/newsfirstlive-kannada/media/media_files/2025/09/24/sl_bhyrappa-2025-09-24-15-42-39.jpg)
ಬೆಂಗಳೂರು: ನಾಡಿನ ಹಿರಿಯ ಸಾಹಿತಿ, ಲೇಖಕ, ವಿಮರ್ಶಕ, ಅಧ್ಯಾಪಕ ಎಸ್.​ಎಲ್ ಭೈರಪ್ಪ ಅವರು ವಯೋಸಹಜ ಕಾಯಿಲೆಯಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ನಿಧನ ಹೊಂದಿದ್ದಾರೆ.
ಸಂತೇಶಿವರ ಲಿಂಗಣ್ಣಯ್ಯ ಭೈರಪ್ಪ (94) ಅವರು ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಈ ಸಂಬಂಧ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೇ ಇಂದು ನಿಧನರಾಗಿದ್ದಾರೆ. ಕನ್ನಡ ಸಾರಸ್ವತ ಲೋಕಕ್ಕೆ ಮೊದಲ ಸರಸ್ವತಿ ಸಮ್ಮಾನ್ ಪ್ರಶಸ್ತಿಯ ಗೌರವವನ್ನು ತಂದುಕೊಟ್ಟ ಹಿರಿಯ ಸಾಹಿತಿ ಭೈರಪ್ಪ ಇನ್ಮುಂದೆ ನೆನಪು ಮಾತ್ರ.
ಹೇಗಿತ್ತು ಭೈರಪ್ಪನವರ ಜೀವನ?
ಎಸ್​.ಎಲ್​ ಭೈರಪ್ಪ ಅವರು 1931 ಜುಲೈ 26 ರಂದು ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಸಂತೇಶಿವರದಲ್ಲಿ ಜನಿಸಿದರು. ಇವರ ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಿನಲ್ಲೇ ಪಡೆದರು. ಕಿತ್ತು ತಿನ್ನುವ ಬಡತನದಲ್ಲಿ ಹೊಸ ಚಿಗುರು ಎನ್ನುವಂತೆ ಬೆಳೆದರು. ಏಕೆಂದರೆ ಆಗಿನ ಪ್ಲೇಗ್​​ ಮಾರಿಯಿಂದ ಅವರ ತಾಯಿಯನ್ನು ಕಳೆದುಕೊಂಡರು. ವಿಶ್ವ ವಿಶಾಲತೆಯ ರಂಗದಲ್ಲಿ ಸಾಹಸಮಯವಾದ ಬದುಕನ್ನು ತಾವೇ ನಿರ್ಮಿಸಿಕೊಂಡರು. ಕಷ್ಟದಲ್ಲೂ ವಿದ್ಯಾಭ್ಯಾಸ ಮಾಡಿದರು. ಗಾಂಧೀಜಿಯವರ ಮೌಲ್ಯಗಳಿಗೆ ಬೆಲೆ ಕೊಟ್ಟು ಸ್ವಾತಂತ್ರ ಚಳುವಳಿಗೆ ತೊಡಗಿಸಿಕೊಂಡಾಗ ಅವರಿಗೆ ಕೇವಲ 13 ವರ್ಷಗಳು ಅಷ್ಟೇ.
ಪ್ರೌಢ ಶಿಕ್ಷಣ, ಕಾಲೇಜು ಎರಡನ್ನು ಮೈಸೂರಿನಲ್ಲಿ ಪೂರ್ಣಗೊಳಿಸಿದರು. ಎಂ.ಎ. ಪದವಿಯನ್ನು ಕೂಡ ಇಲ್ಲಿಯೇ ಪಡೆದರು. ಆದರೆ ಎಂ.ಎ. ನಲ್ಲಿ ಚಿನ್ನದ ಪದಕದೊಂದಿಗೆ ತೇರ್ಗಡೆಯಾಗಿರುವುದು ಎಸ್​.ಎಲ್​ ಬೈರಪ್ಪ ಅವರ ಯಶಸ್ಸಿನ ಮೊದಲ ಹೆಜ್ಜೆ ಎನ್ನಬಹುದು. ಮುಂದೆ ಬರೋಡಾದ ಮಹಾರಾಜ ಸಯ್ಯಾಜಿರಾವ್ ವಿಶ್ವವಿದ್ಯಾಲಯದಿಂದ ಸತ್ಯ ಮತ್ತು ಸೌಂದರ್ಯ (Truth and Beauty) ಎಂಬ ಇಂಗ್ಲಿಷ್‌ನಲ್ಲಿ ರಚಿಸಿದ ಮಹಾ ಪ್ರಬಂಧಕ್ಕಾಗಿ ಡಾಕ್ಟರೇಟ್ ಪದವಿ ಗಳಿಸಿದರು.
