/newsfirstlive-kannada/media/media_files/2026/02/24/sanket-murder-in-shivamogga-2026-02-24-13-50-51.jpg)
ಊರುಗಡೂರಿನಲ್ಲಿ ಹತ್ಯೆಯಾದ ಬಾಲಕ ಸಂಕೇತ್
ಶಿವಮೊಗ್ಗದ ಊರುಗಡೂರಿನಲ್ಲಿ ಅಪ್ರಾಪ್ತ ಬಾಲಕ ಸಂಕೇತ್ ನನ್ನು ನಿನ್ನೆ ಕೊಲೆ ಮಾಡಲಾಗಿದೆ. ಈ ಪ್ರಕರಣ ಶಿವಮೊಗ್ಗದಲ್ಲಿ ಮತ್ತೆ ಉದ್ವಿಗ್ನ ವಾತಾವರಣಕ್ಕೆ ಕಾರಣವಾಗಿದೆ. ಸಂಕೇತ್ ಓದುತ್ತಿದ್ದ ಶಾಲೆಯ ಹಳೆಯ ವಿದ್ಯಾರ್ಥಿಗಳೇ ಕೊಲೆ ಮಾಡಿದ್ದಾರೆ. ಕೊಲೆ ನಡೆದ ಸ್ಥಳದಲ್ಲಿದ್ದ ಮತ್ತೊಬ್ಬ ವಿದ್ಯಾರ್ಥಿಯಿಂದ ನಿನ್ನೆ ರಾತ್ರಿಯೇ ಎಸ್ಪಿ ನಿಖಿಲ್ ಘಟನೆಯ ಮಾಹಿತಿಯನ್ನು ಪಡೆದುಕೊಂಡಿದ್ದಾರೆ.
ಇಂದು ಬೆಳಿಗ್ಗೆ ಊರುಗಡೂರಿನ ಮುಖ್ಯ ರಸ್ತೆಯಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದ್ದಾರೆ. ಸ್ಥಳಕ್ಕೆ ಜಿಲ್ಲಾಧಿಕಾರಿ, ಎಸ್ಪಿ ಹಾಗೂ ಜಿಲ್ಲಾ ಮಂತ್ರಿ ಬರುವಂತೆ ಪಟ್ಟು ಹಿಡಿದಿದ್ದಾರೆ. ಸರ್ಕಾರದ ವಿರುದ್ಧ ಪ್ರತಿಭಟನಾಕಾರರು ಘೋಷಣೆ ಕೂಗಿದ್ದಾರೆ. ಸ್ಥಳಕ್ಕೆ ಬಂದು ಮೃತ ಬಾಲಕನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಕೂಡ ಆಗಮಿಸಿದ್ದಾರೆ.
ತಕ್ಷಣವೇ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಕಟ್ಟಿ ಅವರಿಗೆ ಈಶ್ವರಪ್ಪ ಪೋನ್ ಮಾಡಿದ್ದಾರೆ. ಆದರೇ ಜಿಲ್ಲಾಧಿಕಾರಿ ಪೋನ್ ಕಾಲ್ ರೀಸೀವ್ ಮಾಡಿಲ್ಲ. ಹೀಗಾಗಿ ಜಿಲ್ಲಾಧಿಕಾರಿ ಪಿ.ಎ. ಜೊತೆ ಈಶ್ವರಪ್ಪ ಕೋಪದಿಂದ ಮಾತನಾಡಿದ್ದಾರೆ. ವಿಡಿಯೋ ಕಾನ್ಪರೆನ್ಸ್ ಸಭೆಯೇ ಹೆಚ್ಚಾಯ್ತಾ ಎಂದು ಈಶ್ವರಪ್ಪ ಖಾರವಾಗಿ ಪ್ರಶ್ನಿಸಿದ್ದಾರೆ.
