/newsfirstlive-kannada/media/media_files/2025/12/17/magnet-schools-open-in-karnataka-2025-12-17-13-33-14.jpg)
ರಾಜ್ಯದಲ್ಲಿ ಮ್ಯಾಗ್ನೆಟ್ ಶಾಲೆ ಆರಂಭಕ್ಕೆ ಸಿದ್ದತೆ
ಕರ್ನಾಟಕ ರಾಜ್ಯದಲ್ಲಿ ಈಗಾಗಲೇ ರಾಜ್ಯ ಶಿಕ್ಷಣ ಇಲಾಖೆಯು ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ತೆರೆದಿದೆ. ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ಕನ್ನಡ ಮತ್ತು ಇಂಗ್ಲೀಷ್ ಮಾಧ್ಯಮದಲ್ಲಿ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿದೆ. ಈಗ ಅಮೆರಿಕಾದ ಉತ್ತಮ ಗುಣಮಟ್ಟದ ಶಾಲೆಗಳು ಎಂದೇ ಹೆಸರಾದ ಮ್ಯಾಗ್ನೆಟ್ ಶಾಲೆಗಳನ್ನು ರಾಜ್ಯದಲ್ಲಿ ಆರಂಭಿಸಲು ಸಿದ್ದತೆ ನಡೆಸಿದೆ. ರಾಜ್ಯದಲ್ಲಿ 700 ಮ್ಯಾಗ್ನೆಟ್ ಶಾಲೆಗಳನ್ನು ಆರಂಭಿಸಲು ಸಿದ್ದತೆ ನಡೆಸಿದ್ದು, ಮ್ಯಾಗ್ನೆಟ್ ಶಾಲೆಗಳಿ ಆರಂಭವಾದ ಸ್ಥಳದ ಸುತ್ತಮುತ್ತಲಿನ ಸರ್ಕಾರಿ ಶಾಲೆಗಳನ್ನು ಈ ಮ್ಯಾಗ್ನೆಟ್ ಶಾಲೆಗಳಲ್ಲಿ ವಿಲೀನ ಮಾಡಲಾಗುತ್ತೆ. ಕಡಿಮೆ ಸಂಖ್ಯೆಯ ವಿದ್ಯಾರ್ಥಿಗಳನ್ನು ಹೊಂದಿರುವ ಶಾಲೆಗಳನ್ನು ಕೆಪಿಎಸ್- ಮ್ಯಾಗ್ನೆಟ್ ಶಾಲೆಗಳಲ್ಲಿ ವಿಲೀನ ಮಾಡಲಾಗುತ್ತೆ. ಕೆಪಿಎಸ್- ಮ್ಯಾಗ್ನೆಟ್ ಶಾಲೆಯ 6 ಕಿ.ಮೀ. ಸುತ್ತಳತೆಯಲ್ಲಿ ಇರುವ ಸರ್ಕಾರಿ ಶಾಲೆಗಳನ್ನು ಕೆಪಿಎಸ್- ಮ್ಯಾಗ್ನೆಟ್ ಶಾಲೆಗಳಲ್ಲಿ ವಿಲೀನ ಮಾಡಲಾಗುತ್ತೆ. ಶಾಲೆಗಳನ್ನು ಕೆಪಿಎಸ್- ಮ್ಯಾಗ್ನೆಟ್ ಶಾಲೆಗಳಲ್ಲಿ ವಿಲೀನ ಮಾಡುವ ರಾಜ್ಯ ಶಿಕ್ಷಣ ಇಲಾಖೆಯ ಪ್ರಸ್ತಾವನೆಗೆ ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದೆ. ಮುಂದಿನ 2 ವರ್ಷಗಳಲ್ಲಿ 700 ಸರ್ಕಾರಿ ಶಾಲೆಗಳನ್ನು ಕೆಪಿಎಸ್- ಮ್ಯಾಗ್ನೆಟ್ ಶಾಲೆಗಳಾಗಿ ಮೇಲ್ದರ್ಜೆಗೇರಿಸುವ ಉದ್ದೇಶವನ್ನು ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆ ಹೊಂದಿದೆ.
