/newsfirstlive-kannada/media/media_files/2025/08/18/chikkamgalore-tourist-2025-08-18-11-45-08.jpg)
ಚಿಕ್ಕಮಗಳೂರಿನ ಅಯ್ಯನಕೆರೆ ದೃಶ್ಯ
ರಾಜ್ಯದಲ್ಲಿ ಮತ್ತೆ ಮಳೆಯ ಅಬ್ಬರ ಶುರುವಾಗಿದೆ. ನಿರಂತರವಾಗಿ ಸುರಿಯುತ್ತಿರೋ ಮಳೆಯಿಂದಾಗಿ ಒಂದೆಡೆ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಇದರ ಮಧ್ಯೆ ಹವಾಮಾನ ಇಲಾಖೆ ಮತ್ತೆ ಎಚ್ಚರಿಕೆ ನೀಡಿದೆ. ಕರ್ನಾಟಕದ ವಿವಿಧೆಡೆ ಮಳೆಯಿಂದ ಏನೆಲ್ಲಾ ಅನಾಹುತಗಳಾಗಿವೆ, ಮಳೆಯಿಂದ ಯಾವ ರೀತಿಯ ಪರಿಸ್ಥಿತಿ ನಿರ್ಮಾಣವಾಗಿದೆ ಅನ್ನೋದರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ನೋಡಿ.
ವಾಯಭಾರ ಕುಸಿತ
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ಮುಂದಿನ ಐದು ದಿನಗಳ ಕಾಲ ರಾಜ್ಯದಲ್ಲಿ ಭಾರೀ ಮಳೆ ಸುರಿಯಲಿದೆ. ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು ಮತ್ತು ಶಿವಮೊಗ್ಗದಲ್ಲಿ ಹೆಚ್ಚಿನ ಮಳೆ ಆಗಲಿದೆ. ಈ ಎಲ್ಲಾ ಐದು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಹೆಚ್ಚಿನ ಮಳೆ ಹಿನ್ನಲೆಯಲ್ಲಿ ನದಿಗಳು ಉಕ್ಕಿಹರಿಯುತ್ತಿದ್ದು, ನದಿಪಾತ್ರದ ಜನರು ಜಾಗರೂಕತೆಯಿಂದ ಇರಲು ಸೂಚನೆ ನೀಡಿದೆ.
ಮಳೆ ಆರ್ಭಟಕ್ಕೆ ನೀರು ಪಾಲಾದ 40ಕ್ಕೂ ಹೆಚ್ಚು ಎಮ್ಮೆಗಳು !
ಬೀದರ್ ಜಿಲ್ಲೆಯ ನಂದಿ ಬಿಜಲಗಾಂವ್ ಗ್ರಾಮದಲ್ಲಿ ಘಟನೆ ನಡೆದಿದೆ. ಕೆರೆ ಒಡೆದು ರೈತರ ಜಮೀನುಗಳಿಗೆ ಅಪಾರ ನೀರು ನುಗ್ಗಿದೆ. ನೀರಿನ ರಭಸಕ್ಕೆ 40ಕ್ಕೂ ಹೆಚ್ಚು ಎಮ್ಮೆಗಳು ಕೊಚ್ಚಿಕೊಂಡು ಹೋಗಿವೆ. ಕೆರೆಯ ದಡಕ್ಕೆ ಹತ್ತಾರು ಎಮ್ಮೆಗಳ ಶವಗಳು ಬಂದು ಸೇರಿವೆ. ತಾವು ಸಾಕಿದ ಎಮ್ಮೆಗಳಿಲ್ಲದೇ ಬಿಜಲಗಾಂವ್ ಗ್ರಾಮದ ರೈತರು ಕಂಗಾಲು ಆಗಿದ್ದಾರೆ.
ಮುಳುಗಿದ ಕಪ್ಪೆಶಂಕರನಾರಾಯಣ ದೇಗುಲ !
