/newsfirstlive-kannada/media/media_files/2025/08/19/ananya-bhat-photos-2025-08-19-12-42-32.jpg)
ಸುಜಾತ ಭಟ್ ತೋರಿಸಿದ ಅನನ್ಯಾ ಭಟ್ ಪೋಟೋ
ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿದ್ದೇನೆ ಎಂದು ಮಾಸ್ಕ್ ಮ್ಯಾನ್ ಕೊಟ್ಟ ದೂರಿನ ಆಧಾರದೇ ಮೇಲೆ ಎಸ್‌ಐಟಿ ಕಳೆದ 15 ದಿನಗಳಿಂದ ಭೂಮಿ ಅಗೆದು ತನಿಖೆ ನಡೆಸುತ್ತಿದೆ. ಇದರ ಮಧ್ಯೆ ಸುಜಾತ ಭಟ್ ಎಂಬ ಮಹಿಳೆ ಬಂದು, ತನ್ನ ಮಗಳು ಅನನ್ಯಾ ಭಟ್ ಕೂಡ ಧರ್ಮಸ್ಥಳದಲ್ಲಿ 2003 ರಲ್ಲಿ ನಾಪತ್ತೆಯಾಗಿದ್ದಾಳೆ, ತನ್ನ ಸ್ನೇಹಿತೆಯರ ಜೊತೆ ಧರ್ಮಸ್ಥಳಕ್ಕೆ ಬಂದಿದ್ದಳು. ಆಗ ನಾಪತ್ತೆಯಾಗಿದ್ದಾಳೆ. ನನ್ನ ಮಗಳು ಕೂಡ ಕೊಲೆಯಾಗಿರಬಹುದು ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಜೊತೆಗೆ 2003 ರಲ್ಲೇ ನಾನು ಪೊಲೀಸರಿಗೆ ದೂರು ನೀಡಲು ಹೋಗಿದ್ದೆ. ಆದರೇ, ಪೊಲೀಸರು ಆಗ ದೂರು ಸ್ವೀಕರಿಸಲಿಲ್ಲ. ನಾನು ಕೋಲ್ಕತ್ತಾದ ಸಿಬಿಐ ಕಚೇರಿಯಲ್ಲಿ ಸ್ಟೆನೋಗ್ರಾಫರ್ ಆಗಿ ಕೆಲಸ ಮಾಡುತ್ತಿದ್ದೆ ಎಂದು ಸುಜಾತ್ ಭಟ್ ಎಂಬ ವೃದ್ಧ ಮಹಿಳೆ ಹೇಳಿಕೆ ನೀಡಿದ್ದಾರೆ. ಜೊತೆಗೆ ಎಸ್‌ಐಟಿಗೂ ಈ ಬಗ್ಗೆ ದೂರು ನೀಡಿದ್ದಾರೆ. ದೂರಿನ ಜೊತೆ ತಮ್ಮ ಮಗಳು ಎನ್ನಲಾದ ಅನನ್ಯಾ ಭಟ್ ರ ಪೋಟೋ ಒಂದು ಅನ್ನು ತೋರಿಸಿದ್ದಾರೆ. ಸುಜಾತ ಭಟ್ ತೋರಿಸಿದ ಅನನ್ಯಾ ಭಟ್ ಎನ್ನಲಾದ ಯುವತಿಯ ಪೋಟೋ ಆಧಾರದ ಮೇಲೆ ಈಗ ಎಸ್‌ಐಟಿ ವಿವಿಧಡೆ ತನಿಖೆ ನಡೆಸುತ್ತಿದೆ.
ಅನನ್ಯಾ ಭಟ್ ಎಂಬ ಯುವತಿಯ ನಾಪತ್ತೆಯೇ ಕಟ್ಟುಕಥೆಯೇ?
