/newsfirstlive-kannada/media/post_attachments/wp-content/uploads/2025/04/Siddaramaiah-Cabinet-Meet-1.jpg)
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಇವತ್ತು ಸಚಿವ ಸಂಪುಟ ಸಭೆ ನಡೆಯಿತು. ಈ ಸಭೆಯಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ.
ಸಂಪುಟ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರಗಳು..
- ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಕುಟುಂಬ ಭಾಗಿಯಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಸಂಬಂಧ ಕೇಂದ್ರ ತನಿಖಾ ಸಂಸ್ಥೆಗಳು ತನಿಖೆ ನಡೆಸಿವೆ. ರಾಜ್ಯ ಸರ್ಕಾರ ಮೂಡ ಪ್ರಕರಣದ ತನಿಖೆಗೆ ಪಿ.ಎನ್.ದೇಸಾಯಿ ನೇತೃತ್ವದ ಏಕ ಸದಸ್ಯ ಆಯೋಗ ರಚನೆ ಮಾಡಿತ್ತು. ಇದೀಗ ವರದಿಯಲ್ಲಿ ಸಿದ್ದರಾಮಯ್ಯನವರ ಪಾತ್ರವಿಲ್ಲ ಎಂದು ಕ್ಲೀನ್ ಚಿಟ್ ನೀಡಲಾಗಿದೆ. ಪಿ.ಎನ್.ದೇಸಾಯಿ ವರದಿ ಇಂದಿನ ಕ್ಯಾಬಿನೆಟ್ನಲ್ಲಿ ಅಂಗೀಕಾರವಾಗಿದೆ.
- ಡಿಸಿಎಂ ಡಿಕೆ ಶಿವಕುಮಾರ್ ಬೆಂಬಲಿಗರ ವಿರುದ್ಧ ಪ್ರಕರಣಗಳನ್ನು ಕೈಬಿಡಲು ನಿರ್ಧರಿಸಲಾಗಿದೆ. 2019ರಲ್ಲಿ ಡಿಕೆ ಶಿವಕುಮಾರ್ ಬಂಧನ ಖಂಡಿಸಿ ಪ್ರತಿಭಟನೆ ನಡೆಸಿದ್ದ ಅವರ ಬೆಂಬಲಿಗರು ವಿರುದ್ಧ ಪ್ರಕರಣ ದಾಖಲಾಗಿತ್ತು. ಈ 11 ಪ್ರಕರಣಗಳನ್ನು ವಾಪಸ್ ಪಡೆಯಲು ಸಚಿವ ಸಂಪುಟ ಗ್ರೀನ್ ಸಿಗ್ನಲ್ ನೀಡಿದೆ. ಜೊತೆಗೆ ಬೇರೆ ಬೇರೆ 62 ಕ್ರಿಮಿನಲ್ ಪ್ರಕರಣಗಳನ್ನು ವಾಪಸ್ ಪಡೆಯಲು ತೀರ್ಮಾನಿಸಲಾಗಿದೆ.
- ಎಪಿಎಂಎಸಿ ಮಾರುಕಟ್ಟೆ ಶುಲ್ಕ ಮರು ನಿಗದಿಗೆ ಒಪ್ಪಿಗೆ ಸೂಚಿಸಿದೆ. ಒಂದು ಸ್ಕ್ವೇರ್ ಫೀಟ್ಗೆ 41 ಪೈಸೆ ಇತ್ತು ಈಗ 42 ಪೈಸೆಗೆ ಹೆಚ್ಚಾಗಲಿದೆ. ಜೀವ ವಿಮೆದಾರರಿಗೆ ಅಧಿಕ ಲಾಭಾಂಶ ಘೋಷಣೆ ಮಾಡಲಾಗಿದ್ದು, ದ್ವೈವಾರ್ಷಿಕ ಅವಧಿಗೆ ಅಧಿಕ ಲಾಭಾಂಶ ನೀಡಿಕೆಗೆ ಸಂಪುಟ ಒಪ್ಪಿಗೆ ನೀಡಲಾಗಿದೆ.
