/newsfirstlive-kannada/media/media_files/2025/08/18/chikkamagalore-rain-1-2025-08-18-07-35-29.jpg)
ದಕ್ಷಿಣ ಕರ್ನಾಟಕದ ಜಿಲ್ಲೆಗಳಲ್ಲಿ ಕಳೆದ ರಾತ್ರಿ ಭರ್ಜರಿ ಮಳೆ
ನಿನ್ನೆ ದಕ್ಷಿಣ ಕರ್ನಾಟಕ ಭಾಗದಲ್ಲಿ ಭರ್ಜರಿ ಮಳೆಯಾಗಿದೆ. ಚಾಮರಾಜನಗರ ಜಿಲ್ಲೆಯಿಂದ ಹಿಡಿದು ಚಿತ್ರದುರ್ಗ, ದಾವಣಗೆರೆ ಜಿಲ್ಲೆಯವರೆಗೂ ಭರ್ಜರಿ ಮಳೆಯಾಗಿದೆ. ನಿನ್ನೆ ಬೆಳಿಗ್ಗೆ 8.30 ರಿಂದ ಇಂದು ಬೆಳಿಗ್ಗೆ 8.30 ರವರೆಗಿನ 24 ಗಂಟೆ ಅವಧಿಯಲ್ಲಿ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಕೈನಡುನಲ್ಲಿ ಭರ್ಜರಿ 195 ಮಿಲಿಮೀಟರ್ ನಷ್ಟು ಮಳೆಯಾಗಿದೆ. ಅಂದರೇ, 19.5 ಸೆಂಟಿಮೀಟರ್ ನಷ್ಟು ಭರ್ಜರಿ ಮಳೆಯಾಗಿದೆ. ಕೋಲಾರ, ತುಮಕೂರು, ಮಂಡ್ಯ, ಚಿಕ್ಕಬಳ್ಳಾಪುರ, ಬೆಂಗಳೂರು ದಕ್ಷಿಣ ಜಿಲ್ಲೆಗಳಲ್ಲೂ ಭರ್ಜರಿ ಮಳೆಯಾಗಿದೆ. ಚಿತ್ರದುರ್ಗ, ತುಮಕೂರು ಜಿಲ್ಲೆಯಲ್ಲಿ ಒಂದು ರಾತ್ರಿಯ ಮಳೆಗೆ ಹಳ್ಳಕೊಳ್ಳಗಳೆಲ್ಲಾ ತುಂಬಿ ಹರಿಯುತ್ತಿವೆ.
ದಾವಣಗೆರೆ ಜಿಲ್ಲೆಯಲ್ಲಿ ಭರ್ಜರಿ ಮಳೆ
ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನಲ್ಲಿ ಧಾರಾಕಾರ ಮಳೆಯಾಗಿದೆ. ಚನ್ನಗಿರಿ ಪಟ್ಟಣದ ತಗ್ಗುಪ್ರದೇಶದ ಅಂಗಡಿ ಮುಂಗಟ್ಟುಗಳಿಗೆ ನೀರು ನುಗ್ಗಿದೆ. ದೋಣಿಹಳ್ಳಿಯಲ್ಲಿ ಕೆರೆ ಕೊಡಿ ಒಡೆದು ರಸ್ತೆಗೆ ನೀರು ನುಗ್ಗಿದೆ. ಮಳೆಯಿಂದಾಗಿ ಚನ್ನಗಿರಿ ತಾಲೂಕಿನ ಹಲವು ಗ್ರಾಮಗಳಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಚನ್ನಗಿರಿ ತಾಲೂಕಿನಲ್ಲಿ ನಿನ್ನೆಯೂ 321 ಮಿಮೀ ಮಳೆಯಾಗಿತ್ತು. ಇಂದು ಬೆಳಗ್ಗೆ 5 ಗಂಟೆಯಿಂದಲೂ ಬಿಟ್ಟುಬಿಡದೇ ಸುರಿದ ಮಳೆಗೆ ಅವಾಂತರಗಳೇ ಸೃಷ್ಟಿಯಾಗಿವೆ.
