/newsfirstlive-kannada/media/media_files/2026/01/28/dr-prajna-suicide-in-hostel-2026-01-28-18-17-31.jpg)
ಇನ್ನೂ ಕೆಲ ವರ್ಷ ಬಿಟ್ಟಿದ್ದರೆ ಆಕೆ ತನ್ನ ಬಳಿ ಬರೋ ರೋಗಿಗಳಿಗೆ ಆತ್ಮಹತ್ಯೆ ಮಾಡಿಕೊಳ್ಳದಂತೆ ಕೌನ್ಸೆಲಿಂಗ್ ಮಾಡುತ್ತಿದ್ದಳು. ತನ್ನ ಬಳಿ ಬರೋ ರೋಗಿಗಳಿಗೆ ಸಾಂತ್ವನ ಹೇಳೋದು, ಆಪ್ತ ಸಮಾಲೋಚನೆ ಮಾಡುತ್ತಿದ್ದಳು. ಆದರೆ ವಿಧಿಯಾಟವೇ ಬೇರೆ ಇತ್ತು. ಆಕೆಯೇ ಮಾನಸಿಕ ಸಮಸ್ಯೆಗೆ ಒಳಗಾಗಿ ತನ್ನ ಪೋಷಕರಿಗೆ ಶಾಕ್ ನೀಡಿದ್ದಾಳೆ. ಧಾರವಾಡದ ಮಾನಸಿಕ ಆರೋಗ್ಯ ಕೇಂದ್ರದಲ್ಲಿ ಸ್ನಾತಕೋತ್ತರ ಪದವಿ ಮಾಡುತ್ತಿದ್ದ ಮೊದಲನೇ ವರ್ಷದ ವಿದ್ಯಾರ್ಥಿ ಇದೀಗ ತಾನೇ ಆತ್ಮಹತ್ಯೆ ಮಾಡಿಕೊಳ್ಳೋ ಮೂಲಕ ಪಾಲಕರಿಗೆ ಆಘಾತಕ್ಕೀಡು ಮಾಡಿದ್ದಾಳೆ.
/filters:format(webp)/newsfirstlive-kannada/media/media_files/2026/01/28/dr-prajna-suicide-in-hostel-2026-01-28-18-17-56.jpg)
ಈ ಚಿತ್ರದಲ್ಲಿರೋ ಯುವತಿಯ ಹೆಸರು ಡಾ. ಪ್ರಜ್ಞಾ ಪಾಳೇಗಾರ್. ಶಿವಮೊಗ್ಗ ಮೂಲದ ರಂಗಪ್ಪ, ಡಾ. ರೇಖಾ ದಂಪತಿಯ ಏಕೈಕ ಮಗಳಾಗಿರೋ ಈಕೆ ತುಂಬಾನೇ ಪ್ರತಿಭಾವಂತೆ. ಕಳೆದ ವರ್ಷವಷ್ಟೇ ಶಿವಮೊಗ್ಗದಲ್ಲಿ ಎಂ ಬಿ ಬಿ ಎಸ್ ಮುಗಿಸಿದ್ದ ಈಕೆಗೆ ಧಾರವಾಡ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಕೇಂದ್ರದಲ್ಲಿ ಸ್ನಾತಕೋತ್ತರ ಪದವಿಗೆ ಅವಕಾಶ ಸಿಕ್ಕಿತ್ತು. ತಂದೆ ಪದವಿ ಕಾಲೇಜಿನ ನಿವೃತ್ತ ಪ್ರಿನ್ಸಿಪಾಲ್ ಆಗಿದ್ದರೆ, ತಾಯಿ ಶಿವಮೊಗ್ಗದ ಸರಕಾರಿ ಆಸ್ಪತ್ರೆಯಲ್ಲಿ ಶರೀರ ಶಾಸ್ತ್ರದ ಪ್ರೊಫೆಸರ್ ಆಗಿದ್ದರು. ಇದೇ ಜನವರಿ 3 ರಂದು ಡಿಮ್ಹಾನ್ಸ್ ಗೆ ಸೇರ್ಪಡೆಯಾಗಿ, ಪಿಜಿ ಕಲಿಯುತ್ತಿದ್ದಳು. ಎಲ್ಲರೊಂದಿಗೆ ನಗನಗುತ್ತಾ ಮಾತನಾಡುತ್ತಿದ್ದ ಡಾ. ಪ್ರಜ್ಞಾ, ಡಿಮ್ಹಾನ್ಸ್ ಎದುರಿನಲ್ಲೇ ಇರೋ ಕ್ವಾರ್ಟ್ರಸ್ ನಲ್ಲಿಯೇ ಇನ್ನೊಬ್ಬ ಪಿಜಿ ವಿದ್ಯಾರ್ಥಿನಿಯೊಂದಿಗೆ ವಾಸವಾಗಿದ್ದಳು. ನಿನ್ನೆ ತನ್ನ ತಂದೆ-ತಾಯಿ ಮಗಳನ್ನು ಭೇಟಿಯಾಗಲು ಬಂದಿದ್ದರು. ರಾತ್ರಿ ಧಾರವಾಡದಿಂದ ಮರಳಿ ಶಿವಮೊಗ್ಗಕ್ಕೆ ಹೋಗಿದ್ದಾರೆ. ಆದರೆ ಅಲ್ಲಿಗೆ ಹೋಗುತ್ತಲೇ ಅವರಿಗೊಂದು ಶಾಕ್ ಕಾದಿತ್ತು. ಇತ್ತ ಅವರು ಧಾರವಾಡದಿಂದ ಹೋಗುತ್ತಲೇ ತನ್ನ ರೂಮಿನಲ್ಲಿ ಡಾ. ಪ್ರಜ್ಞಾ ನೇಣಿಗೆ ಶರಣಾಗಿದ್ದಾಳೆ.
