/newsfirstlive-kannada/media/media_files/2026/01/19/lakkundi-2026-01-19-11-38-05.jpg)
ಲಕ್ಕುಂಡಿಯಲ್ಲಿ ವಿಭಿನ್ನ ನಾಣ್ಯ, ಮೂಳೆ ಚೂರು ಪತ್ತೆ!
ಐತಿಹಾಸಿಕ ತಾಣ ಲಕ್ಕುಂಡಿಯಲ್ಲಿ ಪುರಾತತ್ವ ಇಲಾಖೆಯ ಉತ್ಖನನ ಕಾರ್ಯ 6ನೇ ದಿನವೂ ನಡೆದಿದೆ. ಇತಿಹಾಸ ಪ್ರಸಿದ್ಧ ಸ್ಥಳದಲ್ಲಿ ದಿನಕ್ಕೊಂದು ಹೊಸ ತಿರುವು ಸಿಗುತ್ತಿದೆ. ಗ್ರಾಮದ ಮನೆಯೊಳಗೆ ಐತಿಹಾಸಿಕ ಈಶ್ವರ ದೇಗುಲ, ಮಣ್ಣಿನಡಿ ಮಡಿಕೆಗಳು ಪತ್ತೆಯಾಗಿದ್ದವು. ಇದೀಗ ನಾಣ್ಯಗಳು, ಕೆಲವು ಮೂಳೆ ಚೂರುಗಳು ಪತ್ತೆಯಾಗಿವೆ.
ಗದಗ ಜಿಲ್ಲೆಯ ಲಕ್ಕುಂಡಿ ಚಾರಿತ್ರಿಕ ತಾಣ.. ಐತಿಹಾಸಿಕ ನೆಲೆವೀಡು.. ಬಾದಾಮಿ ಚಾಲುಕ್ಯರು ಹಾಗೂ ಕಲ್ಯಾಣಿ ಚಾಲುಕ್ಯರು ಈ ಭಾಗಕ್ಕೆ ನೀಡಿದ್ದ ಕಲೆ ಮತ್ತು ವಾಸ್ತುಶಿಲ್ಪ ಕೊಡುಗೆಗಳು ದೇವಾಲಯಗಳ ಚಕ್ರವರ್ತಿಗಳೆನಿಸಿಕೊಂಡಿವೆ.. ಇದೀಗ ಕೆಲ ದಿನಗಳ ಹಿಂದೆ ಪಾಯ ಅಗೆಯುವ ವೇಳೆ ನಿಧಿ ಪತ್ತೆಯಾದ ಬೆನ್ನಲ್ಲೇ ಲಕ್ಕುಂಡಿಯ ಕಾಲಗರ್ಭದಲ್ಲಿ ಹುದುಗಿಹೋಗಿದ್ದ ಅದೆಷ್ಟೋ ಕೌತುಕಗಳು ಒಂದೊಂದಾಗಿಯೇ ತೆರೆದುಕೊಳ್ತಿವೆ.
ಲಕ್ಕುಂಡಿ ಉತ್ಖನನದ ವೇಳೆ ವಿಭಿನ್ನ ನಾಣ್ಯಗಳು ಪತ್ತೆ
ಲಕ್ಕುಂಡಿಯ ಭೂಗರ್ಭದ ರಹಸ್ಯ ಅರಿಯುವ ಕಾರ್ಯ ಸತತ 6ನೇ ದಿನವೂ ಮುಂದುವರಿದಿದೆ. ನಿಧಿ ಸಿಕ್ಕ ಜಾಗದಲ್ಲಿ ಬಗೆದಷ್ಟೂ, ಕೆದಕಿದಷ್ಟೂ ಕುರುಹುಗಳು ಪತ್ತೆಯಾಗ್ತಿವೆ.. ಇವತ್ತು ಲಕ್ಕುಂಡಿ ವೀರಭದ್ರೇಶ್ವರ ದೇವಾಲಯದ ಮುಂಭಾಗ ವಿಭಿನ್ನ ನಾಣ್ಯಗಳು ಪತ್ತೆಯಾಗಿವೆ. ನಾಣ್ಯ ಪತ್ತೆಯಾದ ಬೆನ್ನಲ್ಲೇ ಪುರಾತತ್ವ ಇಲಾಖೆ ಅಲರ್ಟ್ ಆಗಿದ್ದು, ಸೂಕ್ಷ್ಮವಾಗಿ ಉತ್ಖನನ ಕಾರ್ಯವನ್ನ ಮುಂದುವರಿಸಿದೆ.
ಉತ್ಖನನದ ವೇಳೆ 5 ಅಡಿ ಆಳದಲ್ಲಿತ್ತು ಮೂಳೆ ಚೂರು!
ಭೂಗರ್ಭದಲ್ಲಿ ಅಡಗಿರೋ ಕುರುಹುಗಳನ್ನ ಹುಡುಕುತ್ತಾ ಹೊರಟಿದ್ದ ಉತ್ಖನನ ತಂಡಕ್ಕೆ ಇವತ್ತು ಮತ್ತೊಂದು ಮಹತ್ವದ ಸುಳಿವು ಸಿಕ್ಕಿತ್ತು. ಲಕ್ಕುಂಡಿಯ ವೀರಭದ್ರೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಅಗೆಯುವಾಗ ಮೂಳೆ ಚೂರುಗಳು ಪತ್ತೆಯಾಗಿವೆ. ಭೂಮಿಯ 5 ಅಡಿ ಆಳದಲ್ಲಿ ಮೂಳೆಗಳು ಪತ್ತೆಯಾಗಿದ್ದು, ಇವುಗಳನ್ನ ಪುರಾತತ್ವ ಇಲಾಖೆ ಸಿಬ್ಬಂದಿ ಸಂಗ್ರಹ ಮಾಡಿ FSL ಕೇಂದ್ರಕ್ಕೆ ರವಾನಿಸಲು ಸಿದ್ಧತೆ ನಡೆಸಿದೆ.