ಮಂಡ್ಯ ಜಿಲ್ಲೆಯ ಬಹುತೇಕ ತಾಲ್ಲೂಕುಗಳಲ್ಲಿ ಭಾರಿ ಮಳೆ
ಇನ್ನೂ ಮಂಡ್ಯ ಬಹುತೇಕ ತಾಲ್ಲೂಕುಗಳಲ್ಲಿ ಭಾರಿ ಮಳೆಯಾಗಿದೆ. ಮಂಡ್ಯ ಜಿಲ್ಲೆಯಲ್ಲಿ ನಿನ್ನೆ ರಾತ್ರಿ ಸುರಿದ ಧಾರಾಕಾರ ಮಳೆಗೆ ಅವಾಂತರಗಳೇ ಸೃಷ್ಟಿಯಾಗಿವೆ. ಮಂಡ್ಯದ ಬೀಡಿ ಕಾಲೋನಿಯಲ್ಲಿ ಮಳೆ ತಂದ ಅವಾಂತರದಿಂದ ಜೆಎಸ್ಎಸ್ ಪಬ್ಲಿಕ್ ಸ್ಕೂಲ್ ಗೆ ಜಲದಿಗ್ಭಂಧನವಾಗಿದೆ. ಶಾಲಾ ಮೈದಾನ, ಶಾಲಾ ವಾಹನಗಳು ನೀರಿನಲ್ಲಿ ಮುಳುಗಡೆಯಾಗಿವೆ. ಶಾಲಾ ಮೈದಾನವೇ ಜಲಾವೃತವಾಗಿರುವ ಹಿನ್ನಲೆಯಲ್ಲಿ ಸ್ಕೂಲ್ ಗೆ ರಜೆಗೆ ಘೋಷಿಸಲಾಗಿದೆ. ಬಡಾವಣೆಯ ಹಲವು ಮನೆಗಳೂ ಮಳೆ ನೀರಿನಿಂದ ಜಲಾವೃತವಾಗಿವೆ. ವಾಹನಗಳು ನೀರಿನಲ್ಲಿ ಮುಳುಗಿವೆ. ಮನೆಯಿಂದ ಹೊರಬರಲಾಗದೆ ಜನರ ಪರದಾಡುತ್ತಿದ್ದಾರೆ.
ಇನ್ನೂ ಮಂಡ್ಯ ನಗರದ ಬಳಿ ನೀರಿನ ನಾಲೆಯ ಏರಿ ಒಡೆದು ,ನಾಲೆ ಉಕ್ಕಿ ಅವಾಂತರ ಸೃಷ್ಟಿಯಾಗಿದೆ. ಮಂಡ್ಯದ ನಗರದ ಬಡಾವಣೆಗಳಿಗೆ ನೀರು ನುಗ್ಗಿದೆ. ಮತ್ತೊಂದೆಡೆ ಜಮೀನುಗಳಿಗೆ ನೀರು ನುಗ್ಗಿದೆ. ಭತ್ತದ ಗದ್ದೆ, ಕಬ್ಬಿನ ಗದ್ದೆ, ತೆಂಗು, ಅಡಿಕೆ ತೋಟಗಳಿಗೆ ನೀರು ನುಗ್ಗಿದೆ. ಮಂಡ್ಯ ನಗರದ ಹೊರವಲಯದಲ್ಲೆ ಹಲವು ಅವಾಂತರಗಳು ಸೃಷ್ಟಿಯಾಗಿವೆ. ಶ್ರೀರಂಗಪಟ್ಟಣದ ಕೂಡಲಕುಪ್ಪೆ, ಚೆನ್ನಗರಿಕೊಪ್ಪಲು, ದರಸಗುಪ್ಪೆ, ಮಹದೇವಪುರ ಸೇರಿ ಹಲವೆಡೆ ಮಳೆ ಅವಾಂತರದ ಘಟನೆಗಳು ನಡೆದಿವೆ. ನಾಲೆಗಳ ಏರಿ ಒಡೆದು ಹೋಗಿ, ನಾಲೆಯಿಂದ ಉಕ್ಕಿ ಹರಿದ ನೀರಿನಿಂದ ಸಮಸ್ಯೆಗಳು ಸೃಷ್ಟಿಯಾಗಿವೆ.