ಚಿಕ್ಕಮಗಳೂರಿನ ಶೃಂಗೇರಿ ತಾಲೂಕಿನ ಸುತ್ತಮುತ್ತ ಧಾರಾಕಾರ ಮಳೆಯಾಗ್ತಿದ್ದು, ಶೃಂಗೇರಿ ದೇಗುಲದ ಕಪ್ಪೆಶಂಕರನಾರಾಯಣ ದೇಗುಲ ಮುಳುಗಡೆಯಾಗಿದೆ. ದೇಗುಲದ ಗಾಂಧಿ ಮೈದಾನ ಸಂಪೂರ್ಣ ಜಲಾವೃತಗೊಂಡಿದ್ದು, ದೇವಸ್ಥಾನದ ಪಾರ್ಕಿಂಗ್ ಜಾಗದ ಮಾರ್ಗದ ಪ್ಯಾರಲಲ್ ರಸ್ತೆ ಕೂಡ ಮುಳುಗಡೆಯಾಗಿದ್ದು, ಜನರ ಜೀವನ ಅಸ್ತವ್ಯಸ್ತವಾಗಿದೆ. ಕಾಫಿ-ಅಡಿಕೆ-ಮೆಣಸು ಬೆಳೆಗಾರರಿಗೆ ಕೊಳೆ ರೋಗದ ಭೀತಿ ಶುರುವಾಗಿದೆ.
ಐತಿಹಾಸಿಕ ಸ್ಮಾರಕಗಳು ಜಲಾವೃತ
ಭಾರೀ ಮಳೆಗೆ ಕೊಪ್ಪಳದ ಐತಿಹಾಸಿಕ ಸ್ಮಾರಕಗಳು ಸಂಪೂರ್ಣವಾಗಿ ಜಲಾವೃತವಾಗಿದೆ. ಮಲೆನಾಡು ಭಾಗದಲ್ಲಿ ಧಾರಕಾರ ಮಳೆಯಾಗ್ತಿದ್ದು, ತುಂಗಭದ್ರಾ ನದಿಯಲ್ಲಿ ನಿನ್ನೆಯಿಂದ ಸುಮಾರು 85 ಸಾವಿರದಿಂದ 1 ಲಕ್ಷ ಕ್ಯೂಸೆಕ್ ವರೆಗೂ ಒಳಹರಿವು ಹೆಚ್ಚಳವಾಗಿದೆ. ಒಳಹರಿವು ಹೆಚ್ಚಳ ಹಿನ್ನೆಲೆಯಲ್ಲಿ ಸದ್ಯ 95 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಹರಿ ಬಿಡಲಾಗ್ತಿದೆ. ಪರಿಣಾಮ ಆನೆಗೊಂದಿ ಬಳಿ ಇರೋ ಶ್ರೀಕೃಷ್ಣದೇವರಾಯ ಸಮಾಧಿ ಮಂಟಪ ಸೇರಿ ಐತಿಹಾಸಿಕ ಸ್ಮಾರಕಗಳು ಸಂಪೂರ್ಣವಾಗಿ ಜಲಾವೃತವಾಗಿದೆ. .
ಕೋಡಿ ಬಿದ್ದ ಅಯ್ಯನಕೆರೆ, ಪ್ರವಾಸಿಗರ ಹುಚ್ಚಾಟ!
ನಿರಂತರವಾಗಿ ಸುರಿಯುತ್ತಿರೋ ಮಳೆಗೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣ ಸಮೀಪದಲ್ಲಿರುವ ಅಯ್ಯನಕೆರೆ ಕೋಡಿ ಬಿದ್ದಿದ್ದು, ಕೆರೆ ಕೋಡಿ ಬಿದ್ದ ಜಾಗದಲ್ಲೇ ಪ್ರವಾಸಿಗರು ಹುಚ್ಚಾಟವಾಡಿದ್ದಾರೆ. ಸ್ವಲ್ಪ ಹೆಚ್ಚುಕಮ್ಮಿಯಾಗಿ ಬಿದ್ದರೂ ದೊಡ್ಡ ಅಪಾಯ ಸಂಭವಿಸೋ ಸಾಧ್ಯತೆ ಇದೆ. ಸುತ್ತಮುತ್ತಲಿನ ಜನರಿಗೆ ಎಚ್ಚರಿಕೆಯಿಂದ ಇರಲು ಸೂಚಿಸಲಾಗಿದೆ
ಮಳೆ ಕಡಿಮೆಯಾಗಲೆಂದು ಋಷ್ಯಶೃಂಗೇಶ್ವರನಿಗೆ ಪೂಜೆ
ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ ಹೆಚ್ಚಾಗಿರುವುದರಿಂದ ಜನರು ಮಳೆ ದೇವರ ಮೊರೆ ಹೋಗಿದ್ದಾರೆ. ಚಿಕ್ಕಮಗಳೂರು ಜನರು ಮಳೆ ದೇವ ಕಿಗ್ಗಾದ ಋಷ್ಯಶೃಂಗೇಶ್ವರನಿಗೆ ಅಗಿಲು ಸೇವೆ ಸಲ್ಲಿಸಿದ್ದಾರೆ. ಚಿಕ್ಕಮಗಳೂರಿನ ಶೃಂಗೇರಿಯ ಋಷ್ಯಶೃಂಗೇಶ್ವರ ಸ್ವಾಮಿಗೆ ಅಗಿಲು ಸೇವೆ ಮಾಡಿದರೆ ಮಳೆ ನಿಲ್ಲುತ್ತದೆ ಎಂಬ ನಂಬಿಕೆ ಇದೆ. ಹೀಗಾಗಿ ಶೃಂಗೇರಿ ಶಾರದಾಂಬೆ ದೇವಾಲಯದ ಜಗದ್ಗುರುಗಳು ಅಗಿಲು ಸೇವೆಯನ್ನ ಮಾಡಲು ಸಾಮಗ್ರಿಗಳನ್ನು ದೇವಾಲಯಕ್ಕೆ ಕಳಿಸಿದ್ದಾರೆ. ಶೃಂಗೇರಿ ಜಗದ್ಗುರುಗಳು ಮಾತ್ರವೇ ಋಷ್ಯಶೃಂಗ ದೇವರಿಗೆ ಅಗಿಲು ಸೇವೆ ಮಾಡುತ್ತಾ ಬಂದಿದ್ದಾರೆ.