- ಸರ್ಕಾರಿ ಶಾಲಾ ಮಕ್ಕಳಿಗೆ ರಾಗಿ ಮಾಲ್ಟ್ ವಿತರಣೆಗೆ ಸರ್ಕಾರ ಅಸ್ತು ಎಂದಿದೆ. ಒಂದರಿಂದ ಹತ್ತನೇ ತರಗತಿ ಮಕ್ಕಳಿಗೆ ನೀಡಲು ಸರ್ಕಾರ ನಿರ್ಧರಿಸಿದೆ.
- ಬೆಂಗಳೂರು ವ್ಯಾಪ್ತಿಯಲ್ಲಿ 6 ತ್ಯಾಜ್ಯ ನೀರು ಸಂಸ್ಕರಣಾ ಘಟಕ ಸ್ಥಾಪನೆ, ಇದಕ್ಕಾಗಿ 95.67 ಕೋಟಿ ಅಂದಾಜು ಮೊತ್ತಕ್ಕೆ ಒಪ್ಪಿಗೆ. ಕೆಂಗೇರಿ ತ್ಯಾಜ್ಯ ನೀರು ಸಂಸ್ಕರಣ ಘಟಕ ಉನ್ನತೀಕರಣ. ಅದಕ್ಕಾಗಿ 28.88ಕೋಟಿ ವೆಚ್ಚದಲ್ಲಿ ಉನ್ನತೀಕರಿಸಲು ಸಮ್ಮತಿ ನೀಡಲಾಗಿದೆ.
- ಭದ್ರಾ ಮೇಲ್ದಂಡೆ ಯೋಜನೆಗೆ ಭೂ ಖರೀದಿ. ತುಮಕೂರು ಶಾಖಾ ಕಾಲುವೆಗಳಿಗೆ ನೇರ ಭೂಮಿ ಖರೀದಿಗೆ ನಿರ್ಧಾರ. 77.35 ಕೋಟಿ ರೂಪಾಯಿ ವೆಚ್ಚದಲ್ಲಿ 221 ಎಕರೆ ಖರೀದಿಗೆ ಒಪ್ಪಿಗೆ ಸೂಚಿಸಲಾಗಿದೆ.
- ಬಳ್ಳಾರಿಯಲ್ಲಿ ಸಂಗೋಳ್ಳಿ ರಾಯಣ್ಣ ಪುತ್ಥಳಿ ನಿರ್ಮಾಣ ಹಾಲುಮತ ಮಹಾಸಭಾಗೆ ಒಪ್ಪಿಗೆ ಸಿಕ್ಕಿದೆ. ಚಳ್ಳಕೆರೆ ಕಂಬಳಿ ಮಾರುಕಟ್ಟೆ ಕಟ್ಟಡ ಗುತ್ತಿಗೆ ಹುಣ್ಣೆ ಕೈಮಗ್ಗ ನಿಗಮಕ್ಕೆ ಗುತ್ತಿಗೆ ನೀಡಲು ಅವಕಾಶ.
- ಕೊಪ್ಪಳ ಹಾಗೂ ಬದಾಮಿಯಲ್ಲಿ ಕಾಂಗ್ರೆಸ್ ಭವನ ನಿರ್ಮಾಣಕ್ಕೆ12.28 ಎಕರೆ ಭೂಮಿ ನೀಡಿಕೆ. ಒಟ್ಟು 30 ವರ್ಷ ಗುತ್ತಿಗೆ ನೀಡಲು ಒಪ್ಪಿಗೆ. ಬಾದಾಮಿ ನಗರ ಪ್ರಾಧಿಕಾರದ ಅಧೀನದ ಭೂಮಿ ಕಾಂಗ್ರೆಸ್ ಟ್ರಸ್ಟ್ಗೆ ನೀಡಲು ವಿನಾಯಿತಿ. ಪುತ್ತೂರಿನಲ್ಲಿ ಕಾಂಗ್ರೆಸ್ ಭವನ ನಿರ್ಮಾಣಕ್ಕೆ ಒಪ್ಪಿಗೆ ನೀಡಲಾಗಿದೆ.
