/newsfirstlive-kannada/media/media_files/2025/12/22/honour-killing-at-hubballi-2025-12-22-18-12-41.jpg)
ಹೆತ್ತ ತಂದೆಯಿಂದ ಹತ್ಯೆಯಾದ ಮಾನ್ಯ ಪಾಟೀಲ್
ಆಕೆಯ ತಂದೆಯ ಮುದ್ದಿನ ಮಗಳಾಗಿದ್ದಳು. ಮಗಳನ್ನು ಇಂಜಿನೀಯರ್ ಮಾಡಿ ಅಮೇರಿಕಕ್ಕೆ ಕಳುಹಿಸೋ ಚಿಂತನೆ ತಂದೆಯದಾಗಿತ್ತು. ಆದ್ರೆ ಮುದ್ದಿನ ಮಗಳು ಗ್ರಾಮದ ಅನ್ಯ ಜಾತಿಯ ಯುವಕನನ್ನು ಪ್ರೀತಿಸಿದ್ದಳು. ಅಷ್ಟೇ ಅಲ್ಲ, ಹೆತ್ತವರ ವಿರೋಧ ನಡುವೆ ಮನೆಬಿಟ್ಟು ಓಡಿಹೋಗಿ ಮದುವೆಯಾಗಿದ್ದಳು. ಏಳು ತಿಂಗಳು ಬಿಟ್ಟು ಊರಿಗೆ ಬಂದಿದ್ದ ಮಗಳನ್ನು ಹೆತ್ತ ತಂದೆಯೇ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಗರ್ಭಿಣಿ ಅನ್ನೋದನ್ನು ಲೆಕ್ಕಿಸದೆ ರಾಕ್ಷಸಿ ಕೃತ್ಯ ನಡೆಸಿದ್ದಾನೆ. ಮರ್ಯಾದೆ ಹತ್ಯೆ ನಾಗರಿಕ ಸಮಾಜವೇ ತಲೆ ತಗ್ಗಿಸುವಂತೆ ಮಾಡಿದೆ.
ಪ್ರೀತಿಸಿ ಮದುವೆಯಾಗಿದ್ದ ಪತ್ನಿ ಬರ್ಬರ ಕೊಲೆಯಾಗಿದ್ದನ್ನು ನೋಡಿ ಆಕೆಯ ಪತಿ ಬಿಕ್ಕಿ ಬಿಕ್ಕಿ ಅಳುತ್ತಿದ್ದರೇ, ಮತ್ತೊಂದಡೆ ಧಿಕ್ಕಾರ, ಆಕ್ರೋಶ, ಪ್ರತಿಭಟನೆಗಳು ಜೋರಾಗಿದ್ದವು. ಇದರ ನಡುವೆ ಹೆಜ್ಜೆಹೆಜ್ಜೆಗೂ ಪೊಲೀಸರ ಸರ್ಪಗಾವಲು. ಹೌದು ಈ ಆಕ್ರಂದನ ಮತ್ತು ಆಕ್ರೋಶಕ್ಕೆ ಕಾರಣ ನಾಗರಿಕ ಸಮಾಜವೇ ತಲೆತಗ್ಗಿಸುವಂತೆ ನಡೆದ ಮರ್ಯಾದೆ ಹತ್ಯೆ. ರಕ್ತದ ಮಡುವಿನಲ್ಲಿ ಯುವತಿ ಬಿದ್ದು ಒದ್ದಾಡುತ್ತಿದ್ದರೆ ಆಕೆಯನ್ನು ಬದುಕಿಸಬೇಕು ಅಂತ ಕುಟುಂಬ ಹರಸಾಹಸ ಮಾಡಿದೆ. ಆದ್ರೆ ಹರಸಾಹಸ ಪಟ್ಟು ಆಸ್ಪತ್ರೆಗೆ ಸೇರಿಸಿದ್ರು ಕೂಡಾ ಯುವತಿ ಬದುಕುಳಿಯದೇ ಬಾರದ ಲೋಕಕ್ಕೆ ಹೋಗಿದ್ದಾಳೆ. ಇನ್ನು ಈ ಯುವತಿ ಹೆಸರು ಮಾನ್ಯ ಅಂತ. 19 ವರ್ಷದ ಮಾನ್ಯ ಏಳು