ಬೆಂಗಳೂರಿನ ತರಕಾರಿಗಳಲ್ಲಿ ಅಧಿಕ ಸೀಸದ ಅಂಶ ಪತ್ತೆ!! : ಸೇವನೆಯಿಂದ ಕಿಡ್ನಿ ವೈಫಲ್ಯ, ಮೆದುಳು ಸಮಸ್ಯೆ ಖಚಿತ!

ಬೆಂಗಳೂರಿಗೆ ಪೂರೈಕೆಯಾಗುತ್ತಿರುವ ತರಕಾರಿಗಳಲ್ಲಿ ಅಧಿಕ ಸೀಸದ ಅಂಶ ಪತ್ತೆಯಾಗಿದೆ!!. ಎನ್‌ಜಿಟಿ ಆದೇಶದ ಮೇರೆಗೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ಐವರು ಸದಸ್ಯರ ಸಮಿತಿ ರಚಿಸಿತ್ತು. ಈ ಸಮಿತಿಯು ಬೆಂಗಳೂರಿನ ತರಕಾರಿಗಳ ಸ್ಯಾಂಪಲ್ ಸಂಗ್ರಹಿಸಿ ಲ್ಯಾಬ್ ನಲ್ಲಿ ಪರೀಕ್ಷೆ ನಡೆಸಿದಾಗ ಅಘಾತಕಾರಿ ಅಂಶ ಬೆಳಕಿಗೆ ಬಂದಿದೆ.

author-image
Chandramohan
vegetables_Photos

ಬೆಂಗಳೂರಿನ ತರಕಾರಿಗಳಲ್ಲಿ ಹೆಚ್ಚಿನ ಸೀಸದ ಅಂಶ ಪತ್ತೆ!

Advertisment
  • ಬೆಂಗಳೂರಿನ ತರಕಾರಿಗಳಲ್ಲಿ ಹೆಚ್ಚಿನ ಸೀಸದ ಅಂಶ ಪತ್ತೆ!
  • ಹೆಚ್ಚಿನ ಸೀಸದ ಅಂಶದಿಂದ ಕಿಡ್ನಿ ವೈಫಲ್ಯ, ಮೆದುಳು ಸಮಸ್ಯೆ ಖಚಿತ ಎಂದ ತಜ್ಞರು
  • ಕೋಲಾರ, ಚಿಕ್ಕಬಳ್ಳಾಪುರ ಭಾಗದ ತರಕಾರಿಗಳಲ್ಲಿ ಹೆಚ್ಚಿನ ಸೀಸದ ಅಂಶ ಪತ್ತೆ
  • ಕೋಲಾರ, ಚಿಕ್ಕಬಳ್ಳಾಪುರಕ್ಕೆ ಹರಿಯುತ್ತಿರುವುದು ಕೆ.ಸಿ.ವ್ಯಾಲಿ, ಎಚ್‌.ಎನ್‌.ವ್ಯಾಲಿ ನೀರು

