/newsfirstlive-kannada/media/media_files/2025/08/19/ananya-bhat-alias-vasanthi-1-2025-08-19-13-33-45.jpg)
ವಾಸಂತಿ ಹಾಗೂ ಅನನ್ಯಾ ಭಟ್ ಪೋಟೋ
ಧರ್ಮಸ್ಥಳದಲ್ಲಿ ಅನನ್ಯ ಭಟ್ ನಾಪತ್ತೆ ಪ್ರಕರಣದ ತನಿಖೆ ಶಿವಮೊಗ್ಗ ಜಿಲ್ಲೆಯ ರಿಪ್ಪನ್ ಪೇಟೆವರೆಗೂ ವಿಸ್ತರಿಸಿದೆ. ಎಸ್ಐಟಿ ತಂಡ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ರಿಪ್ಪನ್ ಪೇಟೆಗೆ ಭೇಟಿ ನೀಡಿ ಪರಿಶೀಲನೆ ಮತ್ತು ತನಿಖೆ ನಡೆಸಿದೆ. ತಮ್ಮ ಮಗಳು ಅನನ್ಯ ಭಟ್ 2003 ರಲ್ಲಿ ಧರ್ಮಸ್ಥಳದಲ್ಲಿ ನಾಪತ್ತೆಯಾಗಿ, ಕೊಲೆಯಾಗಿದ್ದಾರೆ ಎಂದು ದೂರು ನೀಡಿರುವ ವೃದ್ದ ಮಹಿಳೆ ಸುಜಾತ ಭಟ್ ಅವರ ಹಿನ್ನಲೆಯ ಬಗ್ಗೆ ತೀವ್ರವಾಗಿ ತನಿಖೆ ನಡೆಸುತ್ತಿದೆ. ಕೆಲವು ಮೂಲಗಳ ಮಾಹಿತಿಯ ಪ್ರಕಾರ, ಸುಜಾತ್ ಭಟ್ 1999 ರಿಂದ 2007 ರವರೆಗೂ ಹೊಸನಗರ ತಾಲ್ಲೂಕಿನ ರಿಪ್ಪನ್ ಪೇಟೆಯಲ್ಲಿ ವಾಸವಾಗಿದ್ದಾರಂತೆ. ಹೀಗಾಗಿ ಸುಜಾತ್ ಭಟ್ ವಾಸ ಇದ್ದಾಗ, ಅವರ ಜೊತೆ ಅನನ್ಯಾ ಭಟ್ ಎಂಬ ಮಗಳು ಇದ್ದಾಳಾ, ಈ ಬಗ್ಗೆ ಯಾರಾದರೂ ಸ್ಥಳೀಯರಿಗೆ ಮಾಹಿತಿ ಇದೆಯೇ ಎಂಬ ಬಗ್ಗೆ ಮಾಹಿತಿ ಕಲೆ ಹಾಕುವ ಕೆಲಸವನ್ನು ಎಸ್‌ಐಟಿ ತಂಡ ಮಾಡುತ್ತಿದೆ. ಸುಜಾತ ಭಟ್ ವಾಸ ಇದ್ದ ಮನೆಯ ನೆರೆಹೊರೆಯವರಿಂದ ಸುಜಾತ ಭಟ್ ಮತ್ತು ಅನನ್ಯಾ ಭಟ್ ಬಗ್ಗೆ ಮಾಹಿತಿ ಕಲೆ ಹಾಕುವ ಕೆಲಸವನ್ನು ಎಸ್‌ಐಟಿ ತಂಡ ಮಾಡಿದೆ.
