/newsfirstlive-kannada/media/media_files/2025/10/06/pawan-kalyan-and-gopal-gowda-2025-10-06-12-32-19.jpg)
ಡಿಸಿಎಂ ಪವನ್ ಕಲ್ಯಾಣ್ ಮತ್ತು ನಿವೃತ್ತ ಜಸ್ಟೀಸ್ ವಿ.ಗೋಪಾಲಗೌಡ
ಪವರ್ ಸ್ಟಾರ್ ಹಾಗೂ ಆಂಧ್ರಪ್ರದೇಶದ ಡಿಸಿಎಂ ಪವನ್ ಕಲ್ಯಾಣ್ ಕರ್ನಾಟಕದ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಗೆ ಆಗಮಿಸಿದ್ದಾರೆ. ಇಂದು ಬೆಳಿಗ್ಗೆ ಹೆಲಿಕಾಪ್ಟರ್ ಮೂಲಕ ಚಿಂತಾಮಣಿಗೆ ಆಗಮಿಸಿದ್ದಾರೆ. ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡರ 75 ನೇ ವರ್ಷದ ಹುಟ್ಟು ಹಬ್ಬ ಕಾರ್ಯಕ್ರಮದಲ್ಲಿ ಭಾಗಿಯಾಗಲು ಪವರ್ ಸ್ಟಾರ್ ಪವನ್ ಕಲ್ಯಾಣ್ ಆಗಮಿಸಿದ್ದಾರೆ. ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಲ್ಲಿ ಪವನ್ ಕಲ್ಯಾಣ್ ಫ್ಯಾನ್ ಫಾಲೋಯಿಂಗ್ ಹೆಚ್ಚಿನ ಸಂಖ್ಯೆಯಲ್ಲಿದೆ. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆ ಸೇರಿದಂತೆ ಗಡಿ ಜಿಲ್ಲೆಗಳಲ್ಲಿ ತೆಲುಗು ಸಿನಿಮಾಗಳನ್ನು ಜನರು ಹೆಚ್ಚಾಗಿ ನೋಡುತ್ತಾರೆ. ತೆಲುಗು ಹೀರೋಗಳನ್ನು ಆಂಧ್ರದಂತೆಯೇ ಕರ್ನಾಟಕದ ಗಡಿ ಜಿಲ್ಲೆಗಳಲ್ಲೂ ಸಿನಿ ಅಭಿಮಾನಿಗಳು ಆರಾಧಿಸುತ್ತಾರೆ. ಹೀಗಾಗಿ ಪವನ್ ಕಲ್ಯಾಣ್ ಕಾರ್ಯಕ್ರಮಕ್ಕೂ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು, ಜನರು ಸೇರಿದ್ದಾರೆ.
ಚಿಂತಾಮಣಿಗೆ ಬಂದ ಪವನ್ ಕಲ್ಯಾಣ್, ಮಾಜಿ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಮನೆಯಲ್ಲಿ ಉಪಹಾರ ಸೇವಿಸಿದ್ದಾರೆ. ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ಸೇರಿದಂತೆ ಹಲವರ ಜೊತೆ ಜೆ.ಕೆ.ಕೃಷ್ಣಾ ರೆಡ್ಡಿ ಮನೆಯಲ್ಲಿ ಮಾತುಕತೆ ನಡೆಸಿದ್ದಾರೆ. ಬಳಿಕ ಈಗಾಗಲೇ ವೇದಿಕೆ ಕಾರ್ಯಕ್ರಮಕ್ಕೆ ಪವನ್ ಕಲ್ಯಾಣ್ ಆಗಮಿಸಿದ್ದಾರೆ.