ಬೆಂಗಳೂರು ನಗರ ಹಾಗೂ ಸುತ್ತಮುತ್ತಲ ಜಿಲ್ಲೆಗಳಲ್ಲಿ ಬೆಳೆಯುವ ತರಕಾರಿಗಳಲ್ಲಿ ಅಪಾಯಕಾರಿಯಾದ ಸೀಸದ ಅಂಶ ಮಿತಿ ಮೀರಿದ ಪ್ರಮಾಣದಲ್ಲಿ ಕಂಡು ಬಂದಿದೆ. ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ಆದೇಶದ ಮೇರೆಗೆ ಕೇಂದ್ರ ಮಾಲಿನ್ಯ ಮಂಡಳಿಯು ಐವರು ಸದಸ್ಯರು ಪರಿಶೀಲನೆ ಮತ್ತು ತನಿಖೆ ನಡೆಸಿದ್ದಾರೆ. ಬೆಂಗಳೂರು, ನೆಲಮಂಗಲ, ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ರಾಮನಗರ ಹಾಗೂ ಸುತ್ತಮುತ್ತಲ ನಗರ, ಪಟ್ಟಣಗಳ ತರಕಾರಿ, ಅಂತರ್ಜಲ, ನೀರು, ಮಣ್ಣಿನ ಮಾದರಿ ಪಡೆದು ಲ್ಯಾಬ್ ಪರೀಕ್ಷೆ ನಡೆಸಿದ್ದಾರೆ. 
ವಿವಿಧೆಡೆಯಿಂದ 72 ಮಾದರಿ ತರಕಾರಿಗಳನ್ನು ಸಂಗ್ರಹಿಸಿದ್ದರು. 72 ಮಾದರಿಗಳ ಪೈಕಿ 52 ಮಾದರಿಗಳನ್ನು ರಾಜಾಜಿನಗರ, ನೆಲಮಂಗಲ, ಕೋಲಾರ ಮಾರುಕಟ್ಟೆಗಳಿಂದ ಉಳಿದ ಮಾದರಿಗಳನ್ನು ಚಿಕ್ಕಬಳ್ಳಾಪುರ, ಕೋಲಾರ ಹೊಲಗಳಿಂದ ಸಂಗ್ರಹಿಸಲಾಗಿತ್ತು.  72 ಸ್ಯಾಂಪಲ್ ಗಳ ಪೈಕಿ 19 ಸ್ಯಾಂಪಲ್ ಗಳಲ್ಲಿ ನಿಗದಿಗಿಂತ ಹೆಚ್ಚು ಸೀಸದ ಅಂಶ ಪತ್ತೆಯಾಗಿದೆ. 
ಸಾವಯವ ತರಕಾರಿ ಎಂದು ಪರಿಗಣಿಸಲಾದ  1 ಕೆಜಿ  ಬದನೆಕಾಯಿಯಲ್ಲಿ 1.953 ಎಂ.ಜಿ. ಸೀಸದ ಅಂಶ ಕಂಡು ಬಂದಿದೆ.  ಇದು ಎಫ್‌ಎಸ್‌ಎಸ್‌ಎಐ ನಿಗದಿಪಡಿಸಿದ್ದ ಮಿತಿಗಿಂತ 20 ಪಟ್ಟು ಅಧಿಕ. ತೊಂಡೆಕಾಯಿಯಲ್ಲಿ 18 ಪಟ್ಟು ಹೆಚ್ಚು ಸೀಸದ ಅಂಶ ಕಂಡು ಬಂದಿದೆ. ಬೀನ್ಸ್ ನಲ್ಲಿ 9 ಪಟ್ಟು ಅಧಿಕ ಸೀಸದ ಅಂಶ ಕಂಡು ಬಂದಿದೆ.  ಹಸಿರೆಲೆಗಳು ಹಾಗೂ ಕ್ಯಾಬೇಜ್ ನಲ್ಲಿ ನಿಗದಿಪಡಿಸಿದ್ದಕ್ಕಿಂತ 5 ಪಟ್ಟು ಹೆಚ್ಚು ಸೀಸದ ಅಂಶ ಕಂಡು ಬಂದಿದೆ. ಸೌತೆಕಾಯಿ, ದಪ್ಪ ಮೆಣಸಿನಕಾಯಿ , ಹಾಗಲಕಾಯಿ, ಬೀಟ್ ರೂಟ್‌, ಬಜ್ಜಿ ಮೆಣಸಿನಕಾಯಿಯಲ್ಲೂ ಎಫ್‌ಎಸ್ಎಸ್ಎಐ ನಿಗದಿಪಡಿಸಿದ್ದಕಿಂತ ಹೆಚ್ಚಿನ ಪ್ರಮಾಣದ ಸೀಸ ಕಂಡು ಬಂದಿದೆ. 
ಕೋಲಾರ, ಚಿಕ್ಕಬಳ್ಳಾಪುರ, ನೆಲಮಂಗಲದ ಹೊಲಗಳಿಂದ ಮಣ್ಣಿನ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆ ನಡೆಸಲಾಗಿತ್ತು.  ಮಣ್ಣು ಕೂಡ ಕಲುಷಿತಗೊಂಡಿದೆ ಎಂದು ಪರೀಕ್ಷೆಯ ವರದಿ ಬಂದಿದೆ.  
ಬೇರೆ ಬೇರೆ ಮಾದರಿಯ 10 ತರಕಾರಿ ಮಾದರಿಗಳಲ್ಲಿ ಕ್ರಿಮಿನಾಶಕ ಅವಶೇಷಗಳು  ಕಂಡು ಬಂದಿದೆ.  ಉಳಿದ 60 ಮಾದರಿಗಳಲ್ಲಿ ನಿಗದಿಪಡಿಸಿದ್ದಕ್ಕಿಂತ ಕಡಿಮೆ ಅಂಶ ಕಂಡು  ಬಂದಿದೆ.  
ತರಕಾರಿಗಳಲ್ಲಿ ಕಾಣ ಬರುವ ಸೀಸದ ಅಂಶದಿಂದ ಮನುಷ್ಯರಲ್ಲಿ ಅನಾರೋಗ್ಯ ಸಮಸ್ಯೆ ಕಂಡು ಬರುತ್ತದೆ.  ಕಿಡ್ನಿ ಸಮಸ್ಯೆ, ಮೆದುಳು ಸಮಸ್ಯೆ ಕಂಡು ಬರುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ. 

