/newsfirstlive-kannada/media/media_files/2025/11/26/farmers-pahani-2025-11-26-18-03-43.jpg)
ರೈತರ ಜಮೀನಿನ ಪಹಣಿ ಜೊತೆಗೆ ಉಳಿದ ದಾಖಲೆಗಳು ಉಚಿತವಾಗಿ ನೀಡಿಕೆ
ರಾಜ್ಯದಲ್ಲಿ ರೈತರು ತಮ್ಮ ಕೃಷಿ ಭೂಮಿಯ ಪಹಣಿಗೆ ಅರ್ಜಿ ಸಲ್ಲಿಸಿದರೇ, ಅದರ ಜೊತೆಗೆ ಪೋಡಿ ನಕ್ಷೆ, ಆಕಾರ್ ಬಂದ್ ಹಾಗೂ ಮುಟ್ಯೇಶನ್ ದಾಖಲೆಯನ್ನು ನೀಡಲು ರಾಜ್ಯದ ಕಂದಾಯ ಇಲಾಖೆಯು ಸಿದ್ದತೆ ನಡೆಸುತ್ತಿದೆ. ಮುಂದಿನ ತಿಂಗಳಿನಿಂದಲೇ ಪಹಣಿಯ ಜೊತೆಗೆ ಇನ್ನೂಳಿದ ಮೂರು ದಾಖಲೆಗಳು ರೈತರಿಗೆ ಉಚಿತವಾಗಿ ಲಭ್ಯವಾಗಲಿವೆ. ಪೋಡಿ ನಕ್ಷೆ, ಆಕಾರ್ ಬಂದ್, ಮ್ಯುಟೇಶನ್ ದಾಖಲೆ ಪಡೆಯಲು ತಹಸೀಲ್ದಾರ್ ಕಚೇರಿಗೆ ಅಲೆದಾಡಬೇಕಾದ ಪ್ರಮೇಯವೇ ಇರುವುದಿಲ್ಲ.
ಭೂಮಿ ವೆಬ್ ಸೈಟ್ ನಲ್ಲಿ ಸಿಗುವ ಪಹಣಿಯನ್ನು ಎಲ್ಲಿ ಬೇಕಾದರೂ ಪಡೆಯಬಹುದು. ಆದರೇ, ಪೋಡಿ ನಕ್ಷೆ, ಆಕಾರ್ ಬಂದ್ ಹಾಗೂ ಮುಟ್ಯೇಶನ್ ದಾಖಲೆಗಳನ್ನು ತಹಸೀಲ್ದಾರ್ ಕಚೇರಿ ಹಾಗೂ ಸರ್ವೇ ಇಲಾಖೆಯಲ್ಲೇ ಪಡೆಯಬೇಕು . ಸರ್ವೇ ಇಲಾಖೆಯಲ್ಲಿ ಅರ್ಜಿ ಸಲ್ಲಿಸಿದ ತಕ್ಷಣವೇ, ಕೇಳಿದ ತಕ್ಷಣವೇ ಯಾವ ದಾಖಲೆಯೂ ಸಿಗಲ್ಲ. ಮಧ್ಯವರ್ತಿಗಳ ಕೈ ಬೀಸಿ ಮಾಡಿದ ಬಳಿಕವೇ ದಾಖಲೆಗಳು ಸಿಗೋದು .
