ಬಯಲು ಸೀಮೆ ಜಿಲ್ಲೆ ರೈತರಿಗೆ ಗುಡ್ ನ್ಯೂಸ್‌ : ಮುಂದಿನ ತಿಂಗಳು ಕೆರೆಗಳಿಗೆ ಹರಿಯಲಿದೆ ಭದ್ರಾ ಮೇಲ್ದಂಡೆ ಯೋಜನೆಯ ನೀರು

ಚಿತ್ರದುರ್ಗ, ತುಮಕೂರು, ಚಿಕ್ಕಮಗಳೂರು ಜಿಲ್ಲೆಯ ರೈತರು ಕಳೆದ 2 ದಶಕಗಳಿಂದ ಭದ್ರಾ ಮೇಲ್ದಂಡೆ ಯೋಜನೆ ಜಾರಿಗಾಗಿ ಹೋರಾಟ ನಡೆಸಿದ್ದರು. ಈಗ ಹೋರಾಟಕ್ಕೆ ಫಲ ಸಿಗುತ್ತಿದೆ. ರೈತರ ಕನಸು ನನಸಾಗುವ ದಿನ ಹತ್ತಿರವಾಗುತ್ತಿದೆ. ಮುಂದಿನ ತಿಂಗಳು ಚಿತ್ರದುರ್ಗದ ಕೆರೆಗಳಿಗೆ ಭದ್ರಾ ಮೇಲ್ದಂಡೆ ಯೋಜನೆ ನೀರು ಹರಿಯಲಿದೆ.

author-image
Chandramohan
UPPER BHADRA PROJECT (2)

ಭದ್ರಾ ಮೇಲ್ದಂಡೆ ನೀರು ಹರಿಯುವ ಪ್ರದೇಶಗಳು

Advertisment
  • ಮುಂದಿನ ತಿಂಗಳು ಭದ್ರಾ ಮೇಲ್ದಂಡೆ ನೀರು ಹರಿಯಲಿದೆ
  • ಚಿತ್ರದುರ್ಗದ ಜಿಲ್ಲೆಯ ಕೆರೆಗಳಿಗೆ ಭದ್ರಾ ಮೇಲ್ದಂಡೆ ಯೋಜನೆ ನೀರು
  • ರೈತರ 2 ದಶಕದ ಹೋರಾಟ, ಕನಸು ನನಸಾಗುವ ದಿನ ಹತ್ತಿರ