ಪವನ್ ಕಲ್ಯಾಣ್ ನೋಡಲು ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸಿದ್ದಾರೆ. ಕಾರ್ಯಕ್ರಮದಲ್ಲಿ ನಿವೃತ್ತ ಜಸ್ಟೀಸ್ ವಿ.ಗೋಪಾಲಗೌಡ, ಕೇಂದ್ರ ಸಚಿವ ವಿ.ಸೋಮಣ್ಣ ಹಾಗೂ ಮಾಜಿ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ, ಕೋಲಾರ ಸಂಸದ ಮಲ್ಲೇಶ್ ಬಾಬು ಸೇರಿದಂತೆ ಹಲವರು ಭಾಗಿಯಾಗಿದ್ದಾರೆ.
ಉದ್ದೇಶ ಒಂದು ಹಲವು ಗುರಿ
ಸುಪ್ರೀಂಕೋರ್ಟ್ ನ ಜಸ್ಟೀಸ್ ವಿ.ಗೋಪಾಲಗೌಡರ ಹುಟ್ಟುಹಬ್ಬದ ಕಾರ್ಯಕ್ರಮವಾದರೂ, ಇದರ ಹಿಂದೆ ಹಲವು ಗುರಿಗಳಿವೆ. ಜಸ್ಟೀಸ್ ವಿ.ಗೋಪಾಲಗೌಡರು ಅವಿಭಜಿತ ಕೋಲಾರ ಜಿಲ್ಲೆಯವರು. ತವರಿನಲ್ಲಿ ಇದೇ ಮೊದಲ ಭಾರಿಗೆ ಅದ್ದೂರಿಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಗೋಪಾಲಗೌಡರು, ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ ನಿವೃತ್ತರಾದ ಬಳಿಕ ಮನೆಯಲ್ಲಿ ವಿಶ್ರಾಂತ ಜೀವನಕ್ಕೆ ಸೀಮಿತರಾದವರಲ್ಲ, ತನ್ನ ಜಿಲ್ಲೆಯ ಜನರ ಅಭಿವೃದ್ದಿ, ಏಳಿಗೆಗಾಗಿ ಟೊಂಕಕಟ್ಟಿ ನಿಂತಿದ್ದಾರೆ. ಅನೇಕ ಜನಪರ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ರೈತರ ಪರ ಹೋರಾಟಕ್ಕೂ ಇಳಿದಿದ್ದಾರೆ. ದೇವನಹಳ್ಳಿ ಚನ್ನಪಟ್ಟಣ ಹೋಬಳಿ ರೈತರ ಭೂಮಿಯನ್ನು ಕೆಐಎಡಿಬಿ ಸ್ವಾಧೀನಪಡಿಸಿಕೊಳ್ಳುವುದರ ವಿರುದ್ಧ ಜಸ್ಟೀಸ್ ವಿ.ಗೋಪಾಲಗೌಡರು ಹೋರಾಟ ನಡೆಸಿದ್ದಾರೆ. ಆ ಹೋರಾಟದಲ್ಲಿ ಅನೇಕರ ನೆರವಿನಿಂದ ಯಶಸ್ಸು ಅನ್ನು ಕಂಡಿದ್ದಾರೆ. ಭೂಸ್ವಾಧೀನದಿಂದ ಕೈ ಬಿಡುವ ಬಗ್ಗೆ ರಾಜ್ಯ ಸರ್ಕಾರಕ್ಕೆ ಕಾನೂನು ಸಲಹೆ, ನೆರವು ನೀಡಲು ಸಿದ್ದ ಎಂದು ಜಸ್ಟೀಸ್ ವಿ.ಗೋಪಾಲಗೌಡರು ಹೇಳಿದ್ದರು.
