/newsfirstlive-kannada/media/media_files/2025/10/09/working-women-in-ktk-2025-10-09-18-11-13.jpg)
ಸರ್ಕಾರಿ, ಖಾಸಗಿ ವಲಯದ ಮಹಿಳಾ ಉದ್ಯೋಗಿಗಳಿಗೆ ಋತುಚಕ್ರದ ರಜೆ
ಕರ್ನಾಟಕದಲ್ಲಿ ದುಡಿಯುವ ಮಹಿಳೆಯರಿಗೆ ರಾಜ್ಯದ ಕ್ಯಾಬಿನೆಟ್ ಗುಡ್ ನ್ಯೂಸ್ ಕೊಟ್ಟಿದೆ. ದುಡಿಯುವ ಮಹಿಳೆಯರಿಗೆ ಋತುಚಕ್ರದ ರಜೆ (Menstrual Leave Policy, 2025) ಎಂದು ವರ್ಷದಲ್ಲಿ ಹನ್ನೆರಡು ದಿನ ರಜೆ ನೀಡಲು ಸರ್ಕಾರ ಅನುಮೋದನೆ ನೀಡಿದೆ. ರಾಜ್ಯ ಸಚಿವ ಸಂಪುಟದಲ್ಲಿ ಈ ಪ್ರಸ್ತಾವಕ್ಕೆ ಇಂದು ಒಪ್ಪಿಗೆ ಸಿಕ್ಕಿದೆ. ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿ ದುಡಿಯುವ ಎಲ್ಲ ಮಹಿಳೆಯರಿಗೂ ತಿಂಗಳಲ್ಲಿ ಒಂದು ದಿನ ವೇತನ ಸಹಿತ ಋತುಚಕ್ರದ ರಜೆ ನೀಡಲಾಗುತ್ತೆ. ವರ್ಷಕ್ಕೆ 12 ದಿನ ಋತುಚಕ್ರದ ರಜೆ ನೀಡಲಾಗುತ್ತೆ.
ರಾಜ್ಯದಾದ್ಯಂತ ಸರ್ಕಾರಿ ಕಚೇರಿಗಳು, ಗಾರ್ಮೆಂಟ್ಸ್ MNC ಗಳು IT ಮತ್ತು ಇತರೆ ಖಾಸಗಿ ಕೈಗಾರಿಕೆಗಳು ಸೇರಿದಂತೆ ಎಲ್ಲಾ ವಲಯಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಪ್ರತಿ ತಿಂಗಳು ಒಂದು ದಿನದ ವೇತನ ಸಹಿತ ರಜೆ ನೀತಿಯನ್ನು (Menstrual Leave Policy, 2025) ಜಾರಿಗೆ ತರಲು ಸಚಿವ ಸಂಪುಟ ನಿರ್ಣಯಿಸಿದೆ.
ಹೀಗಾಗಿ ಗಾರ್ಮೆಂಟ್ಸ್ ಗಳು ಸೇರಿದಂತೆ ಖಾಸಗಿ ವಲಯದಲ್ಲಿ ಕೆಲಸ ಮಾಡುವ ಮಹಿಳೆಯರು ಸೇರಿದಂತೆ ಐ.ಟಿ. ವಲಯದ ಮಹಿಳಾ ನೌಕರರಿಗೂ ಋತುಚಕ್ರದ ರಜೆ ಸೌಲಭ್ಯ ಸಿಗಲಿದೆ.
ಮಹಿಳೆಯರು ಅವರ ಅಗತ್ಯದ ದಿನಗಳಲ್ಲಿ ರಜೆ ತೆಗೆದುಕೊಳ್ಳಬಹುದು. ಕರ್ನಾಟಕ ರಾಜ್ಯ ಸರ್ಕಾರ ಹೆಣ್ಣು ಮಕ್ಕಳ ಪರವಾಗಿ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಕ್ಯಾಬಿನೆಟ್ ಸಭೆಯ ಬಳಿಕ ಹೇಳಿದ್ದಾರೆ.
ಸರ್ಕಾರದ ನಿರ್ಧಾರವನ್ನು ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘ ಸ್ವಾಗತಿಸಿದೆ. ವಿಧಾನಸೌಧದಲ್ಲಿ ಸಂಘದ ಅಧ್ಯಕ್ಷೆ ರೋಷಿನಿಗೌಡ ಹೇಳಿಕೆ ನೀಡಿದ್ದು ಕ್ಯಾಬಿನೆಟ್ ತೀರ್ಮಾನವನ್ನು ಸ್ವಾಗತಿಸಿದ್ದಾರೆ. ಇಂದು ಸರ್ಕಾರ ತೆಗೆದುಕೊಂಡ ತೀರ್ಮಾನ ಬಹಳ ಐತಿಹಾಸಿಕ ತೀರ್ಮಾನ. ಈ ನಿರ್ಧಾರವು ನಮಗೆ ಬಹಳ ಹೆಮ್ಮೆಯ ಸಂಗತಿಯಾಗಿದೆ . ಐತಿಹಾಸಿಕ ತೀರ್ಮಾನ ಮಾಡಿದ ಸರ್ಕಾರವನ್ನು ಅಭಿನಂದಿಸುತ್ತೇವೆ. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆಶಿ ಅವರಿಗೆ ಶುಭಾಶಯಗಳು ಎಂದಿದ್ದಾರೆ. ಋತುಚಕ್ರದ ರಜೆ ನೀತಿಗಾಗಿ ಬಹಳ ವರ್ಷಗಳಿಂದ ನಮ್ಮ ಸಂಘ ಹೋರಾಟ ಮಾಡಿತ್ತು. ಹಲವು ಸಭೆಗಳ ಮೂಲಕ ಸರ್ಕಾರದ ಗಮನ ಸೆಳೆಯಲಾಗಿತ್ತು. ನಮ್ಮ ಸಂಘಟನೆಯ ಹೋರಾಟದ ಪ್ರತಿಫಲ ಸಿಕ್ಕಿದೆ. ಬಿಹಾರ, ಒರಿಸ್ಸಾ, ಕೇರಳ ಮಾದರಿಯಲ್ಲಿ ನಮ್ಮ ರಾಜ್ಯದಲ್ಲೂ ರಜೆ ನೀತಿ ಜಾರಿಮಾಡಿದೆ. ಇಡೀ ಮಹಿಳಾ ಸಮುದಾಯ ಸರ್ಕಾರದ ತೀರ್ಮಾನ ಸ್ವಾಗತಿಸಿದೆ ಎಂದು ರೋಷಿನಿ ಗೌಡ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.