/newsfirstlive-kannada/media/media_files/2025/08/05/bhoomi-surakasha-yojana-2025-08-05-20-19-47.jpg)
ಭೂಮಿ ದಾಖಲೆಗಳಲ್ಲಿ ನಕಲಿ ಎಂಟ್ರಿಗಳು ಹಾಗೂ ಸುಳ್ಳು ದಾಖಲೆಗಳು ಸೃಷ್ಟಿ ಆಗುವುದನ್ನು ತಡೆಯಲು ಭೂ ದಾಖಲೆಗಳ ಡಿಜಿಟಲೀಕರಣ ಮಹತ್ವದ ಹೆಜ್ಜೆಯಾಗಿದೆ ಎಂದು ರಾಜ್ಯದ ಕಂದಾಯ ಸಚಿವರಾದ ಕೃಷ್ಣಭೈರೇಗೌಡ ಅವರು ತಿಳಿಸಿದರು.
ಇಂದು ನಗರದ ಜಿಲ್ಲಾಧಿಕಾರಿ ಕಛೇರಿಯಲ್ಲಿ ಕಂದಾಯ ಇಲಾಖೆ ವತಿಯಿಂದ ಭೂಮಿಯ ದಾಖಲೆಗಳನ್ನು ಡಿಜಿಟಲೀಕರಿಸುವ "ಭೂ ಸುರಕ್ಷಾ ಯೋಜನೆ" ಗೆ ಚಾಲನೆ ನೀಡಿ ಅವರು ಮಾತನಾಡಿದರು. ಈ ಹಿಂದೆ ಹೊರ ಬಂದಿರುವ ನಕಲಿ ದಾಖಲೆಗಳ ಸೃಷ್ಟಿ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಪ್ರತಿಯೊಂದು ಅನುಮಾನಾಸ್ಪದ ಪ್ರಕರಣಗಳನ್ನು ಕುಲಂಕೂಷವಾಗಿ ಪರಿಶೀಲಿಸಿ ಅಗತ್ಯವಿದ್ದಲ್ಲಿ ಫೋರೆನ್ಸಿಕ್ ಲ್ಯಾಬ್ ಗೆ ಕಳಿಸಿ ದಾಖಲೆಗಳ ನೈಜತೆ ಕುರಿತು ವರದಿಯನ್ನು ಪಡೆದು ಸೂಕ್ತ ಕ್ರಮ ವಹಿಸಲಾಗುವುದು ಎಂದು ತಿಳಿಸಿದ ಸಚಿವರು, ಸ್ಕ್ಯಾನಿಂಗ್ ಮೂಲಕ ದಾಖಲೆಗಳನ್ನು ಡಿಜಿಟಲ್ ಮಾದರಿಯಲ್ಲಿ ರಕ್ಷಿಸುವುದರಿಂದ ಭವಿಷ್ಯದಲ್ಲಿ ನಕಲಿ ದಾಖಲೆಗಳ ಸೃಷ್ಟಿಗೆ ಕಡಿವಾಣ ಹಾಕಿದಂತಾಗುವುದು ಎಂದರು. ರಾಜ್ಯದಲ್ಲಿ ಕಂದಾಯ ಇಲಾಖೆ ಎಲ್ಲಾ ಮೂಲ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಶಾಶ್ವತವಾಗಿ ಸಂರಕ್ಷಿಸಲಾಗುತ್ತಿದೆ. 246 ತಾಲೂಕುಗಳ ಪೈಕಿ 26 ತಾಲೂಕುಗಳಲ್ಲಿ ಎ ಮತ್ತು ಬಿ ಕ್ಯಾಟಗರಿ ದಾಖಲೆಗಳನ್ನು ಸ್ಕ್ಯಾನಿಂಗ್ ಮಾಡಲಾಗಿದೆ ಎಂದು ತಿಳಿಸಿದ ಸಚಿವರು, ತಾಲ್ಲೂಕು ಕಚೇರಿಗಳಲ್ಲಿರುವ ಹಳೆಯ ದಾಖಲಾತಿಗಳನ್ನು ಡಿಜಿಟಲೀಕರಿಸುವ ಮೂಲಕ ಸಾರ್ವಜನಿಕರಿಗೆ ತಮ್ಮ ಭೂ ದಾಖಲಾತಿಗಳನ್ನು ಸುಲಭವಾಗಿ ಪಡೆಯಲು ಈ ಯೋಜನೆಯು ಸಹಕಾರಿಯಾಗಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ 100 ಕೋಟಿ ಪುಟಗಳ ದಾಖಲೆ ಪೈಕಿ 35.36 ಕೋಟಿ ಸ್ಕ್ಯಾನ್ ಮಾಡಲಾಗಿದ್ದು, ಆದರಲ್ಲಿ 65 ಕೋಟಿ ಪುಟಗಳ ದಾಖಲೆಗಳನ್ನು ಸ್ಕ್ಯಾನ್ ಮಾಡಬೇಕೆಂದು ಅಂದಾಜಿಸಲಾಗಿದ್ದು, ಈ ಡಿಸೆಂಬರ್ ಒಳಗೆ ಪೂರ್ಣಗೊಳಿಸಲು ಪ್ರಯತ್ನಸಿಲಾಗುವುದು. ಸಾರ್ವಜನಿಕರು ಭೂ ಸುರಕ್ಷಾ ವೆಬ್ ಸೈಟ್ ಮೂಲಕ ತಮ್ಮ ಭೂ ದಾಖಲೆಗಳಿಗೆ ನಾಡ ಕಚೇರಿಯಲ್ಲಿ ಅರ್ಜಿ ಸಲ್ಲಿಸಿ ನೇರವಾಗಿ ತಮ್ಮ ಮನೆಯಲ್ಲಿ ದಾಖಲೆಗಳನ್ನು ಪಡೆಯಬಹುದಾಗಿದೆ ಎಂದು ಅವರು ತಿಳಿಸಿದರು.