vegetables_Photo



ಕೆ.ಸಿ.ವ್ಯಾಲಿ ಹಾಗೂ ಎಚ್‌.ಎನ್‌. ವ್ಯಾಲಿ ನೀರಿನಿಂದ ಸಮಸ್ಯೆ ಸೃಷ್ಟಿ

ಬೆಂಗಳೂರಿನ ಕೊಳಚೆ ನೀರು ಅನ್ನು 2 ಹಂತದಲ್ಲಿ ಸಂಸ್ಕರಿಸಿ, ಕೆ.ಸಿ.ವ್ಯಾಲಿ ಹಾಗೂ ಎಚ್‌.ಎನ್‌.ವ್ಯಾಲಿ ಯೋಜನೆಗಳ ಮೂಲಕ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಕೆರೆಗಳಿಗೆ ಹರಿಸಲಾಗುತ್ತೆ. ಈ ನೀರಿನಿಂದಲೇ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ರೈತರು ತರಕಾರಿ, ಹಣ್ಣು ಹಂಪಲು, ರೇಷ್ಮೆ ಬೆಳೆಯುತ್ತಿದ್ದಾರೆ. ಬೆಂಗಳೂರಿನ ಕೊಳಚೆ ನೀರು ಅನ್ನು 2 ಹಂತಗಳಲ್ಲಿ ಮಾತ್ರ ಸಂಸ್ಕರಿಸಿದರೇ, ಸಾಕಾಗುವುದಿಲ್ಲ . 2 ಹಂತಗಳಲ್ಲಿ ನೀರು ಸಂಸ್ಕರಣೆಯಿಂದ ನೀರಿನಲ್ಲಿ ಕೆಮಿಕಲ್ ಅಂಶ, ಭಾರಿ ಲೋಹದ ಅಂಶಗಳು ನೀರಿನಲ್ಲೇ ಉಳಿದುಕೊಳ್ಳುತ್ತಾವೆ. ಇವು ಭೂಮಿ ಸೇರಿದರೂ, ಅಪತ್ತು. ಜೊತೆಗೆ ಅಂತರ್ಜಲದ ನೀರು ಕೂಡ ಕಲುಷಿತವಾಗುತ್ತೆ. ಈ ನೀರಿನಿಂದ ಬೆಳೆಯುವ ತರಕಾರಿ ಕೂಡ ಕಲುಷಿತವಾಗುತ್ತೆ ಎಂದು ಬೆಂಗಳೂರಿನ ಐಐಎಸ್ಸಿ ವಿಜ್ಞಾನಿ ಡಾ.ರಾಮಚಂದ್ರ ಸರ್ಕಾರಕ್ಕೆ ಹಾಗೂ ಹೈಕೋರ್ಟ್ ಗೂ ವರದಿ ನೀಡಿದ್ದಾರೆ. 

3 ಹಂತಗಳಲ್ಲಿ  ಬೆಂಗಳೂರಿನ ಕೊಳಚೆ ನೀರು ಅನ್ನು  ಸಂಸ್ಕರಣೆ ಮಾಡಬೇಕೆಂದು ಬೆಂಗಳೂರಿನ ಐಐಎಸ್ಸಿ ವಿಜ್ಞಾನಿ ಡಾ.ರಾಮಚಂದ್ರ ಕೂಡ ಸರ್ಕಾರಕ್ಕೆ ವರದಿ ನೀಡಿದ್ದಾರೆ. ಹೈಕೋರ್ಟ್ ಗೂ ವರದಿ ನೀಡಿದ್ದಾರೆ. ಆದರೇ, ರಾಜ್ಯ ಸರ್ಕಾರವು ಕೊಳಚೆ ನೀರು ಅನ್ನು ಮೂರನೇ ಹಂತದಲ್ಲೂ ಸಂಸ್ಕರಿಸುವುದು ಸಾಧ್ಯವಿಲ್ಲ ಎಂದು ಹೇಳಿದೆ. ಕೆ.ಸಿ.ವ್ಯಾಲಿ ಹಾಗೂ ಎಚ್‌.ಎನ್‌. ವ್ಯಾಲಿ ನೀರಿನಿಂದ ತರಕಾರಿಗಳ ಇಳುವರಿ ಕೂಡ ಕುಸಿದಿದೆ. ತರಕಾರಿಗಳು ಗುಣಮಟ್ಟದಿಂದ ಕೂಡಿಲ್ಲ.