ರಾಯಚೂರು ಜಿಲ್ಲೆಯಾದ್ಯಂತ ಜಿಟಿಜಿಟಿ ಮಳೆ!
ಮಕ್ಕಳು, ವೃದ್ಧರಿಗೆ ಆವರಿಸಿದ ವೈರಲ್ ಫೀವರ್
ನಿರಂತರ ಮಳೆಗೆ ಮಲೆನಾಡಂತಾಗಿದೆ ಬಿಸಿಲೂರು ರಾಯಚೂರು. ಜಿಲ್ಲೆಯ ಖಾಸಗಿ, ಸರ್ಕಾರಿ ಆಸ್ಪತ್ರೆಗಳು ರೋಗಿಗಳಿಂದ ಭರ್ತಿಯಾಗಿವೆ. ಮಕ್ಕಳನ್ನು ಶಾಲೆಗೆ ಕಳಿಸಲು ಪೋಷಕರ ಹಿಂದೇಟು ಹಾಕುತ್ತಿದ್ದಾರೆ. ಮಕ್ಕಳು, ವೃದ್ಧರಿಗೆ ವೈರಲ್ ಫೀವರ್ ಆವರಿಸಿಕೊಂಡಿದೆ. ಇನ್ನೂ ಒಂದು ವಾರ ಇದೇ ವಾತಾವರಣ ಇರುವ ಸಾಧ್ಯತೆ ಇದೆ.
ಅಲೆಗಳ ಅಬ್ಬರಕ್ಕೆ ಕಡಲ ತೀರಕ್ಕೆ ಬಂದ ಡಾಲ್ಫಿನ್ ಮೀನು!
ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿಯಲ್ಲಿ ಮಳೆ ಗಾಳಿ ಜೋರಾಗಿದೆ. ಸಮುದ್ರದ ಅಲೆಗಳ ಅಬ್ಬರ ಸಹ ಹೆಚ್ಚಾಗಿರುವುದರಿಂದ ಕಡಲ ತೀರಕ್ಕೆ ಡಾಲ್ಫಿನ್ ಬಂದಿವೆ.
ಹೆಬ್ಬಾಳ ಗ್ರಾಮಸ್ಥರಿಗೆ ಪ್ರವಾಹ ಭೀತಿ ಶುರು.
ಬೆಣ್ಣೆತೋರಾ ಜಾಲಾಶಯದಿಂದ ಅಪಾರ ನೀರು ಬಿಡುಗಡೆ ಹಿನ್ನೆಲೆಯಲ್ಲಿ ಹೆಬ್ಬಾಳ ಗ್ರಾಮದ ಹೊಟೆಲ್ ವರೆಗೂ ನೀರು ಬಂದಿದೆ. ಹೆಬ್ಬಾಳ ಗ್ರಾಮದಲ್ಲಿ ಪ್ರವಾಹ ಆತಂಕ ಶುರುವಾಗಿದೆ. ಜಲಾಶಯ ಕೆಳಭಾಗದ ರೈತರ ನೂರಾರು ಎಕರೆ ಜಮೀನು ಜಲಾವೃತವಾಗಿದೆ. ನೂರಾರು ಎಕರೆ ಪ್ರದೇಶದ ಬೆಳೆ ಮುಳುಗಡೆಯಾಗಿದ್ದು, ರೈತರು ಕಂಗಾಲಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.