/newsfirstlive-kannada/media/media_files/2025/08/20/chitradurga-murder-case-022-2025-08-20-13-20-43.jpg)
ಕೊಲೆಯಾದ ವರ್ಷಿತಾ ಹಾಗೂ ಆರೋಪಿ ಚೇತನ್
ಕೋಟೆ ನಾಡು ಚಿತ್ರದುರ್ಗದಲ್ಲಿ ಕಾಲೇಜು ವಿದ್ಯಾರ್ಥಿನಿಯೊಬ್ಬರನ್ನು ಕೊಲೆಗೈದು ಸುಟ್ಟು ಹಾಕಲಾಗಿದೆ. ನಿನ್ನೆ ಸಂಜೆ ವಿದ್ಯಾರ್ಥಿನಿಯ ಶವ ನಗರದ ಹೊರವಲಯದಲ್ಲಿ ಪತ್ತೆಯಾಗಿತ್ತು. ಪ್ರಾರಂಭದಲ್ಲಿ ಶವದ ಗುರುತು ಕೂಡ ಪತ್ತೆಯಾಗಿರಲಿಲ್ಲ. ಬಳಿಕ ಕೊಲೆಯಾದ ವಿದ್ಯಾರ್ಥಿನಿಯನ್ನು ವರ್ಷಿತಾ ಎಂದು ಗುರುತಿಸಲಾಗಿದೆ. ಈ ವರ್ಷಿತಾ ಚಿತ್ರದುರ್ಗ ನಗರದಲ್ಲಿ ದ್ವಿತೀಯ ಬಿಎ ಓದುತ್ತಿದ್ದಳು. ಡಾಕ್ಟರ್ ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ನಂತರದ ವಿದ್ಯಾರ್ಥಿನಿಯರ ವಸತಿ ನಿಲಯದಲ್ಲಿ ವಾಸ ಇದ್ದಳು. ನಿನ್ನೆ ಸಂಜೆ ಹಾಸ್ಟೆಲ್ ವಾರ್ಡನ್ಗೆ ರಜೆ ಚೀಟಿ ಕೊಟ್ಟು ಊರಿಗೆ ಹೋಗುತ್ತೇನೆಂದು ಹೇಳಿ ಹೊರಟಿದ್ದಳು. ಆದರೇ, ವರ್ಷಿತಾ ತನ್ನ ಊರಿಗೆ ಹೋಗಿಲ್ಲ. ರಾತ್ರಿ 11ರ ವೇಳೆಗೆ ವರ್ಷಿತಾ ಕೊಲೆಯಾಗಿರುವ ವಿಷಯ ಹಾಸ್ಟೆಲ್ ವಾರ್ಡನ್ಗೆ ಗೊತ್ತಾಗಿದೆ.
ಈ ಕೊಲೆಯ ಹಿನ್ನಲೆಯಲ್ಲಿ ಚಿತ್ರದುರ್ಗದ ಜಿಲ್ಲಾಸ್ಪತ್ರೆಯ ಎದುರು ಇಂದು ವರ್ಷಿತಾ ಸಂಬಂಧಿಕರು, ಕುಟುಂಬಸ್ಥರು ಹಾಗೂ ಎಬಿವಿಪಿ ಸಂಘಟನೆಯ ವಿದ್ಯಾರ್ಥಿಗಳು ತೀವ್ರ ಪ್ರತಿಭಟನೆ ನಡೆಸಿದ್ದಾರೆ. ಚಿತ್ರದುರ್ಗದ ಅಂಬೇಡ್ಕರ್ ಸರ್ಕಲ್ನಿಂದ ಒನಕೆ ಓಬವ್ವ ಸರ್ಕಲ್ಗೆ ತೆರಳಿ ಪ್ರತಿಭಟನೆ ನಡೆಸಿದ್ದಾರೆ. ರಸ್ತೆ ತಡೆ ನಡೆಸಿದ್ದಾರೆ. ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಸ್ಥಳಕ್ಕೆ ಬರಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ಪ್ರಿಯಕರನಿಂದಲೇ ವಿದ್ಯಾರ್ಥಿನಿ ವರ್ಷಿತಾ ಹತ್ಯೆ!
ರಾತ್ರಿಯಿಂದಲೇ ಪೊಲೀಸರು ವರ್ಷಿತಾ ಕೊಲೆ ಕೇಸ್ ಬಗ್ಗೆ ತನಿಖೆ ಆರಂಭಿಸಿದ್ದಾರೆ. ತನಿಖೆ ವೇಳೆ ವರ್ಷಿತಾ ಕೊನೆಯದಾಗಿ ಚೇತನ್ ಎಂಬಾತನನ್ನು ಸಂಪರ್ಕಿಸಿರೋದು ಬೆಳಕಿಗೆ ಬಂದಿದೆ. ತಕ್ಷಣವೇ ಪೊಲೀಸರು ಚೇತನ್ನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಚೇತನ್ ತಾನೇ ವರ್ಷಿತಾಳನ್ನು ಹತ್ಯೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಪೊಲೀಸರ ಮುಂದೆ ಹತ್ಯೆ ರಹಸ್ಯವನ್ನು ಆರೋಪಿ ಚೇತನ್ ಬಾಯಿಬಿಟ್ಟಿದ್ದಾನೆ. ಆರೋಪಿ ಚೇತನ್ ಕ್ಯಾನ್ಸರ್ ರೋಗಿ ಎಂಬ ಮಾಹಿತಿ ಬಹಿರಂಗ ಆಗಿದೆ.