ಹಾಸ್ಟೆಲ್ ನಲ್ಲಿ ಈ ಬಾರಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಿರೋ ಹಿನ್ನೆಲೆಯಲ್ಲಿ ವೈದ್ಯರಿಗಾಗಿ ನಿರ್ಮಿಸಲಾಗಿರೋ ಕಟ್ಟಡವನ್ನು ಇವರಿಗೆ ನೀಡಲಾಗಿತ್ತು. ಡಾ. ಪ್ರಜ್ಞಾ ಜೊತೆಗೆ ಇನ್ನೊಬ್ಬ ವಿದ್ಯಾರ್ಥಿನಿ ಡಾ. ಪ್ರಿಯಾ ಇರುತ್ತಿದ್ದರು. ನಿನ್ನೆ ಆಕೆಯ ಪೋಷಕರು ಕೂಡ ಬಂದಿದ್ದ ಹಿನ್ನೆಲೆಯಲ್ಲಿ ಅವರೊಂದಿಗೆ ಡಾ. ಪ್ರಿಯಾ ಹೊರಗೆ ಇದ್ದಳು. ಬೆಳಿಗ್ಗೆ ಬಂದು ರೂಮಿನ ಬಾಗಿಲನ್ನು ತೆರೆಯಲು ಯತ್ನಿಸಿದರೆ ಒಳಗಿನಿಂದ ಲಾಕ್ ಆಗಿತ್ತು. ಡಿಮ್ಹಾನ್ಸ್ ಗೆ ಹೋಗೋ ವೇಳೆಯಾದರೂ ಬಾಗಿಲು ತೆರೆಯದೇ ಇದ್ದಿದ್ದರಿಂದ ಅಕ್ಕಪಕ್ಕದವರಿಗೆ ಮಾಹಿತಿ ನೀಡಲಾಗಿ, ಬಾಗಿಲನ್ನು ಮುರಿದು ನೋಡಿದಾಗ, ಡಾ. ಪ್ರಜ್ಞಾ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರೋದು ಬೆಳಕಿಗೆ ಬಂದಿದೆ. ಕೂಡಲೇ ಪೋಷಕರಿಗೆ ಕರೆ ಮಾಡಿ ಸುದ್ದಿ ಮುಟ್ಟಿಸಲಾಗಿ, ಮಧ್ಯಾಹ್ನದ ಹೊತ್ತಿಗೆ ಅವರು ಧಾರವಾಡಕ್ಕೆ ಬಂದರು.
ಈ ವೇಳೆ ಮಾತನಾಡಿದ ಪ್ರಜ್ಞಾ ತಾಯಿ ಡಾ. ರೇಖಾ, ಆಕೆ ಇಲ್ಲಿ ಬಂದು ಇರಲು ಬೇಸರವಾಗಿತ್ತು. ಮೊದಲು ಆಕೆಗೆ ಸಾಕಷ್ಟು ಇಂಟರೆಸ್ಟ್ ಇತ್ತು. ಇನ್ನೂ ಯಾವ ವಿದ್ಯಾರ್ಥಿಗಳು ಪ್ರವೇಶ ಪಡೆಯದೇ ಇದ್ದರೂ ತಾನೇ ಮೊದಲು ಬಂದು ಪ್ರವೇಶವನ್ನು ಪಡೆದಿದ್ದಳು. ಆದರೆ ಇತ್ತೀಚಿಗೆ ಆಕೆಗೆ ಇದರಲ್ಲಿ ಆಸಕ್ತಿ ಕಡಿಮೆಯಾಗುತ್ತಾ ಬಂತು. ಇದೇ ಕಾರಣಕ್ಕೆ ವೈದ್ಯೆಯೂ ಆಗಿರೋ ನಾನು ಕೂಡ ಕೌನ್ಸೆಲಿಂಗ್ ಮಾಡಿದ್ದೆ. ಆದರೂ ಆಕೆ ಇಂಥದ್ದೊಂದು ನಿರ್ಧಾರಕ್ಕೆ ಬಂದಿದ್ದಾಳೆ. ಇದು ವಿಧಿಯಾಟ ಅಂತಾ ತಾಯಿ ರೇಖಾ ಅಳಲು ತೋಡಿಕೊಂಡರು.
ಸಾಕಷ್ಟು ಪ್ರತಿಭಾವಂತೆಯಾಗಿದ್ದ ಆಕೆ ಅದೇಕೆ ಇಂಥದ್ದೊಂದು ನಿರ್ಧಾರಕ್ಕೆ ಬಂದಳು ಅನ್ನೋದು ಸಾಕಷ್ಟು ಅಚ್ಚರಿಗೆ ಕಾರಣವಾಗಿದೆ. ಸ್ಥಳಕ್ಕೆ ಉಪನಗರ ಠಾಣಾ ಪೊಲೀಸರು ಭೇಟಿ ನೀಡಿ, ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ತಾನೇ ಬಯಸಿ ಬಂದು ಪ್ರವೇಶ ಪಡೆದಿದ್ದ ಆಕೆ ತಂದೆ-ತಾಯಿ ಅರಗಿಸಿಕೊಳ್ಳದಂಥ ನಿರ್ಧಾರವನ್ನು ಮಾಡಿರೋದು ಮಾತ್ರ ವಿಪರ್ಯಾಸವೇ ಸರಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us