ಈಗ ಚಿಕ್ಕಬಳ್ಳಾಪುರ ಜಿಲ್ಲೆಯ ನೀರಾವರಿ ಹೋರಾಟ ಸಮಿತಿ ರಚನೆಯಾಗಿದೆ. ಇದರಲ್ಲೂ ಜಸ್ಟೀಸ್ ಗೋಪಾಲಗೌಡರು ಸಕ್ರಿಯರಾಗಿದ್ದಾರೆ. ಈಗ ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗೆ ನದಿಮೂಲದಿಂದ ನೀರು ಹರಿಸಬೇಕೆಂಬ ಬೇಡಿಕೆ ಇದೆ. ಕೆ.ಸಿ.ವ್ಯಾಲಿ ಮತ್ತು ಎಚ್.ಎನ್. ವ್ಯಾಲಿ ನೀರು 2 ಹಂತದಲ್ಲಿ ಮಾತ್ರ ಶುದ್ದೀಕರಣ ಆಗುತ್ತಿದೆ. 3 ಹಂತದಲ್ಲಿ ನೀರು ಶುದ್ದೀಕರಣ ಆಗಿ ಅವಳಿ ಜಿಲ್ಲೆಗಳಿಗೆ ಹರಿಸಬೇಕೆಂದು ರೈತರ ಒತ್ತಾಯ ಇದೆ. ಆದರೇ, 3 ಹಂತದಲ್ಲಿ ಕೊಳಚೆ ನೀರು ಶುದ್ದೀಕರಣಕ್ಕೆ ಸಿಎಂ ಸಿದ್ದರಾಮಯ್ಯ ಒಪ್ಪಿಲ್ಲ. ಹೀಗಾಗಿ ಕೃಷ್ಣಾ ನದಿ ನೀರು ಅನ್ನು ಪಕ್ಕದ ಆಂಧ್ರದ ಹಿಂದೂಪುರ, ಕುಪ್ಪಂ ತಾಲ್ಲೂಕುಗಳಿಂದ ಸೀದಾ ಚಿಕ್ಕಬಳ್ಳಾಪುರ ಜಿಲ್ಲೆಗೆ ಹರಿಸಲು ಅವಕಾಶ ಇದೆ.
ಆಂಧ್ರದಲ್ಲಿ ಹಿಂದೂಪುರ, ಕುಪ್ಪಂವರೆಗೂ ಕೃಷ್ಣಾ ನದಿ ನೀರು ಅನ್ನು ಆಂಧ್ರ ಸರ್ಕಾರ ಹರಿಸಿದೆ. ಅಲ್ಲಿಂದ 2-3 ಟಿಎಂಸಿ ನೀರು ಅನ್ನು ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಹರಿಸಿದರೇ, ಎರಡು ಜಿಲ್ಲೆಯ ಕೆರೆಗಳನ್ನು ತುಂಬಿಸಲು ಸಾಧ್ಯ. ನೀರಾವರಿ ಸೌಲಭ್ಯ ಇಲ್ಲದ ಜಿಲ್ಲೆಗಳು ಕೃಷಿ, ಕುಡಿಯುವ ಉದ್ದೇಶ, ತೋಟಗಾರಿಕೆಗೂ ಈ ನೀರು ಬಳಸಿಕೊಳ್ಳಲು ಸಾಧ್ಯ.
ಸದ್ಯ ಬೆಂಗಳೂರಿನಿಂದ ಅವಿಭಜಿತ ಕೋಲಾರ ಜಿಲ್ಲೆಗೆ ಹರಿಯುತ್ತಿರುವ ಕೆ.ಸಿ.ವ್ಯಾಲಿ ಹಾಗೂ ಎಚ್.ಎನ್. ವ್ಯಾಲಿ ನೀರು ಕುಡಿಯಲು ಯೋಗ್ಯವಾಗಿಲ್ಲ. ಬೆಂಗಳೂರಿನ ಕೊಳಚೆ ನೀರು ಅನ್ನು 3 ಹಂತದಲ್ಲಿ ಶುದ್ದೀಕರಣ ಮಾಡಿದರೇ, ಮಾತ್ರ ಅಂತರ್ಜಲ ಕೂಡ ಕಲುಷಿತವಾಗಲ್ಲ ಎಂದು ಬೆಂಗಳೂರಿನ ಐಐಎಸ್ಸಿ ವಿಜ್ಞಾನಿ ಟಿ.ವಿ.ರಾಮಚಂದ್ರ ಸರ್ಕಾರಕ್ಕೆ ವರದಿ ನೀಡಿದ್ದರು. ಆದರೇ, ರಾಜ್ಯ ಸರ್ಕಾರ, ಸಣ್ಣ ನೀರಾವರಿ ಇಲಾಖೆ ಆ ವರದಿಯತ್ತ ಗಮನ ಹರಿಸಿಲ್ಲ.
