ಬ್ಯಾಂಕ್‌ನಲ್ಲಿಟ್ಟ ಚಿನ್ನ ಗುಳುಂ.. ಸತ್ತವ್ರ ಹೆಸ್ರಲ್ಲಿ ಲೋನ್ ಮಾಡಿ ಸ್ವಾಹ.. ಇದು ಬೇಲಿಯೇ ಎದ್ದು ಹೊಲ ಮೇಯ್ದ ಕತೆ..!

ಕಷ್ಟಕಾಲಕ್ಕೆ ಆಗಲಿ ಎಂದು ಜನ ಸಾಮಾನ್ಯರು ತಮ್ಮ ಬಂಗಾರವನ್ನು ನಂಬಿಕೆಯಿಂದ ಬ್ಯಾಂಕ್‌ನಲ್ಲಿ ಇಡುತ್ತಾರೆ. ಆದರೆ ‘ಬೇಲಿಯೇ ಎದ್ದು ಹೊಲ ಮೇಯ್ದರೆ ಹೇಗೆ?’ ಎಂಬಂತಾಗಿದೆ ಚಿಕ್ಕಮಗಳೂರಿನ ಪರಿಸ್ಥಿತಿ.

author-image
Ganesh Kerekuli
central bank of india
Advertisment
  • ಸಾಲ ತೀರಿಸಿದ್ರೂ ಒಡವೆ ವಾಪಸ್ ಇಲ್ಲ
  • ಕೋಟಿ ಕೋಟಿ ‘ಗೋಲ್ಡ್ ಗೋಲ್‌ಮಾಲ್’?
  • ನೀವು ನಂಬುವ ಬ್ಯಾಂಕ್ ಎಷ್ಟು ಸೇಫ್ ಆಗಿದೆ..? ​​

ಚಿಕ್ಕಮಗಳೂರು: ಕಷ್ಟಕಾಲಕ್ಕೆ ಆಗಲಿ ಎಂದು ಜನ ಸಾಮಾನ್ಯರು ತಮ್ಮ ಬಂಗಾರವನ್ನು ನಂಬಿಕೆಯಿಂದ ಬ್ಯಾಂಕ್‌ನಲ್ಲಿ ಇಡುತ್ತಾರೆ. ಆದರೆ ‘ಬೇಲಿಯೇ ಎದ್ದು ಹೊಲ ಮೇಯ್ದರೆ ಹೇಗೆ?’ ಎಂಬಂತಾಗಿದೆ ಚಿಕ್ಕಮಗಳೂರಿನ ಪರಿಸ್ಥಿತಿ. ಅಲ್ಲಿನ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ (Central Bank of India) ಶಾಖೆಯಲ್ಲಿ ಗ್ರಾಹಕರ ಚಿನ್ನವನ್ನೇ ಸಿಬ್ಬಂದಿ ಗುಳುಂ ಮಾಡಿದ್ದಾರೆ ಎಂಬ ಸ್ಫೋಟಕ ಆರೋಪ ಕೇಳಿಬಂದಿದೆ.

ಬೆಂಗಳೂರು ಕಚೇರಿಗೆ ಮುತ್ತಿಗೆ..?

ತಮ್ಮ ಚಿನ್ನವನ್ನು ಕಳೆದುಕೊಂಡು ಕಂಗಾಲಾಗಿರುವ ಗ್ರಾಹಕರು, ನೇರವಾಗಿ ಬೆಂಗಳೂರಿನಲ್ಲಿರುವ ಬ್ಯಾಂಕ್‌ನ ಪ್ರಾದೇಶಿಕ ಕಚೇರಿಗೆ (Regional Office) ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ನಾವು ಸಾಲದ ಹಣವನ್ನು ಬಡ್ಡಿ ಸಮೇತ ಕಟ್ಟಿದ್ದೇವೆ, ನಮ್ಮ ಚಿನ್ನ ನಮಗೆ ವಾಪಸ್ ಕೊಡಿ’ ಎಂದು ಪಟ್ಟು ಹಿಡಿದಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಬ್ಯಾಂಕ್ ಸಿಬ್ಬಂದಿ ನಮ್ಮನ್ನು ಯಾಮಾರಿಸುತ್ತಿದ್ದಾರೆ ಎಂದು ಗ್ರಾಹಕರು ಆರೋಪಿಸಿದ್ದಾರೆ.

ಏನಿದು ಮಹಾ ವಂಚನೆ ಆರೋಪ?

ಚಿಕ್ಕಮಗಳೂರು ಶಾಖೆಯಲ್ಲಿ 2020 ರಿಂದ 2025 ರವರೆಗೆ ಈ ವಂಚನೆ ಅವ್ಯಾಹತವಾಗಿ ನಡೆದಿದೆ ಎನ್ನಲಾಗಿದೆ. ಬ್ಯಾಂಕ್ ಮ್ಯಾನೇಜರ್ ಸಂದೀಪ್, ಸಿಬ್ಬಂದಿ ನಾರಾಯಣಸ್ವಾಮಿ ಸೇರಿದಂತೆ ಐವರ ವಿರುದ್ಧ ಚಿಕ್ಕಮಗಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದನ್ನೂ ಓದಿ: ಇವಿ ವಾಹನಗಳಿಂದ ಹತ್ತಾರು ಪ್ರಯೋಜನಗಳು: ಜನರ ಜೇಬಿಗೂ ಪ್ರತಿ ನಿತ್ಯ ಹಣದ ಉಳಿತಾಯ, ದೇಶಕ್ಕೂ ಲಾಭ, ಮಾಲಿನ್ಯವೂ ಇಲ್ಲ!

