ಕಲಬುರಗಿ ‘ಪ್ರಬುದ್ಧ ಅಕಾಡೆಮಿ’ಯಲ್ಲಿ ಶಿಷ್ಯವೇತನಕ್ಕಾಗಿ ವಿದ್ಯಾರ್ಥಿಗಳ ಪ್ರತಿಭಟನೆ: ಗೊಂದಲಕ್ಕೆ ಸರ್ಕಾರದ ಸ್ಪಷ್ಟನೆ ಏನು?

ಕಲ್ಯಾಣ ಕರ್ನಾಟಕ ಭಾಗದ ಐಎಎಸ್ ಮತ್ತು ಕೆಎಎಸ್ ಆಕಾಂಕ್ಷಿಗಳಿಗೆ ಅನುಕೂಲವಾಗಲೆಂದು ಸರ್ಕಾರ ಕಲಬುರಗಿಯಲ್ಲಿ ಸ್ಥಾಪಿಸಿರುವ 'ಪ್ರಬುದ್ಧ ಅಕಾಡೆಮಿ' ಸದ್ಯ ಗೊಂದಲದ ಗೂಡಾಗಿದೆ. ಶಿಷ್ಯವೇತನ, ವಸತಿ ಮತ್ತು ಮೂಲಸೌಕರ್ಯಗಳ ಕೊರತೆ ಖಂಡಿಸಿ ಅಭ್ಯರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದ್ದಾರೆ.

author-image
Ganesh Kerekuli
kalaburgi (1)
Advertisment

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ಐಎಎಸ್ ಮತ್ತು ಕೆಎಎಸ್ ಆಕಾಂಕ್ಷಿಗಳಿಗೆ ಅನುಕೂಲವಾಗಲೆಂದು ಸರ್ಕಾರ ಕಲಬುರಗಿಯಲ್ಲಿ ಸ್ಥಾಪಿಸಿರುವ 'ಪ್ರಬುದ್ಧ ಅಕಾಡೆಮಿ' (ಪರೀಕ್ಷಾ ಪೂರ್ವ ತರಬೇತಿ ಕೇಂದ್ರ - PETC) ಸದ್ಯ ಗೊಂದಲದ ಗೂಡಾಗಿದೆ. ಶಿಷ್ಯವೇತನ (Stipend), ವಸತಿ ಮತ್ತು ಮೂಲಸೌಕರ್ಯಗಳ ಕೊರತೆ ಖಂಡಿಸಿ ಅಭ್ಯರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸುತ್ತಿದ್ದರೆ ಇತ್ತ ಸರ್ಕಾರ ಈ ಕುರಿತು ಸ್ಪಷ್ಟನೆ ನೀಡಿದೆ.

ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವೇನು?

ಕಲಬುರಗಿ ನಗರದ ಹೊರವಲಯದ ಜೇವರ್ಗಿ ರಸ್ತೆಯ ವಾಜಪೇಯಿ ಬಡಾವಣೆಯಲ್ಲಿರುವ ಪ್ರಬುದ್ಧ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿರುವ ಅಭ್ಯರ್ಥಿಗಳು ಕಳೆದ ಕೆಲವು ದಿನಗಳಿಂದ ತರಗತಿಗಳನ್ನು ಬಹಿಷ್ಕರಿಸಿ ಧರಣಿ ನಡೆಸುತ್ತಿದ್ದಾರೆ. ಅವರ ಪ್ರಮುಖ ದೂರುಗಳು ಹೀಗಿವೆ. 

ಶಿಷ್ಯವೇತನದ ಗೊಂದಲ: ಕೆಇಎ (KEA) ಹೊರಡಿಸಿದ್ದ ಅಧಿಸೂಚನೆಯಲ್ಲಿ ಅಭ್ಯರ್ಥಿಗಳಿಗೆ ಮಾಸಿಕ ಶಿಷ್ಯವೇತನ ನೀಡುವ ಬಗ್ಗೆ ಉಲ್ಲೇಖಿಸಲಾಗಿತ್ತು. ಆದರೆ ಈಗ ತರಬೇತಿ ಕೇಂದ್ರದಲ್ಲಿ ಶಿಷ್ಯವೇತನ ನೀಡಲು ಸಾಧ್ಯವಿಲ್ಲ ಎಂದು ಹೇಳಲಾಗುತ್ತಿದೆ. ಇದು ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಇದನ್ನೂ ಓದಿ:5 ಲಕ್ಷ ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕ ಚಂದ್ರು ಲಮಾಣಿ! ‘ಲೋಕಾ’ ಬಲೆಗೆ ಬಿದ್ದಿದ್ದು ಹೇಗೆ?

