/newsfirstlive-kannada/media/media_files/2025/09/03/vij_ganesh-2025-09-03-07-29-46.jpg)
ವಿಜಯಪುರ: ಗಣೇಶ ಮೂರ್ತಿಯನ್ನು ವಿಸರ್ಜನೆ ಮಾಡಲು ಅದ್ಧೂರಿಯಾಗಿ ಮೆರವಣಿಗೆ ಮೂಲಕ ತೆಗೆದುಕೊಂಡು ಹೋಗುವಾಗ ವಿದ್ಯುತ್ ಪ್ರವಾಹಿಸಿ ಯುವಕನೊಬ್ಬ ಜೀವ ಚೆಲ್ಲಿದ್ದಾನೆ. ನಗರದ ಗಾಂಧಿಚೌಕ್ ವೃತ್ತದ ಸಮೀಪ ಟಾಂಗಾ ಸ್ಟ್ಯಾಂಡ್ ಬಳಿ ಈ ಘಟನೆ ನಡೆದಿದೆ.
ನಗರದ ಡೋಬಲೆ ಗಲ್ಲಿ ನಿವಾಸಿಯಾದ ಶುಭಂ ಸಂಕಪಾಲ (21) ಮೃತ ಯುವಕ. 7 ದಿನದ ಗಣಪತಿ ಮೂರ್ತಿ ವಿಸರ್ಜನೆ ಮಾಡಲು ಅದ್ಧೂರಿಯಾಗಿ ಮೆರವಣಿಗೆ ಮೂಲಕ ಹೋಗಲಾಗುತ್ತಿತ್ತು. ದೊಡ್ಡ ಗಣಪತಿ ಮೂರ್ತಿ ಇದ್ದಿದ್ದರಿಂದ ವಿದ್ಯುತ್ ತಂತಿಗಳು ತಾಗುತ್ತಿದ್ದವು. ಹೀಗಾಗಿ ಕೋಲಿನಿಂದ ವಿದ್ಯುತ್ ತಂತಿಗಳನ್ನು ಮೇಲೆತ್ತಲೆಂದು ಶುಭಂ ಹೋಗಿದ್ದರು. ಆದರೆ ಈ ವೇಳೆ ವಿದ್ಯುತ್ ಪ್ರವಾಹಿಸಿ ಯುವಕ ಪ್ರಾಣ ಬಿಟ್ಟಿದ್ದಾನೆ.
ಈ ಘಟನೆ ನಡೆದ ಕೂಡಲೇ ಸ್ಥಳಕ್ಕೆ ಡಿವೈಎಸ್ಪಿ ಬಸವರಾಜ ಯಲಿಗಾರ ಹಾಗೂ ಇತರೆ ಅಧಿಕಾರಿಗಳು ಆಗಮಿಸಿದರು. 7ನೇ ದಿನ ಆಗಿದ್ದರಿಂದ ನೂರಾರು ಮೂರ್ತಿಗಳು ವಿಸರ್ಜನೆಗೆಂದು ಮೆರವಣಿಗೆ ಮೂಲಕ ತೆಗೆದುಕೊಂಡು ಹೋಗಲಾಗುತ್ತಿತ್ತು. ಆದರೆ ಗಾಂಧಿ ಚೌಕ್ ಬಳಿ ಯುವಕನ ಘಟನೆ ನಡೆಯುತ್ತಿದ್ದಂತೆ ನಗರದ ಎಲ್ಲ ಗಣೇಶನ ಮೂರ್ತಿಗಳನ್ನು ವಿಸರ್ಜನೆ ಮಾಡಲು ಪೊಲೀಸರು ಬೇಗ.. ಬೇಗನೇ ಕಳುಹಿಸಿದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