- ಬೆಂಗಳೂರಿನಲ್ಲಿ ಧಾರ್ಮಿಕ ಸೌಧ ನಿರ್ಮಾಣ. ಕೆ.ಆರ್ ಸರ್ಕಲ್ ಬಳಿ 919 ಚದರ ಮೀಟರ್ ವಿಸ್ತೀರ್ಣದಲ್ಲಿ ಕಟ್ಟಡ ನಿರ್ಮಾಣ. ಒಟ್ಟು 27 ಕೋಟಿ ಅಂದಾಜು ವೆಚ್ಚಕ್ಕೆ ಆಡಳಿತಾತ್ಮಕ ಒಪ್ಪಿಗೆ ಸಿಕ್ಕಿದೆ.
- ಜಿಲ್ಲಾ ತಾಲೂಕು ಆಸ್ಪತ್ರೆಗಳಲ್ಲಿ ವೈಜ್ಞಾನಿಕ ನಿರ್ವಹಣಾ ವ್ಯವಸ್ಥೆ ಯೋಜನೆಗೆ 20.60 ವೆಚ್ಚಕ್ಕೆ ಅನುಮೋದನೆ. ಲಿಂಗಸೂರಿನಲ್ಲಿ 50 ಹಾಸಿಗೆ ಸಾಮರ್ಥ್ಯ ಆಸ್ಪತ್ರೆ ನಿರ್ಮಾಣ ಮಾಡಲಾಗುತ್ತದೆ. ಅದಕ್ಕಾಗಿ 24.22 ಕೋಟಿ ಯೋಜನಾ ವೆಚ್ಚಕ್ಕೆ ಸಂಪುಟ ಒಪ್ಪಿಗೆ. ಅಪಘಾತ ಸಂತ್ರಸ್ಥರ ನಗದು ರಹಿತ ಯೋಜನೆ ಅಡಿ ಕೇಂದ್ರದ 1.50 ಲಕ್ಷ ನೆರವಿಗೆ ರಾಜ್ಯದಿಂದ 1 ಲಕ್ಷ ನೆರವು ಒದಗಿಸಲು ಒಪ್ಪಿಗೆ. ಹಾಸನದಲ್ಲಿ ಸೂಪರ್ ಸ್ಪೆಷಲಿಟಿ ಆಸ್ಪತ್ರೆ ಕಟ್ಟಡ ನಿರ್ಮಾಣ 63.31 ಪರಿಷ್ಕೃತ ಅಂದಾಜು ಒಪ್ಪಿಗೆ ಸಿಕ್ಕಿದೆ. ಕೊಪ್ಪಳ ಮೆಡಿಕಲ್ ಕಾಲೇಜಿನ ಆವರಣದಲ್ಲಿ ಸೂಪರ್ ಸ್ಪೆಷಲಿಟಿ ಆಸ್ಪತ್ರೆ ನಿರ್ಮಾಣ ಮಾಡಲು ನೂರು ಕೋಟಿ ವೆಚ್ಚದ ಅಂದಾಜಿಗೆ ಒಪ್ಪಿಗೆ. ಕನಕಪುರದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆ ಮುಂದಾಗಿದೆ. 56 ಕೋಟಿ ವೆಚ್ಚದಲ್ಲಿ 25 ಎಕರೆ ಜಮೀನು ಖರೀದಿಗೆ ಒಪ್ಪಿಗೆ ನೀಡಲಾಗಿದೆ.
- ಬೆಂಗಳೂರಿನ ಚಿಕ್ಕಜಾಲ ಮೀನುಕುಂಟೆ ಗ್ರಾಮದಲ್ಲಿ ಟೌನ್ ಶಿಪ್ ನಿರ್ಮಾಣ ಮಾಡಲಾಗುತ್ತದೆ. 50-50ರ ಅನುಪಾತದಲ್ಲಿ ಟೌನ್ ಶಿಪ್ ನಿರ್ಮಾಣ. ಅದಕ್ಕಾಗಿ 2930 ಕೋಟಿ ಅಂದಾಜು ಮೊತ್ತಕ್ಕೆ ಒಪ್ಪಿಗೆ ನೀಡಲಾಗಿದೆ.
ಇದನ್ನೂ ಓದಿ:ಮೆಟ್ರೋ ಎಲಿವೇಟೆಡ್ ಕಾರಿಡಾರ್ಗೆ ಗ್ರೀನ್ ಸಿಗ್ನಲ್; 37 KM ಉದ್ದದ ಡಬಲ್ ಡೆಕ್ಕರ್! ಏನಿದು ಪ್ಲಾನ್?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