kalaburgi (2)

ಮೂಲಸೌಕರ್ಯ ಕೊರತೆ: ಅಕಾಡೆಮಿಯಲ್ಲಿ 24x7 ಗ್ರಂಥಾಲಯ ವ್ಯವಸ್ಥೆ ಇಲ್ಲ. ಕುಡಿಯುವ ನೀರಿನ ಸಮಸ್ಯೆ ಇದೆ ಹಾಗೂ ಕ್ಯಾಂಟೀನ್ ಸೌಲಭ್ಯ ಇನ್ನೂ ಸರಿಯಾಗಿ ಆರಂಭವಾಗಿಲ್ಲ.

ಸಾರಿಗೆ ಸಮಸ್ಯೆ: ಅಕಾಡೆಮಿ ನಗರದ ಹೊರವಲಯದಲ್ಲಿರುವುದರಿಂದ ಇಲ್ಲಿಗೆ ತಲುಪಲು ಸರಿಯಾದ ಬಸ್ ವ್ಯವಸ್ಥೆ ಇಲ್ಲ. ಬೆಳಿಗ್ಗೆ ಮತ್ತು ಸಂಜೆ ಒಂದೇ ಬಸ್ ಇದ್ದು, ಅದು ತಪ್ಪಿದರೆ ಆಟೋಗಳಿಗೆ ದುಬಾರಿ ಹಣ ತೆರಬೇಕಾದ ಪರಿಸ್ಥಿತಿ ಇದೆ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.

ಹಾಜರಾತಿ ಕುಸಿತ: ಆಯ್ಕೆಯಾದ 500ಕ್ಕೂ ಹೆಚ್ಚು ಅಭ್ಯರ್ಥಿಗಳ ಪೈಕಿ ಮೂಲಸೌಕರ್ಯಗಳ ಕೊರತೆಯಿಂದಾಗಿ ಕೇವಲ 40-50 ವಿದ್ಯಾರ್ಥಿಗಳು ಮಾತ್ರ ತರಗತಿಗೆ ಹಾಜರಾತಾಗುತ್ತಿದ್ದಾರೆ ಎಂಬುದು ಅಭ್ಯರ್ಥಿಗಳ ವಾದ.

ಸರ್ಕಾರದ ಸ್ಪಷ್ಟನೆ ಏನು?

ಈ ವಿವಾದಕ್ಕೆ ಸಂಬಂಧಿಸಿದಂತೆ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು ಮತ್ತು ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿಗಳ ಕಚೇರಿ ಸ್ಪಷ್ಟನೆ ನೀಡಿದ್ದು, ವಾಸ್ತವ ಸ್ಥಿತಿಯನ್ನು ವಿವರಿಸಿದೆ. 

ಉಚಿತ ತರಬೇತಿ vs ಶಿಷ್ಯವೇತನ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಹೊರಡಿಸಿದ ಅಧಿಸೂಚನೆಯಲ್ಲಿ ಶಿಷ್ಯವೇತನದ ಕಾಲಂ ಇದ್ದದ್ದು ನಿಜ. ಆದರೆ, ಕಲಬುರಗಿ ಜಿಲ್ಲಾಧಿಕಾರಿಗಳು ದಿನಾಂಕ 16-08-2025 ರಂದು ಹೊರಡಿಸಿದ ತಿದ್ದುಪಡಿ ಆದೇಶದನ್ವಯ, ಈ ಕೇಂದ್ರದಲ್ಲಿ ಊಟ ಮತ್ತು ವಸತಿ ಬದಲಾಗಿ ಸಂಪೂರ್ಣವಾಗಿ ಉಚಿತ ತರಬೇತಿ ಯನ್ನು ಮಾತ್ರ ನೀಡಲಾಗುತ್ತಿದೆ. ಹೀಗಾಗಿ, ಇಲ್ಲಿನ ಅಭ್ಯರ್ಥಿಗಳಿಗೆ ಯಾವುದೇ ಶಿಷ್ಯವೇತನ ಅಥವಾ ವಸತಿ ವ್ಯವಸ್ಥೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಇದನ್ನೂ ಓದಿ: ಡಿಜಿಟಲ್, ಡೆಲಿವರಿ ಕ್ರಾಂತಿಗೆ ‘ಪುಟ್ಟ EV’ಗಳೇ ರಿಯಲ್ ಗೇಮ್ ಚೇಂಜರ್​! EV ಹೇಗೆ ದೇಶದ ಆರ್ಥಿಕತೆಯ ರೂಪುರೇಷೆ ಬದಲಿಸ್ತಿವೆ?