ಆದರೇ, ಮುಂದಿನ ತಿಂಗಳಿನಿಂದ ಈ ಸಮಸ್ಯೆ ಇರೋದಿಲ್ಲ. ಏಕೆಂದರೇ, ಪಹಣಿಗೆ ಅರ್ಜಿ ಸಲ್ಲಿಸಿ, ಪಹಣಿ ಪಡೆದರೇ, ಅದರ ಹಿಂಭಾಗದಲ್ಲೇ ಜಮೀನಿನ ಪೋಡಿ ನಕ್ಷೆ , ಆಕಾರ್ ಬಂದ್ ಅನ್ನು ಮುದ್ರಣ ಮಾಡಲಾಗಿರುತ್ತೆ. ಮ್ಯುಟೇಶನ್ ಕೂಡ ಪಹಣಿಯ ಜೊತೆಯೇ ಸಿಗಲಿದೆ. ಇದರಿಂದ ರೈತರು ಕಂದಾಯ ಇಲಾಖೆ, ಸರ್ವೇ ಇಲಾಖೆ ಮತ್ತು ತಹಸೀಲ್ದಾರ್ ಕಚೇರಿಗೆ ಅಲೆದಾಡುವ ಪ್ರಮೇಯ ಇರಲ್ಲ. ಎಲ್ಲವೂ ಒಂದೇ ಕಡೆ, ಒಂದೇ ಪಹಣಿಯ ಜೊತೆಗೆ ಸಿಗಲಿದೆ. ಇದರಿಂದ ರೈತರಿಗೆ ಸಮಯ, ಶ್ರಮ ಎಲ್ಲವೂ ಉಳಿತಾಯವಾಗಲಿದೆ. ಜೊತೆಗೆ ಹಣ ಖರ್ಚಾಗುವುದು ಕೂಡ ತಪ್ಪಲಿದೆ. ಬ್ರೋಕರ್ ಗಳಿಗೆ ಹಣ ನೀಡುವುದು ತಪ್ಪಲಿದೆ. ಅಧಿಕಾರಿಗಳಿಗೆ ದಾಖಲೆಗಳಿಗಾಗಿ ಲಂಚ ನೀಡುವುದಕ್ಕೂ ಬ್ರೇಕ್ ಬೀಳಲಿದೆ.
ರಾಜ್ಯದಲ್ಲಿ ಸದ್ಯ ಎಲ್ಲ ನಾಡಕಚೇರಿ, ಗ್ರಾಮ ಒನ್, ಕರ್ನಾಟಕ ಒನ್ ಕೇಂದ್ರಗಳಲ್ಲಿ 25 ರೂಪಾಯಿ ನೀಡಿದರೇ, ರೈತರ ಜಮೀನಿನ ಪಹಣಿ ಸಿಗಲಿದೆ.
ಪೋಡಿ ನಕ್ಷೆ ದಾಖಲೆಯನ್ನು ರೈತರು ಸರ್ವೇ ಇಲಾಖೆಯ ಎಡಿಎಲ್‌ಆರ್ ಕಚೇರಿಯಲ್ಲಿ ಪಡೆಯಬೇಕಾಗುತ್ತೆ. ತಾಲ್ಲೂಕು ಕೇಂದ್ರಗಳಲ್ಲಿ ಮಾತ್ರವೇ ಎಡಿಎಲ್ಆರ್ ಕಚೇರಿ ಇದೆ.
ಇನ್ನೂ ಭೂಮಿಯ ಆಕಾರ್ ಬಂದ್ ನಲ್ಲಿ ಭೂಮಿಯ ವಿಸ್ತೀರ್ಣದ ವಿವರ, ಬೆಳೆ, ಭೂಮಿಯಲ್ಲಿರುವ ಎ ಖರಾಬು ಮತ್ತು ಬಿ ಖರಾಬು ವಿವರ ಇರುತ್ತೆ. ಆಕಾರ್ ಬಂದ್ ಅನ್ನು ತಹಸೀಲ್ದಾರ್ ಕಚೇರಿಯಿಂದ ಪಡೆಯಬೇಕು .
ಇನ್ನೂ ಕೃಷಿ ಜಮೀನು ಯಾರಿಂದ ಯಾರಿಗೆ ವರ್ಗಾವಣೆಯಾಯಿತು? ಯಾವಾಗ ವರ್ಗಾವಣೆಯಾಯಿತು? ಜಮೀನಿಗೆ ಸಂಬಂಧಿಸಿದಂತೆ ಉಪವಿಭಾಗಾಧಿಕಾರಿ ಮಾಡಿದ ಆದೇಶಗಳು ಏನೇನು? ಎಂಬ ವಿವರಗಳೂ ಜಮೀನಿನ ಮ್ಯುಟೇಷನ್ ಪ್ರತಿಯಲ್ಲಿ ಇರುತ್ತಾವೆ. ಈ ಮ್ಯುಟೇಶನ್ ದಾಖಲೆ ನೋಡಿ ಜಮೀನಿನ ಮಾಲೀಕರು ಯಾರು ಎಂಬುದನ್ನು ತಿಳಿದುಕೊಳ್ಳಬಹುದು.
