/newsfirstlive-kannada/media/media_files/2025/08/23/rains_new-2025-08-23-08-49-01.jpg)
ರಾಜ್ಯದಲ್ಲಿ ಮಳೆ ಅಬ್ಬರ ಮುಂದುವರೆದಿದೆ. ನಿರಂತರವಾಗಿ ಸುರಿಯುತ್ತಿರೋ ಮಳೆಯಿಂದಾಗಿ ಒಂದೆಡೆ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ನದಿಗಳ ಭೋರ್ಗರೆತಕ್ಕೆ ಹಲವು ಭಾಗದಲ್ಲಿ ಅವಾಂತರಗಳು ಸೃಷ್ಟಿಯಾಗ್ಬಿಟ್ಟಿವೆ. ಎಲ್ಲೆಲ್ಲಿ ಏನ್ ಏನ್ ಆಗಿದೆ ಅನ್ನೋ ಡೀಟೇಲ್ಸ್ ಇಲ್ಲಿದೆ.
ಮಹಾ ಮಳೆಯಿಂದಾಗಿ ಕೃಷ್ಣ ನದಿ ಮತ್ತು ಅದರ ಉಪನದಿಗಳ ತೀರದಲ್ಲಿ ಪ್ರವಾಹದ ಭೀತಿ ಸೃಷ್ಟಿಯಾಗಿದೆ. ಧಾರಾಕಾರ ಮಳೆಯಿಂದ ಡ್ಯಾಂಗಳೆಲ್ಲ ಭರ್ತಿ ಆಗಿದ್ದು, ನದಿಗೆ ಅಪಾರ ಪ್ರಮಾಣ ನೀರು ಬಿಡುಗಡೆ ಮಾಡಲಾಗಿದ್ದು, ನೆರೆ ಪರಿಸ್ಥಿತಿ ನಿರ್ಮಾಣವಾಗಿದೆ.
ಬಾಗಲಕೋಟೆ: ಮಹಾರಾಷ್ಟ್ರ.. ಬೆಳಗಾವಿ ಭಾಗದಲ್ಲಿ ನಿರಂತರ ಮಳೆಯಿಂದ ಹಿಡಕಲ್ ಜಲಾಶಯ ಭರ್ತಿ ಹಂತ ತಲುಪಿದೆ. ಹೀಗಾಗಿ ಘಟಪ್ರಭಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಿದ್ದು, ಮುಧೋಳ-ಯಾದವಾಡ ಸಂಪರ್ಕ ಸೇತುವೆ ಕಡಿತಗೊಂಡಿದೆ. ಡ್ರೋನ್ ಕ್ಯಾಮೆರಾದಲ್ಲಿ ನದಿ ಬೋರ್ಗರೆತ ಸೆರೆ ಹಿಡಿಯಲಾಗಿದೆ. ಘಟಪ್ರಭಾ ನದಿ ಪ್ರವಾಹ ಭೀತಿ ಹಿನ್ನೆಲೆ ಮುಧೋಳದ ಮಿರ್ಜಿ ಗ್ರಾಮದಲ್ಲಿ ಕಾಳಜಿ ಕೇಂದ್ರಕ್ಕೆ ಒಟ್ಟು 14 ಕುಟುಂಬಗಳನ್ನ ಸ್ಥಳಾಂತರಿಸಲಾಗಿದೆ.
ಕೊಪ್ಪಳ ಜಿಲ್ಲೆಯ ಮುನಿರಾಬಾದ್ ತುಂಗಭದ್ರಾ ಜಲಾಶಯದಲ್ಲಿ 1 ಲಕ್ಷಕ್ಕೂ ಹೆಚ್ಚು ಕ್ಯೂಸೆಕ್ಸ್ ನೀರಿನ ಒಳ ಹರಿವಿದ್ದು, ನದಿಗೆ ನೀರು ಹರಿಬಿಡಲಾಗಿದೆ. ಕಾರಟಗಿ ತಾಲೂಕಿನ ಬೆನ್ನೂರು ಗ್ರಾಮದ ನದಿ ಪಾತ್ರದ ಹೊಳೆ ಬಸವೇಶ್ವರ ದೇವಸ್ಥಾನ ಭಾಗಶಃ ಮುಳುಗಡೆಯಾಗಿದೆ.
ಭೀಮಾ ನದಿಗೆ ಅಡ್ಡಲಾಗಿ ಕಟ್ಟಿರುವ ಬ್ರಿಡ್ಜ್ಗಳು ಮುಳುಗಡೆ!
ಉಜಿನಿ ಜಲಾಶಯದಿಂದ ಭೀಮಾ ನದಿಗೆ ನೀರು ಬಿಡುಗಡೆ ಮಾಡಲಾಗಿದೆ. ಭೀಮಾ ನದಿಗೆ ಅಡ್ಡಲಾಗಿ ಕಟ್ಟಿರುವ ಬಾಂದಾರ್ ಕಂ ಬ್ರಿಡ್ಜ್ಗಳು ಮುಳುಗಡೆಯಾಗಿದ್ದು, ಚಡಚಣ ಹಾಗೂ ಇಂಡಿ ತಾಲೂಕಿನಲ್ಲಿ ಪ್ರವಾಹ ಭೀತಿ ಎದುರಾಗಿದೆ.
ಶಾಲೆಯ ಸೀಲಿಂಗ್ ಕುಸಿದು ಬಿದ್ದು ವಿದ್ಯಾರ್ಥಿಗಳಿಗೆ ಗಾಯ!
ಕಲಬುರಗಿ: ನಿರಂತರ ಮಳೆಗೆ ಸರ್ಕಾರಿ ಶಾಲೆಯ ಸೀಲಿಂಗ್ ಕುಸಿದು ಬಿದ್ದ ಪರಿಣಾಮ ಮೂವರು ವಿದ್ಯಾರ್ಥಿಗಳು ಗಾಯಗೊಂಡ ಘಟನೆ ಸೇಡಂ ತಾಲೂಕಿನ ಮಲ್ಕಪಲ್ಲಿ ಗ್ರಾಮದಲ್ಲಿ ನಡೆದಿದೆ. ತಕ್ಷಣವೇ ಗುರುಮಿಠಕಲ್ ತಾಲೂಕು ಆಸ್ಪತ್ರೆಗೆ ಗಾಯಗೊಂಡ ಮಕ್ಕಳನ್ನ ರವಾನಿಸಿದ್ದು, ಅದೃಷ್ಟವಶಾತ್ ಪ್ರಾಣಾಪಯದಿಂದ ಪಾರಾಗಿದ್ದಾರೆ.
ಸೊನ್ನಾ ಬ್ಯಾರೇಜ್‌ನಿಂದ 1.80 ಲಕ್ಷ ಕ್ಯೂಸೆಕ್ ನೀರು ರಿಲೀಸ್!
ಮಹಾರಾಷ್ಟ್ರದಲ್ಲಿ ಅಬ್ಬರದ ಮಳೆಯಾಗ್ತಿದ್ದು, ಅದರ ಎಫೆಕ್ಟ್ ಕಲಬುರಗಿಗೆ ತಟ್ಟಿದೆ. ಅಫಜಲಪುರ ತಾಲೂಕಿನ ಸೊನ್ನಾ ಬ್ಯಾರೇಜ್ ತುಂಬಿದ್ದು, 26 ಗೇಟ್ ಮೂಲಕ ಭೀಮಾ ನದಿಗೆ 1 ಲಕ್ಷ 80 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದ್ದು, ನದಿ ತೀರದ ಪ್ರದೇಶದಲ್ಲಿ ನೆರೆ ಆತಂಕ ಸೃಷ್ಟಿಯಾಗಿದೆ.
ಸೇತುವೆ ಮೇಲಿಂದ ನದಿಗೆ ಜಿಗಿದು ಕೊಚ್ಚಿ ಹೋದ ವ್ಯಕ್ತಿ
ಗದಗ: ಅಪಾಯಮಟ್ಟ ಮೀರಿ ಹರಿಯುತ್ತಿರುವ ಮಲಪ್ರಭಾ ನದಿಗೆ ವ್ಯಕ್ತಿಯೋರ್ವ ಹೊಳೆ ಆಲೂರ ಸೇತುವೆ ಮೇಲಿಂದ ನದಿಗೆ ಜಿಗಿದು ಕೊಚ್ಚಿ ಹೋಗಿದ್ದಾನೆ. ಬ್ರಿಡ್ಜ್ ಮೇಲೆ ಬೈಕ್ ನಿಲ್ಲಿಸಿ ಜಿಗಿದಿರುವ ಶಂಕೆ ವ್ಯಕ್ತವಾಗಿದೆ.
ಮಳೆಯ ಅವಾಂತರಗಳಿಂದ ಜನರಿಗೆ ಜಲ ಸಂಕಷ್ಟ ಶುರುವಾಗಿದೆ. ಬೆಳೆಹಾನಿಯಿಂದ ರೈತರಿಗೆ ಕೆಲವೆಡೆ ನಷ್ಟವೂ ಆಗ್ತಿದೆ. ಒಟ್ಟಾರೆ ಸಾಕಷ್ಟು ಅವಾಂತರಗಳನ್ನ ವರುಣ ಸೃಷ್ಟಿಸಿದ್ದಾನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