/filters:format(webp)/newsfirstlive-kannada/media/post_attachments/wp-content/uploads/2024/10/FARNER.jpg)
ಕಂದಾಯ ದಾಖಲೆಗಳು ಅಥವಾ ಕಡತಗಳು ಕಳುವಾಗುವುದನ್ನು ಹಾಗೂ ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಿ, ಸಾರ್ವಜನಿಕರ ಕೈಬೆರಳ ತುದಿಯಲ್ಲೇ ಅವರ ಜಮೀನಿನ ದಾಖಲೆ ಸುಲಭವಾಗಿ ಲಭ್ಯವಾಗಿಸುವ ಉದ್ದೇಶದಿಂದ ಸ್ಕ್ಯಾನ್ ಮಾಡಿ ಕಾಂಪ್ಯಾಕ್ಟರ್ ವಿಧಾನವನ್ನು ಅನುಸರಿಸಿ ರೆಕಾರ್ಡ್ ರೂಮ್ ಆಧುನೀಕರಿಸಿ ದಾಖಲೆಗಳನ್ನು ರಕ್ಷಿಸಲು ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ಕಛೇರಿಗೆ ಸರ್ಕಾರವು 5 ಕೋಟಿ ರೂ. ಮಂಜೂರು ಮಾಡಿದೆ ಎಂದು ಮಾಹಿತಿ ನೀಡಿದರು. ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ 1 ಕೋಟಿ ಭೂ ದಾಖಲೆಗಳನ್ನು ಸ್ಕ್ಯಾನ್ ಮಾಡಬೇಕಾಗುತ್ತದೆ ಎಂದರು.
ಇನ್ನೂ ಮುಂದೆ ದಾಖಲೆಗಳನ್ನು ಸ್ಕ್ಯಾನ್ ಮಾಡುವಾಗ ಅನುಮಾನಾಸ್ಪದವಾದ ದಾಖಲೆಗಳನ್ನು ಫೋರೆನ್ಸಿಕ್ ಮೂಲಕ ತನಿಖೆ ಮಾಡಿಸಿ ಕ್ರಮ ಕೈಗೊಳ್ಳುತ್ತೇವೆ. ರಾಜ್ಯದ ಎಲ್ಲಾ ಎಸಿ, ಡಿಸಿ ಕಚೇರಿಯ ದಾಖಲೆಗಳ ಸ್ಕ್ಯಾನಿಂಗ್ ಪ್ರಕ್ರಿಯೆಯನ್ನು ಮುಂದಿನ ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸಲು ಗಡುವು ನೀಡಲಾಗಿದೆ ಎಂದು ಸಚಿವರು ಹೇಳಿದರು.
ಬೆಂಗಳೂರಿನ ತಹಸೀಲ್ದಾರ್ ಕಚೇರಿಗಳಲ್ಲಿ ಕಳೆದ ತಿಂಗಳು ಸರಾಸರಿ ಪ್ರತಿದಿನ 9 ರಿಂದ 10 ಸಾವಿರ ಪುಟ ದಾಖಲೆಗಳನ್ನು ಸ್ಕ್ಯಾನ್ ಮಾಡಲಾಗುತ್ತಿದೆ. ಬರುವ ಡಿಸೆಂಬರ್ ಅಂತ್ಯದೊಳಗೆ ಈ ಕಾರ್ಯವನ್ನು ಸಮಾರೋಪದಿಯಲ್ಲಿ ನಿರ್ವಹಿಸಿ ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದರು.
ದೇಶದಲ್ಲಿ ಇತರೆ ಕೆಲವು ರಾಜ್ಯಗಳಲ್ಲಿ ಕಂದಾಯ ದಾಖಲೆಗಳ ಇಂಡೆಕ್ಸಿಂಗ್ ಮಾತ್ರ ಮಾಡಲಾಗಿದೆ ಎಂದ ಸಚಿವರು, ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ನಮ್ಮ ರಾಜ್ಯದಲ್ಲಿ 100-120 ಕೋಟಿ ಪುಟಗಳ ಕಂದಾಯ ದಾಖಲೆಗಳನ್ನು ಸ್ಕ್ಯಾನಿಂಗ್ ಮೂಲಕ ಡಿಜಿಟಲೀಕರಿಸಲಾಗುತ್ತಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕಂದಾಯ ಇಲಾಖೆ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಠಾರಿಯಾ, ಕಂದಾಯ ಆಯುಕ್ತ ಸುನಿಲ್ ಕುಮಾರ್, ಬೆಂಗಳೂರು ಜಿಲ್ಲಾಧಿಕಾರಿ ಜಗದೀಶ್, ಕಚೇರಿ ಸಹಾಯಕರಾದ ಪ್ರಶಾಂತಗೌಡ ಪಾಟೀಲ್ ಸೇರಿದಂತೆ ಇತರ ಅಧಿಕಾರಿಗಳು ಹಾಜರಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us