ತಿಂಗಳ ಗರ್ಭಿಣಿ ಯಾಗಿದ್ದಳು. ಕೆಲವೇ ತಿಂಗಳಲ್ಲಿ ಮನೆಗೆ ಹೊಸ ಅತಿಥಿ ಆಗಮನ ಆಗುತ್ತೆ ಅಂತ ಮಾನ್ಯ ಪತಿ ಮತ್ತು ಕುಟುಂಬ ಕಾದಿತ್ತು. ಆದ್ರೆ ನಿನ್ನೆ ಸಂಜೆ ಮಾನ್ಯಳನ್ನು ಕೊಡಲಿಯಿಂದ ಹೊಡೆದು ಕೊಚ್ಚಿ ಬರ್ಬರ ಕೊಲೆ ಮಾಡಲಾಗಿದೆ. ಇನ್ನು ಕೊಲೆ ಮಾಡಿದ್ದು ಬೇರಾರು ಅಲ್ಲ, ಮಾನ್ಯಳ ಜನ್ಮಕ್ಕೆ ಕಾರಣಿದಾತನಾಗಿದ್ದ ಆಕೆಯ ಹೆತ್ತ ತಂದೆ. ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಇನಾಂ ವೀರಾಪುರ ಗ್ರಾಮದಲ್ಲಿ ನಿನ್ನೆ ಸಂಜೆ ನಡೆಯಬಾರದ ಘಟನೆಯೊಂದು ನಡೆದು ಹೋಗಿದೆ. ಮಾನವ ಕುಲವೇ ನಾಚುವಂತಹ ಅಮಾನವೀಯ ಘಟನೆ ನಡೆದಿದೆ.
ಅಂತರ್ಜಾತಿ ವಿವಾಹವಾಗಿದ್ದಕ್ಕೆ ಹೆತ್ತ ತಂದೆಯೇ ಮಗಳನ್ನು ಕೊಲೆ ಮಾಡಿದ್ದಾನೆ. ಇನಾಂವೀರಾಪುರ ಗ್ರಾಮದ ವಿವೇಕಾನಂದ ಮತ್ತು ಅದೇ ಗ್ರಾಮದ ಮಾನ್ಯ ಕಳೆದ ಕೆಲ ವರ್ಷಗಳಿಂದ ಪ್ರೀತಿಸಿದ್ದರು. ಮಾನ್ಯ ಮತ್ತು ವಿವೇಕಾನಂದ ಇಬ್ಬರು ಒಂದೇ ಗ್ರಾಮದವರಾಗಿದ್ದು, ಧಾರವಾಡದಲ್ಲಿ ಇಬ್ಬರು ಬೇರೆ ಬೇರೆ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದರಂತೆ. ಆಗ ಇಬ್ಬರ ನಡುವೆ ಪ್ರೀತಿ ಬೆಳದಿತ್ತಂತೆ. ಪಿಯುಸಿ ನಂತರ ಮಾನ್ಯ ವರೂರು ಖಾಸಗಿ ಕಾಲೇಜಿನಲ್ಲಿ ಬಿ ಇ ಇಂಜಿನಿಯರಿಂಗ್ ಪ್ರವೇಶ ಪಡೆದ್ರೆ, ವಿವೇಕಾನಂದ ಹುಬ್ಬಳ್ಳಿ ಖಾಸಗಿ ಕಾಲೇಜಿನಲ್ಲಿ ಡಿಗ್ರಿ ಓದುತ್ತಿದ್ದ. ಇಬ್ಬರಿಗೂ ಮೊದಲೇ ಪರಿಚಯವಿತ್ತು. ಆದ್ರೆ ಪಿಯುಸಿ ಯಲ್ಲಿ ಆರಂಭವಾದ ಪ್ರೀತಿ ನಂತರ ಅದು ಬಿಟ್ಟಿರಲಾರದಷ್ಟು ಅನೋನ್ಯವಾಗಿತ್ತು. ಇಬ್ಬರ ಪ್ರೀತಿಗೆ ಜಾತಿಯ ಗೋಡೆ ಅಡ್ಡ ಆಗಿರಲಿಲ್ಲ. ಹೀಗಾಗಿ ಇಬ್ಬರು ಕೂಡಿ ಬದುಕುಬೇಕು ಅನ್ನೋ ನಿರ್ಧಾರ ಮಾಡಿದ್ದರು.
