/newsfirstlive-kannada/media/media_files/2025/08/18/gruhalaxmi-scheme-022-2025-08-18-18-40-07.jpg)
ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು 2 ಸಾವಿರ ನೀಡಿಕೆಯ ಭರವಸೆ
ರಾಜ್ಯ ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಗೃಹಲಕ್ಷ್ಮಿ ಯೋಜನೆಯೂ ಒಂದು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೇ, ಪ್ರತಿ ತಿಂಗಳು ನಮ್ಮ ಬ್ಯಾಂಕ್ ಖಾತೆಗೆ 2 ಸಾವಿರ ರೂಪಾಯಿ ಬರುತ್ತೆ ಅಂತ ನಿರೀಕ್ಷೆ ಇಟ್ಟುಕೊಂಡೇ ಅದೆಷ್ಟೋ ಮಹಿಳೆಯರು 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿದ್ದಾರೆ. ಆದರೇ, ನಿರೀಕ್ಷೆಯಂತೆ ರಾಜ್ಯದ ಮಹಿಳೆಯರ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿ ಹಣವೇ ಬರುತ್ತಿಲ್ಲ.
2023 ರ ಆಗಸ್ಟ್ 15 ರಂದು ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಲಾಗಿತ್ತು. ಯೋಜನೆಗೆ ಚಾಲನೆ ಸಿಕ್ಕಿ ಭರ್ತಿ ಎರಡು ವರ್ಷ ಪೂರ್ತಿಯಾಗಿದೆ. ಆದರೇ, ಈಗ ಕಳೆದ ಮೂರು ನಾಲ್ಕು ತಿಂಗಳಿನಿಂದ ಹಣವೇ ಬಂದಿಲ್ಲ ಎಂದು ಮಹಿಳೆಯರು ತಮ್ಮ ಸಂಕಷ್ಟ ತೋಡಿಕೊಂಡಿದ್ದಾರೆ.
ಗೃಹ ಲಕ್ಷ್ಮಿ ಯೋಜನೆಯಡಿ ರಾಜ್ಯದ ಮಹಿಳೆಯರ ಬ್ಯಾಂಕ್ ಖಾತೆಗೆ ಕಳೆದ ಮೂರು ನಾಲ್ಕು ತಿಂಗಳಿನಿಂದ ಹಣವೇ ಬಂದಿಲ್ಲ. ರಾಜ್ಯದಲ್ಲಿ ಒಂದಾದ ಮೇಲೋಂದರಂತೆ ಹಬ್ಬಗಳು ಬರುತ್ತಿವೆ. ಆಷಾಢ ಮುಗಿದ ಶ್ರಾವಣ ಬಂದಿದೆ. ಇದು ಹಬ್ಬದ ಸೀಸನ್. ಗೃಹಲಕ್ಷ್ಮಿ ಹಣ ಬಂದರೇ, ಹಬ್ಬದ ಖರ್ಚಿಗೆ ಆಗುತ್ತೆ ಎಂದು ಚಾತಕ ಪಕ್ಷಿಗಳಂತೆ ಫಲಾನುಭವಿ ಮಹಿಳೆಯರು ಕಾಯುತ್ತಿದ್ದಾರೆ. ಆದರೇ, ರಾಜ್ಯ ಸರ್ಕಾರ ಅದ್ಯಾಕೋ ಗೃಹಿಣಿಯರ ಬ್ಯಾಂಕ್ ಖಾತೆಗೆ ಹಣವನ್ನು ಜಮಾ ಮಾಡುವ ಗೋಜಿಗೆ ಹೋಗಿಲ್ಲ. ರಾಜ್ಯದಲ್ಲಿ ಆಷಾಢ ಮುಗಿದು ಶ್ರಾವಣ ಬಂದಿದೆ. ಶ್ರಾವಣದಲ್ಲೂ ಹಬ್ಬಗಳ ಸಾಲೇ ಇದೆ. ಸದ್ಯದಲ್ಲೇ ಗೌರಿ- ಗಣೇಶನ ಹಬ್ಬ ಇದೆ. ಗೌರಿ ಹಬ್ಬಕ್ಕೆ ಹೆಣ್ಣು ಮಕ್ಕಳೆಲ್ಲಾ ಹೊಸ ಸೀರೆ, ಬಟ್ಟೆ ಬರೆ ಖರೀದಿ ಮಾಡ್ಬೇಕು. ಹಬ್ಬದ ಖರ್ಚಿಗೂ ಹಣ ಬೇಕು. ಆದರೇ, ಗೃಹ ಲಕ್ಷ್ಮಿ ಹಣ ಬಾರದೇ ಹಬ್ಬ ಹೇಗೆ ಮಾಡೋದು ಎಂಬ ಚಿಂತೆಯಲ್ಲಿ ರಾಜ್ಯದ ಮಹಿಳೆಯರು ಇದ್ದಾರೆ.
