/newsfirstlive-kannada/media/media_files/2025/11/05/farmer-protest-2-2025-11-05-08-27-07.jpg)
ಕಬ್ಬು ಬೆಳೆಗಾರರ ಪ್ರತಿಭಟನೆಯಲ್ಲಿ ಬಿ.ವೈ.ವಿಜಯೇಂದ್ರ ಭಾಗಿ
ಕಿತ್ತೂರು ಕರ್ನಾಟಕ ಭಾಗದಲ್ಲಿ ನಡೆಯುತ್ತಿರುವ ಕಬ್ಬು ಬೆಳೆಗಾರರ ಹೋರಾಟ ದಿನೇ ದಿನೇ ತೀವ್ರಗೊಳ್ತಿದೆ. ಬೆಳಗಾವಿ, ಬಾಗಲಕೋಟೆ, ವಿಜಯಪುರದಲ್ಲಿ ಪ್ರತಿಭಟನೆಯ ಕಿಚ್ಚು ಧಗಧಗಿಸ್ತಿದೆ. ಅಹೋರಾತ್ರಿ ಹೋರಾಟಕ್ಕೆ ವಿಜಯೇಂದ್ರ ಸಾಥ್​ ಕೊಟ್ಟಿದ್ದು ರೈತರಿಗೆ ಮತ್ತಷ್ಟು ಬಲ ಬಂದಿದೆ. ಇತ್ತ ರಾಜ್ಯ ಸರ್ಕಾರ ಮಾತ್ರ ಮತ್ತೆ ಕೇಂದ್ರದತ್ತ ಬೊಟ್ಟು ಮಾಡ್ತಾ ಜಾರಿಕೊಳ್ತಿದೆ.
ಕಬ್ಬು ಡೊಂಕಾದ್ರೂ ಸಿಹಿ ಡೊಂಕೆ ಅಂತಾರೆ.. ಆದ್ರೆ ನಿರ್ಲಜ್ಜ ಸರ್ಕಾರ ಹಾಗೂ ಕಾರ್ಖಾನೆಗಳ ಲಾಬಿಯಿಂದ ರೈತರ ಬಾಳಿಗೆ ಮಂಕು ಕವಿದಿದೆ.. ಕಷ್ಟಪಟ್ಟು ಬಿಸಿಲು, ಮಳೆ ಅಂತ ದುಡಿದ್ರೂ ಶ್ರಮದ ಪ್ರತಿಫಲ ಸಿಗದೇ ಅದೇ ಕಬ್ಬಿನ ಜಲ್ಲೆಯಾಗಿದ್ದಾರೆ. ಇನ್ನು ತಾಳ್ಮೆಯಿಂದಿದ್ರೆ ಆಗಲ್ಲ ಅಂತ ರೌದ್ರರಾಗಿದ್ದಾರೆ. ಕಿತ್ತೂರು ಕರ್ನಾಟಕದಲ್ಲಿ ಕಬ್ಬು ಬೆಳೆಗಾರರ ಕಿಚ್ಚು ಜ್ವಾಲಾಮುಖಿಯಾಗ್ತಿದೆ.