ಎಸ್.ಎಲ್. ಭೈರಪ್ಪ ಅವರು ಹುಬ್ಬಳ್ಳಿಯ ಶ್ರೀ ಕಾಡಸಿದ್ಧೇಶ್ವರ ಕಾಲೇಜು, ಗುಜರಾತ್‌ನ ಸರ್ದಾರ್ ಪಟೇಲ್ ವಿಶ್ವವಿದ್ಯಾಲಯ, ದೆಹಲಿಯ ಎನ್‌ಸಿಇಆರ್‌ಟಿ ಮತ್ತು ಮೈಸೂರಿನ ಪ್ರಾದೇಶಿಕ ಶಿಕ್ಷಣ ಕಾಲೇಜಿನಲ್ಲಿ ತರ್ಕ ಮತ್ತು ಮನೋವಿಜ್ಞಾನದ ಉಪನ್ಯಾಸಕರಾಗಿದ್ದರು. 1991ರಲ್ಲಿ ಉಪನ್ಯಾಸಕ ವೃತ್ತಿಯಿಂದ ನಿವೃತ್ತರಾದರು. ಇದಾದ ಮೇಲೆ ಇವರು ಪತ್ನಿಯೊಂದಿಗೆ ಮೈಸೂರಿನಲ್ಲಿ ವಾಸವಿದ್ದರು.
ರಾಷ್ಟ್ರೀಯ ಮಟ್ಟದಲ್ಲಿ ಕನ್ನಡ ಕಾದಂಬರಿ
ಭೈರಪ್ಪ ಅವರ ಕೃತಿಗಳನ್ನು ಇಂಗ್ಲಿಷ್, ಕನ್ನಡ ಮತ್ತು ಸಂಸ್ಕೃತ ಭಾಷೆಗಳಲ್ಲಿ ಪ್ರಕಟವಾಗಿವೆ. ಭಾರತೀಯ ಅಧ್ಯಯನ ಮತ್ತು ಪಾಶ್ಚಿಮಾತ್ಯ ತತ್ವಶಾಸ್ತ್ರ ಕೋರ್ಸ್‌ಗಳಲ್ಲಿ ಕಲಿಸಲಾಗುತ್ತದೆ. ಡಾ.ಎಸ್.ಎಲ್. ಭೈರಪ್ಪ ಕರ್ನಾಟಕದಲ್ಲಿ ಮಾತ್ರವಲ್ಲದೆ ಭಾರತಾದ್ಯಂತ ಸಾಹಿತ್ಯಾಸಕ್ತರಿಗೆ ಚಿರಪರಿಚಿತ ಹೆಸರು. ಕನ್ನಡ ಕಾದಂಬರಿ ಸಾಹಿತ್ಯವನ್ನು ರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸುತ್ತಿರುವ ಕೀರ್ತಿ ಇವರಿಗೆ ಸಲ್ಲುತ್ತದೆ. ಕನ್ನಡ ಸಾರಸ್ವತ ಲೋಕಕ್ಕೆ ಮೊದಲ ಸರಸ್ವತಿ ಸಮ್ಮಾನ್ ಪ್ರಶಸ್ತಿಯ ಗೌರವವನ್ನು ತಂದುಕೊಟ್ಟ ಸಂತೇಶಿವರ ಲಿಂಗಣ್ಣಯ್ಯ ಭೈರಪ್ಪನವರ ಕಾದಂಬರಿಗಳು ಭಾರತದ ಬಹುತೇಕ ಭಾಷೆಗಳಿಗೆ ಅನುವಾದಗೊಂಡಿವೆ. ಹೀಗಾಗಿಯೇ ಭಾರತ ಸರ್ಕಾರವು 2023ರಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ.