ಅಪ್ರಾಪ್ತ ಬಾಲಕ ಮೃತ ಸಂಕೇತ್ ಮರಣೋತ್ತರ ಪರೀಕ್ಷೆ ಮುಕ್ತಾಯವಾಗಿದೆ. ಶವಾಗಾರದ ಮುಂಭಾಗ ಸಂಕೇತ್ ಕುಟುಂಬಸ್ಥರು ಹಾಗೂ ಬಡಾವಣೆ ನಿವಾಸಿಗಳು ನೆರೆದಿದ್ದಾರೆ. ನಿನ್ನೆ ನಡೆದಿರುವ ಘಟನೆ ಬಗ್ಗೆ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಮೆರವಣಿಗೆ ಮೂಲಕ ಮೃತದೇಹವನ್ನು ತೆಗೆದುಕೊಂಡು ಹೋಗಲಾಗುತ್ತಿದೆ. ಶಿವಮೊಗ್ಗದ ಬಿ.ಹೆಚ್ ರಸ್ತೆ ಮೂಲಕ ಬಸ್ ಸ್ಟ್ಯಾಂಡ್ ಸೇರಿದಂತೆ ಹಲವು ರಸ್ತೆಗಳಲ್ಲಿ ಮೃತದೇಹದ ಮೆರವಣಿಗೆ ಮಾಡಲಾಗಿದೆ. ನೂರಾರು ಬೈಕ್ ಗಳ ಜೊತೆಗೆ ಪಾರ್ಥೀವ ಶರೀರದ ಮೆರವಣಿಗೆ ಮಾಡಲಾಗಿದೆ. ಕೊಲೆಯ ವಿರುದ್ಧ ಹಿಂದೂ ಪರ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಿವಮೊಗ್ಗ ಬಸ್ ಸ್ಟ್ಯಾಂಡ್ ನಲ್ಲಿ ಹಿಂದೂ ಪರ ಸಂಘಟನೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹತ್ಯೆಯಾದ ಸಂಕೇತ್ ಮನೆಯಲ್ಲಿ ತಂದೆ, ತಾಯಿ ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮಗನನ್ನು ನೆನೆದು ಸಂಕೇತ್ ತಾಯಿ ಗೋಳಾಡುತ್ತಿದ್ದಾರೆ. ಮೊನ್ನೆಯಷ್ಟೇ ಸಂಕೇತ್ ಮನೆಯಲ್ಲಿ ತನ್ನ ತಾಯಿಯ ಹುಟ್ಟುಹಬ್ಬ ಆಚರಿಸಿದ್ದ. ಮಗನನ್ನು ನೆನೆದು ತಾಯಿ ಕಣ್ಣೀರು ಸುರಿಸುತ್ತಿದ್ದಾರೆ. ಸಂಕೇತ್ ಮನೆಯ ಮುಂಭಾಗ ಅವರ ಓರ್ವ ಸಂಬಂಧಿ ಅಸ್ವಸ್ಥರಾಗಿದ್ದಾರೆ. ಅಸ್ವಸ್ಥರಾದವರನ್ನು ಕೂಡಲೇ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಕ್ರಿಕೆಟ್ ಮ್ಯಾಚ್ ವಾಗ್ವಾದದಿಂದ ಕೊಲೆ ಆಗಿದೆ - ಎಸ್.ಪಿ. ನಿಖಿಲ್
ಸಂಕೇತ್ ಹತ್ಯೆಯ ಹಿನ್ನಲೆಯಲ್ಲಿ ಶಿವಮೊಗ್ಗದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಶಿವಮೊಗ್ಗ ನಗರದಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಊರುಗಡೂರಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರ ನಿಯೋಜನೆ ಮಾಡಲಾಗಿದೆ. ಗಾಂಜಾ ಹಾವಳಿಯೇ ಘಟನೆಗೆ ಕಾರಣ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಊರುಗಡೂರಿನಲ್ಲಿ ಪೊಲೀಸ್ ಠಾಣೆ ತೆರೆಯುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಸಂಕೇತ್ ನನ್ನು ಅಪ್ರಾಪ್ತ ಬಾಲಕರೇ ಹತ್ಯೆ ಮಾಡಿದ್ದಾರೆ ಎಂಬುದು ಅಘಾತಕಾರಿ ಅಂಶ. ಸಂಕೇತ್ ಓದುತ್ತಿದ್ದ ಶಾಲೆಯ ಹಳೆಯ ವಿದ್ಯಾರ್ಥಿಗಳೇ ಸೇರಿಕೊಂಡು ಸಂಕೇತ್ ನನ್ನು ಹತ್ಯೆ ಮಾಡಿದ್ದಾಗಿ ಪ್ರತ್ಯಕ್ಷದರ್ಶಿಗಳು ಪೊಲೀಸರಿಗೆ ತಿಳಿಸಿದ್ದಾರೆ.
