/newsfirstlive-kannada/media/media_files/2025/10/07/tmk_dam-2025-10-07-18-23-09.jpg)
ತುಮಕೂರು: ಶಿಂಷಾ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಮಾರ್ಕೋನಹಳ್ಳಿ ಅಣೆಕಟ್ಟು ನೀರಿನಲ್ಲಿ ಈಜಲು ಹೋಗಿದ್ದ ಒಂದೇ ಕುಟುಂಬದ 8 ಜನರ ಪೈಕಿ ಇಬ್ಬರ ಮೃತದೇಹ ಪತ್ತೆ ಆಗಿದ್ದು, ಇನ್ನಿಬ್ಬರನ್ನು ರಕ್ಷಣೆ ಮಾಡಲಾಗಿದೆ. ಸದ್ಯ ನಾಲ್ವರು ಕಣ್ಮರೆಯಾಗಿದ್ದು ಅವರಿಗಾಗಿ ಹುಡುಕಾಟ ನಡೆದಿದೆ. ಕುಣಿಗಲ್ ತಾಲೂಕಿನ ಯಡಿಯೂರು ಸಮೀಪದ ಮಾರ್ಕೋನಹಳ್ಳಿ ಜಲಾಶಯದಲ್ಲಿ ಈ ಘಟನೆ ನಡೆದಿದೆ.
ಮಾರ್ಕೋನಹಳ್ಳಿ ಡ್ಯಾಂ ನೀರಿನಲ್ಲಿ ಈಜಲು ಹೋಗಿದ್ದ ಒಂದೇ ಕುಟುಂಬದ 8 ಜನರಲ್ಲಿ ಈಗಾಗಲೇ ಇಬ್ಬರ ಮೃತದೇಹ ಪತ್ತೆ ಆಗಿದೆ. ಇಬ್ಬರನ್ನು ರಕ್ಷಣೆ ಮಾಡಲಾಗಿದೆ. ಆದರೆ ಇನ್ನು ನಾಲ್ವರು ಏನಾಗಿದ್ದಾರೆ ಎಂದು ಗೊತ್ತಿಲ್ಲ. ಸದ್ಯ ಸ್ಥಳೀಯರ ಸಹಾಯದಿಂದ ಪೊಲೀಸರು ಎರಡು ಶವಗಳನ್ನು ಹೊರ ತೆಗೆದಿದ್ದಾರೆ. ಮೃತರು ಯಾವ ಊರಿನವರು, ಏನು ಕೆಲಸ ಮಾಡುತ್ತಿದ್ದರು ಇತ್ಯಾದಿ ಮಾಹಿತಿಗಳನ್ನು ಕಲೆ ಹಾಕಲಾಗುತ್ತಿದೆ.
ಸದ್ಯ ಈ ಸಂಬಂಧ ಮಾಹಿತಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದಾರೆ. ಹುಲಿಯೂರುದುರ್ಗ ಪೊಲೀಸರು ಹಾಗೂ ಅಮೃತೂರು ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಸಿಬ್ಬಂದಿಯಿಂದ ನಾಪತ್ತೆ ಆಗಿರುವವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.
ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಶಿಂಷಾ ನದಿಗೆ ಮಾರ್ಕೋನಹಳ್ಳಿ ಅಣೆಕಟ್ಟು ಅನ್ನು ಅಡ್ಡಲಾಗಿ ನಿರ್ಮಿಸಲಾಗಿದೆ. 1930ರ ದಶಕದಲ್ಲಿ ಸರ್.ಎಂ ವಿಶ್ವೇಶ್ವರಯ್ಯ ಅವರ ಮಾರ್ಗದರ್ಶನದಲ್ಲಿ ನಿರ್ಮಿಸಲಾದ ಐತಿಹಾಸಿಕ ಅಣೆಕಟ್ಟು ಆಗಿದೆ. ಇದು ಏಷ್ಯಾದ ಮೊದಲ ಸ್ವಯಂಚಾಲಿತ ಸೈಫನ್ ತಂತ್ರಜ್ಞಾನ ಹೊಂದಿದೆ, ಈ ಡ್ಯಾಂ, ಸುತ್ತಮುತ್ತಲಿನ ಪ್ರದೇಶಗಳಿಗೆ ನೀರು ಒದಗಿಸುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