kalaburgi

ಹಾಜರಾತಿ ಕಡಿಮೆ ಇರುವುದೇಕೆ? ಮಾಧ್ಯಮಗಳಲ್ಲಿ ವರದಿಯಾದಂತೆ ವಿದ್ಯಾರ್ಥಿಗಳು ಆಸಕ್ತಿ ಕಳೆದುಕೊಂಡಿದ್ದರಿಂದ ಹಾಜರಾತಿ ಕಡಿಮೆಯಾಗಿಲ್ಲ. ಬದಲಾಗಿ, ಫೆಬ್ರವರಿ 22, 2026ರಂದು ಕೆಇಎ ನಡೆಸುವ ಎಸ್‌ಡಿಎ (SDA) ಪರೀಕ್ಷೆಗಳು ಇರುವುದರಿಂದ, ಬಹುತೇಕ ಅಭ್ಯರ್ಥಿಗಳು ಪರೀಕ್ಷಾ ತಯಾರಿಗಾಗಿ ರಜೆ ಪಡೆದು ಸ್ವ-ಅಧ್ಯಯನ ನಡೆಸುತ್ತಿದ್ದಾರೆ. ಪರೀಕ್ಷೆ ಮುಗಿದ ನಂತರ ಹಾಜರಾತಿ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಮಸ್ಯೆ ಪರಿಹಾರಕ್ಕೆ ಭೇಟಿ

ವಿದ್ಯಾರ್ಥಿಗಳ ಪ್ರತಿಭಟನೆ ಹಿನ್ನೆಲೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಮತ್ತು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಪ್ರೀತಿ ದೊಡ್ಡಮನಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇತರೆಡೆ ಶಿಷ್ಯವೇತನ, ಇಲ್ಲಿಲ್ಲವೇಕೆ?

ಸರ್ಕಾರದ ಇತರೆ ಯೋಜನೆಗಳಾದ ಐಜಿಸಿಸಿಡಿ (IGCCD) ಅಡಿಯಲ್ಲಿ ಬೆಂಗಳೂರಿನಲ್ಲಿ ತರಬೇತಿ ಪಡೆಯುವವರಿಗೆ ಮಾಸಿಕ ₹10,000 ಹಾಗೂ ಇತರೆ ಜಿಲ್ಲೆಗಳಲ್ಲಿ ₹8,000 ಶಿಷ್ಯವೇತನ ನೀಡಲಾಗುತ್ತಿದೆ. ಆದರೆ, ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಗಳಿಗಾಗಿ ವಿಶೇಷವಾಗಿ ಆರಂಭಿಸಲಾದ ಈ ಕೇಂದ್ರದಲ್ಲಿ ಶಿಷ್ಯವೇತನ ಇಲ್ಲದಿರುವುದು ತಾರತಮ್ಯ ಎಂಬುದು ವಿದ್ಯಾರ್ಥಿಗಳ ಅಳಲು.

ಒಟ್ಟಿನಲ್ಲಿ, ಬಡ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಜ್ಜಾಗಲು ಅನುಕೂಲವಾಗಬೇಕಿದ್ದ 'ಪ್ರಬುದ್ಧ ಅಕಾಡೆಮಿ', ಸೌಲಭ್ಯಗಳ ಕೊರತೆ ಮತ್ತು ನಿಯಮಗಳ ಗೊಂದಲದಿಂದಾಗಿ ಸುದ್ದಿಯಲ್ಲಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಮೂಲಸೌಕರ್ಯ ಸಮಸ್ಯೆಗಳನ್ನು ಬಗೆಹರಿಸಿ, ವಿದ್ಯಾರ್ಥಿಗಳ ಗೊಂದಲ ನಿವಾರಿಸಬೇಕಿದೆ.

ಇದನ್ನೂ ಓದಿ:ಭಾರತ- ಬ್ರೆಜಿಲ್ ದ್ವಿಪಕ್ಷೀಯ ವ್ಯಾಪಾರ 5 ವರ್ಷದಲ್ಲಿ 20 ಬಿಲಿಯನ್ ಡಾಲರ್ ದಾಟುವ ವಿಶ್ವಾಸ- ಪ್ರಧಾನಿ ಮೋದಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Kalyana Karnataka IAS Training Centre Kalaburagi
Advertisment