/newsfirstlive-kannada/media/media_files/2025/10/27/mysore-tiger-attack-on-farmer-2025-10-27-13-51-58.jpg)
ಹುಲಿ ದಾಳಿಯಿಂದ ಮೃತಪಟ್ಟ ರೈತ ರಾಜಶೇಖರ್
ಬಡವರ ಕೋಪ ದವಡೆಗೆ ಮೂಲ ಅನ್ನೋ ಮಾತು ಅದೆಷ್ಟು ಸತ್ಯ ಅಂದ್ರೆ ಮೈಸೂರಿನಲ್ಲಿ ಹುಲಿ ದಾಳಿಗೆ ತುತ್ತಾಗಿ ಪ್ರಾಣತೆತ್ತ ರೈತ ಕುಟುಂಬವೇ ಸಾಕ್ಷಿ ಆಗಿದೆ. ನ್ಯಾಯಕ್ಕಾಗಿ ಅಂಗಲಾಚಿದ ಕುಟುಂಬ ಅದೆಷ್ಟೇ ಕಿರುಚಾಡಿ, ಕೂಗಾಡಿದರೂ ಕ್ಯಾರೆ ಎನ್ನದ ಎಮ್ಮೆ ಚರ್ಮದ ಅಧಿಕಾರಿಗಳು ಕೊನೆಗೆ ರಾಜಕಾರಣಿಗಳ ಕೈಗೊಂಬೆಯಾಗಿ ನಟಿಸಿದ್ದು ಮಾತ್ರ ನೋಡುಗರ ಕಣ್ಣಿಗೆ ಅಸಹ್ಯದಂತೆ ಕಂಡಿದೆ. ರೈತ ಹೋರಾಟಗಳ ವಿಫಲತೆಯನ್ನೇ ಬಂಡವಾಳ ಮಾಡಿಕೊಂಡ ರಾಜಕಾರಣಿಗಳು ತಮ್ಮ ಬೇಳೆ ಹೇಗೆಲ್ಲಾ ಬೇಯಿಸಿಕೊಳ್ತಾರೆ ಅನ್ನೋದಕ್ಕೆ ಈ ಸಾವು ಸ್ಪಷ್ಟವಾಗಿ ಗೋಚರಿಸಿದೆ
ಅರಣ್ಯ ಸಚಿವರನ್ನ ಮೆಚ್ಚಿಸಲು ಮುಂದಾದ ಅಧಿಕಾರಿಗಳಿಗೆ ಮುಖಭಂಗ. ಮೃತ ಶವ ಇಟ್ಟುಕೊಂಡು ರಾಜಕೀಯ ಮಾಡಲು ಹೋದವರಿಗೆ ಛೀಮಾರಿ. ಶವಾಗಾರದ ಎದುರು ಸಚಿವರ ಎದುರೇ ರಂಪ ರಾಮಾಯಣ. ರೈತ ಹೋರಾಟಕ್ಕೂ ಬೆಲೆ ಸಿಗದೆ ಬಡ ರೈತನ ಪಂಚನಾಮೆ ಕಾರ್ಯ ಮುಕ್ತಾಯ. ಬಂದ ದಾರಿಗೆ ಶುಂಕವಿಲ್ಲದಂತೆ ಶವ ತೆಗೆದುಕೊಂಡು ಹೋದ ನೊಂದ ಕುಟುಂಬ. ಹೌದು, ಇದೆಲ್ಲ ನಡೆದಿದ್ದು ಮೈಸೂರಿನ ಕೆ.ಆರ್.ಆಸ್ಪತ್ರೆಯ ಶವಾಗಾರದ ಎದುರು
ನೆನ್ನೆ ಸರಗೂರು ತಾಲೂಕಿನಲ್ಲಿ ಹುಲಿ ದಾಳಿಗೆ ರಾಜಶೇಖರ ಎಂಬ ರೈತ ಮೃತಪಟ್ಟಿದ್ದ. ಆ ವೇಳೆಯಲ್ಲಿ ಸರಗೂರು ತಾಲೂಕಿನಲ್ಲೇ ಇದ್ದ ಅರಣ್ಯ ಸಚಿವರು ಗೊತ್ತಿದ್ದೂ ಗೊತ್ತಿಲ್ಲದಂತೆ, ಸ್ಥಳಕ್ಕೂ ಭೇಟಿ ನೀಡದೆ ಬೆಂಗಳೂರಿಗೆ ತೆರಳಿದ್ರು. ತಡರಾತ್ರಿಯಾದರೂ ರೈತರ ಕೋಪ ತಣಿಯದ ಕಾರಣ ಗ್ರಾಮಕ್ಕೆ ಶಾಸಕ ಅನಿಲ್ ಚಿಕ್ಕಮಾದು ಭೇಟಿ ನೀಡಿದ್ರು. ಈ ವೇಳೆ ಕುಟುಂಬಸ್ಥರು, ರೈತರು ಅನಿಲ್ ಚಿಕ್ಕಮಾದು ಅವರನ್ನ ತರಾಟೆಗೆ ತೆಗೆದುಕೊಂಡಿದ್ರು. ಆ ವೇಳೆ ಸ್ಥಳದಿಂದ ಕಾಲ್ಕಿತ್ತ ಶಾಸಕರು ಮುಜುಗರ ತಪ್ಪಿಸಿಕೊಳ್ಳಲು ಮತ್ತೊಂದು ಯಡವಡ್ಟು ಮಾಡಿಕೊಂಡಿದ್ರು
