/newsfirstlive-kannada/media/media_files/2025/11/10/maluru-vote-recounting-2025-11-10-17-46-56.jpg)
K.Y. ನಂಜೇಗೌಡ ವರ್ಸಸ್ ಕೆ.ಎಸ್.ಮಂಜುನಾಥಗೌಡ
ನಾಳೆ ಕೋಲಾರ ಜಿಲ್ಲೆಯ ಮಾಲೂರು ವಿಧಾನಸಭಾ ಕ್ಷೇತ್ರಕ್ಕೆ 2023 ರಲ್ಲಿ ನಡೆದ ಚುನಾವಣೆಯ ಮತಗಳ ಮರು ಎಣಿಕೆ ನಡೆಯಲಿದೆ. ಮಾಲೂರು ಕ್ಷೇತ್ರದ ಮತಗಳನ್ನು ಮರು ಎಣಿಕೆ ಮಾಡಬೇಕೆಂದು ಹೈಕೋರ್ಟ್ ಆದೇಶ ನೀಡಿತ್ತು. ಆ ಆದೇಶವನ್ನು ಸುಪ್ರೀಂಕೋರ್ಟ್ ಕೂಡ ಎತ್ತಿ ಹಿಡಿದಿದೆ. ಇದರಿಂದಾಗಿ ಈಗ ನಾಳೆ ಮಾಲೂರು ವಿಧಾನಸಭಾ ಕ್ಷೇತ್ರದ ಮತಗಳನ್ನು ಮರು ಎಣಿಕೆ ಮಾಡಲು ಕೋಲಾರ ಜಿಲ್ಲಾಡಳಿತ ಸಿದ್ದತೆ ಮಾಡಿಕೊಂಡಿದೆ. ಕೋಲಾರದ ಟಕಮದಲ್ಲಿರುವ ತೋಟಗಾರಿಕಾ ಮಹಾವಿದ್ಯಾಲಯದಲ್ಲಿ ಮತಗಳ ಮರು ಎಣಿಕೆ ನಡೆಯಲಿದೆ. ಮರು ಮತಎಣಿಕೆಗೆ ಉಪವಿಭಾಗಾಧಿಕಾರಿ ಡಾ.ಎಚ್.ಪಿ.ಎಸ್. ಮೈತ್ರಿ ಅವರನ್ನು ಚುನಾವಣಾಧಿಕಾರಿಯಾಗಿ ನೇಮಕ ಮಾಡಲಾಗಿದೆ. ಇನ್ನೂ ಕೋಲಾರ, ಬಂಗಾರಪೇಟೆ, ಶ್ರೀನಿವಾಸಪುರ, ಮುಳಬಾಗಿಲು ತಹಸೀಲ್ದಾರ್ ಗಳನ್ನು ಹೆಚ್ಚುವರಿ ಸಹಾಯಕ ಚುನಾವಣಾಧಿಕಾರಿಗಳಾಗಿ ನೇಮಿಸಲಾಗಿದೆ. ಜಿಲ್ಲಾಧಿಕಾರಿ ಎಂ.ಆರ್.ರವಿ ಸಿದ್ದತೆಗಳನ್ನು ಪರಿಶೀಲಿಸಿದ್ದಾರೆ.
ಇನ್ನೂ ನಾಳೆ ನಡೆಯುವ ಮರು ಮತ ಎಣಿಕೆಗೆ ಚುನಾವಣಾ ವೀಕ್ಷಕರಾಗಿ ಉತ್ತರ ಪ್ರದೇಶದ ಐಎಎಸ್ ಅಧಿಕಾರಿ ಪ್ರಭು ನಾರಾಯಣ್ ಸಿಂಗ್ ಅವರನ್ನು ಚುನಾವಣಾ ಆಯೋಗ ನೇಮಿಸಿದೆ.