ಆದ್ರೆ ಕದ್ದು ಮುಚ್ಚಿ ಮಾಡುತ್ತಿದ್ದ ಪ್ರೀತಿ ವರ್ಷದ ಹಿಂದೆ ಎರಡು ಮನೆಯವರಿಗೆ ಗೊತ್ತಾಗಿತ್ತು. ಯುವತಿ ಲಿಂಗಾಯತ ಸಮಾಜದವಳಾಗಿದ್ದರೆ, ವಿವೇಕಾನಂದ ದಲಿತ ಸಮುದಾಯಕ್ಕೆ ಸೇರಿದ್ದ. ಹೀಗಾಗಿ ಯುವತಿ ಮನೆಯವರು ಮದುವೆಗೆ ವಿರೋಧ ಮಾಡಿದ್ದರು. ಆದ್ರೆ ಯುವತಿ ಯಾವುದೇ ಕಾರಣಕ್ಕೂ ವಿವೇಕಾನಂದ ಬಿಟ್ಟು ಬದಕೋದಿಲ್ಲ ಅಂತ ಹಠ ಹಿಡಿದಿದ್ದಳಂತೆ. ಈ ಸಮಯದಲ್ಲಿ ಪ್ರಕರಣ ಹುಬ್ಬಳ್ಳಿ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಅನೇಕ ರಾಜಿ ಪಂಚಾಯತಿಗಳು ನಡೆದಿದ್ದವು. ವಿವೇಕಾನಂದ ನೀನು ಹೆತ್ತವರು ಹೇಳಿದಂತೆ ಕೇಳು ಅಂತ ಮಾನ್ಯಳಿಗೆ ಹೇಳಿದ್ದನಂತೆ.
ಆದ್ರೆ ಧಾರವಾಡದಲ್ಲಿ ಕೋಚಿಂಗ್ ಗೆ ಹೋಗಿದ್ದ ವಿವೇಕಾನಂದ ಬಳಿ ಹೋಗಿ ಮದುವೆಯಾಗದೇ ಇದ್ರೆ ಆತ್ಮಹತ್ಯೆ ಮಾಡಿಕೊಳ್ಳೋದಾಗಿ ಮಾನ್ಯ ಹೇಳಿದ್ದಳಂತೆ. ಹೀಗಾಗಿ ವಿವೇಕಾನಂದ ಮಾನ್ಯಾಳ ಜೊತೆ ಕಳೆದ ಜೂನ್ 19 ರಂದು ಹುಬ್ಬಳ್ಳಿಯಲ್ಲಿ ಸಬ್ ರಿಜಿಸ್ಟರ್ ವಿವಾಹವಾಗಿದ್ದ. ಈ ಸಮಯದಲ್ಲಿ ಪೊಲೀಸರು ಎರಡು ಕುಟುಂಬ ಕರೆದು ಮತ್ತೆ ರಾಜಿ ಪಂಚಾಯತಿ ಮಾಡಿದ್ದರಂತೆ.ಇನ್ನು ಮಾನ್ಯ ಮತ್ತು ವಿವೇಕಾನಂದ ಮದುವೆ ನಂತರ ಊರು ಬಿಟ್ಟು ಹೋಗಿ ಹಾವೇರಿಯಲ್ಲಿ ವಾಸವಾಗಿದ್ದರಂತೆ. ಮಾನ್ಯ ಗರ್ಭಿಣಿ ಯಾಗಿದ್ದಳು. ಮಾನ್ಯ ಹೆತ್ತವರು ಮತ್ತೆ ಇಬ್ಬರನ್ನು ಕೊಲೆ ಮಾಡಲು ಮುಂದಾಗಿದ್ದರಂತೆ. ಹೀಗಾಗಿ ಮಾನ್ಯ ಮತ್ತು ವಿವೇಕಾನಂದ ಡಿಸೆಂಬರ್ 8 ರಂದು ಸ್ವ ಗ್ರಾಮಕ್ಕೆ ಹಿಂತಿರುಗಿದ್ದರು. ಮಾನ್ಯಳಿಗೆ ಮಾಸಿಕ ಚೆಕ್ ಆಪ್ ಮಾಡಿಸಬೇಕಾಗಿದ್ದರಿಂದ ಮತ್ತು ಆಕೆಗೆ ಆರೈಕೆ ಬೇಕಾಗಿದ್ದರಿಂದ ವಿವೇಕಾನಂದ ಪತ್ನಿಯನ್ನು ಊರಿಗೆ ಕರೆದುಕೊಂಡು ಬಂದಿದ್ದ. ಈ ಸಮಯದಲ್ಲಿ ಕೂಡಾ ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಎರಡು ಕಡೆಯವರನ್ನು ಕರೆಸಿ, ಮತ್ತೆ ರಾಜಿ ಸಂದಾನ ಮಾಡಿಸಿದ್ದರಂತೆ.
ಆದ್ರೆ ನಿನ್ನೆ ಸಂಜೆ ಗ್ರಾಮದ ಹೊರವಲಯದಲ್ಲಿ ವಿವೇಕಾನಂದ ತಂದೆ ಮೇಲೆ ಮಾನ್ಯ ತಂದೆ ಮತ್ತು ಕುಟುಂಬ ಟ್ರ್ಯಾಕ್ಟರ್ ಹರಿಸಲು ಮುಂದಾಗಿತ್ತಂತೆ. ಈ ಸುದ್ದಿ ಕೇಳಿ ವಿವೇಕಾನಂದ ಮತ್ತು ಆತನ ಸಂಬಂಧಿ ಅಲ್ಲಿಗೆ ಹೋಗಿದ್ದಾರೆ. ಆಗ ವಿವೇಕಾನಂದ ಮೇಲೆ ಕೂಡಾ ಹಲ್ಲೆಗೆ ಮಾನ್ಯ ತಂದೆ ಪ್ರಕಾಶಗೌಡ ಮುಂದಾಗಿದ್ದ. ಅಲ್ಲಿಂದ ವಿವೇಕಾನಂದ ತಪ್ಪಿಸಿಕೊಂಡು ಹೋಗಿದ್ದ. ಆದ್ರೆ ನಿನ್ನೆ ಸಂಜೆ ಆರು ಗಂಟೆ ಸಮಯದಲ್ಲಿ ವಿವೇಕಾನಂದ ಮನೆ ಮೇಲೆ ದಾಳಿ ಮಾಡಿದ ಮಾನ್ಯ ತಂದೆ ಪ್ರಕಾಶಗೌಡ ಪಾಟೀಲ್ ಮತ್ತು ಸಂಬಂಧಿಗಳು ಮಾನ್ಯಾ ಮತ್ತು ಮನೆಯಲ್ಲಿದ್ದ ಆಕೆಯ ಅತ್ತೆ ಸೇರಿದಂತೆ ಮೂವರ ಮೇಲೆ ಹಲ್ಲೆ ಮಾಡಿದ್ದರು. ಗರ್ಭಿಣಿ ಅನ್ನೋದನ್ನು ನೋಡದೇ ಆಕೆಯನ್ನು ಕೊಡಲಿಯಿಂದ ಕೊಚ್ಚಿದ್ದಾರೆ. ಅವರಿಗೆ ನಮ್ಮ ಪ್ರೀತಿಗಿಂತ ಜಾತಿಯೇ ದೊಡ್ಡದಾಗಿದೆ ಅಂತ ಮಾನ್ಯ ಪತಿ ವಿವೇಕಾನಂದ ಬಿಕ್ಕಿ ಬಿಕ್ಕಿ ಕಣ್ಣೀರು ಹಾಕಿದ್ದಾನೆ.