ಪಂಚನಾಮೆ ನೆಪದಲ್ಲಿ ಶವವನ್ನ ಸರಗೂರು ಸರ್ಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗುವ ಬದಲಿಗೆ ಮೈಸೂರಿನ ಶವಾಗಾರಕ್ಕೆ ತಂದಿದ್ದಾರೆ. ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಮೈಸೂರಿಗೆ ಬರ್ತಾರೆ ಎಂಬ ಕಾರಣಕ್ಕೆ ಅವರಿಗೆ ಅನುಕೂಲ ಮಾಡಿಕೊಡಲು ಸರಗೂರು ಬದಲಿಗೆ ಮೈಸೂರಿನ ಶವಾಗಾರಕ್ಕೆ ತಂದಿದ್ದಾರೆ. ಇದು ಕುಟುಂಬಸ್ಥರು ಹಾಗು ರೈತರ ಆಕ್ರೋಶಕ್ಕೆ ಕಾರಣವಾಗಿದೆ
ಇತ್ತ ಮೃತದೇಹ ನೋಡಲು ಶಾಸಕ ಅನಿಲ್ ಚಿಕ್ಕಮಾದು,ಸಚಿವ ಖಂಡ್ರೆ ಬರ್ತಿದ್ದಂತೆ ರೈತರು ಘೇರಾವ್ ಹಾಕಿ ಆಕ್ರೋಶ ಹೊರ ಹಾಕಿದ್ರು. ಮೃತನ ಮಗ , ನೀವು ನಮ್ಮ ತಂದೆ ನೋಡಬೇಕಿಂದ್ದರೆ ಊರಿಗೆ ಬರಬೇಕಿತ್ತು. ನಮ್ಮ ತಂದೆ ಶವ ಇಲ್ಲಿಗ್ಯಾಕೆ ತರಿಸಿಕೊಂಡ್ರಿ ಅಂತ ಆಕ್ರೋಶ ಹೊರಹಾಕಿದ್ರು
ಈ ವೇಳೆ ಅವಕ್ಕಾದ ಸಚಿವರು, ನನಗೆ ಈ ವಿಷ್ಯವೇ ಗೊತ್ತಿಲ್ಲ ಅಂತ ಜಾರಿಕೊಳ್ಳುವ ಯತ್ನ ಮಾಡಿದ್ರು. ಆದರೆ, ಸ್ಥಳದಲ್ಲಿದ್ದ ರೈತರು ಧಿಕ್ಕಾರ ಕೂಗಿ ನಾಟಕವಾಡವೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆಲ್ಲ ಅಕ್ರಮ ರೆಸಾರ್ಟ್ ಗಳೇ ಕಾರಣ ಅಂತ ಆರೋಪ ಮಾಡಿದ್ರು
ಇಷ್ಟೆಲ್ಲ ಮುಗಿದ ಬಳಿಕ ಸಚಿವ ಖಂಡ್ರೆ ಅವರು ರೈತರನ್ನ ಸಮಾಧಾನಪಡಿಸಿ ತಮ್ಮಿಂದ ತಪ್ಪಾಗಿದೆ. ತಪ್ಪೆಸಗಿದವರ ವಿರುದ್ಧ ಕ್ರಮ ಆಗುತ್ತೆ ಅಂತ ಹೇಳಿದ್ರು. ಅಲ್ಲದೇ ಮೃತ ಕುಟುಂಬಕ್ಕೆ ಪರಿಹಾರ ನೀಡುವ ಭರವಸೆ ನೀಡಿದ್ರು.
/filters:format(webp)/newsfirstlive-kannada/media/post_attachments/wp-content/uploads/2024/03/Eshwar-Khandre.jpg)
ಇಷ್ಟಕ್ಕೆ ಸುಮ್ಮನಾಗದ ರೈತ ಮುಖಂಡರು ಅಕ್ರಮ ರೆಸಾರ್ಟ್ ತೆರವು ಮಾಡಿಸಿ ಅಂತ ಬಿಗಿಪಟ್ಟು ಹಿಡಿದರು. ಈ ವೇಳೆ ಶಾಸಕ ಅನಿಲ್ ಚಿಕ್ಕಮಾದು ಅವರಿಗೆ ಛೀಮಾರಿ ಹಾಕುತ್ತಿದ್ದಂತೆ ಸ್ಥಳದಿಂದ ತೆರಳುವ ಯತ್ನ ಮಾಡಿದ್ರು. ಈ ಸಂದರ್ಭದಲ್ಲಿ ಪೊಲೀಸರು ಹಾಗು ರೈತ ಮುಖಂಡರ ನಡುವೆ ಜಗಳ ವಿಕೋಪಕ್ಕೆ ತಿರುಗಿ ಕೈ ಕೈ ಮಿಲಾಯಿಸುವ ಹಂತ ತಲುಪಿತು.