ರಾಜ್ಯದಲ್ಲಿ ಸದ್ಯ ಹೋಬಳಿ ಕೇಂದ್ರಗಳಲ್ಲಿ , ಕೆಲವು ಕಡೆ ಗ್ರಾಮ ಪಂಚಾಯತ್ ಕೇಂದ್ರಗಳಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಗಳಿವೆ. ಕೆಪಿಎಸ್ ಶಾಲೆಗಳಿರುವ ಕಡೆಯೇ ಒಂದೇ ಕಡೆ ಪಿಯುಸಿ ವರೆಗೂ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಕೆಪಿಎಸ್ ಶಾಲೆಗಳ ದಾಖಲಾತಿಗೆ ಭಾರಿ ಬೇಡಿಕೆ ಇದೆ. ಗ್ರಾಮೀಣಾ ಭಾಗದಲ್ಲಿ ಪೋಷಕರು ಇಂಗ್ಲೀಷ್ ಮಾಧ್ಯಮದ ಕೆಪಿಎಸ್ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸಲು ಮುಗಿಬೀಳುತ್ತಿದ್ದಾರೆ. ಗ್ರಾಮೀಣಾ ಭಾಗದಲ್ಲಿ ಈಗಾಗಲೇ ಇಂಗ್ಲೀಷ್ ಮಾಧ್ಯಮದ ಖಾಸಗಿ ಶಾಲೆಗಳು ಕೂಡ ನಾಯಿಕೊಡೆಗಳಂತೆ ತಲೆ ಎತ್ತಿವೆ. ಹೀಗಾಗಿ ಬಡವರು, ಮಧ್ಯಮ ವರ್ಗ, ಆರ್ಥಿಕ ದುರ್ಬಲ ವರ್ಗದ ಪೋಷಕರು ಕರ್ನಾಟಕ ಪಬ್ಲಿಕ್ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸಲು ಮುಗಿಬೀಳುತ್ತಿದ್ದಾರೆ. ಕೆಪಿಎಸ್ ಮಾದರಿಯ ಶಾಲೆಗಳು ಈ ಕಾಲದ ಅಗತ್ಯತೆ ಎಂದು ರಾಜ್ಯ ಸರ್ಕಾರ 2025ರ ಅಕ್ಟೋಬರ್ 15 ರಂದು ಹೊರಡಿಸಿರುವ ಆದೇಶದಲ್ಲಿ ಹೇಳಿದೆ.
ಕರ್ನಾಟಕ ಪಬ್ಲಿಕ್ ಶಾಲೆಯ ನೀತಿಯ ಪ್ರಕಾರ, ಮೂಲಸೌಕರ್ಯ ಮತ್ತು ಶೈಕ್ಷಣಿಕ ಮಾನದಂಡಗಳನ್ನು ಬಳಸಿ ಕಡಿಮೆ ವಿದ್ಯಾರ್ಥಿ ದಾಖಲಾತಿ ಇರುವ ಶಾಲೆಗಳನ್ನು ಮ್ಯಾಗ್ನೆಟ್ ಶಾಲೆಗಳಾಗಿ ಬದಲಾಯಿಸಲಾಗುತ್ತೆ. ಬಳಿಕ ಇವುಗಳನ್ನೇ ಕೆಪಿಎಸ್ ಶಾಲೆಗಳಲ್ಲಿ ವಿಲೀನ ಮಾಡಲಾಗುತ್ತೆ.
ರಾಜ್ಯದಲ್ಲಿ 3 ರಿಂದ 5 ಕಿ.ಮೀ. ವ್ಯಾಪ್ತಿಯಲ್ಲಿರುವ ಸಣ್ಣ ಶಾಲೆಗಳನ್ನು ಆಯ್ಕೆ ಮಾಡಿಕೊಂಡು ಮ್ಯಾಗ್ನೆಟ್ ಶಾಲೆಗಳಿಗೆ ಜೋಡಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಅಧಿಕಾರಿಗಳೇ ಹೇಳುತ್ತಿದ್ದಾರೆ.