ಜ್ಞಾತಕಲಾವಿದರಾದ ಭೈರಪ್ಪನವರ ಕಾದಂಬರಿಗಳ ಕಥಾವಸ್ತು ಮಾನವ ಸಹಜ ಸಂವೇದನಗಳ ಸುತ್ತ ಹೊಸೆದುಕೊಂಡಿರುತ್ತವೆ. ತಮ್ಮ ತತ್ವಶಾಸ್ತ್ರ ಮತ್ತು ಸಂಸ್ಕೃತಿಯ ಆಳವಾದ ಅಧ್ಯಯನದೊಂದಿಗೆ, ಬಾಲ್ಯದ ಗ್ರಾಮೀಣಜೀವನ ಮತ್ತು ಮಹಾನಗರದ ಬದುಕನ್ನು ಅವರು ಹತ್ತಿರದಿಂದ ಕಂಡವರು. ಅಧ್ಯಯನ ಮತ್ತು ಜೀವನಾನುಭವ ಮಿಳಿತಗೊಂಡು ಸೃಷ್ಟಿಯಾಗುವ ಅವರ ಕಾದಂಬರಿಯ ಪಾತ್ರಗಳು ತಮ್ಮ ಬೇರುಗಳನ್ನು ಭಾರತೀಯ ನೆಲದಲ್ಲಿ ಕಂಡುಕೊಳ್ಳುತ್ತವೆ.
ಇದನ್ನೂ ಓದಿ:Breaking: ಕನ್ನಡದ ಹಿರಿಯ ಸಾಹಿತಿ ಎಸ್​ಎಲ್​ ಬೈರಪ್ಪ ಇನ್ನಿಲ್ಲ
ಹಲವು ವಿಶ್ವವಿದ್ಯಾಲಯಗಳಲ್ಲಿ ಕಾದಂಬರಿಗಳು ಪಠ್ಯವಾಗಿವೆ
ಕರ್ನಾಟಕ ಆದಿಯಾಗಿ ಭಾರತ ಮತ್ತು ವಿದೇಶಗಳಲ್ಲೂ ಅವರ ಕಾದಂಬರಿಗಳ ಕುರಿತಾದ ವಿಚಾರಗೋಷ್ಠಿಗಳು ನಡೆದು, ಅವರ ಕಾದಂಬರಿಗಳ ಅಧ್ಯಯನ ಗ್ರಂಥ ಸಂಪುಟಗಳು ಹೊರಬಂದಿವೆ. ಭೈರಪ್ಪನವರ ಕಾದಂಬರಿಗಳು ಕರ್ನಾಟಕದ ಹಲವು ವಿಶ್ವವಿದ್ಯಾಲಯಗಳ ಪಠ್ಯಗಳಾಗಿ ಸ್ಥಾನವನ್ನು ಪಡೆದಿರುವುದಲ್ಲದೇ, 20ಕ್ಕೂ ಹೆಚ್ಚು ಸಂಶೋಧನಾ ವಿದ್ಯಾರ್ಥಿಗಳ ಅಧ್ಯಯನದ ವಿಷಯವೂ ಆಗಿವೆ. ಭೈರಪ್ಪನವರ 24 ಕಾದಂಬರಿಗಳನ್ನೂ ಹಾಗೂ ಸಾಹಿತ್ಯವಿಮರ್ಶೆ, ಸೌಂದರ್ಯಮೀಮಾಂಸೆ ಮತ್ತು ಸಂಸ್ಕೃತಿಯ ಕುರಿತಾಗಿ 5 ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಅವರ ಬಹುತೇಕ ಕಾದಂಬರಿಗಳು ಭಾರತದ 14 ಭಾಷೆಗಳಿಗೂ ಅನುವಾದಗೊಂಡು, 6 ಕಾದಂಬರಿಗಳು ಇಂಗ್ಲೀಷಿಗೆ ಅನುವಾದಗೊಂಡಿವೆ. ಅವರು ಮೂರು ದಶಕಳಿಗೂ ಹೆಚ್ಚು ಕಾಲ ಎನ್.ಸಿ.ಈ.ಆರ್.ಟಿ ಯಲ್ಲಿ ತತ್ತ್ವಶಾಸ್ತ್ರದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.
ಭೈರಪ್ಪನವರು ಭಾರತೀಯ ಮತ್ತು ಪಾಶ್ಚಾತ್ಯ ಸಂಗೀತಾಸಕ್ತರಾಗಿರುವುದರೊಂದಿಗೆ ಚಿತ್ರ ಮತ್ತು ಶಿಲ್ಪಕಲೆಯಲ್ಲೂ ಅಭಿರುಚಿ ಹೊಂದಿದ್ದಾರೆ. ಬಾಲ್ಯದಿಂದಲೇ ಪ್ರವಾಸದ ಗೀಳು ಹತ್ತಿಸಿಕೊಂಡಿದ್ದ ಇವರು, ಉತ್ತರ ಮತ್ತು ದಕ್ಷಿಣ ಧೃುವಗಳೂ ಒಳಗೊಂಡಂತೆ ವಿಶ್ವದ ಏಳೂ ಭೂಖಂಡಗಳಲ್ಲಿ ಪ್ರವಾಸ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