ನಾಗರ ಹಾವಿನ ಮೂರ್ತಿ ಪತ್ತೆ
ಇನ್ನೂ ಲಕ್ಕುಂಡಿಯಲ್ಲಿ ಇಂದು ನಾಗರ ಹಾವಿನ ಮೂರ್ತಿ ಪತ್ತೆಯಾಗಿದೆ. ಕಲ್ಲಿನ ಮೇಲೆ ನಾಗರ ಹಾವು ಅನ್ನು ಕೆತ್ತಲಾಗಿದೆ. ನಿಧಿ ಸ್ಥಳದಲ್ಲಿ ನಾಗರ ಮೂರ್ತಿ ಸಿಗುತ್ತಾವೆ ಎಂಬ ಪ್ರತೀತಿ ಕೂಡ ಇದೆ. ನಾಗರ ಮೂರ್ತಿ ಪತ್ತೆಯಾದ ಬೆನ್ನಲ್ಲೇ ನಿಧಿ ಇರುವ ಬಗ್ಗೆ ಸಾಕಾರಾತ್ಮಕ ಅನುಮಾನಗಳು ವ್ಯಕ್ತವಾಗುತ್ತಿವೆ. ಹಸಿರು ಕಲ್ಲಿನಲ್ಲಿ ನಾಗರ ಮೂರ್ತಿಯನ್ನು ಕೆತ್ತಲಾಗಿದೆ.
ಲಕ್ಕುಂಡಿ ಉತ್ಖನನ ಸ್ಥಳಕ್ಕೆ ಮೈಸೂರಿನ ಉರಗ ತಜ್ಞ ಭೇಟಿ!
ಲಕ್ಕುಂಡಿ ಉತ್ಖನನ ಸ್ಥಳಕ್ಕೆ ಮೈಸೂರಿನ ಉರಗ ತಜ್ಞ ಸ್ನೇಕ್ ಕ್ಯಾಚರ್ ಶಿವರಾಜ್ ಭೇಟಿ ನೀಡಿದ್ರು. ನಿಧಿ ಇರೋ ಸ್ಥಳದಲ್ಲಿ ನಾಗರಹಾವು ಇದೆ ಎಂಬ ವದಂತಿ ಹಬ್ಬಿತ್ತು. ಇದರ ಬೆನ್ನಲ್ಲೇ ಸ್ನೇಕ್ ಕ್ಯಾಚರ್ ಶಿವರಾಜ್ ಹಾಗೂ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಈ ವೇಳೆ ಮಾತನಾಡಿದ ಉರಗ ತಜ್ಞ ಶಿವರಾಜ್, ಹಾವುಗಳು ದೇವರಲ್ಲ, ನಿಧಿ ಕಾಯೋದಿಲ್ಲ ಅಂತ ಸ್ಪಷ್ಟನೆ ನೀಡಿದ್ರು.
ಪ್ರವಾಸ ಸ್ಥಳವಾದ ಲಕ್ಕುಂಡಿ, ಶಿಕ್ಷಕರು, ವಿದ್ಯಾರ್ಥಿಗಳು ಭೇಟಿ
ಇನ್ನು ಐತಿಹಾಸಿಕ ಸ್ಥಳವೀಗ ವಿದ್ಯಾರ್ಥಿಗಳ ಕೌತುಕದ ಸ್ಥಳವಾಗಿ ಮಾರ್ಪಾಡಾಗಿದೆ. ಉತ್ಖನನ ನಡೆಯುತ್ತಿರೋ ಸ್ಥಳಕ್ಕೆ ಹುಬ್ಬಳ್ಳಿಯ ನೇಕಾರ ನಗರದ ಪ್ರಾಥಮಿಕ ಶಾಲೆ ಮಕ್ಕಳು, ಶಿಕ್ಷಕರು ಭೇಟಿ ನೀಡಿದ್ರು. ಉತ್ಖನನ ಕಾರ್ಯವನ್ನ ವಿದ್ಯಾರ್ಥಿಗಳು ಕುತೂಹಲದಿಂದ ವೀಕ್ಷಿಸಿದ್ರು.
ಮಕ್ಕಳಷ್ಟೇ ಅಲ್ಲ.. ಲಕ್ಕುಂಡಿಯ ಉತ್ಖನನಕ್ಕೆ ಸ್ಥಳಕ್ಕೆ ಕುಖ್ಯಾತ ಕಳ್ಳ ಶಿಗ್ಲಿ ಬಸ್ಯಾ ಕೂಡ ವಿಸಿಟ್ ಕೊಟ್ಟಿದ್ದ. ಉತ್ಖನನ ಕಾರ್ಯ ನೋಡಿದ್ಮೇಲೆ ನಾನೇನು ನಿಧಿ ಕಳ್ಳತನಕ್ಕೆ ಬಂದಿಲ್ಲ ಅಂತ ಹಾಸ್ಯ ಚಟಾಕಿ ಹಾರಿಸಿದ. ಹೀಗೆ ಲಕ್ಕುಂಡಿಯಲ್ಲಿ ಭೂಮಿಯ ಉತ್ಖನನ ಕಾರ್ಯ ಮುಂದುವರಿದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us