ಹೊಸನಗರ ತಾಲ್ಲೂಕಿನ ರಿಪ್ಪನ್ ಪೇಟೆಯಲ್ಲಿ ಸುಜಾತ್ ಭಟ್ ವಾಸ ಇದ್ದಿದ್ದು ನಿಜವೇ ಇಲ್ಲವೇ ಎಂಬ ಕ್ರಾಸ್ ವೆರಿಫಿಕೇಷನ್ ಅನ್ನು ಎಸ್‌ಐಟಿ ತಂಡ ಮಾಡುತ್ತಿದೆ. ಒಂದು ವೇಳೆ ಸುಜಾತ ಭಟ್ ರಿಪ್ಪನ್ ಪೇಟೆಯಲ್ಲಿ ಈ ಹಿಂದೆ ವಾಸ ಇದ್ದರೇ, ಆ ವೇಳೆ ಅವರ ಜೊತೆ ಅನನ್ಯಾ ಭಟ್ ಹೆಸರಿನ ಮಗಳು ಇದ್ದಾಳಾ ಇಲ್ಲವೇ ಎಂಬ ಬಗ್ಗೆ ತೀವ್ರವಾಗಿ ತನಿಖೆ ನಡೆಯುತ್ತಿದೆ. ಹೊಸನಗರ ಸರ್ಕಲ್ ಇನ್ಸ್ ಪೆಕ್ಟರ್ ಆಗಿ ಈ ಹಿಂದೆ ಕಾರ್ಯ ನಿರ್ವಹಿಸಿದ್ದ ಸಿಪಿಐ ಮಂಜುನಾಥ್ ಗೌಡ ನೇತೃತ್ವದ SIT ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ವೃದ್ಧ ಮಹಿಳೆ ಸುಜಾತ ಭಟ್ ಕುಟುಂಬದ ಹಿನ್ನೆಲೆಯ ಬಗ್ಗೆಯೂ ವಿವರಗಳನ್ನ SIT ತಂಡ ಕಲೆಹಾಕುತ್ತಿದೆ. ನೆರೆಹೊರೆಯವರಿಂದ ಸುಜಾತ ಭಟ್ ಗೆ ಅನನ್ಯಾ ಭಟ್ ಎಂಬ ಹೆಸರಿನ ಮಗಳು ಇದ್ದಾಳಾ ಇಲ್ಲವೇ ಎಂಬ ಬಗ್ಗೆ ಮಹತ್ವದ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ.
ಈಗ ಸುಜಾತ ಭಟ್, ಅನನ್ಯಾ ಭಟ್ ದ್ದು ಎಂದು ತೋರಿಸುತ್ತಿರುವ ಪೋಟೋ ಅಸಲಿಗೆ ಅನನ್ಯಾ ಭಟ್‌ದ್ದೇ ಅಲ್ಲ. ಆ ಪೋಟೋ ವಾಸಂತಿ ಎಂಬ ಮಹಿಳೆಯ ಪೋಟೋ ಎಂಬ ಸುದ್ದಿ ಚರ್ಚೆಯಾಗುತ್ತಿದೆ. ಹೀಗಾಗಿ ಅನನ್ಯಾ ಭಟ್ ನಾಪತ್ತೆ ದೂರಿನ ನಿಗೂಢತೆ, ಅಸಲಿಯತ್ತು ಏನು ಎಂಬುದನ್ನು ಭೇಧಿಸುವ ಬಗ್ಗೆ ಎಸ್‌ಐಟಿ ಗಮನ ಕೇಂದ್ರೀಕರಿಸಿ ತನಿಖೆ ನಡೆಸುತ್ತಿದೆ. ಹೀಗಾಗಿ ಶಿವಮೊಗ್ಗ ಜಿಲ್ಲೆಯ ರಿಪ್ಪನ್ ಪೇಟೆಗೆ ಭೇಟಿ ನೀಡಿ ಪರಿಶೀಲನೆ, ಮಾಹಿತಿ ಕಲೆ ಹಾಕುವ ಕೆಲಸಗಳನ್ನು ಸ್ಪೆಷನ್ ಇನ್ ವೆಸ್ಟಿಗೇಷನ್ ಟೀಮ್ (ಎಸ್ಐಟಿ) ಮಾಡುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.