ಅಂತಿಮವಾಗಿ ಪಂಚನಾಮೆ ಮುಗಿಸಿ ಮೃತದೇಹ ಪಡೆದು ಕುಟುಂಬಸ್ಥರು ಬರಿಗೈಲಿ ವಾಪಸಾದರು. ರೈತರ ಸಾವಿಗೆ ಬೆಲೆ ಇಲ್ಲ ಎಂದು ಕಣ್ಣೀರುಡುತ್ತಾ ಕುಟುಂಬ ಇಂತಹ ಸ್ಥಿತಿ ಯಾರಿಗೂ ಬಾರದಿರಲಿ ಅಂತ ಊರಿಗೆ ತೆರಳಿ ಮೃತದೇಹದ ಅಗ್ನಿಸ್ಪರ್ಶ ನೆರವೇರಿಸಿದರು.
ಇನ್ನೂ ಶವಾಗಾರದ ಬಳಿ ಅರಣ್ಯ ಸಚಿವ ಈಶ್ವರ್ ಖಂಡ್ರೆಗೆ ರೈತ ಮುಖಂಡರು ಕ್ಲಾಸ್ ತೆಗೆದುಕೊಂಡರು. ರೈತ ಮುಖಂಡರು ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆಯಿತು.
ನೀವೇನು ಮನುಷ್ಯರಾ? ಮೃಗಗಳಾ ಅಂತ ರೈತರು ಪೊಲೀಸರ ಮೇಲೆ ಕಿಡಿಕಾರಿದ್ದರು. ಆಕ್ರಮ ರೆಸಾರ್ಟ್ ಗಳೇ ರೈತನ ಸಾವಿಗೆ ಕಾರಣ ಅಂತ ಆಕ್ರೋಶ ವ್ಯಕ್ತಪಡಿಸಿದ್ದರು. ಹೋರಾಟಗಾರರ ಪ್ರಶ್ನೆಗಳಿಗೆ ಉತ್ತರಿಸಲಾಗದೇ ಅರಣ್ಯ ಸಚಿವ ಈಶ್ವರ್ ಖಂಡ್ರೆ ಆಸ್ಪತ್ರೆಯ ಶವಾಗಾರದಿಂದ ನಿರ್ಗಮಿಸಬೇಕಾಯಿತು.
ನನಗೆ ಇಲ್ಲಿಗೆ ರೈತನ ಶವ ತಂದಿರೋದೆ ಗೊತ್ತಿಲ್ಲ. ನನಗಾಗಿ ಶವ ಇಲ್ಲಿಗೆ ತಂದಿದ್ದರೇ, ಅದು ಅಕ್ಷಮ್ಯ ಅಪರಾಧ. ಇದಕ್ಕಾಗ ನಾನು ಕ್ಷಮೆ ಕೇಳುತ್ತೇನೆ. ಅಂತವರ ವಿರುದ್ಧ ಅಗತ್ಯ ಕ್ರಮಕ್ಕೆ ಸೂಚನೆ ನೀಡುತ್ತೇನೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆೆ.
ಇನ್ನೂ ಮೈಸೂರು ಜಿಲ್ಲೆಯಲ್ಲಿ ಅಕ್ರಮ ರೆಸಾರ್ಟ್ ಗಳಿಂದನೇ ಹುಲಿ, ಚಿರತೆ ದಾಳಿಗಳಾಗಿ ರೈತರು ಸಾವನ್ನಪ್ಪುತ್ತಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅರಣ್ಯ ಸಚಿವ ಈಶ್ವರ್ ಖಂಡ್ರೆ, ಈ ಕುರಿತು ಸಂಪೂರ್ಣ ಮಾಹಿತಿ ಕಲೆ ಹಾಕಲು ಹೇಳಿದ್ದೇನೆ. ಈ ಕುರಿತು ಸಭೆ ಮಾಡುತ್ತೇನೆ . ಮೃತನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಲಾಗುವುದು . ಇಡೀ ಸರ್ಕಾರವೇ ಸಂತಾಪ ಹಾಗೂ ಶೋಕದಲ್ಲಿದೆ . ಮೃತನ ಕುಟುಂಬದ ಜೊತೆ ನಾವಿರುತ್ತೇವೆ ಎಂದು ಮೈಸೂರಿನಲ್ಲಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ.
ರವಿಪಾಂಡವಪುರ, ನ್ಯೂಸ್ ಫಸ್ಟ್ , ಮೈಸೂರು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us