ರಾಜ್ಯದಲ್ಲಿ ಸರ್ಕಾರಿ ನೌಕರರಿಗೆ ಮಾತ್ರವೇ ಪ್ರತಿ ತಿಂಗಳು ಕರೆಕ್ಟಾಗಿ ಟೈಮ್ ಗೆ ಸರಿಯಾಗಿ ಸಂಬಳ ಕೊಡ್ತೀರಾ. ನಮಗೆ ಅದೇ ರೀತಿ ಕೊಡಲಿಕ್ಕೆ ಏನ್ ಸಮಸ್ಯೆ. ನಮಗೂ ಚುನಾವಣೆಗೂ ಮುನ್ನ ಪ್ರತಿ ತಿಂಗಳು 2 ಸಾವಿರ ಕೊಡುತ್ತೇವೆ ಅಂತ ನಮ್ಮಿಂದ ಕಾಂಗ್ರೆಸ್ ಪಾರ್ಟಿ ವೋಟ್ ಹಾಕಿಸಿಕೊಂಡಿದೆ. ಈಗ ಪ್ರತಿ ತಿಂಗಳು ಕೊಡದೇ, ಮೂರು ನಾಲ್ಕು ತಿಂಗಳಿಗೊಮ್ಮೆ ಕೊಡೋದು ಸರಿಯಲ್ಲ ಅಂತ ರಾಜ್ಯದ ಗೃಹಲಕ್ಷ್ಮಿ ಫಲಾನುಭವಿ ಮಹಿಳೆಯರು ಕಾಂಗ್ರೆಸ್ ಸರ್ಕಾರದ ವಿರುದ್ಧ ಅಸಮಾಧಾನ, ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಗೃಹ ಲಕ್ಷ್ಮಿ ಯೋಜನೆಯಿಂದ ಮತ್ತೆ ಮಹಿಳೆಯರ ಕೈಗೆ ಹಣ ಕೊಡುತ್ತಿದ್ದೇವೆ. ಇದರಲ್ಲಿ ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ಹೋಗುತ್ತಿದೆ. ಯಾವುದೇ ಮಧ್ಯವರ್ತಿಗಳು, ಭ್ರಷ್ಟಾಚಾರಕ್ಕೆ ಅವಕಾಶವೇ ಇಲ್ಲ ಎಂದು ರಾಜ್ಯ ಸರ್ಕಾರ ತನ್ನ ಬೆನ್ನನ್ನು ತಾನೇ ತಟ್ಟಿಕೊಳ್ಳುತ್ತಿದೆ. ಆದರೇ, 3-4 ತಿಂಗಳಿನಿಂದ ಏಕೆ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಾಕಿಲ್ಲ ಎಂಬ ಪ್ರಶ್ನೆಗೆ ರಾಜ್ಯ ಸರ್ಕಾರ ಉತ್ತರವನ್ನು ನೀಡಿಲ್ಲ.
ರಾಜ್ಯದಲ್ಲಿ ಗೃಹ ಲಕ್ಷ್ಮಿ ಯೋಜನೆ ಜಾರಿಯಾದ ತಿಂಗಳಿನಿಂದಲೂ ಹೀಗೆಯೇ ತಡವಾಗಿಯೇ ಹಣವನ್ನು ನೀಡಲಾಗುತ್ತಿದೆ. ಈಗ ಮೂರು ತಿಂಗಳ ಹಣ ಬ್ಯಾಂಕ್ ಖಾತೆಗೆ ಬರಬೇಕೆಂದು ಗೃಹಲಕ್ಷ್ಮಿ ಫಲಾನುಭವಿ ಮಹಿಳೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಜಯಲಕ್ಷ್ಮಿ ಹೇಳಿದ್ದಾರೆ.