1,650 ಕ್ಕೂ ಹೆಚ್ಚು ಅಂಚೆ ಮತಗಳಿದ್ದು, ನಾಲ್ಕು ಟೇಬಲ್ ಗಳಲ್ಲಿ ಅಂಚೆ ಮತಗಳನ್ನು ಎಣಿಕೆ ಮಾಡಲಾಗುತ್ತೆ. ಪ್ರತಿ ಟೇಬಲ್ ನಲ್ಲೂ 500 ಅಂಚೆ ಮತಗಳನ್ನು ಎಣಿಕೆ ಮಾಡಲಾಗುತ್ತೆ. ಪ್ರತಿ ಟೇಬಲ್ ಗೂ ಓರ್ವ ತಹಸೀಲ್ದಾರ್ ರನ್ನು ನೇಮಿಸಲಾಗಿದೆ.
ಇವಿಎಂ ಮತಗಳನ್ನು 14 ಟೇಬಲ್ ಗಳಲ್ಲಿ ಎಣಿಕೆ ಮಾಡಲಾಗುತ್ತೆ. ಪ್ರತಿ ಟೇಬಲ್ ಗೆ ಓರ್ವ ಕೌಂಟಿಂಗ್ ಸೂಪರ್ ವೈಸರ್ ಮತ್ತು ಸಹಾಯಕ ಸಿಬ್ಬಂದಿ ಇರುತ್ತಾರೆ.
2023ರ ವಿಧಾನಸಭಾ ಚುನಾವಣೆಯಲ್ಲಿ ಮಾಲೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ವೈ.ನಂಜೇಗೌಡ 248 ಮತಗಳಿಂದ ಬಿಜೆಪಿ ಅಭ್ಯರ್ಥಿ ಮಂಜುನಾಥ್ ಗೌಡ ಅವರನ್ನು ಸೋಲಿಸಿ ಆಯ್ಕೆಯಾಗಿದ್ದರು. ಆದರೇ, ಮತ ಎಣಿಕೆಯಲ್ಲಿ ಲೋಪವಾಗಿದೆ ಎಂದು ಬಿಜೆಪಿ ಅಭ್ಯರ್ಥಿ ಮಂಜುನಾಥ್ ಗೌಡ ಹೈಕೋರ್ಟ್ ಮೆಟ್ಟಿಲೇರಿದ್ದರು. ಹೀಗಾಗಿ ಹೈಕೋರ್ಟ್ ಮರು ಮತ ಎಣಿಕೆಗೆ ಆದೇಶ ನೀಡಿದೆ.
ಹೈಕೋರ್ಟ್ ಆದೇಶವನ್ನು ಹಾಲಿ ಶಾಸಕ ಕೆ.ವೈ.ನಂಜೇಗೌಡ ಸುಪ್ರೀಂಕೋರ್ಟ್ ನಲ್ಲಿ ಪ್ರಶ್ನಿಸಿದ್ದರು. ಸುಪ್ರೀಂಕೋರ್ಟ್, ಶಾಸಕ ಸ್ಥಾನದಿಂದ ನಂಜೇಗೌಡರ ಆಯ್ಕೆ ಅಸಿಂಧುಗೊಳಿಸಿದ್ದ ಹೈಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ನೀಡಿತ್ತು. ಆದರೇ, ಸುಪ್ರೀಂಕೋರ್ಟ್ ಕೂಡ ಮತಗಳ ಮರು ಎಣಿಕೆ ನಡೆಯಬೇಕೆಂದು ಆದೇಶ ನೀಡಿತ್ತು.
ಬಿಜೆಪಿಯಿಂದ ಜಿಲ್ಲಾಧಿಕಾರಿ ಭೇಟಿ, ನಿಷ್ಪಕ್ಷಪಾತ ಮರು ಮತ ಎಣಿಕೆಗೆ ಮನವಿ
ಮಾಲೂರು ವಿಧಾನಸಭಾ ಕ್ಷೇತ್ರದ ಮರು ಮತಎಣಿಕೆ ಹಿನ್ನಲೆಯಲ್ಲಿ ಇಂದು ಬಿಜೆಪಿ ನಾಯಕರ ನಿಯೋಗ ಜಿಲ್ಲಾಧಿಕಾರಿ ಎಂ.ಆರ್.ರವಿ ಅವರನ್ನು ಭೇಟಿಯಾಗಿ ನಿಷ್ಪಕ್ಷಪಾತವಾಗಿ ನಾಳೆ ಮರು ಮತ ಎಣಿಕೆ ಮಾಡಬೇಕೆಂದು ಮನವಿ ಮಾಡಿದೆ.
ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಕೇಶವಪ್ರಸಾದ್, ಮಾಜಿ ಶಾಸಕ ಮಂಜುನಾಥಗೌಡ ಸೇರಿ ಹಲವು ಮುಖಂಡರು ಜಿಲ್ಲಾಧಿಕಾರಿಯನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.
ಕಳೆದ ಫಲಿತಾಂಶ ಕುರಿತು ನಮಗೆ ಸಾಕಷ್ಟು ಅನುಮಾನಗಳಿವೆ. ಹಾಗಾಗಿ ನಾವು ನ್ಯಾಯಾಲಯದಲ್ಲಿ ಪ್ರಾರ್ಥನೆ ಮಾಡಿದ್ದೇವೆ. ಎಲ್ಲಾ ಚುನಾವಣೆ ಕ್ಯಾಮರಾ ಕಣ್ಗಾವಲಿನಲ್ಲಿ ನಡೆಯುತ್ತೆ. ಆದ್ರೆ ಈ ಮತ ಎಣಿಕೆ ವಿಡಿಯೋನೇ ಇಲ್ಲ. ಕೇವಲ ಕೆಲವೇ ವಿವಿ ಪ್ಯಾಟ್ ಗಳನ್ನ ಎಣಿಕೆ ಮಾಡಲಾಗಿದೆ. ಹಾಗಾಗಿ ವಿವಿ ಪ್ಯಾಟ್ ಸೇರಿ ಇವಿಎಂ ಎಣಿಕೆ ಮಾಡುವಂತೆ ಮನವಿ ಮಾಡಲಾಗಿದೆ. ಅದರಂತೆ ಡಿಸಿ ಅವರು ಸಹ ಎಣಿಕೆ ಮಾಡುವ ಭರವಸೆ ನೀಡಿದ್ದಾರೆ. ಸರ್ಕಾರ ಯಾವುದೆ ಕಾರಣಕ್ಕೂ ಮೂಗು ತೂರಿಸಬಾರದು. ನ್ಯಾಯಾಂಗ ಮತ್ತು ಕಾರ್ಯಾಂಗ ತನ್ನ ಕೆಲಸ ಮಾಡಲಿ. ಅದರಂತೆ ನಿಷ್ಪಕ್ಷಪಾತವಾಗಿ ಮರು ಮತ ಎಣಿಕೆ ಆಗಬೇಕು ಅನ್ನೋ ಬೇಡಿಕೆ ಇಡಲಾಗಿದೆ. ಯಾವುದೆ ಪಕ್ಷಪಾತ ಮಾಡದೆ ಮರು ಎಣಿಕೆ ಮಾಡಲಿ. ಒಂದು ವೇಳೆ ಒತ್ತಡ ಹಾಕಿದ್ರೆ ನಾವು ಸಹ ಬೇರೆ ರೀತಿ ಒತ್ತಡ ಹಾಕಬೇಕಾಗುತ್ತದೆ. ಒಂದು ವೇಳೆ ಇವಿಎಂ ಓಪನ್ ಆಗಿದ್ರೆ, ಸೀಲ್ ಓಪನ್ ಆಗಿದ್ರೆ, ಓಟ್ ಚೋರಿ ಅಭಿಯಾನ ಮಾಡುತ್ತಿರುವ ಕಾಂಗ್ರೆಸ್ ಗೆ ಮುಖಭಂಗವಾಗಲಿದೆ ಎಂದು ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us