ಈ ಮೂರು ದಾಖಲೆಗಳನ್ನು ಜಮೀನಿನ ಪಹಣಿ ಜೊತೆಗೆ ನೀಡಲು ಈಗ ಕಂದಾಯ ಇಲಾಖೆಯೂ ಸಿದ್ದತೆ ನಡೆಸಿದೆ. ರಾಜ್ಯದಲ್ಲಿ ಶೇ.80 ರಷ್ಟು ಜಮೀನುಗಳ ಪೋಡಿ ನಕ್ಷೆ ಪ್ರಕ್ರಿಯೆ ಪೂರ್ಣಗೊಂಡಿದೆ.
ಇನ್ನೂ ರಾಜ್ಯದಲ್ಲಿ ಭೂಮಿ ತಂತ್ರಾಂಶ-2 ಆವೃತ್ತಿಯನ್ನು ಮುಂದಿನ ತಿಂಗಳಿನಿಂದ ಜಾರಿಗೆ ತರಲಾಗುತ್ತಿದೆ. ಭೂಮಿ ತಂತ್ರಾಂಶ-2 ಆವೃತ್ತಿಯಲ್ಲಿ ಪಹಣಿ ಜೊತೆಗೆ ಆಕಾರ ಬಂದ್, ಮ್ಯುಟೇಷನ್, ಪೋಡಿ ನಕ್ಷೆಯನ್ನು ಕಂಪ್ಯೂಟರ್ ನ ಒಂದು ಬಟನ್ ಒತ್ತುವ ಮೂಲಕ ಒಮ್ಮೆಗೇ ಸಿಗುವ ವ್ಯವಸ್ಥೆ ಸದ್ಯದಲ್ಲೇ ಜಾರಿಯಾಗಲಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಹೇಳಿದ್ದಾರೆ. ಮುಂದೆ ಜಮೀನಿನ ಋಣಭಾರ ಪ್ರಮಾಣಪತ್ರ( ಇ.ಸಿ.) ದಾಖಲೆಯನ್ನು ಒಟ್ಟಿಗೆ ನೀಡುವ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಹೇಳಿದ್ದಾರೆ.
/filters:format(webp)/newsfirstlive-kannada/media/media_files/2025/10/25/krishna-byregowda-2025-10-25-18-01-56.jpg)
ಪಹಣಿ, ಮ್ಯುಟೇಷನ್, ಆಕಾರ್ ಬಂದ್, ಪೋಡಿ ನಕ್ಷೆಯನ್ನು ಗ್ರಾಮ ಒನ್, ಬಾಪೂಜಿ ಸೇವಾ ಕೇಂದ್ರ, ನಾಡ ಕಚೇರಿ, ಕರ್ನಾಟಕ ಒನ್ ಕೇಂದ್ರದಲ್ಲೇ ಜನರು ಪಡೆಯುವ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಮುಂದಿನ ತಿಂಗಳಿನಿಂದ ಕರ್ನಾಟಕದ ರೈತರಿಗೆ , ಕೃಷಿ ಜಮೀನು ಮಾಲೀಕರಿಗೆ ಗುಡ್ ನ್ಯೂಸ್ ನೀಡಲು ಕಂದಾಯ ಇಲಾಖೆಯು ಭರದ ಸಿದ್ದತೆಯನ್ನು ನಡೆಸುತ್ತಿದೆ.
/filters:format(webp)/newsfirstlive-kannada/media/post_attachments/wp-content/uploads/2024/12/Biggest-Land-Lord.jpg)
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us