ಮಹಿಳೆಯರು ಈಗ ತಮ್ಮ ಬ್ಯಾಂಕ್ ಗಳಿಗೆ ಬ್ಯಾಂಕ್ ಬ್ಯಾಲೆನ್ಸ್ ಚೆಕ್ ಮಾಡುವುದರಲ್ಲೇ ಬ್ಯುಸಿಯಾಗಿದ್ದಾರೆ. ಮೊಬೈಲ್ ಗೂ ಹಣ ಜಮಾ ಆಗಿರುವ ಎಸ್‌ಎಂಎಸ್ ಬರುತ್ತಾ ಎಂದು ಆಗ್ಗಾಗ್ಗೆ ಮೊಬೈಲ್ ಎಸ್‌ಎಂಎಸ್ ಚೆಕ್ ಮಾಡುತ್ತಿದ್ದಾರೆ.
ಹಬ್ಬದ ಟೈಮ್ ನಲ್ಲಾದರೂ ಹಣ ಹಾಕಲಿ, ಮನೆಯಲ್ಲಿ ಹಬ್ಬವನ್ನು ಚೆನ್ನಾಗಿ ಮಾಡಲು ಅನುಕೂಲವಾಗುತ್ತೆ ಅಂತ ಶಿವಮೊಗ್ಗದ ಕಾವ್ಯಾ ಎಂಬ ಮಹಿಳೆ ಒತ್ತಾಯಿಸಿದ್ದಾರೆ.
ಕೆಲವು ಜಿಲ್ಲೆಗಳಲ್ಲಿ ಮಾರ್ಚ್ ತಿಂಗಳ ಗೃಹ ಲಕ್ಷ್ಮಿ ಯೋಜನೆಯ ಹಣವನ್ನೂ ಆಗಸ್ಟ್ ತಿಂಗಳು ಅರ್ಧ ಕಳೆದರೂ ಇನ್ನೂ ನೀಡಿಲ್ಲವಂತೆ. ಇನ್ನೂ ಕೆಲವು ಜಿಲ್ಲೆಗಳಲ್ಲಿ ಜೂನ್, ಜುಲೈ ತಿಂಗಳ ಗೃಹಲಕ್ಷ್ಮಿ ಯೋಜನೆಯ ಹಣವೂ ಬಂದಿಲ್ಲ. ಇನ್ನೂ ಹನ್ನೆರೆಡು ದಿನ ಕಳೆದರೇ, ಆಗಸ್ಟ್ ತಿಂಗಳು ಕೂಡ ಮುಗಿಯುತ್ತೆ. ಸರ್ಕಾರ ಅದ್ಯಾವಾಗ ಗೃಹಲಕ್ಷ್ಮಿ ಹಣ ನೀಡುತ್ತೆ ಎಂಬುದು ಮಹಿಳಾ ಮತ್ತು ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೂ ಗೊತ್ತಿಲ್ಲವಂತೆ. ಹಣಕಾಸು ಇಲಾಖೆಯಿಂದ ಆಯಾ ಜಿಲ್ಲೆಯ ಅಧಿಕಾರಿಗಳಿಗೆ ಹಣ ಹೋಗುತ್ತೆ. ಬಳಿಕ ಆಯಾ ಜಿಲ್ಲೆಗಳಲ್ಲಿ ತಾಲ್ಲೂಕುವಾರು ಅಧಿಕಾರಿಗಳಿಂದ ಹಣ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಖಾತೆಗೆ ಜಮಾ ಆಗುತ್ತೆ.