KC VALLEY 2ND STAGE02


ನ್ಯೂಸ್ ಫಸ್ಟ್ ವಾಹಿನಿಂದ ವಿಸ್ತೃತ ವರದಿ, ವಿಧಾನಸಭೆಯಲ್ಲಿ ಪ್ರತಿಧ್ವನಿ

ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಜನರು  ರೈತರು ಕೂಡ ಮೂಳೆ ನೋವು ಸೇರಿದಂತೆ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ನ್ಯೂಸ್ ಫಸ್ಟ್ 2023 ರಲ್ಲಿ ಗ್ರೌಂಡ್ ರಿಪೋರ್ಟ್ ಮಾಡಿತ್ತು.  ನ್ಯೂಸ್ ಫಸ್ಟ್ ವರದಿಯು ರಾಜ್ಯ ವಿಧಾನಸಭೆಯ ಅಧಿವೇಶನದಲ್ಲೂ ಪ್ರತಿಧ್ವನಿಸಿತ್ತು. ದೊಡ್ಡಬಳ್ಳಾಪುರ ಬಿಜೆಪಿ ಶಾಸಕ ಧೀರಜ್ ಮುನಿರಾಜ್ ಅಸೆಂಬ್ಲಿಯಲ್ಲಿ ಪ್ರಸ್ತಾಪಿಸಿ ಪ್ರಶ್ನೆ ಕೇಳಿದ್ದರು.  ಆಗ ರಾಜ್ಯದ ಸಣ್ಣ ನೀರಾವರಿ ಖಾತೆ ಸಚಿವ ಎನ್‌.ಎಸ್.ಬೋಸರಾಜ್ ಹಾಗೂ ಕಂದಾಯ ಸಚಿವ ಕೃಷ್ಣ ಭೈರೇಗೌಡ ಇಬ್ಬರೂ ಸದನದಲ್ಲಿ ಉತ್ತರ ನೀಡಿದ್ದರು. ಕೆ.ಸಿ.ವ್ಯಾಲಿ  ಹಾಗೂ ಎಚ್‌.ಎನ್‌. ವ್ಯಾಲಿ ಯೋಜನೆಯನ್ನು ಸಮರ್ಥಿಸಿಕೊಂಡಿದ್ದರು. ಆದರೇ, ಈಗ ಸಮಸ್ಯೆಯ ತೀವ್ರತೆಯ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ತಜ್ಞರೇ ಕನ್ನಡಿ ಹಿಡಿದಿದ್ದಾರೆ. ಲ್ಯಾಬ್ ವರದಿಗಳೇ ಕೆ.ಸಿ.ವ್ಯಾಲಿ ಹಾಗೂ ಎಚ್‌.ಎನ್‌. ವ್ಯಾಲಿ ನೀರಿನ ಗುಣಮಟ್ಟ, ಶುದ್ದತೆಗೆ ಕನ್ನಡಿ ಹಿಡಿದಿವೆ. 
ನ್ಯೂಸ್ ಫಸ್ಟ್ ಕೂಡ ಕೆ.ಸಿ.ವ್ಯಾಲಿ ಹಾಗೂ ಎಚ್‌.ಎನ್‌. ವ್ಯಾಲಿ ನೀರು ಅನ್ನು ಮೂರು ಹಂತದಲ್ಲಿ ಸಂಸ್ಕರಣೆ ಮಾಡಬೇಕೆಂದು ವರದಿ ಮಾಡಿತ್ತು. ಆದರೇ, ಸರ್ಕಾರ ಮೂರನೇ ಹಂತದ ನೀರು ಸಂಸ್ಕರಣೆಗೆ ಸಿದ್ದವಿಲ್ಲ. ಇದರಿಂದಲೇ ಬೆಂಗಳೂರಿಗೆ ಪೂರೈಕೆಯಾಗುವ ತರಕಾರಿಗಳಲ್ಲಿ ಸೀಸದ ಅಂಶ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತಿದೆ. ಇದು ಬೆಂಗಳೂರಿನ 1.4 ಕೋಟಿ ಜನರಲ್ಲಿ ಕಿಡ್ನಿ ವೈಫಲ್ಯ, ಮೆದುಳು ಸಮಸ್ಯೆ, ಮೂಳೆ ಸಮಸ್ಯೆ ಸೇರಿದಂತೆ ಅನಾರೋಗ್ಯಗಳಿಗೆ ಕಾರಣವಾಗಲಿದೆ ಎಂದು ಈಗ ಕೇಂದ್ರ ಮಾಲಿನ್ಯನಿಯಂತ್ರಣ ಮಂಡಳಿಯ ವರದಿಯೇ ಹೇಳುತ್ತಿದೆ. 