ಕರ್ನಾಟಕದ ಬಯಲು ಸೀಮೆಯ ರೈತರಿಗೆ ಕೊನೆಗೂ ಗುಡ್ ನ್ಯೂಸ್ ಸಿಕ್ಕಿದೆ.  ಭದ್ರಾ ಮೇಲ್ದಂಡೆ ಯೋಜನೆ ಜಾರಿಗಾಗಿ ಕಳೆದ 20 ವರ್ಷದಿಂದ ರೈತರು ಹೋರಾಟ ಮಾಡುತ್ತಲೇ  ಇದ್ದಾರೆ. ಈಗ ಕೊನೆಗೂ ಮಧ್ಯ ಕರ್ನಾಟಕದ ಚಿತ್ರದುರ್ಗ ಜಿಲ್ಲೆಗೆ ಭದ್ರಾ ಮೇಲ್ದಂಡೆ ಯೋಜನೆಯಡಿ ಕೆರೆಗಳಿಗೆ ನೀರು ಹರಿಯುವ ಕ್ಷಣ, ದಿನ ಹತ್ತಿರವಾಗುತ್ತಿದೆ.   ಮುಂದಿನ ತಿಂಗಳ ಅಂತ್ಯಕ್ಕೆ ಚಿತ್ರದುರ್ಗ ಜಿಲ್ಲೆಗೆ ಭದ್ರಾ ಮೇಲ್ದಂಡೆ ಯೋಜನೆಯ ನೀರು ಹರಿಸುವುದಾಗಿ ರಾಜ್ಯ ಸರ್ಕಾರ ಹೇಳಿದೆ. 
ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿ ವೀಕ್ಷಿಸಿದ್ದಾರೆ. ಬಳಿಕ ಚಿತ್ರದುರ್ಗದಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದು, ಚಿತ್ರದುರ್ಗ ಜಿಲ್ಲೆಗೆ ಫೆಬ್ರವರಿ ಅಂತ್ಯಕ್ಕೆ ನೀರು ಹರಿಸುವ ಕಾರ್ಯವಾಗಲಿದೆ ಎಂದು ಹೇಳಿದ್ದಾರೆ. ಚಿಕ್ಕಮಗಳೂರಿನ ಅಜ್ಜಂಪುರ ವೈ ಜಂಕ್ಷನ್ ನಿಂದ ಚಿತ್ರದುರ್ಗ ಶಾಖಾ ಕಾಲುವೆಗೆ ನೀರು ಹರಿಸುತ್ತೇವೆ. ಗೋನೂರು ಅಕ್ವಡಕ್ಟ್ ವರೆಗೂ ಪ್ರಾಯೋಗಿಕವಾಗಿ ನೀರು ಹರಿಸುತ್ತೇವೆ ಎಂದು ಸಚಿವ ಡಿ.ಸುಧಾಕರ್ ಹೇಳಿದ್ದಾರೆ. 
ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿ  2018-2023 ರವರೆಗೂ ಮಂದಗತಿಯಲ್ಲಿ ಸಾಗುತ್ತಿತ್ತು. ಅಜ್ಜಂಪುರದಲ್ಲಿದ್ದ ರೈತರ ಸಮಸ್ಯೆಯನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪರಿಹರಿಸಿದ್ದಾರೆ. ಅಜ್ಜಂಪುರದಿಂದ ಗೋನೂರು ಅಕ್ವಡಕ್ಟ್ ವರೆಗೂ 114 ಕಿ.ಮೀ.ವರೆಗೂ ಪ್ರಾಯೋಗಿಕವಾಗಿ ನೀರು ಹರಿಸಲಾಗುತ್ತೆ ಎಂದು ಹೇಳಿದ್ದಾರೆ. 
ಭದ್ರಾ ಮೇಲ್ದಂಡೆಯ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ ವರದಿಯನ್ನು ಸಿಎಂ ಸಿದ್ದರಾಮಯ್ಯ ಅವರಿಗೆ ಸಲ್ಲಿಸಲಾಗುತ್ತೆ ಎಂದು ಯೋಜನೆ ಮತ್ತು ಸಾಂಖ್ಯಿಕ ಖಾತೆ ಸಚಿವ ಡಿ.ಸುಧಾಕರ್ ಹೇಳಿದ್ದಾರೆ.  
ಈ ವರ್ಷದ ಬಜೆಟ್ ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ಹೆಚ್ಚಿನ ಅನುದಾನ ನೀಡುವಂತೆ ಮನವಿ ಮಾಡುತ್ತೇವೆ. ಈ ವರ್ಷದ ಮಾರ್ಚ್ ಒಳಗೆ 200-300 ಕೋಟಿ ರೂಪಾಯಿ ಹಣ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುತ್ತೆ ಎಂದು ಸಚಿವ ಡಿ.ಸುಧಾಕರ್ ಹೇಳಿದ್ದಾರೆ. 