ಇನ್ನೂ ರಾಜ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಗೃಹಲಕ್ಷ್ಮಿ ಹಣವನ್ನು ನೀಡುತ್ತೇವೆ, ಸ್ಪಲ್ಪ ತಡವಾಗಿದೆ. ಕೆಲವೊಂದು ತಾಂತ್ರಿಕ ತೊಂದರೆ ಇದೆ ಎಂಬುದನ್ನ ಮಾತ್ರ ಆಗ್ಗಾಗ್ಗೆ ಹೇಳುತ್ತಾರೆ. ನಿರ್ದಿಷ್ಟವಾಗಿ, ನಿಖರವಾಗಿ ಯಾವಾಗ ಗೃಹಲಕ್ಷ್ಮಿ ಹಣ ಮಹಿಳೆಯರ ಬ್ಯಾಂಕ್ ಖಾತೆಗೆ ಬರುತ್ತೆ ಎನ್ನುವುದನ್ನು ಮಾತ್ರ ಹೇಳುತ್ತಿಲ್ಲ ಎಂದು ಗೃಹ ಲಕ್ಷ್ಮಿ ಯೋಜನೆಯ ಫಲಾನುಭವಿ ಮಹಿಳೆಯರು ನೋವು ತೋಡಿಕೊಂಡಿದ್ದಾರೆ.
ಇನ್ನೂ ರಾಜ್ಯದ ಸಚಿವರೊಬ್ಬರು ಈ ಹಿಂದೆ ನಾವು ಗೃಹಲಕ್ಷ್ಮಿ ಯೋಜನೆಯಡಿ ಮಹಿಳೆಯರಿಗೆ ತಿಂಗಳಿಗೆ 2 ಸಾವಿರ ರೂಪಾಯಿ ಹಣ ನೀಡುವ ಭರವಸೆ ನೀಡಿದ್ದೇವೆ. ಆದರೇ, ಪ್ರತಿ ತಿಂಗಳು ನೀಡುತ್ತೇವೆ ಅಂತ ಹೇಳಿಲ್ಲ. ಕೆಲವೊಮ್ಮೆ ಮೂರು ನಾಲ್ಕು ತಿಂಗಳಿಗೊಮ್ಮೆ ನೀಡುತ್ತೇವೆ ಎಂದು ರಾಜ್ಯದ ಸಚಿವರೊಬ್ಬರೇ ಈ ಹಿಂದೆ ಹೇಳಿದ್ದು ಜನರಿಗೂ ನೆನಪಿದೆ. ಈಗ ಅದೇ ರೀತಿ ಮೂರು ನಾಲ್ಕು ತಿಂಗಳಿಗೊಮ್ಮೆ ಗೃಹಲಕ್ಷ್ಮಿ ಹಣ ಬರುವ ಸ್ಥಿತಿ ಇದೆ.
ಈಗ ಕೇಂದ್ರ ಸರ್ಕಾರವು ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್ ಮೂಲಕ ಹಣ ಬಿಡುಗಡೆ ಮಾಡುವಂತೆ ನಿಯಮ ರೂಪಿಸಿದೆಯಂತೆ. ಇದರಿಂದ 2 ವಾರ ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆ ತಡವಾಗುತ್ತಿದೆ ಎಂದು ಇತ್ತೀಚೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರೇ ಹೇಳಿದ್ದಾರಂತೆ. ಆದರೂ, ಸದ್ಯದಲ್ಲೇ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸುವ ಭರವಸೆಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ನೀಡಿದ್ದಾರೆ.
ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆಯು 2 ವರ್ಷದ ಹಿಂದೆಯೇ ಶುರುವಾಗಿದೆ. ಆಗಲೇ ಎಲ್ಲರೂ ಸರತಿ ಸಾಲಿನಲ್ಲಿ ನಿಂತು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಾಗಲು ನೋಂದಾಣಿ ಮಾಡಿಕೊಂಡಿದ್ದಾರೆ. ಆದರೇ, ಈಗಲೂ ಹೊಸದಾಗಿ ಈ ಯೋಜನೆಯ ಫಲಾನುಭವಿಗಳಾಗಲು ಪ್ರತಿ ತಿಂಗಳು ಹತ್ತರಿಂದ 15 ಸಾವಿರ ಮಂದಿ ಮಹಿಳೆಯರು ಹೊಸದಾಗಿ ನೋಂದಾಣಿ ಮಾಡಿಕೊಳ್ಳುತ್ತಿದ್ದಾರಂತೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.