ಸುಜಾತ ಭಟ್ ತೋರಿಸಿದ ಫೋಟೋದ ಅಸಲಿಯತ್ತು ಏನು ? ಎಂಬ ಬಗ್ಗೆ ಎಸ್‌ಐಟಿ ತನಿಖೆ ನಡೆಸುತ್ತಿದೆ. ಈ ಹಿಂದೆ ಮೃತರಾಗಿದ್ದ ಯುವತಿಯ ಫೋಟೋವನ್ನು ಸುಜಾತ ಭಟ್ ತೋರಿಸಿದ್ರಾ ಎಂಬ ಅನುಮಾನ ಶುರುವಾಗಿದೆ. ಸುಜಾತ ಭಟ್ ತೋರಿಸಿದ ಯುವತಿಯ ಪೋಟೋ ಅಸಲಿಗೆ ಅನನ್ಯಾ ಭಟ್ ಎಂಬ ಯುವತಿಯದ್ದಲ್ಲ. ಬದಲಿಗೆ ಅದು ವಾಸಂತಿ ಎಂಬ ಮಹಿಳೆಯ ಬಾಲ್ಯದ ಪೋಟೋ ಎಂಬ ಚರ್ಚೆ ನಡೆಯುತ್ತಿದೆ. ವಾಸಂತಿ ಎಂಬ ಮಹಿಳೆಯು 2002-03 ರಲ್ಲಿ ಮೃತಪಟ್ಟಿದ್ದಾರೆ. ವಾಸಂತಿ ಪತಿ ಶ್ರೀ ವತ್ಸ ಕೂಡ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ರಂಗಪ್ರಸಾದ್ ಎಂಬುವವರ ಪುತ್ರನೇ ಶ್ರೀವತ್ಸ. ಶ್ರೀವತ್ಸರ ಪತ್ನಿ ವಾಸಂತಿ. ರಂಗಪ್ರಸಾದ್ ಮನೆಯಲ್ಲಿ ಸುಜಾತ ಭಟ್ ಕೇರ್ ಟೇಕರ್ ಆಗಿ ಕೆಲಸ ಮಾಡುತ್ತಿದ್ದಾರಂತೆ. ಅವರ ಮನೆಯ ಸೊಸೆಯ ಪೋಟೋವನ್ನೇ ತನ್ನ ಮಗಳು ಅನನ್ಯಾ ಭಟ್ ಪೋಟೋ ಎಂದು ಸುಜಾತ ಭಟ್ ಎಸ್‌ಐಟಿಗೆ ಹಾಗೂ ಮಾಧ್ಯಮಗಳಿಗೆ ತೋರಿಸಿದ್ದಾರೆ ಎಂಬ ಚರ್ಚೆ, ವಿಶ್ಲೇಷಣೆಗಳು ನಡೆಯುತ್ತಿವೆ.
ವಾಸಂತಿ ಎಂಬ ಮಹಿಳೆಯ ಪೋಟೋ
ಇನ್ನೂ 2025ರ ಜನವರಿಯಲ್ಲಿ ಮನೆ ಮಾಲೀಕ ರಂಗಪ್ರಸಾದ್ ಕೂಡ ಮೃತಪಟ್ಟಿದ್ದಾರೆ. ರಂಗಪ್ರಸಾದ್ ಅವರ ಮನೆಯಲ್ಲೇ ಈಗಲೂ ಸುಜಾತ ಭಟ್ ವಾಸ ಇದ್ದಾರೆ. ಹೀಗಾಗಿ ಸುಜಾತ ಭಟ್ ಗೆ ನಿಜವಾಗಲೂ ಅನನ್ಯಾ ಭಟ್ ಎಂಬ ಮಗಳು ಇದ್ದಾಳಾ ಇಲ್ಲವೇ ಎಂಬ ಬಗ್ಗೆಯೇ ಗಮನ ಕೇಂದ್ರೀಕರಿಸಿ ಎಸ್‌ಐಟಿ ತನಿಖೆ ನಡೆಸುತ್ತಿದೆ. ಜೊತೆಗೆ ಸುಜಾತ ಭಟ್ ತೋರಿಸಿರುವ ಪೋಟೋದಲ್ಲಿರೋದು ಅನನ್ಯಾ ಭಟ್ಟಾ ಅಥವಾ ವಾಸಂತಿ ಎಂಬ ಮಹಿಳೆಯ ಪೋಟೋವೋ ಎಂಬ ಬಗ್ಗೆ ಮುಖ್ಯವಾಗಿ ತನಿಖೆ ನಡೆಸುತ್ತಿದ್ದಾರೆ.
ಹೀಗಾಗಿ ಸುಜಾತ ಭಟ್ ಎಲ್ಲೆಲ್ಲಿ ವಾಸ ಇದ್ದರು, ಆ ಜಾಗದಲ್ಲಿ ತಾಯಿ ಸುಜಾತ ಭಟ್ ಜೊತೆಗೆ ಅನನ್ಯಾ ಭಟ್ ಎಂಬ ಹೆಸರಿನ ಮಗಳು ಇದ್ದಾಳೋ, ಇಲ್ಲವೋ ಎಂಬ ಬಗ್ಗೆ ಎಸ್‌ಐಟಿ ತನಿಖೆ ನಡೆಸುತ್ತಿದೆ.