ಇನ್ನೂ ಸಂಕೇತ್ ಹತ್ಯೆಯ ಬಗ್ಗೆ ಶಿವಮೊಗ್ಗ ಎಸ್.ಪಿ. ನಿಖಿಲ್ ಪ್ರತಿಕ್ರಿಯಿಸಿದ್ದಾರೆ. ಕ್ರಿಕೆಟ್ ಮ್ಯಾಚ್ ವಾಗ್ವಾದದಿಂದ ಕೊಲೆ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಜನರನ್ನು ವಶಕ್ಕೆ ಪಡೆದಿದ್ದೇವೆ. ಇದಕ್ಕೆ ಒಂದು ವಿಶೇಷ ತನಿಖಾ ತಂಡ ರಚಿಸಿದ್ದೇವೆ. ಎರಡು ದಿನದ ಹಿಂದೆ ಕ್ರಿಕೆಟ್ ಮ್ಯಾಚ್ ನಡೆದಿತ್ತು. ಗಾಂಜಾ ಹಾವಳಿ ಬಗ್ಗೆಯೂ ತನಿಖೆ ಮಾಡುತ್ತೇವೆ . ಇಲ್ಲಿ ಒಂದು ಪೊಲಿಸ್ ಉಪ ಠಾಣೆಯನ್ನು ತೆರೆಯಲು ಕ್ರಮ ಕೈಗೊಳ್ಳುತ್ತೇವೆ. ಆರೋಪಿಗಳನ್ನು ಗಾಂಜಾ ಟೆಸ್ಟ್ ಗೆ ಒಳಪಡಿಸುತ್ತೇವೆ ಎಂದು ಎಸ್ಪಿ ನಿಖಿಲ್ ಹೇಳಿದ್ದಾರೆ.
ಸರ್ಕಾರದಿಂದ 15 ಲಕ್ಷ ರೂಪಾಯಿ ಪರಿಹಾರ ಘೋಷಣೆ
ಹತ್ಯೆಯಾದ ಸಂಕೇತ್ ಕುಟುಂಬಕ್ಕೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 10 ಲಕ್ಷ, ಶಿಕ್ಷಣ ಇಲಾಖೆಯಿಂದ 5 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಲಾಗಿದೆ. ಸರ್ಕಾರದ ಪರವಾಗಿ ಡಿಸಿ ಪ್ರಭುಲಿಂಗ ಕವಳಿಕಟ್ಟಿ ಪರಿಹಾರದ ಹಣದ ಬಗ್ಗೆ ಘೋಷಣೆ ಮಾಡಿದ್ದಾರೆ. ನಿನ್ನೆ ನಡೆದ ಘಟನೆಯಲ್ಲಿ 10ನೇ ತರಗತಿ ವಿದ್ಯಾರ್ಥಿ ಸಂಕೇತ ಹತ್ಯೆಯಾಗಿದೆ. ಸಿಎಂ, ಉಸ್ತುವಾರಿ ಸಚಿವ ರೊಂದಿಗೆ ಮಾತಾಡಿ ಪರಿಹಾರ ಘೋಷಣೆ ಮಾಡಲಾಗಿದೆ. ಈ ಪ್ರಕರಣದಲ್ಲಿ ಈಗಾಗಲೇ ಏಳು ಮಂದಿ ಆರೋಪಿಗಳನ್ನು ಬಂಧಿಸಿಲಾಗಿದೆ. ಅಟ್ರಾಸಿಟಿ ಕೇಸ್ ಕೂಡ ದಾಖಲಾಗಿದೆ. ಮೃತ ಸಂಕೇತ ಜೊತೆಗೆ ಗಾಯಾಳು ಆಗಿರುವ ಗಿರೀಶ್ ಗೆ ಪರಿಹಾರ ನೀಡಲಾಗುವುದು. ಮಾದಕ ವಸ್ತುಗಳ ಬಗ್ಗೆ ಜಿಲ್ಲಾಡಳಿತದಿಂದ ಸಾಕಷ್ಟು ಜಾಗೃತಿ ಕಾರ್ಯಕ್ರಮ ನಡೆಸುತ್ತಿದೆ. ಈ ಭಾಗದಲ್ಲಿ ಹೆಚ್ಚಿನ ಪೊಲೀಸ್ ಭದ್ರತೆಯನ್ನು ಒದಗಿಸಲಾಗುವುದು. ಬಡಾವಣೆಯಲ್ಲಿ ಉಪ ಪೊಲೀಸ್ ಠಾಣೆ ತೆರೆಯುವ ಬಗ್ಗೆ ಸ್ಥಳೀಯರು ಒತ್ತಾಯಿಸಿದ್ದಾರೆ. ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಕಟ್ಟಿ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us