/newsfirstlive-kannada/media/media_files/2025/09/19/karnataka-rain-26-2025-09-19-07-12-23.jpg)
ಮಳೆಗಾಲದಲ್ಲಿ ಮಳೆ ಬರೋದು ಸಾಮಾನ್ಯ. ಆದ್ರೆ ಈ ಬಾರಿ ಮಹಾ ಮಳೆಯಿಂದ ಭಾರೀ ಅವಾಂತರಗಳೇ ಸೃಷ್ಟಿಯಾಗಿವೆ. ಹಲವೆಡೆ ಮಳೆ ನಿರಂತರವಾಗಿ ಸುರಿಯುತ್ತಲೇ ಇದ್ದು, ಜನರಿಗೆ ನೆಮ್ಮದಿ ಇಲ್ಲದಂತಾಗಿದೆ. ನೀರಲ್ಲಿ ಹುಚ್ಚಾಟವಾಡಲು ಹೋಗಿ ಮೂವರು ವೃದ್ಧರು ನೀರು ಪಾಲಾದ ಘಟನೆ ನಡೆದಿದೆ.
ಬೆಂಗಳೂರು
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ವರುಣನ ಆರ್ಭಟ ಜೋರಾಗಿತ್ತು. ಆನೇಪಾಳ್ಯ, ಡಬಲ್ ರೋಡ್, ಅಶೋಕನಗರ ಮತ್ತು ಆಡುಗೋಡಿ ಸುತ್ತಮುತ್ತಲೂ ಮಳೆಯಾಗಿದ್ದು, ಮಳೆಗೆ ಸಿಲುಕಿ ವಾಹನ ಸವಾರರು ಪರದಾಡಿದ್ದಾರೆ.
ಕಲಬುರುಗಿ
ಕಲಬುರಗಿಯಲ್ಲಿ ಮಳೆಯಾರ್ಭಟ ಜೋರಾಗಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. ನಿರಂತರ ಮಳೆಗೆ ತೆಲಗಬಾಳ ಗ್ರಾಮದ ಸೇತುವೆ ಮುಳುಗಡೆಯಾಗಿದೆ. ಅಲ್ಲದೇ ಬೃಹತ್ ಹಳ್ಳದ ನೀರಿನಿಂದ ರೈತರ ಜಮೀನುಗಳು ಜಲಾವೃತವಾಗಿದ್ದು, ಎಕರೆಗಟ್ಟಲೆ ರೈತರ ಬೆಳೆ ಹಾನಿಯಾಗಿ ರೈತರು ಕಂಗಾಲಾಗಿ ಹೋಗಿದ್ದಾರೆ.
ಇತ್ತ ಮಳೆಯಾರ್ಭಟಕ್ಕೆ ಕಲಬುರಗಿಯ ಸಿದನೂರು ಗ್ರಾಮದ ಸುತ್ತಮುತ್ತ ಹಳ್ಳ-ಕೊಳ್ಳಗಳು ಉಕ್ಕಿ ಹರಿಯುತ್ತಿವೆ. ಈ ಮಧ್ಯೆಯೇ ಅಪಾಯ ಲೆಕ್ಕಿಸದೆ ರಭಸವಾಗಿ ಹರಿಯುತ್ತಿರುವ ಹಳ್ಳದಲ್ಲಿ ಗ್ರಾಮಸ್ಥರು ದುಸ್ಸಾಹಾಸ ಮೆರೆದಿದ್ದಾರೆ.
ರಾಯಚೂರು
ರಾಯಚೂರು ಜಿಲ್ಲೆಯಲ್ಲೂ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದ್ದು, ರೈತನೊಬ್ಬರ ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾನೆ. ರಾಯಚೂರಿನ ಜಾಗೀರ ನಂದಿಹಾಳದಲ್ಲಿ ಜಮೀನಿಗೆ ಹೊರಟಿದ್ದ ರೈತ ಬಂಡೆಪ್ಪ ಅಮಾರಾವತಿ ಆಯ ತಪ್ಪಿ ಹಳ್ಳಕ್ಕೆ ಬಿದ್ಬಿಟ್ಟಿದ್ರು. ಕೂಡಲೇ ಅಲ್ಲಿದ್ದ ಸ್ಥಳೀಯರು ರೈತನ ಸಹಾಯಕ್ಕೆ ಧಾವಿಸಿ ರಕ್ಷಣೆ ಮಾಡಿದ್ದಾರೆ.
ಬೀದರ್
ಬೀದರ್ನ ಬರೂರು ಗ್ರಾಮದ ಬಳಿ ಜಲಾವೃತವಾದ ಸೇತುವೆ ದಾಟಲು ಹೋಗಿ 62 ವರ್ಷದ ವೃದ್ದ ನೀರುಪಾಲಾಗಿದ್ದಾರೆ. ಸದ್ಯ ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಶೋಧಕಾರ್ಯ ನಡೆಸುತ್ತಿದ್ದಾರೆ.
ವಿಜಯನಗರ
ಇತ್ತ ಮಹಾರಾಷ್ಟ್ರದ ಗಡಿಯ ಬೋರಗಿ ಗ್ರಾಮದ ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ವೃದ್ಧ ಶವವಾಗಿ ಪತ್ತೆಯಾಗಿದ್ದಾರೆ. ಧಾರಕಾರವಾಗಿ ಸುರಿದ ಮಳೆಗೆ ಹಳ್ಳಕೊಳ್ಳಗಳು ಅಪಾಯದ ಮಟ್ಟ ಮೀರಿ ಉಕ್ಕಿ ಹರಿಯುತ್ತಿದೆ. ಈ ನಡುವೆ 65 ವರ್ಷದ ಈರಪ್ಪ ಅಕ್ಕಲಕೋಟ ಹಳ್ಳದಾಟಲು ಯತ್ನಿಸಿ ಕಾಲುಜಾರಿ ನೀರಿಗೆ ಬಿದ್ದು, ಕೊಚ್ಚಿ ಹೋಗಿದ್ರು.ಇದೀಗ ವೃದ್ಧನ ಶವ ಪತ್ತೆಯಾಗಿದೆ.
ಏನೇ ಹೇಳಿ.. ಬೆಳೆ ನಂಬಿದ್ದ ರೈತರಿಗೂ ವರುಣ ಕಾಟ ಕೊಟ್ಟಿದ್ದಾನೆ. ಒಂದೇ ಸಮನೇ ಚೆಚ್ಚಿ ಬಿಸಾಕ್ತಿರೋ ವರುಣ ಅದ್ಯಾವಾಗ ಶಾಂತ ಸ್ವರೂಪ ಪಡೆದುಕೊಳ್ತಾನೋ ಅಂತಾ ಕಾಯೋ ಹಾಗಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