ಸಿಬ್ಬಂದಿ ಗ್ರಾಹಕರಿಗೆ ಮಾಡಿರುವ ಮೋಸದ ಪಟ್ಟಿ ನೋಡಿದರೆ ಬೆಚ್ಚಿಬೀಳುವಂತಿದೆ:

  • ಅಸಲಿ ಮಾರಿ ನಕಲಿ ಇಟ್ಟ ಆರೋಪ: ಗ್ರಾಹಕರು ಅಡವಿಟ್ಟ ಅಸಲಿ ಚಿನ್ನವನ್ನು ಮಾರಿ, ಲಾಕರ್‌ನಲ್ಲಿ ನಕಲಿ ಚಿನ್ನವನ್ನು ಇಡಲಾಗಿದೆ ಎಂಬ ಆರೋಪವಿದೆ.
  • ಗ್ರಾಹಕರ ಹೆಸರಲ್ಲಿ ಡಬಲ್ ಲೋನ್ ಆರೋಪ: ಗ್ರಾಹಕರಿಗೆ ತಿಳಿಯದಂತೆ ಅವರ ದಾಖಲೆಗಳನ್ನು ಬಳಸಿ, ಅವರ ಹೆಸರಿನಲ್ಲೇ ಹೆಚ್ಚುವರಿ ಗೋಲ್ಡ್ ಲೋನ್ ಪಡೆದು ಹಣ ಲೂಟಿ ಮಾಡಲಾಗಿದೆ.
  • ಸತ್ತವರ ಹೆಸರಲ್ಲೂ ಸಾಲ ಆರೋಪ: ಮೃತಪಟ್ಟ ವ್ಯಕ್ತಿಗಳ ಹೆಸರಿನಲ್ಲಿ ಗೋಲ್ಡ್ ಲೋನ್ ಸೃಷ್ಟಿಸಿ ಹಣ ಹೊಡೆಯಲಾಗಿದೆ.
  • ಎಫ್.ಡಿ (FD) ಹಣ ವರ್ಗಾವಣೆ ಆರೋಪ: ಗ್ರಾಹಕರ ಫಿಕ್ಸೆಡ್ ಡೆಪಾಸಿಟ್ ಹಣವನ್ನೂ ಅಕ್ರಮವಾಗಿ ವರ್ಗಾವಣೆ ಮಾಡಿಕೊಳ್ಳಲಾಗಿದೆ.
  • ಬೇರೆ ಬ್ಯಾಂಕ್‌ಗೆ ಶಿಫ್ಟ್ ಆರೋಪ: ಗ್ರಾಹಕರ ದಾಖಲೆ ಮತ್ತು ಚಿನ್ನವನ್ನು ಬಳಸಿ, ಬೇರೆ ಬ್ಯಾಂಕ್‌ಗಳಲ್ಲಿ ಇಟ್ಟು ಹೆಚ್ಚಿನ ಸಾಲ ಪಡೆದು ಆ ಹಣವನ್ನು ಸ್ವಂತಕ್ಕೆ ಬಳಸಿಕೊಂಡಿದ್ದಾರೆ.

ಮಾಜಿ ಸಿಬ್ಬಂದಿಯ ಸ್ಫೋಟಕ ಹೇಳಿಕೆ

ಪ್ರಕರಣದ ಆರೋಪಿ ಹಾಗೂ ಬ್ಯಾಂಕ್‌ನ ಮಾಜಿ ಕ್ಲರ್ಕ್ ನಾರಾಯಣಸ್ವಾಮಿ ಎಂಬಾತನೇ ಅಸಲಿ ಸತ್ಯವನ್ನು ಬಾಯಿಬಿಟ್ಟಿದ್ದಾನೆ ಎನ್ನಲಾಗಿದೆ. ‘ಗ್ರಾಹಕರ ಅಸಲಿ ಚಿನ್ನವನ್ನು ತೆಗೆದುಕೊಂಡು ಹೋಗಿ ಬೇರೆ ಕಡೆ ಅಡವಿಟ್ಟು ಹೆಚ್ಚು ಸಾಲ ಪಡೆಯಲಾಗಿದೆ. ಆ ಹಣವನ್ನು ಆರೋಪಿಗಳು ಸ್ವಂತಕ್ಕೆ ಬಳಸಿಕೊಂಡಿದ್ದಾರೆ’ ಎಂದು ಆತ ಹೇಳಿಕೆ ನೀಡಿದ್ದಾನೆ ಎನ್ನಲಾಗಿದೆ.

ಒಬ್ಬೊಬ್ಬ ಗ್ರಾಹಕರೂ 80 ಗ್ರಾಂ, 100 ಗ್ರಾಂ, 142 ಗ್ರಾಂ ಚಿನ್ನವಿಟ್ಟು ಸಾಲ ಪಡೆದಿದ್ದರು. ಈಗ ಸಾಲ ತೀರಿಸಿದರೂ ಚಿನ್ನ ಕೈಗೆ ಸಿಗದೆ ಪರದಾಡುವಂತಾಗಿದೆ. ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಬ್ಯಾಂಕ್‌ನಿಂದ ಅಧಿಕೃತ ಸ್ಪಷ್ಟನೆ ಇನ್ನಷ್ಟೇ ಹೊರಬೀಳಬೇಕಿದೆ.

ಇದನ್ನೂ ಓದಿ: ಜನಪ್ರಿಯ IAS ಅಧಿಕಾರಿಯ ಲವ್ & ಲೈಫ್.. ಈಗ 3ನೇ ಮದ್ವೆ.. ವರಿಸಿದ ಮೂವರೂ IAS ಅಧಿಕಾರಿಗಳು..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Chikkamagaluru Gold Scam
Advertisment