ಹೀಗಾಗಿ ಕೃಷ್ಣಾ ನದಿಯ ನೀರು ಅನ್ನು ಕರ್ನಾಟಕವು ಬೇರೆಡೆ ಅಂದರೇ, ಉತ್ತರ ಕರ್ನಾಟಕ ಭಾಗದಲ್ಲಿ ಆಂಧ್ರಕ್ಕೆ 2-3 ಟಿಎಂಸಿ ನೀಡಿ, ಕೋಲಾರ,ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ 2-3 ಟಿಎಂಸಿ ನೀರು ಅನ್ನು ಪಡೆದರೇ, ಎಲ್ಲ ರೀತಿಯಲ್ಲೂ ಅನುಕೂಲ.
ಹಿಂದೂಪುರ, ಕುಪ್ಪಂ ಭಾಗದಿಂದ ಕರ್ನಾಟಕಕ್ಕೆ ನೀರು ತರಲು 50-60 ಕಿ.ಮೀ ಮಾತ್ರ ಪೈಪ್ ಲೇನ್ ಹಾಕಿದರೂ, ಸಾಕು. ಇದಕ್ಕೆ 1 ಸಾವಿರ ಕೋಟಿ ರೂಪಾಯಿ ವೆಚ್ಚವಾಗಬಹುದು.
ಹೀಗಾಗಿ ಈ ಬಗ್ಗೆ ಇಂದು ಜಸ್ಟೀಸ್ ಗೋಪಾಲಗೌಡರ ಹುಟ್ಟುಹಬ್ಬದ ಕಾರ್ಯಕ್ರಮದ ನೆಪದಲ್ಲಿ ಕೃಷ್ಣಾ ನದಿ ನೀರು ಅನ್ನು ಹಿಂದೂಪುರ, ಕುಪ್ಪಂ ಭಾಗದಿಂದಲೇ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗೆ ಹರಿಸುವಂತೆ ಬೇಡಿಕೆ, ಮನವಿಯನ್ನು ಆಂಧ್ರದ ಡಿಸಿಎಂ ಪವನ್ ಕಲ್ಯಾಣ್ ಮುಂದೆ ಇಡುವ ಸಾಧ್ಯತೆಯೂ ಇದೆ. ಹೀಗಾದರೇ, ಇದರಿಂದ ಜಸ್ಟೀಸ್ ಗೋಪಾಲಗೌಡರಿಗೂ ತಮ್ಮ ತವರು ಜಿಲ್ಲೆಯ ಅಭಿವೃದ್ದಿಗೆ ಬಹುದೊಡ್ಡ ಕೊಡುಗೆ ನೀಡಿದಂತೆ ಆಗುತ್ತೆ. ಈ ನಿಟ್ಟಿನಲ್ಲಿ ಆಂಧ್ರದ ಡಿಸಿಎಂ ಪವನ್ ಕಲ್ಯಾಣ್ ಗೆ ಮನವಿ ಮಾಡ್ತಾರಾ ಎಂಬ ಕುತೂಹಲ ಇದೆ. ಇಂದಿನ ಕಾರ್ಯಕ್ರಮದಲ್ಲಿ ಕೇಂದ್ರದ ಜಲಸಂಪನ್ಮೂಲ ಖಾತೆಯ ರಾಜ್ಯ ಮಂತ್ರಿ ವಿ.ಸೋಮಣ್ಣ ಕೂಡ ಭಾಗಿಯಾಗಿದ್ದಾರೆ. ಇದು ಕೂಡ ನೀರಿನ ಲೆಕ್ಕಾಚಾರ ಇಟ್ಟುಕೊಂಡೇ ವಿ.ಸೋಮಣ್ಣ ಅವರನ್ನು ಆಹ್ವಾನಿಸಿರುವಂತೆ ಕಾಣುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.