ಶಾಲೆಯ ನೀರಿನ ತೊಟ್ಟಿಗೆ ವಿಷ ಬೆರೆಸಿದ್ದು ಭಯೋತ್ಪಾದನೆಗಿಂತ ಕಮ್ಮಿ ಇಲ್ಲ ಎಂದ ಸಿಎಂ

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಹೂವಿನಕೋಣೆ ಗ್ರಾಮದ ಶಾಲೆಯ ನೀರಿನ ಟ್ಯಾಂಕ್ ಗೆ ವಿಷ ಬೆರೆಸಲಾಗಿತ್ತು. ಈ ಕೇಸ್ ಬಗ್ಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು, ಇದು ಭಯೋತ್ಪಾದನಾ ಕೃತ್ಯಕ್ಕಿಂತ ಕಡಿಮೆ ಇಲ್ಲ ಎಂದಿದ್ದಾರೆ. ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆಯ ಭರವಸೆ ನೀಡಿದ್ದಾರೆ

author-image
Chandramohan
cm siddaramiah
Advertisment
  • ಹೊಸನಗರ ತಾಲ್ಲೂಕಿನ ಶಾಲೆಯಲ್ಲಿ ಕುಡಿಯುವ ನೀರಿಗೆ ವಿಷ ಬೆರೆಸಿದ ದುರುಳರು
  • ನೀರಿನ ಬಣ್ಣ ಬದಲಾವಣೆ, ಕೆಟ್ಟ ವಾಸನೆಯಿಂದ ಸಿಬ್ಬಂದಿಗೆ ಅನುಮಾನ
  • ನೀರು ಅನ್ನು ಪರೀಕ್ಷಿಸಿದಾಗ, ಕ್ರಿಮಿನಾಶಕ ಬೆರೆಸಿರುವುದು ದೃಢ

     ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹೂವಿನಕೋಣಿ ಶಾಲೆಯಲ್ಲಿ ನೀರಿನ ತೊಟ್ಟಿಗೆ ವಿಷ  ಬೆರೆಸಿದ ಘಟನೆ ಮೊನ್ನೆ ನಡೆದಿತ್ತು. ನಲ್ಲಿಯಲ್ಲಿ  ಬಂದ ನೀರು  ಅನ್ನು ಅಡುಗೆ ಸಿಬ್ಬಂದಿ  ಮೊದಲು ಕೈ ತೊಳೆಯಲು ಬಳಸಿದಾಗ, ನೀರಿನ ಬಣ್ಣ ಬದಲಾಗಿತ್ತು.  ನೀರಿನ ವಾಸನೆ ಗಮನಿಸಿದಾಗ, ವಿಷ ಬೆರೆಸಿರುವ ಅನುಮಾನ ಬಂದಿದೆ. 
ತಕ್ಷಣ  ಅಡುಗೆಯವರು, ಮುಖ್ಯ ಶಿಕ್ಷಕರ ಗಮನಕ್ಕೆ ತಂದಿದ್ದಾರೆ.  ಮುಖ್ಯ ಶಿಕ್ಷಕರು, ಗ್ರಾಮ ಪಂಚಾಯಿತಿ, ಊರಿನ ಜನರ ಗಮನಕ್ಕೆ ವಿಷಯ ತಂದಿದ್ದಾರೆ. ನೀರು ಅನ್ನು ಪರೀಕ್ಷಿಸಿದಾಗ, ಕ್ರಿಮಿನಾಶಕ ಬೆರೆಸಿರುವುದು ದೃಢಪಟ್ಟಿದೆ . ವಿದ್ಯಾರ್ಥಿಗಳು ನೀರು ಬಳಕೆ ಮಾಡುವುದನ್ನು ನಿಲ್ಲಿಸಿದ್ದಾರೆ. ನೀರಿನಲ್ಲಿ ಕೆಟ್ಟ ವಾಸನೆ ಬಂದಿದ್ದರಿಂದ  ಅನುಮಾನ ಬಂದಿದೆ.  ಮುಖ್ಯವಾಗಿ ಶಾಲೆಯ ನೀರಿನ ತೊಟ್ಟಿಗೆ ಯಾರೋ ದುಷ್ಕರ್ಮಿಗಳು ವಿಷ ಬೆರೆಸಿದ್ದಾರೆ.  ಶಾಲೆಯ ಮೇಲ್ಛಾವಣಿಯಲ್ಲಿ 2 ನೀರಿನ ಟ್ಯಾಂಕ್ ಗಳಿವೆ. ಒಂದು ಟ್ಯಾಂಕ್ ಗೆ ಕ್ರಿಮಿನಾಶಕವನ್ನು ಬೆರೆಸಲಾಗಿತ್ತು. ಶಾಲೆ ಪಕ್ಕದಲ್ಲಿ ಮರ ಇದೆ. ಮರ ಹತ್ತಿ ಬಂದ ದುಷ್ಕರ್ಮಿಗಳು, ಶಾಲೆಯ ಮೇಲ್ಛಾವಣಿ ಬಳಿಗೆ ಬಂದು ಒಂದು ನೀರಿನ  ಟ್ಯಾಂಕ್ ಗೆ ಕ್ರಿಮಿನಾಶಕ ಬೆರೆಸಿದ್ದಾರೆ. ಸ್ಥಳದಲ್ಲೇ ಕ್ರಿಮಿನಾಶಕದ ಬಾಟಲಿ ದೊರೆತಿದೆ.  
ಒಂದು ವೇಳೆ ವಿದ್ಯಾರ್ಥಿಗಳು ಶಾಲೆಯ ನೀರಿನ ತೊಟ್ಟಿಯಲ್ಲಿ ವಿಷ ಬೆರೆತಿದ್ದ ನೀರು ಅನ್ನೇ ಸೇವನೆ ಮಾಡಿದ್ದರೇ, ಸಾವನ್ನಪ್ಪುವ ಸಾಧ್ಯತೆ ಇತ್ತು. ದೊಡ್ಡ ಅನಾಹುತದಿಂದ ಶಾಲೆಯ ವಿದ್ಯಾರ್ಥಿಗಳು ಪಾರಾಗಿದ್ದಾರೆ. ಶಾಲಾ ಸಿಬ್ಬಂದಿ, ಅಡುಗೆಯ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ವಿದ್ಯಾರ್ಥಿಗಳು ಜೀವ ಉಳಿದಿದೆ. 
ಹೂವಿನಕೋಣೆಯ ಶಾಲೆಗೆ ತಹಸೀಲ್ದಾರ್ ರಶ್ಮಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು  ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ತಾಲ್ಲೂಕು ಪಂಚಾಯಿತಿ ಇ.ಓ. ನರೇಂದ್ರ ಕುಮಾರ್ ಭೇಟಿ ನೀಡಿದ್ದರು. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ನೀರಿನ ಟ್ಯಾಂಕ್ ಗೆ ಕ್ರಿಮಿನಾಶಕ ಬೆರೆಸಿದ ಬಗ್ಗೆ ಕೇಸ್ ದಾಖಲಾಗಿದೆ. ನೀರಿನ ಟ್ಯಾಂಕ್ ಗೆ ವಿಷ ಬೆರೆಸಿದವರಾರು ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 
ಈ ಪ್ರಕರಣದ ಬಗ್ಗೆ ಸಿಎಂ ಸಿದ್ದರಾಮಯ್ಯ ಎಕ್ಸ್ ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಹೂವಿನಕೋಣೆಯ ಸರ್ಕಾರಿ ಪ್ರಾಥಮಿಕ ಶಾಲೆಯ ಕುಡಿಯುವ ನೀರಿನ ಟ್ಯಾಂಕಿಗೆ ಕಿಡಿಗೇಡಿಗಳು ಕೀಟನಾಶಕ ಬೆರೆಸಿರುವ ಪ್ರಕರಣವನ್ನು ರಾಜ್ಯ ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಹತ್ತಾರು ಎಳೆಯ ಮಕ್ಕಳ ಮಾರಣ ಹೋಮ ನಡೆಸುವ ದುರುದ್ದೇಶ ಹೊಂದಿದ್ದ ಇದು ಯಾವ ಭಯೋತ್ಪಾದಕ ಕೃತ್ಯಗಳಿಗೂ ಕಡಿಮೆಯಿಲ್ಲ. ಅಡುಗೆ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದಾಗಿ ಘಟಿಸಬಹುದಾಗಿದ್ದ ಬಹುದೊಡ್ಡ ದುರಂತವೊಂದು ತಪ್ಪಿದೆ. ಶಾಲೆಯ ಅಡುಗೆ ಸಿಬ್ಬಂದಿಯನ್ನು ಅಭಿನಂದಿಸುತ್ತೇನೆ. ಘಟನೆಯ ಕುರಿತು ಸೂಕ್ತ ತನಿಖೆ ನಡೆಸಿ, ಕೃತ್ಯ ಎಸಗಿರುವ ದುರುಳರನ್ನು ಪತ್ತೆ ಹಚ್ಚಿ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಿದ್ದೇನೆ. ಕುಡಿಯುವ ನೀರಿಗೆ ವಿಷ ಬೆರೆಸುವ ಮನಸ್ಥಿತಿ ನಮ್ಮ ನಡುವೆ ಮಾನವೀಯತೆಯ ಅಧಃ ಪತನವನ್ನು ತೋರಿಸುತ್ತದೆ. ಈ ಬಗ್ಗೆ ಎಲ್ಲರೂ ಆತ್ಮವಿಮರ್ಶೆ ಮಾಡಿಕೊಳ್ಳಬೇಕಿದೆ ಎಂದು ಎಕ್ಸ್  ನಲ್ಲಿ  ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. 
---------

CM SIDDARAMAIAH
Advertisment