/newsfirstlive-kannada/media/post_attachments/wp-content/uploads/2024/08/Passport.jpg)
ಬೆಂಗಳೂರು: ಪಾಸ್‌ಪೋರ್ಟ್ (Passport) ಮಾಡಿಸುವವರಿಗೆ ಗುಡ್ ನ್ಯೂಸ್ ಹಾಗೂ ವೆರಿಫಿಕೇಶನ್ ನೆಪದಲ್ಲಿ ಸಾರ್ವಜನಿಕರಿಗೆ ಕಿರುಕುಳ ನೀಡುವ ಅಥವಾ ಲಂಚಕ್ಕೆ ಬೇಡಿಕೆಯಿಡುವ ಪೊಲೀಸರಿಗೆ ನಗರ ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ಪಾಸ್‌ಪೋರ್ಟ್ ಪರಿಶೀಲನಾ ಪ್ರಕ್ರಿಯೆಯನ್ನು ಸುಗಮ, ಪಾರದರ್ಶಕ ಹಾಗೂ ಭ್ರಷ್ಟಾಚಾರ ಮುಕ್ತಗೊಳಿಸಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ಹೊಸ ನಿಯಮಗಳ ಪ್ರಕಾರ, ಇನ್ಮುಂದೆ ಪಾಸ್‌ಪೋರ್ಟ್ ವೆರಿಫಿಕೇಶನ್‌ಗಾಗಿ ಸಾರ್ವಜನಿಕರು ಪೊಲೀಸ್ ಠಾಣೆಯ ಮೆಟ್ಟಿಲೇರುವಂತಿಲ್ಲ. ಬದಲಾಗಿ ಪೊಲೀಸರೇ ಮನೆಗೆ ಬಂದು ಪರಿಶೀಲನೆ ನಡೆಸಲಿದ್ದಾರೆ.
ಪೊಲೀಸ್ ಆಯುಕ್ತರು ಹೊರಡಿಸಿರುವ ಹೊಸ ಮಾರ್ಗಸೂಚಿಗಳು ಇಲ್ಲಿವೆ
- ಪೊಲೀಸ್ ಠಾಣೆಗೆ ಕರೆಸುವಂತಿಲ್ಲ: ಪಾಸ್‌ಪೋರ್ಟ್ ಅರ್ಜಿದಾರರನ್ನು ಯಾವುದೇ ಕಾರಣಕ್ಕೂ ಪರಿಶೀಲನೆಗಾಗಿ ಪೊಲೀಸ್ ಠಾಣೆಗೆ ಕರೆಸಬಾರದು.
- ಬಾಡಿ ಕ್ಯಾಮೆರಾ ಕಡ್ಡಾಯ: ಪಾಸ್‌ಪೋರ್ಟ್ ಪರಿಶೀಲನೆಗೆ ಹೋಗುವ ಎಲ್ಲಾ ಪೊಲೀಸ್ ಅಧಿಕಾರಿಗಳು ಅಥವಾ ಸಿಬ್ಬಂದಿ ಪ್ರಕ್ರಿಯೆಯ ಆರಂಭದಿಂದ ಅಂತ್ಯದವರೆಗೆ ಕಡ್ಡಾಯವಾಗಿ ಬಾಡಿ ಕ್ಯಾಮೆರಾವನ್ನು (Body-worn Camera) ಧರಿಸಿರಬೇಕು.
- ಮನೆಗೇ ಭೇಟಿ ನೀಡಬೇಕು: ಅಧಿಕಾರಿಗಳು ಅರ್ಜಿದಾರರು ನೀಡಿರುವ ವಿಳಾಸಕ್ಕೆ ಕಡ್ಡಾಯವಾಗಿ ಭೇಟಿ ನೀಡಬೇಕು ಮತ್ತು ನೆರೆಹೊರೆಯವರಿಂದ ಅಗತ್ಯ ಮಾಹಿತಿಗಳನ್ನು ಸಂಗ್ರಹಿಸಬೇಕು.