ತನ್ನ ಮಗಳು ಅನನ್ಯಾ ಭಟ್ ಎಂಬಿಬಿಎಸ್ ವಿದ್ಯಾರ್ಥಿನಿಯಾಗಿದ್ದಳು. 2002 ರಿಂದ ತನ್ನ ಮಗಳು ಧರ್ಮಸ್ಥಳದಿಂದಲೇ ನಾಪತ್ತೆಯಾಗಿದ್ದಾಳೆ ಎಂದು 23 ವರ್ಷದ ಬಳಿಕ ಬಂದು ಎಸ್‌ಐಟಿಗೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿಗೆ ದೂರು ನೀಡಿದ್ದಾರೆ.
ಮಾಸ್ಕ್ ಮ್ಯಾನ್ ಬುರುಡೆಯನ್ನು ಹಿಡಿದುಕೊಂಡು ಬಂದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟ ಬಳಿಕ ಈ ಸುಜಾತ ಭಟ್ ಎಂಬ ವೃದ್ದ ಮಹಿಳೆಯೂ ಕೂಡ ಬಂದು ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿಗೆ ಜುಲೈ 20 ರಂದು ಲಿಖಿತ ದೂರು ನೀಡಿದ್ದಾರೆ.
ಬಳಿಕ ಮಾಧ್ಯಮಗಳಿಗೂ ತಮ್ಮ ಮಗಳು ಅನನ್ಯಾ ಭಟ್, 2002-03 ರಲ್ಲಿ ಧರ್ಮಸ್ಥಳಕ್ಕೆ ಹೋದವಳು, ಅಲ್ಲೇ ನಾಪತ್ತೆಯಾಗಿದ್ದಾಳೆ. ಅಲ್ಲೇ ಕೊಲೆಯಾಗಿರಬಹುದು ಎಂಬ ಶಂಕೆ ವ್ಯಕ್ತಪಡಿಸಿ ದೂರು ನೀಡಿದ್ದರು. ಈಗ ನನ್ನ ಮಗಳು ಅನನ್ಯಾ ಭಟ್ ಅಸ್ಥಿಪಂಜರ ಸಿಕ್ಕರೇ, ಅದಕ್ಕೆ ಹಿಂದೂ ಧರ್ಮದ ಪ್ರಕಾರ, ವಿಧಿವಿಧಾನ ನೆರವೇರಿಸುವುದಾಗಿ ತಾಯಿ ಸುಜಾತ ಭಟ್ ಹೇಳಿದ್ದಾರೆ.
ಹೀಗಾಗಿ ಈಗ ಎಸ್‌ಐಟಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಈ ಅನನ್ಯಾ ಭಟ್ ಎಂಬ ಯುವತಿ ನಿಜಕ್ಕೂ ಕಾಣೆಯಾಗಿದ್ದಾಳಾ ಇಲ್ಲವೇ ಸುಜಾತ ಭಟ್ ನೀಡಿರುವ ದೂರು ಸುಳ್ಳೇ ಎಂಬ ಬಗ್ಗೆಯೇ ತನಿಖೆ ನಡೆಸಿ ಸತ್ಯಾಂಶ ಬಯಲಿಗೆ ಎಳೆಯುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ.
ಇನ್ನೂ ಸುಜಾತ್ ಭಟ್ ಎಂಬ ವೃದ್ದ ಮಹಿಳೆಯೂ ತಾನು ಕೋಲ್ಕತ್ತಾದ ಸಿಬಿಐ ಕಚೇರಿಯಲ್ಲಿ ಸ್ಟೆನೋಗ್ರಾಫರ್ ಆಗಿದ್ದೆ ಎಂದು ಹೇಳಿದ್ದಾರೆ. ಹೀಗಾಗಿ ಕೋಲ್ಕತ್ತಾದ ಸಿಬಿಐ ಕಚೇರಿಯಿಂದಲೂ ಎಸ್‌ಐಟಿ, ಈ ಸುಜಾತ ಭಟ್ ಬಗ್ಗೆ ಮಾಹಿತಿ ಪಡೆಯುವ ಕೆಲಸ ಮಾಡಬೇಕಾಗಿದೆ. ಅನನ್ಯಾ ಭಟ್ ನಾಪತ್ತೆಯ ನಿಗೂಢತೆಯನ್ನು ಭೇಧಿಸುವ ಕೆಲಸವನ್ನು ಮಾಡಬೇಕಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.