ಇನ್ನೂದರೂ ರಾಜ್ಯದ ಸಣ್ಣ ನೀರಾವರಿ ಇಲಾಖೆ ಹಾಗೂ ಬಿಡಬ್ಲ್ಯುಎಸ್ಎಸ್‌ಬಿ ಎಚ್ಚೆತ್ತುಕೊಂಡು ಕೆ.ಸಿ.ವ್ಯಾಲಿ ಹಾಗೂ ಎಚ್‌.ಎನ್. ವ್ಯಾಲಿ ಮೂಲಕ ಹರಿಸುತ್ತಿರು ನೀರು ಅನ್ನು ಮೂರು ಹಂತಗಳಲ್ಲಿ ಸಂಸ್ಕರಣೆ ಮಾಡಬೇಕು. ಇದಕ್ಕೆ ಹೆಚ್ಚೆಂದರೇ, ಒಂದು ಸಾವಿರ ಕೋಟಿ ರೂಪಾಯಿ ವೆಚ್ಚವಾಗಬಹುದು. 4  ಲಕ್ಷ ಕೋಟಿ ರೂಪಾಯಿ ಬಜೆಟ್ ಮಂಡಿಸುವ ರಾಜ್ಯ ಸರ್ಕಾರಕ್ಕೆ  ಬೆಂಗಳೂರಿನ 1.4 ಕೋಟಿ  ಜನರ ಆರೋಗ್ಯಕ್ಕಿಂತ ಒಂದು ಸಾವಿರ ಕೋಟಿ ರೂಪಾಯಿ ದೊಡ್ಡದ್ದಲ್ಲ. ಕೊಳಚೆ ನೀರು, ಕೊಳಚೆ ತರಕಾರಿ, ಮಾಲಿನ್ಯಯುತ ತರಕಾರಿಗಳಿಂದ ಜನರು ಅನಾರೋಗ್ಯಕ್ಕೆ ಈಡಾದರೇ  ರಾಜ್ಯ ಅಭಿವೃದ್ಧಿ ಹೊಂದಿಯೂ ಏನ್ ಪ್ರಯೋಜನ. ಈ ಬಗ್ಗೆ ಸಣ್ಣ ನೀರಾವರಿ ಇಲಾಖೆ  ಹಾಗೂ ಸಿಎಂ ಸಿದ್ದರಾಮಯ್ಯ ಗಂಭೀರವಾಗಿ ಜನರ ಆರೋಗ್ಯದ ದೃಷ್ಟಿಯಿಂದ ಆಲೋಚಿಸಬೇಕು. ಸಮಸ್ಯೆಗೆ ಸೂಕ್ತ ಪರಿಹಾರವನ್ನು ಬೆಂಗಳೂರಿನ ಕೊಳಚೆ ನೀರು  ಅನ್ನು 3 ಹಂತಗಳಲ್ಲಿ ಸಂಸ್ಕರಿಸುವ ಮೂಲಕ ನೀಡಬೇಕು ಎನ್ನುವುದು ಕೋಲಾರ, ಚಿಕ್ಕಬಳ್ಳಾಪುರ ರೈತರ ಒತ್ತಾಯ  ಹಾಗೂ ನ್ಯೂಸ್ ಫಸ್ಟ್ ಕಳಕಳಿ ಕೂಡ ಹೌದು. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

KC VALLEY 2ND STAGE LAUNCH Vegetables pollutted CENTRAL POLLUTION CONTROL BOARD REPORT ON VEGETABLES Vegetables pollutted by pollutted water
Advertisment