/filters:format(webp)/newsfirstlive-kannada/media/media_files/2025/12/22/honour-killing-at-hubballi-1-2025-12-22-18-15-44.jpg)
ಮಗಳು ಗರ್ಭಿಣಿ ಅನ್ನೋದನ್ನು ಲೆಕ್ಕಿಸದ ಮಾನ್ಯ ತಂದೆ ಪ್ರಕಾಶಗೌಡ, ಮಗಳ ಮೇಲೆ ಕೊಡಲಿಯಿಂದ ಹೊಡೆದಿದ್ದ. ದೇಹದ ಐದಾರು ಕಡೆ ಕೊಡಲಿಪೆಟ್ಟು ಬಿದ್ದಿದ್ದರಿಂದ ಮಾನ್ಯ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡಿದ್ದಾಳೆ. ಆಗ ಆಕೆಯ ಸಹಾಯಕ್ಕೂ ಗ್ರಾಮದ ಯಾರೊಬ್ಬರು ಬಂದಿಲ್ಲ. ಮಗಳು ಸತ್ತಿದ್ದಾಳೆ ಅಂತ ಹಂತಕರು ಸ್ಥಳದಿಂದ ಹೋದಮೇಲೆ ವಿವೇಕಾನಂದ ಕುಟುಂಬ ಮಾನ್ಯಾಳನ್ನು ಹುಬ್ಬಳ್ಳಿ ಖಾಸಗಿ ಆಸ್ಪತ್ರೆಗೆ ಕರೆತಂದು ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಕಳೆದ ರಾತ್ರಿ ಮಾನ್ಯ ಬಾರದ ಲೋಕಕ್ಕೆ ಹೋಗಿದ್ದಾಳೆ. ಇತ್ತ ಮಾನ್ಯಾಳ ಅತ್ತೆ ಮಾವ ಸೇರಿ ಮೂವರು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನು ಮಾಹಿತಿ ತಿಳಿಯುತ್ತಿದ್ದಂತೆ ಧಾರವಾಡ ಎಸ್ಪಿ ಗುಂಜನ್ ಆರ್ಯ, ಹುಬ್ಬಳ್ಳಿ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಇನ್ನೂ ಇಂದು ಮುಂಜಾನೆ ಹುಬ್ಬಳ್ಳಿ ಕಿಮ್ಸ್ ಶವಾಗಾರಕ್ಕೆ ಮಾನ್ಯಳ ಶವ ಶಿಪ್ಟ್ ಮಾಡಲಾಗಿತ್ತು. ಮಾನ್ಯ ಮರ್ಯಾದೆ ಹತ್ಯೆ ಸುದ್ದಿ ಕೇಳಿ ದಲಿತಪರ ಮುಖಂಡರು ಕಿಮ್ಸ್ ಗೆ ಧಾವಿಸಿ ಬಂದಿದ್ದರು. ಮುಂಜಾನೆ 11 ಗಂಟೆಗೆ ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ಕುಟುಂಬದವರಿಗೆ ನೀಡುವಾಗ ದಲಿತಪರ ಮುಖಂಡರು ಪ್ರತಿಭಟನೆ ನಡೆಸಿದ್ರು. ನಂತರ ಹುಬ್ಬಳ್ಳಿ ನಗರದ ಅಂಬೇಡ್ಕರ್ ವೃತ್ತದಲ್ಲಿ ಕೂಡಾ ಮಾನ್ಯ ಶವವಿದ್ದ ಆಂಬುಲೆನ್ಸ್ ನಿಲ್ಲಿಸಿ ನ್ಯಾಯಕ್ಕಾಗಿ ಆಗ್ರಹಿಸಿದ್ರು. ನಂತರ ಮೃತಳ ಪ್ರಾರ್ಥಿವ ಶವವನ್ನು ಇನಾಂವೀರಾಪುರಕ್ಕೆ ತೆಗೆದುಕೊಂಡು ಹೋಗಲಾಯಿತು. ವಿವೇಕಾನಂದ ಮನೆಯಲ್ಲಿ ಪ್ರಾರ್ಥಿವ ಶವವಿಟ್ಟು ವಿಧಿವಿಧಾನಗಳನ್ನು ನಡೆಸಲಾಯಿತು. ಪ್ರೀತಿಯ ಮಡದಿ ಶವ ನೋಡಿ ವಿವೇಕಾನಂದ ಮತ್ತು ಕುಟುಂಬ ಕಣ್ಣೀರು ಹಾಕಿತು. ನಂತರ ಮನೆಯಿಂದ ಪ್ರಾರ್ಥಿವ ಶರೀರವನ್ನು ಗ್ರಾಮದ ಹೊರವಲಯದಲ್ಲಿರುವ ಹಳ್ಳದ ಬಳಿ ಮೆರವಣಿಗೆಯಲ್ಲಿ ತಗೆದುಕೊಂಡು ಹೋಗಲಾಯಿತು. ಈ ಸಮಯದಲ್ಲಿ ದಲಿತಪರ ಮುಖಂಡರು ಮತ್ತು ಕುಟುಂಬ ದಿಕ್ಕಾರದ ಘೋಷಣೆ ಕೂಗುತ್ತಾ ಬಂತು. ಹಳ್ಳದಲ್ಲಿ ಮಾನ್ಯಳ ಪ್ರಾರ್ಥಿವ ಶರೀರಕ್ಕೆ ವಿಧಿವಿಧಾನಗಳನ್ನು ನಡೆಸಿ, ಪತಿ ವಿವೇಕಾನಂದ ಚಿತೆಗೆ ಅಗ್ನಿಸ್ಪರ್ಶ ಮಾಡಿದ್ರು.
ಸದ್ಯ ಮಾನ್ಯಳ ಕೊಲೆಗೆ ಸಂಬಂಧಿಸಿದಂತೆ ಹುಬ್ಬಳ್ಳಿ ಗ್ರಾಮೀಣ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮಾನ್ಯಳ ತಂದೆ ಪ್ರಕಾಶಗೌಡ ಪಾಟೀಲ್, ಈರನಗೌಡ, ಅರುಣ್ ಅನ್ನೋ ಮೂವರನ್ನು ಬಂಧಿಸಿದ್ದಾರೆ. ಆದ್ರೆ ಪ್ರೀತಿಸಿ ಮದುವೆಯಾಗಿ ತನ್ನ ಪಾಡಿಗೆ ತಾನು ಜೀವನ ಕಟ್ಟಿಕೊಂಡಿದ್ದ ಮಗಳನ್ನು ಸ್ವಂತ ತಂದೆಯೇ ಮರ್ಯಾದೆ ಹತ್ಯೆ ಮಾಡಿದ್ದು ಮಾತ್ರ ದುರ್ದೈವದ ಸಂಗತಿಯಾಗಿದೆ. ಆರೋಪಿಗಳಿಗೆ ಪೊಲೀಸರು ಕಠಿಣ ಶಿಕ್ಷೆಯಾಗುವಂತೆ ನೋಡಿಕೊಂಡು ಕುಟುಂಬಕ್ಕೆ ನ್ಯಾಯ ದೊರಕಿಸಿ ಕೊಡುವ ಕೆಲಸ ಮಾಡಬೇಕಿದೆ.
ವಿನೋದ ಇಚ್ಚಂಗಿ, ನ್ಯೂಸ್ ಫಸ್ಟ್, ಹುಬ್ಬಳ್ಳಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us