/newsfirstlive-kannada/media/media_files/2025/08/20/kar_rain-2025-08-20-07-29-59.jpg)
ಬಂಗಾಳ ಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದಿಂದಾಗಿ ರಾಜ್ಯಾದ್ಯಂತ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದೆ. ವರುಣನ ಒಡ್ಡೋಲಗಕ್ಕೆ ಅನೇಕ ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಈ ಜಿಲ್ಲೆಗಳಲ್ಲಿ ಮಳೆರಾಯನ ದರ್ಬಾರ್ ಜೋರಾಗಿದೆ.
ಐತಿಹಾಸಿಕ ಪ್ರಸಿದ್ಧ ಶಿವನ ದೇವಸ್ಥಾನಕ್ಕೆ ಜಲದಿಗ್ಬಂಧನ
ಬೀದರ್‌ನಾದ್ಯಂತ ಧಾರಾಕಾರ ಮಳೆಯಾಗ್ತಿದೆ ಕಾರಂಜಾ ಜಲಾಶಯ ಭರ್ತಿಯಾಗಿದ್ದು, ಭಾಲ್ಕಿ ತಾಲೂಕಿನ ಕಟ್ಟಿತೂಗಾಂವ್ ಗ್ರಾಮದಲ್ಲಿರುವ ಶ್ರೀ ಮಲ್ಲಿಕಾರ್ಜುನ ದೇವಾಲಯ ಜಲಾವೃತಗೊಂಡಿದೆ. ಪರಿಣಾಮ ಭಕ್ತರು ದೂರದಿಂದಲೇ ಕೈ ಮುಗಿಯುವಂತ ಪರಿಸ್ಥಿತಿ ನಿರ್ಮಾಣವಾಗಿದೆ.
ಹಾವೇರಿ ತಾಲೂಕಿನ ಕೋಡಬಾಳ ಗ್ರಾಮದಲ್ಲಿ ಮಳೆ ಅವಾಂತರ ಜೊತೆಗೆ ಅಧಿಕಾರಿಗಳ ನಿರ್ಲಕ್ಷ್ಯ ಕೂಡ ಹೆಚ್ಚಾಗಿದೆ. ಮಳೆ ಬಂದ್ರೆ ಸಾಕು ಸರ್ಕಾರಿ ಶಾಲೆ ಕೊಠಡಿ ಸೋರುತ್ತದೆ. ಮೇಲ್ಛಾವಣಿ ಹಂಚುಗಳು ದುಸ್ಥಿತಿಗೆ ಬಂದಿದ್ದು, ಮಕ್ಕಳು ಶಾಲೆಯ ಕಾರಿಡಾರ್ನಲ್ಲಿ ಕುಳಿತು ವಿದ್ಯಾಭ್ಯಾಸ ಮಾಡಬೇಕಾದ ಪರಿಸ್ಥಿತಿ ಇದೆ.
ಗುಂಡಿ ಬಿದ್ದ ರಸ್ತೆಗಳು.. ಕೆಸರು ಗದ್ದೆಯಂತಾದ ಬಡಾವಣೆ!
ಕೊಪ್ಪಳ ನಗರದ ಗಣೇಶ ನಗರದ ಗೃಹ ಮಂಡಳಿಯ ಬಡಾವಣೆ ಪ್ರದೇಶದಲ್ಲಿ ಗುಂಡಿ ಬಿದ್ದ ರಸ್ತೆಗಳು ಕೆಸರುಮಯವಾಗಿದೆ. ಪ್ರತಿ ಬಾರಿ ಮಳೆ ಬಂದಾಗ ಇದೇ ನಮಗೆ ಗೋಳು ಅಂತ ಜನಪ್ರತಿನಿಧಿ-ಅಧಿಕಾರಿಗಳ ವಿರುದ್ಧ ಜನ ಹಿಡಿಶಾಪ ಹಾಕ್ತಿದ್ದಾರೆ.