ನಿನ್ನೆ ರಾತ್ರಿ ಸುರಿದ ಭಾರೀ ಮಳೆಗೆ ಮಂಡ್ಯ ನಗರದ ಕೆಹೆಚ್‌ಬಿ ಕಾಲೋನಿ ಜಲಾವೃತವಾಗಿದೆ.
ಮಂಡ್ಯ ನಗರದ ಕೆಹೆಚ್‌ಬಿ ಕಾಲೋನಿಯಲ್ಲಿ ಜನ, ಜೀವನ ಅಸ್ತವ್ಯಸ್ತವಾಗಿದೆ. ನಿರಂತರ ಮಳೆಗೆ ಕಾಲೋನಿ ಬಳಿಯ ಕಾಲುವೆ ತುಂಬಿ ಹರಿದಿದೆ. ರಸ್ತೆಗಳಲ್ಲಿ ಮಂಡಿಯೂದ್ದ ನೀರು ನಿಂತಿದೆ.
ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರ ಹರಸಾಹಸಪಡುತ್ತಿದ್ದಾರೆ. ಬೈಕ್ ಸವಾರರು ರಸ್ತೆದಾಟಲು ಪರದಾಡುತ್ತಿದ್ದಾರೆ. ಮನೆ ಸುತ್ತಲೂ ಮಳೆ ನೀರು ಆವರಿಸಿದೆ. ಮನೆಯಿಂದ ಹೊರಬರಲಾರದೆ ನಿವಾಸಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ನಾಲೆ ಕಿರಿದಾದ ಪರಿಣಾಮ ಪ್ರತಿ ಬಾರಿ ಮಳೆ ಬಂದಾಗಲೂ ಕಾಲುವೆ ಉಕ್ಕಿ ಹರಿಯುತ್ತೆ. ಕಾಲುವೆ ಅಗಲೀಕರಣ ಮಾಡಿ, ತಡೆಗೋಡೆ ನಿರ್ಮಿಸುವಂತೆ ಸ್ಥಳೀಯರ ಒತ್ತಾಯಿಸಿದ್ದಾರೆ.
ಕಳೆದ ರಾತ್ರಿ ಮಂಡ್ಯ ಜಿಲ್ಲೆಯ ಹಲವೆಡೆ ಧಾರಾಕಾರ ಮಳೆ ಸುರಿದಿದೆ. ಮಳೆ ನೀರಿಗೆ ಜಮೀನುಗಳು ಜಲಾವೃತ್ತಗೊಂಡಿವೆ. ಶ್ರೀರಂಗಪಟ್ಟಣ ತಾಲೂಕಿನ ಕೂಡಲಗುಪ್ಪೆ ಗ್ರಾಮದ ಜಮೀನು ಜಲಾವೃತವಾಗಿವೆ. ರೈತರು ಬೆಳೆದಿದ್ದ ಬೆಳೆಗಳು ನೀರಿನಲ್ಲಿ ಮುಳುಗಡೆಯಾಗಿವೆ. ತೆಂಗು, ಕಬ್ಬು ಸೇರಿದಂತೆ ಅನೇಕ ಬೆಳೆಗಳು ಜಲಾವೃತ್ತವಾಗಿವೆ. ಬೆಳೆಗಳು ಜಲಾವೃತ್ತವಾಗಿದ್ದರಿಂದ ಬೆಳೆ ನಷ್ಟಕ್ಕೆ ಪರಿಹಾರ ನೀಡಬೇಕೆಂದು ರೈತರು ಆಗ್ರಹಿಸಿದ್ದಾರೆ.