ಮ್ಯಾಗ್ನೆಟ್ ಅಂದರೇ, 6 ಕಿ.ಮೀ. ವ್ಯಾಪ್ತಿಯ ಶಾಲೆಗಳನ್ನು ಒಟ್ಟುಗೂಡಿಸುವ ಪರಿಕಲ್ಪನೆ. ಉದಾಹರಣೆಗೆ ಕುಣಿಗಲ್ ತಾಲ್ಲೂಕಿನ ಅಮೃತೂರು ಹೋಬಳಿ ಕೇಂದ್ರವಾಗಿದೆ. ಅಮೃತೂರು ಸುತ್ತ ಇರುವ ಐದಾರು ಗ್ರಾಮಗಳ ಶಾಲೆಗಳನ್ನು ಒಟ್ಟುಗೂಡಿಸುವ ಪ್ರಕ್ರಿಯೆ. ರಾಜ್ಯದಲ್ಲಿ 50 ಅಥವಾ ಅದಕ್ಕಿಂತ ಕಡಿಮೆ ವಿದ್ಯಾರ್ಥಿಗಳಿರುವ ಶಾಲೆಗಳ ಸಂಖ್ಯೆ 25 ಸಾವಿರದಷ್ಟಿದೆ. ಹೀಗಾಗಿ ಕೆಪಿಎಸ್- ಮ್ಯಾಗ್ನೆಟ್ ಶಾಲೆಗಳಿಗೆ ಈ 25 ಸಾವಿರ ಶಾಲೆಗಳನ್ನು ವಿಲೀನಗೊಳಿಸಿ ಮುಚ್ಚಲಾಗುತ್ತೆ ಎಂಬ ಆತಂಕ ಪೋಷಕರು, ಜನರಲ್ಲಿ ಮನೆ ಮಾಡಿದೆ.
/filters:format(webp)/newsfirstlive-kannada/media/media_files/2025/12/17/magnet-schools-open-in-karnataka-1-2025-12-17-13-37-42.jpg)
ಮ್ಯಾಗ್ನೆಟ್ ಎಂಬುದು ಅಮೆರಿಕಾದ ಶಿಕ್ಷಣದ ಪರಿಕಲ್ಪನೆ. ಇದನ್ನು ಕರ್ನಾಟಕದ ಗ್ರಾಮೀಣಾ ಭಾಗದಲ್ಲಿ ಅಳವಡಿಸಿಕೊಳ್ಳಲು ರಾಜ್ಯ ಶಿಕ್ಷಣ ಇಲಾಖೆ ಮುಂದಾಗಿದೆ. ಹೀಗಾಗಿ ಕರ್ನಾಟಕದಲ್ಲಿ ಈಗ ಗ್ರಾಮೀಣಾ ಭಾಗದಲ್ಲಿ ಇರುವ 25 ಸಾವಿರ ಸರ್ಕಾರಿ ಶಾಲೆಗಳ ಭವಿಷ್ಯ ತೂಗುಯ್ಯಾಲೆಯಲ್ಲಿದೆ.
ಆದರೇ, ರಾಜ್ಯದ ಶಿಕ್ಷಣ ಖಾತೆ ಸಚಿವ ಮಧು ಬಂಗಾರಪ್ಪ ಅವರು ರಾಜ್ಯದಲ್ಲಿ ಯಾವುದೇ ಸರ್ಕಾರಿ ಶಾಲೆಗಳನ್ನು ಮುಚ್ಚುವುದಿಲ್ಲ ಎಂದು ಬಹಿರಂಗವಾಗಿ ಹೇಳುತ್ತಿದ್ದಾರೆ. ಯಾವುದೇ ಮ್ಯಾಗ್ನೆಟ್ ಶಾಲೆಗಳನ್ನು ಆರಂಭಿಸಲ್ಲ ಎಂದು ಬೆಳಗಾವಿಯಲ್ಲಿ ಹೇಳಿದ್ದಾರೆ.
ಆದರೇ, ಶಿಕ್ಷಣ ಇಲಾಖೆ ಮಾತ್ರ ಸದ್ದಿಲ್ಲದೇ, ಕೆಪಿಎಸ್- ಮ್ಯಾಗ್ನೆಟ್ ಶಾಲೆಗಳನ್ನು ಆರಂಭಿಸಲು ಸಿದ್ದತೆ ನಡೆಸುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಜೊತೆಗೆ ಈ ವರ್ಷದ ಆಕ್ಟೋಬರ್ 15 ರಂದು ಇದಕ್ಕೆ ಸಂಬಂಧಿಸಿದಂತೆ ಆದೇಶವನ್ನು ಹೊರಡಿಸಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us