- 24 ಗಂಟೆ ಮುನ್ನವೇ ಮಾಹಿತಿ: ಅರ್ಜಿದಾರರ ವಿಳಾಸಕ್ಕೆ ಭೇಟಿ ನೀಡುವ ಕನಿಷ್ಠ 24 ಗಂಟೆಗಳ ಮೊದಲು ಅವರಿಗೆ SMS ಅಥವಾ ಕರೆ ಮಾಡುವ ಮೂಲಕ ಭೇಟಿಯ ಬಗ್ಗೆ ಮುಂಚಿತವಾಗಿ ಮಾಹಿತಿ ನೀಡಬೇಕು. ದಿಢೀರ್ ಭೇಟಿ ನೀಡುವಂತಿಲ್ಲ.
- ಲಂಚ, ಕಿರುಕುಳಕ್ಕೆ ಬ್ರೇಕ್: ಅರ್ಜಿದಾರರಿಂದ ಯಾವುದೇ ರೀತಿಯ ಆಮಿಷ ಅಥವಾ ಲಂಚವನ್ನು ನಿರೀಕ್ಷಿಸಬಾರದು. ಈ ಉದ್ದೇಶಕ್ಕಾಗಿ ಅವರಿಗೆ ಯಾವುದೇ ರೀತಿಯ ಕಿರುಕುಳ ನೀಡಬಾರದು.
- ವಿಳಂಬ ಮಾಡುವಂತಿಲ್ಲ: ಅರ್ಜಿದಾರರನ್ನು ವಿನಾಕಾರಣ ಅಲೆದಾಡಿಸುವುದು ಅಥವಾ ವರದಿ (Verification Report) ನೀಡಲು ಉದ್ದೇಶಪೂರ್ವಕವಾಗಿ ವಿಳಂಬ ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
- ಪ್ರತಿಕೂಲ ವರದಿಗೆ (Adverse report) ಸಾಕ್ಷ್ಯ ಕಡ್ಡಾಯ: ಒಂದು ವೇಳೆ ಅರ್ಜಿದಾರರ ವಿರುದ್ಧ ಪ್ರತಿಕೂಲ ವರದಿ (ನೆಗೆಟಿವ್ ರಿಪೋರ್ಟ್) ಸಲ್ಲಿಸುವ ಸಂದರ್ಭ ಬಂದರೆ, ಅಧಿಕಾರಿಗಳು ಅದಕ್ಕೆ ಸೂಕ್ತ ಮತ್ತು ಸ್ಪಷ್ಟವಾದ ಸಾಕ್ಷ್ಯಾಧಾರಗಳನ್ನು ಹೊಂದಿರಲೇಬೇಕು.
ವಾರಕ್ಕೊಮ್ಮೆ ಡಿಸಿಪಿ ವರದಿ ಕಡ್ಡಾಯ
ಆಯುಕ್ತರು ಹೊರಡಿಸಿರುವ ಈ ಎಲ್ಲಾ ನಿಯಮಗಳು ತಳಮಟ್ಟದಲ್ಲಿ ಕಟ್ಟುನಿಟ್ಟಾಗಿ ಪಾಲನೆಯಾಗುತ್ತಿವೆಯೇ ಎಂದು ಖಚಿತಪಡಿಸಿಕೊಳ್ಳಲು ವಿಭಾಗೀಯ ಉಪ ಪೊಲೀಸ್ ಆಯುಕ್ತರು (DCP) ವಾರಕ್ಕೊಮ್ಮೆ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.
ಒಂದು ವೇಳೆ ಈ ನಿಯಮಗಳನ್ನು ಉಲ್ಲಂಘಿಸಿ, ಸಾರ್ವಜನಿಕರಿಗೆ ಕಿರುಕುಳ ನೀಡುವುದು ಕಂಡುಬಂದರೆ ಅಂತಹ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತರು ಕಟ್ಟುನಿಟ್ಟಿನ ಎಚ್ಚರಿಕೆ ರವಾನಿಸಿದ್ದಾರೆ.
ಇದನ್ನೂ ಓದಿ:ಬೆಂಗಳೂರಿನ ಗಾಂಧಿ ಬಜಾರ್‌ನಲ್ಲಿ ಇನ್ಮುಂದೆ ‘ಕಲರ್ ಕೋಡ್’ ಜಾರಿ -ಹೈಕೋರ್ಟ್​ನಿಂದ ಮಹತ್ವದ ಸೂಚನೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us