ರಾಜ್ಯದಾದ್ಯಂತ 09.10.2025ರ ಬೆಳಿಗ್ಗೆ 08.30 ರಿಂದ 10.10.2025 ರ ಬೆಳಿಗ್ಗೆ 07.00 ರವರೆಗೆ ಅನ್ವಯ ಮೊದಲ 50 ಮಳೆ ಮಾಪನ ಕೇಂದ್ರಗಳಲ್ಲಿ ದಾಖಲಾದ #ಗರಿಷ್ಠ ಮಳೆ (ಮಿ.ಮೀ) ವಿವರ. #KSNDMC#KarnatakaRainspic.twitter.com/MkBWBHCH1g
— Karnataka State Natural Disaster Monitoring Centre (@KarnatakaSNDMC) October 10, 2025
ಬರದ ನಾಡು ಕೋಲಾರದಲ್ಲೂ ಭಾರಿ ಮಳೆಯಿಂದ ಅವಾಂತರ
ಇನ್ನೂ ಕೋಲಾರ ಜಿಲ್ಲೆಯಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ ಭರ್ಜರಿ ಮಳೆಯಾಗಿದೆ. ರಾತ್ರಿ ಸುರಿದ ಮಳೆಗೆ ಕೋಲಾರ ಜಿಲ್ಲೆಯಲ್ಲಿ ಅವಾಂತರಗಳೇ ಸೃಷ್ಟಿಯಾಗಿವೆ.
ಕೋಲಾರ ನಗರದ ರೈಲ್ವೆ ಅಂಡರ್ ಪಾಸ್ ತುಂಬಿ ಸಾರ್ವಜನಿಕರ ಪರದಾಡುತ್ತಿದ್ದಾರೆ. ನಗರದ ಖಾದ್ರಿಪುರ ರೈಲ್ವೆ ಅಂಡರ್ ಪಾಸ್ ಬ್ಲಾಕ್ ಆಗಿದೆ. ಅಂಡರ್ ಪಾಸ್ ನಲ್ಲಿ ನೀರು ತುಂಬಿಕೊಂಡಿದೆ. ನೀರಿನಲ್ಲೇ ನಿಂತು ಖಾದ್ರಿಪುರ ಯುವಕರ ಪ್ರತಿಭಟನೆ ನಡೆಸಿದ್ದಾರೆ. ಅರೆಬೆತ್ತಲೆಯಾಗಿ ನೀರಿನಲ್ಲಿ ನಿಂತು ಜಿಲ್ಲಾಡಳಿತ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಲಾ ಮಕ್ಕಳಿಗೆ ಓಡಾಡಲು ತೀವ್ರ ತೊಂದರೆಯಾಗಿದೆ. ಕೋಲಾರದ ಕಾರಂಜಿಕಟ್ಟೆ ರಸ್ತೆಯಲ್ಲಿ ಇರುವ ರೈಲ್ವೆ ಅಂಡರ್ ಪಾಸ್ ಜಲಾವೃತ್ತವಾಗಿದೆ.
ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಅತ್ಯಧಿಕ ಮಳೆ
ಇನ್ನೂ ಕೋಟೆನಾಡು ಚಿತ್ರದುರ್ಗ ಜಿಲ್ಲೆಯಾದ್ಯಂತ ಭರ್ಜರಿ ಮಳೆ ಸುರಿದಿದೆ. ಹೊಸದುರ್ಗ ತಾಲೂಕಿನಲ್ಲೇ ಕಳೆದ 24 ಗಂಟೆ ಅವಧಿಯಲ್ಲಿ 195 ಮಿಲಿಮೀಟರ್ ನಷ್ಟು ಭಾರಿ ಮಳೆಯಾಗಿದೆ. ಇದರಿಂದಾಗಿ ಹೊಸದುರ್ಗ ತಾಲ್ಲೂಕಿನ ಹಳ್ಳ ಕೊಳ್ಳಗಳು ಭರ್ತಿಯಾಗಿದ್ದು, ರೈತರಲ್ಲಿ ಸಂತಸ ಮೂಡಿದೆ. ಗುಡುಗು