ಭದ್ರಾ ಮೇಲ್ದಂಡೆ ಯೋಜನೆಯಡಿಯಲ್ಲಿ ಹೊಸದುರ್ಗ ತಾಲ್ಲೂಕಿನ 32 ಕೆರೆ, ಹೊಳಲ್ಕೆರೆ ತಾಲ್ಲೂಕಿನ 30 ಕೆರೆ, ಹಿರಿಯೂರು ತಾಲ್ಲೂಕಿನ 3 ಕೆರೆ, ಚಿತ್ರದುರ್ಗದ  3, ಕಡೂರು ತಾಲ್ಲೂಕಿನ 28 ಕೆರೆಗಳಿಗೆ ನೀರು ಹರಿಸಲಾಗುತ್ತೆ. ಫೆಬ್ರವರಿ ಅಂತ್ಯಕ್ಕೆ 90 ಕೆರೆಗಳಿಗೆ ಪ್ರಾಯೋಗಿಕವಾಗಿ ನೀರು ಹರಿಸಲಾಗುತ್ತೆ.  ಕೆರೆ ತುಂಬಿಸುವ ಮತ್ತು ಹನಿ ನೀರಾವರಿಗೆ 2,800 ಕೋಟಿ ಯೋಜನೆಗೆ ಟೆಂಡರ್ ಕರೆಯುತ್ತೇವೆ. ಇದರಿಂದ 73,986 ಎಕರೆ ಪ್ರದೇಶಕ್ಕೆ ನೀರು ಸಿಗಲಿದೆ. ಮುಂದಿನ ಆಗಸ್ಟ್ ನಲ್ಲಿ ಚಳ್ಳಕೆರೆ, ಮೊಳಕಾಲ್ಮೂರು, ಪಾವಗಡ, ಶಿರಾ ತಾಲ್ಲೂಕಿನ ಕೆರೆಗಳಿಗೆ ನೀರು ಹರಿಸಲಾಗುತ್ತೆ.  
ಚಿತ್ರದುರ್ಗದ ಭದ್ರಾ ಮೇಲ್ದಂಡೆ ಕಾಲುವೆ 120 ಅಡಿ ಎತ್ತರದಲ್ಲಿದೆ. ಇದು ರಾಜ್ಯದಲ್ಲೇ ಅತಿ ಎತ್ತರದ ಚಾನಲ್ ಡಕ್ಟ್. ಕೇಂದ್ರ ಸರ್ಕಾರವು ಕೇಂದ್ರದ ಬಜೆಟ್ ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂಪಾಯಿ ಹಣ ನೀಡುವುದಾಗಿ 2022 ರ ಬಜೆಟ್ ನಲ್ಲೇ ಘೋಷಿಸಿತ್ತು. ಕೇಂದ್ರ ಸರ್ಕಾರ ಘೋಷಿಸಿದ 5,300 ಕೋಟಿ ರೂಪಾಯಿ ಹಣವನ್ನು ಶೀಘ್ರ ಬಿಡುಗಡೆ ಮಾಡಲಿ. ಇದರಿಂದ ಬಹುತೇಕ ಕಾಮಗಾರಿ ಮುಕ್ತಾಯವಾಗುತ್ತೆ.  ಜಿಲ್ಲೆಯ ಎಲ್ಲ ಜನರ ಪರವಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತೇನೆ. ಈ ಕುರಿತು ಸಂಸದ ಗೋವಿಂದ ಕಾರಜೋಳ ಹಲವಾರು ಭಾರಿ ಭರವಸೆ ನೀಡಿದ್ದಾರೆ ಎಂದು ಸಚಿವ ಡಿ.ಸುಧಾಕರ್ ಹೇಳಿದ್ದಾರೆ. ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸದೇ ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ ಬಿಡುಗಡೆ ಮಾಡಲಿ ಎಂದು ಆಗ್ರಹಿಸಿದ್ದಾರೆ. 

UPPER BHADRA PROJECT (1)



ಇನ್ನೂ ಭದ್ರಾ ಮೇಲ್ದಂಡೆ ಯೋಜನೆಯಿಂದ 5 ಲಕ್ಷದ 25 ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲಾಗುತ್ತೆ. ಹನಿ ನೀರಾವರಿ ಮತ್ತು ತುಂತುರು ಹನಿ ನೀರಾವರಿ ಸೌಲಭ್ಯ ಕಲ್ಪಿಸಲಾಗುತ್ತೆ. 



ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

UPPER BHADRA WATER PROJECT
Advertisment