆಗೂ ಹೋಗಿದೆ. ದೆಹಲಿಯಲ್ಲಿರುವ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ, ಈ ಕೇಸ್ ಗೆ ಸಂಬಂಧಿಸಿದಂತೆ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಜೊತೆ ಪೋನ್ ನಲ್ಲಿ ಮಾತನಾಡಿದ್ದಾರೆ. ರಾಜೀವ್ ಗೌಡನ ಅಡಿಯೋವನ್ನು ಮುಖ್ಯ ಕಾರ್ಯದರ್ಶಿಗೆ ಕೇಂದ್ರ ಸಚಿವ ಕುಮಾರಸ್ವಾಮಿ ಕಳಿಸಿದ್ದಾರೆ. ಕಾಂಗ್ರೆಸ್ ನಾಯಕ ರಾಜೀವ್ ಗೌಡನನ್ನು ಬಂಧಿಸಬೇಕೆಂದು ಕುಮಾರಸ್ವಾಮಿ ಆಗ್ರಹಿಸಿದ್ದಾರೆ.  ನೀವೂ ಒಬ್ಬ ಹೆಣ್ಣುಮಗಳಾಗಿ ನಿಮ್ಮ ಅಧೀನದಲ್ಲಿ ಕೆಲಸ ಮಾಡುವ ಮಹಿಳಾ ಅಧಿಕಾರಿಗಳಿಗೆ ರಕ್ಷಣೆ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.  ಅಧಿಕಾರಿಗಳಿಗೆ ಆವಾಜ್ ಹಾಕಿದರೆ ಅವರು ಕೆಲಸ ಮಾಡುವುದು ಹೇಗೆ? ಎಂದು ಪ್ರಶ್ನೆ ಮಾಡಿದ್ದಾರೆ. ಈ ಘಟನೆ ಬಗ್ಗೆ ಕುಮಾರಸ್ವಾಮಿ ತೀವ್ರ ಆಕ್ರೋಶ ಹೊರಹಾಕಿದ್ದಾರೆ. 


ಪೊಲೀಸರಿಗೆ ಲಿಖಿತ ದೂರು ಸಲ್ಲಿಕೆ

ಮಹಿಳಾ ಪೌರಾಯುಕ್ತೆಗೆ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಧಮ್ಕಿ  ಹಾಕಿರುವ ಘಟನೆಗೆ ಸಂಬಂಧಿಸಿದಂತೆ  ರಾಜೀವ್ ಗೌಡ ವಿರುದ್ಧ ಶಿಡ್ಲಘಟ್ಟ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.  ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತ ಗೌಡ ಪೊಲೀಸ್ ಠಾಣೆಗೆ ಲಿಖಿತ ದೂರು ನೀಡಿದ್ದಾರೆ.  ಅಸಭ್ಯವಾಗಿ ಮಾತನಾಡಿದ್ದಕ್ಕೆ ದೂರು ದಾಖಲಾಗಿದೆ.  ಬಿಎನ್ ಎಸ್ ಕಾಯ್ದೆ ಅಡಿ 79, 132,  352, 199, 54 ರ ಅಡಿಯಲ್ಲಿ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ.  ಶಿಡ್ಲಘಟ್ಟ  ಪೊಲೀಸ್ ವೃತ್ತ ನಿರೀಕ್ಷಕರಿಗೆ ಪೌರಾಯುಕ್ತೆ ಅಮೃತಗೌಡ ದೂರು ನೀಡಿದ್ದಾರೆ.  ಪೌರಕಾರ್ಮಿಕರೊಂದಿಗೆ ತಮಟೆ ಚಳವಳಿ ಮೆರವಣಿಗೆ ನಡೆಸಿ ದೂರು ನೀಡಿದ್ದಾರೆ. 

AMRUTHAGOWDA POLICE COMPLAIANT



ಪೌರಾಯುಕ್ತೆ ಪರ ನಿಲ್ಲುತ್ತೇವೆ ಎಂದ ಜೆಡಿಎಸ್ ಶಾಸಕ ರವಿಕುಮಾರ್‌

ಶಿಡ್ಲಘಟ್ಟ ಶಾಸಕ ರವಿಕುಮಾರ್ ಪ್ರತಿಕ್ರಿಯಿಸಿದ್ದಾರೆ.  12 ನೇ ತಾರಿಖು ಬ್ಯಾನರ್ ವಿಚಾರವಾಗಿ ಕಮಿಷನರ್ ಮಾತನಾಡಿದ್ದಾರೆ.  ಅಧಿಕಾರಿಯ ಮೇಲೆ ದರ್ಪದಿಂದ ಮಾತನಾಡಿರೋ ಕಾಂಗ್ರೆಸ್ ಮುಖಂಡನ ಮೇಲೆ‌ ಜೆಡಿಎಸ್ ಕಾರ್ಯಕರ್ತರು ದೂರು ಸಲ್ಲಿಸುತ್ತಿದ್ದಾರೆ. ಕಾಂಗ್ರೆಸ್ ನವರದ್ದು ಯಾವ ಸಂಸ್ಕೃತಿ ಅನ್ನೋದು ಪದ ಬಳಕೆಯಲ್ಲೇ ಗೊತ್ತಾಗ್ತಿದೆ.  ಡಿಸಿಎಂ ಡಿಕೆ ಶಿವಕುಮಾರ್ ಬೆಂಬಲವಿದೆ ಅಂತ ರಾಜೀವ್ ಗೌಡ ತಾಲೂಕುನಲ್ಲಿ  ದರ್ಪ ತೋರುತ್ತಿದ್ದಾರೆ.  ಇಂತವರನ್ನ ಕಾಂಗ್ರೆಸ್ ಕೂಡಲೇ ಪಕ್ಷದಿಂದ ತೆಗೆಯಬೇಕು.  ನಾನು ಶಾಸಕನಾಗಿ ಪೌರಾಯುಕ್ತ ಹೆಣ್ಣು ಮಗಳ ಪರವಾಗಿ ನಿಲ್ಲುತ್ತೇನೆ.  ಹೊರಗಡೆಯಿಂದ ಬಂದು ಶಿಡ್ಲಘಟ್ಟ ದಲ್ಲಿ ಈ ರೀತಿ ದಬ್ಬಾಳಿಕೆ ಸರಿಯಿಲ್ಲ .  ಜೆಡಿಎಸ್ ನಿಂದ ಹೋರಾಟ ಮಾಡುತ್ತೇವೆ.  ನ್ಯಾಯ ಸಿಗುವವರೆಗೂ ಹೋರಾಟ ಮಾಡುತ್ತೇವೆ ಎಂದು  ಶಿಡ್ಲಘಟ್ಟದ ಮೇಲೂರಿನಲ್ಲಿ ಶಾಸಕ ರವಿಕುಮಾರ್ ಹೇಳಿದ್ದಾರೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

Shildlghatta Muncipality commissioner amrutha gowda
Advertisment