ಸಹಿತ ಭಾರೀ ಮಳೆಗೆ ಹಳ್ಳಗಳು ತುಂಬಿ ಹರಿಯುತ್ತಿವೆ. ಭಾರೀ ಮಳೆಗೆ ಹೊಸದುರ್ಗದ ಉಪ್ಪಹಳ್ಳ, ಹೀರಪ್ಪನಹಳ್ಳ ತುಂಬಿ ಹರಿಯುತ್ತಿವೆ. ಮತ್ತೋಡ ಹೋಬಳಿಯ ಚಿಕ್ಕ ತೇಕಲವಟ್ಟಿ ಮಾರ್ಗದಲ್ಲಿ ಸಂಚಾರ ಅಸ್ತವ್ಯಸ್ಥವಾಗಿದೆ. ರಸ್ತೆಯ ಮೇಲೆ ಮಳೆ ನೀರು ಉಕ್ಕಿ ಹರಿಯುತ್ತಿದೆ. ಸಿರಿಗೊಂಡನಹಳ್ಳಿ-ದೊಡ್ಡ ತೇಕಲವಟ್ಟಿ ಗ್ರಾಮಗಳ ಮಧ್ಯೆ ಸಂಚಾರ ಸ್ಥಗಿತವಾಗಿದೆ. ಶ್ರೀರಾಂಪುರ ಹೋಬಳಿ ನಾಯಿಗೆರೆ ಗ್ರಾಮಕ್ಕೆ ಜಲದಿಗ್ಭಂಧನವಾಗಿದೆ. ರೈತರ ಜಮೀನುಗಳು ಸಂಪೂರ್ಣ ಜಲಾವೃತವಾಗಿವೆ.
ಚಿತ್ರದುರ್ಗ ಜಿಲ್ಲೆಯ ಹಲವು ಕಡೆ ತಡರಾತ್ರಿ ವರುಣನ ಆರ್ಭಟಿಸಿದ್ದಾನೆ. ಗುಡುಗು- ಮಿಂಚು ಸಹಿತ ಹಲವು ಕಡೆ ಧಾರಕಾರ ಮಳೆ ಸುರಿದಿದೆ. ಮಳೆರಾಯನ ಅಬ್ಬರಕ್ಕೆ ಹಿರಿಯೂರು ತಾಲ್ಲೂಕಿನ ಕೆರೆಕೋಡಿಹಟ್ಟಿ ರಸ್ತೆ ಜಲಾವೃತವಾಗಿದೆ. ರಸ್ತೆಯಲ್ಲಿ ಭಾರಿ ಪ್ರಮಾಣದ ನೀರು ಹರಿಯುವ ಹಿನ್ನೆಲೆ ಸಂಚಾರ ಬಂದ್ ಮಾಡಲಾಗಿದೆ. ರಸ್ತೆಯಲ್ಲಿ ಹರಿಯುತ್ತಿರುವ ನೀರಿನಿಂದ ವಾಹನ ಸಂಚಾರ ಅಸ್ತವ್ಯಸ್ತವಾಗಿದೆ.
ಹೊಳಲ್ಕೆರೆ ತಾಲ್ಲೂಕಿನಲ್ಲಿ ಮಳೆರಾಯನ ಅಬ್ಬರ ಜೋರಾಗಿತ್ತು. ತಾಲ್ಲೂಕಿನ ಕಾಗಳಗೆರೆ ಗ್ರಾಮದಲ್ಲಿ ಭರ್ಜರಿ ಮಳೆಯಾಗಿದೆ. ಗ್ರಾಮದಲ್ಲಿ ಹಳ್ಳದಲ್ಲಿ ಅಪಾರ ಪ್ರಮಾಣದ ನೀರು ಹರಿಯುತ್ತಿದೆ. ಬರದ ನಾಡು ಚಿತ್ರದುರ್ಗದಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ವರುಣನಿಂದಾಗಿ ಜಿಲ್ಲೆಯ ಜನರು ನೆಮ್ಮದಿಯ ನಿಟ್ಟುಸಿರುಬಿಟ್ಟಿದ್ದಾರೆ. ಮುಂಗಾರು ಮುಗಿದ ಬಳಿಕವೂ ಚಿತ್ರದುರ್ಗ ಜಿಲ್ಲೆಯಲ್ಲಿ ಭರ್ಜರಿ ಮಳೆಯಾಗುತ್ತಿರುವುದು ವಿಶೇಷ. ಬಿಸಿಲಿನಿಂದ ಬಸವಳಿದಿದ್ದ ಜಿಲ್ಲೆಗೆ ವರುಣ ತಂಪೆರೆದಿದ್ದಾನೆ. ಚಿತ್ರದುರ್ಗ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆ ಚುರುಕು ಪಡೆದಿದೆ.