ಪ್ರೀತಿ ವಿಚಾರಕ್ಕೆ ವರ್ಷಿತಾ- ಚೇತನ್ ನಡುವೆ ಗಲಾಟೆ ನಡೆದಿದೆ. ಗಲಾಟೆಯ ವೇಳೆ ಚೇತನ್, ವರ್ಷಿತಾಗೆ ಹೊಡೆದು ಕೊಂದಿದ್ದಾನೆ, ಬಳಿಕ ಪೆಟ್ರೋಲ್ ಹಾಕಿ ಸುಟ್ಟು ಹಾಕಿದ್ದಾನೆ. ಚಿತ್ರದುರ್ಗದ ಸಿಪಿಐ ಮುದ್ದುರಾಜ್, ಡಿವೈಎಸ್ಪಿ ದಿನಕರ್ ನೇತೃತ್ವದಲ್ಲಿ ತನಿಖೆಯನ್ನು ನಡೆಸಿ ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ.
ಯುವತಿಯನ್ನು ಗರ್ಭಿಣಿಯಾಗಿಸಿ ಮದುವೆ ಆಗಲು ನಿರಾಕರಣೆ
ಚಿತ್ರದುರ್ಗ ವಿದ್ಯಾರ್ಥಿನಿ ಕೊಲೆ ಕೇಸ್‌ಗೆ ಸ್ಟಫೋಕ ತಿರುವು ಸಿಕ್ಕಿದೆ. ಪೊಲೀಸರ ಮುಂದೆ ಕೊಲೆ ರಹಸ್ಯ ಆರೋಪಿ ಚೇತನ್ ಬಾಯ್ಬಿಟ್ಟಿದ್ದಾನೆ. ಯುವತಿಯನ್ನ ಗರ್ಭಿಣಿ ಮಾಡಿ ಮೋಸ ಮಾಡಲು ಆರೋಪಿ ಮುಂದಾಗಿದ್ದ. ನಿನ್ನಿಂದ ಗರ್ಭಿಣಿ ಆಗಿದ್ದೇನೆ, ಈಗ ಮದುವೆ ಆಗು ಎಂದು ಯುವತಿ ಪಟ್ಟು ಹಿಡಿದಿದ್ದಳು. ಮದುವೆ ಆಗಲು ಆರೋಪಿ ನಿರಾಕರಿಸಿದ್ದ. ಇದೇ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆದಿದೆ. ನಿನಗೆ ಬೇರೋಬ್ಬನ ಜೊತೆ ಸಂಬಂಧ ಇದೆ ಎಂದು ಆರೋಪಿ ಚೇತನ್, ಹಲ್ಲೆ ಮಾಡಿ, ಕೊಲೆಗೈದಿದ್ದಾನೆ. ಬಳಿಕ ಪೆಟ್ರೋಲ್ ಹಾಕಿ ಶವವನ್ನು ಸುಟ್ಟಿದ್ದಾನೆ.
ಚೇತನ್ ಬಂಧನದ ಬಳಿಕ ಆರೋಪಿಗೆ ಕ್ಯಾನ್ಸರ್ ರೋಗ ಇರೋದು ಬೆಳಕಿಗೆ ಬಂದಿದೆ. ಇದೇ ಪ್ರಕರಣದಲ್ಲಿ ಒಂದೇ ಸಿಮ್ ಕಾರ್ಡ್ಗೆ 16 ಮೊಬೈಲ್ ಬಳಕೆ ಮಾಡಿ ಯುವತಿ ವರ್ಷಿತಾ ಮಾತನಾಡಿರುವುದು ಬೆಳಕಿಗೆ ಬಂದಿದೆ. ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಕೊಲೆ, ಸಾಕ್ಷ್ಯ ನಾಶ ಕೇಸ್ ದಾಖಲಾಗಿದೆ.
ಚಿತ್ರದುರ್ಗ ನಗರದ ಅಂಬೇಡ್ಕರ್ ಸರ್ಕಲ್ನಲ್ಲಿ ಪ್ರತಿಭಟನೆ ನಡೆಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್, ಗೃಹ ಸಚಿವ ಡಾ.ಜಿ ಪರಮೇಶ್ವರ ಫೋಟೋ ಹಿಡಿದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಲ್ಲಾಸ್ಪತ್ರೆಯ ಮುಂಭಾಗ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಪೊಲೀಸರು ಹಾಗೂ ಕೊಲೆಯಾದ ಯುವತಿ ಕುಟುಂಬಸ್ಥರ ಮಧ್ಯೆ ವಾಗ್ವಾದ ನಡೆದಿದೆ.
ಹೋರಾಟಕ್ಕೆ ದಲಿತಪರ ಸಂಘಟನೆಗಳು ಸೇರಿ ಹಲವು ಸಂಘಟನೆಗಳು ಸಾಥ್ ಕೊಟ್ಟಿವೆ. ಪ್ರತಿಭಟನಾಕಾರರನ್ನು ಸಮಾಧಾನಪಡಿಸಲು ಪೊಲೀಸರ ಹರಸಾಹಸ ಪಟ್ಟರು. ಅವಳು ನನ್ನ ತಂಗಿ ಇದ್ದಂತೆ, ಆರೋಪಿನ ಕೂಡಲೇ ಬಂಧನ ಮಾಡ್ತೀವಿ ಎಂದು ಯುವತಿಯ ಕುಟುಂಬಸ್ಥರಿಗೆ DYSP ದಿನಕರ್ ಭರವಸೆ ನೀಡಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