ಮಹಾ ಮಳೆಯಿಂದಾಗಿ ಬಾಗಲಕೋಟೆ ಜಿಲ್ಲೆಯಲ್ಲಿ ಕೃಷ್ಣ, ಘಟಪ್ರಭಾ, ಮಲಪ್ರಭಾ ಮೂರು ನದಿಗಳು ಉಕ್ಕಿ ಹರಿಯುತ್ತಿವೆ. ಘಟಪ್ರಭಾ ನದಿ ತೀರದ ಗ್ರಾಮಗಳಲ್ಲಿ ಪ್ರವಾಹ ಭೀತಿ ಸೃಷ್ಟಿಯಾಗಿದೆ. ಸದ್ಯ ನದಿಗೆ 53 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದ್ದು, ಹೊರ ಹರಿವು ಮತ್ತಷ್ಟು ಹೆಚ್ಚಳ ಆಗುವ ಸಾಧ್ಯತೆ ಇದೆ. ಹೀಗಾಗಿ ಜನರು ಸುರಕ್ಷಿತ ಸ್ಥಳಕ್ಕೆ ತೆರಳಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ತಿಮ್ಮಾಪುರೆ ಮನವಿ ಮಾಡಿದ್ದಾರೆ. ಇನ್ನು ತೇರದಾಳ ಪ್ರಸಿದ್ಧ ಶ್ರೀ ಅಲ್ಲಮಪ್ರಭು ಜಾತ್ರಾ ನಿಮಿತ್ತವಾಗಿ ನಡೆಯಬೇಕಿದ್ದ ಅಂತಾರಾಷ್ಟ್ರೀಯ ಕುಸ್ತಿ ಪಂದ್ಯಗಳು ನಿರಂತರ ಮಳೆ ಕಾರಣದಿಂದ ರದ್ದಾಗಿದ್ದು, ಕುಸ್ತಿಪ್ರಿಯರಿಗೆ ನಿರಾಸೆ ಮೂಡಿಸಿದೆ.
ಕೃಷ್ಣಾ ಜಲಾನಯನ ವ್ಯಾಪ್ತಿಯಲ್ಲಿ ಮಳೆ ಮುಂದುವರಿದಿದ್ದು, ವಿಜಯಪುರ ಜಿಲ್ಲೆಯ ಆಲಮಟ್ಟಿ ಜಲಾಶಯಕ್ಕೆ ಒಳಹರಿವಿನಲ್ಲಿ ಏರಿಕೆಯಾಗಿದೆ. ಜಲಾಶಯದಿಂದ 2 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಿರೋದ್ರಿಂದ ಜಲಾಶಯದ ಕೆಳಭಾಗದ ಗ್ರಾಮಸ್ಥರಿಗೆ ಹೈ ಅಲರ್ಟ್ ಘೋಷಿಸಲಾಗಿದೆ.
ಇದನ್ನೂ ಓದಿ: ಒಳ ಮೀಸಲಾತಿ; 3 ದಶಕದ ಬೇಡಿಕೆ ಈಡೇರಿಕೆ, ಸಿಎಂ ಸಿದ್ದರಾಮಯ್ಯಗೆ ಸಿಹಿ ತಿನ್ನಿಸಿ ಸಂಭ್ರಮ
ರಜೆ ಘೋಷಣೆ ಮಾಡಲಾದ ಜಿಲ್ಲೆಗಳು
ಜಿಲ್ಲೆಯ ಹೆಸರು | ರಜೆ |
ಬೆಳಗಾವಿ | ಶಾಲಾ-ಕಾಲೇಜು |
ಬಾಗಲಕೋಟೆ | ಶಾಲಾ-ಕಾಲೇಜು |
ಉತ್ತರ ಕನ್ನಡ | ಶಾಲಾ-ಕಾಲೇಜು |
ಧಾರವಾಡ | ಶಾಲಾ-ಕಾಲೇಜು |
ಹಾವೇರಿ | ಶಾಲಾ-ಕಾಲೇಜು |
ಶ್ರಾವಣ ಮಾಸದಲ್ಲಿ ಬಿಡುವಿಲ್ಲದಂತೆ ವರುಣ ಮೃದಂಗ ಬಾರಿಸುತ್ತಿದ್ದು, ಮತ್ತಷ್ಟು ಆತಂಕ ಹೆಚ್ಚುವಂತೆ ಮಾಡಿದೆ. ಮತ್ತೊಂದೆಡೆ ಪ್ರವಾಸಿಗರ ಕಣ್ಣಿಗೆ ಮಳೆರಾಯ ಹಬ್ಬವನ್ನುಂಟು ಮಾಡಿದ್ದಾನೆ. ನಿರಂತರ ಮಳೆಯಿಂದಾಗಿ ಜೋಗದಲ್ಲಿ ಧುಮ್ಮಿಕ್ಕುತ್ತಿರುವ ಜಲಪಾತದ ವೈಭವ ನೋಡಲು ಎರಡು ಕಣ್ಣಗಳು ಸಾಲದಂತಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