District-wise realized #Maximum#rainfall (mm) & Rainfall #distribution details during the last 24 hrs ending at 8.30 am on 10th October 2025.#ksndmc@KarnatakaVarthepic.twitter.com/3m7VlKPepc
— Karnataka State Natural Disaster Monitoring Centre (@KarnatakaSNDMC) October 10, 2025
ಕಲ್ಪತರು ನಾಡು ತುಮಕೂರಿನಲ್ಲಿ ತೆಂಗಿಗೆ ಒಳ್ಳೆ ಮಳೆ
ಇನ್ನೂ ಕಲ್ಪತರು ನಾಡು ತುಮಕೂರು ಜಿಲ್ಲೆಯಲ್ಲೂ ಕಳೆದ ರಾತ್ರಿ ಎಲ್ಲ 10 ತಾಲ್ಲೂಕುಗಳಲ್ಲೂ ಗುಡುಗು ಸಹಿತ ಧಾರಕಾರ ಮಳೆಯಾಗಿದೆ. ಧಾರಕಾರವಾಗಿ ಸುರಿದ ಮಳೆಗೆ ಹಳ್ಳ, ಕೊಳ್ಳಗಳು ತುಂಬಿ ಹರಿಯುತ್ತಿವೆ. ಸೇತುವೆ, ರಸ್ತೆ ಮೇಲೆ ಮಳೆ ನೀರು ತುಂಬಿ ಹರಿಯುತ್ತಿದೆ. ರಸ್ತೆ ದಾಟಲು ಜನರ ಪರದಾಡುತ್ತಿದ್ದಾರೆ. ತಿಪಟೂರು ತಾಲ್ಲೂಕಿನ ಮಾಚಘಟ್ಟ ಗ್ರಾಮಕ್ಕೆ ತೆರಳುವ ರಸ್ತೆಯಲ್ಲಿರುವ ಸೇತುವೆ ಮಳೆ ನೀರಿನಿಂದ ಜಲಾವೃತ್ತವಾಗಿದೆ. ರಾತ್ರಿ ಇಡೀ ಧಾರಕಾರವಾಗಿ ಮಳೆ ಸುರಿದಿದೆ. ತುಮಕೂರು, ಗುಬ್ಬಿ, ತಿಪಟೂರು, ಕುಣಿಗಲ್, ಪಾವಗಡ ತಾಲ್ಲೂಕು ಸೇರಿದಂತೆ ಜಿಲ್ಲೆಯಾದ್ಯಂತ ಭಾರಿ ಮಳೆಯಾಗಿದೆ. ಹಲವೆಡೆ ತಗ್ಗುಪ್ರದೇಶಗಳಿಗೆ ನೀರು ನುಗ್ಗಿದೆ.
ಮಳೆ ಮುನ್ಸೂಚನೆ
ಇನ್ನೂ ಮುಂದಿನ 7 ದಿನಗಳ #ಮಳೆ#ಮುನ್ಸೂಚನೆ ಮತ್ತು #ಎಚ್ಚರಿಕೆಗಳು: (ಮೂಲ: IMD) ರಾಜ್ಯದಾದ್ಯಂತ ಗುಡುಗು ಸಹಿತ ಜೋರಾದ ಗಾಳಿಯೊಂದಿಗೆ ಚದುರದಿಂದ ವ್ಯಾಪಕವಾಗಿ ಹಗುರದಿಂದ ಸಾಧಾರಣ ಮಳೆ ಹಾಗೂ ಇಂದು ಅಲ್ಲಲ್ಲಿ ಭಾರಿ ಮಳೆಯಾಗಲಿದೆ. ಮಲೆನಾಡು ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಅಕ್ಟೋಬರ್ 14 ರವರೆಗೆ ಅಲ್ಲಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಕೋಶ ಮುನ್ನೆಚ್ಚರಿಕೆ ನೀಡಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