7ನೇ ದಿನಕ್ಕೆ ಕಾಲಿಟ್ಟ ಕಬ್ಬು ಬೆಳೆಗಾರರ ಅಹೋರಾತ್ರಿ ಧರಣಿ
‘ಭಿಕ್ಷೆ ಅಲ್ಲ, ನ್ಯಾಯಯುತ ಬೇಡಿಕೆ’.. ಹುಟ್ಟುಹಬ್ಬದಂದು ವಿಜಯೇಂದ್ರ ಗುಡುಗು
ಕಬ್ಬಿಗೆ 3,500 ರೂಪಾಯಿ ಬೆಂಬಲ ಬೆಲೆಗೆ ಆಗ್ರಹಿಸಿ ಕಬ್ಬು ಬೆಳೆಗಾರರ ಹೋರಾಟ 7ನೇ ದಿನಕ್ಕೆ ಕಾಲಿಟ್ಟಿದೆ. ಕ್ಷಣ ಕ್ಷಣಕ್ಕೂ ಅನ್ನದಾತರ ಆಕ್ರೋಶದ ಕಟ್ಟೆ ಒಡೆಯುತ್ತಲೇ ಇದೆ. ಬೆಳಗಾವಿ, ಬಾಗಲಕೋಟೆ, ವಿಜಯಪುರದಲ್ಲಿ ಹೋರಾಟ ತೀವ್ರಗೊಂಡಿದೆ. ಮೊದಲೇ ಬಿರು ಬಿಸಿಲಿನಲ್ಲಿ ರಣ ರಣ ಅಂತ ಹೋರಾಡ್ತಿದ್ದ ರೈತರಿಗೆ ಬಿಜೆಪಿ ರಾಜ್ಯ ಸಾರಥಿಯ ರಂಗಪ್ರವೇಶ ಮತ್ತಷ್ಟು ಬಲ ತಂದಿದೆ. ಕಳೆದ ರಾತ್ರಿ ರೈತರೊಂದಿಗೆ ಅಹೋರಾತ್ರಿ ಧರಣಿ ಮಾಡಿದ್ದ ವಿಜಯೇಂದ್ರ ಇಂದು ತಮ್ಮ ಹುಟ್ಟುಹಬ್ಬವನ್ನು ರೈತರ ಜೊತೆಗೆ ಆಚರಿಸಿಕೊಂಡಿದ್ದಾರೆ. ಬೆಳಗಾವಿಯ ಗುರ್ಲಾಪುರದಲ್ಲಿ ಕಬ್ಬು ಬೆಳೆಗಾರರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಭಾಗಿಯಾಗಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದಾರೆ. ರೈತರ ಬೇಡಿಕೆಯು ನ್ಯಾಯಯುತವಾಗಿದ್ದು, ಬೆಂಬಲ ಬೆಲೆಯೂ ಭಿಕ್ಷೆ ಅಲ್ಲ ಎಂದು ವಿಜಯೇಂದ್ರ ಹೇಳಿದ್ದಾರೆ. ಜೊತೆಗೆ ಕೇಂದ್ರ ಸರ್ಕಾರದ ಜೊತೆಯೂ ಕಬ್ಬು ಬೆಂಬಲ ಬೆಲೆ ಏರಿಕೆಯ ಬಗ್ಗೆ ಮಾತನಾಡುವುದಾಗಿ ವಿಜಯೇಂದ್ರ ಹೇಳಿದ್ದಾರೆ.
ಹೆದ್ದಾರಿಯಲ್ಲಿ ಟೈರ್​ಗೆ ಬೆಂಕಿ ಹಚ್ಚಿ ಕರವೇ ಅಸಮಾಧಾನ
ಇನ್ನು ರೈತರ ಹೋರಾಟಕ್ಕೆ ಕರವೇ ಕೂಡ ಬೆಂಬಲ ನೀಡಿದೆ. ಬೆಳಗಾವಿಯ ಸುವರ್ಣಸೌಧದ ಬಳಿ ಕರವೇ ನಾರಾಯಣ ಗೌಡ ಬಣ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದೆ. ಹೆದ್ದಾರಿಯಲ್ಲಿ ಟೈರ್​ಗೆ ಬೆಂಕಿ ಹಚ್ಚಿ ಅಸಮಾಧಾನ ಪ್ರದರ್ಶಿಸಿದ್ದು ಪೊಲೀಸರು ಮತ್ತು ಕರವೇ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು. ಬಳಿಕ ಕರವೇ ಜಿಲ್ಲಾಧ್ಯಕ್ಷ ದೀಪಕ್ ಗುಡಗನಟ್ಟಿ ಸೇರಿ ಹಲವರನ್ನು ವಶಕ್ಕೆ ಪಡೆದ್ರು. ಮುಂಜಾಗ್ರತೆ ದೃಷ್ಟಿಯಿಂದ ಬೆಳಗಾವಿ ಸುವರ್ಣಸೌಧದ ಮುಂದೆ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ.
ಕಬ್ಬಿನ ದರ ದೇಹದ ಮೇಲೆ ಬರೆದುಕೊಂಡು ರೈತನ ಪ್ರತಿಭಟನೆ
ಇತ್ತ ರೈತನೊಬ್ಬ ಕಬ್ಬಿನ ದರವನ್ನು ದೇಹದ ಮೇಲೆ ಬರೆದುಕೊಂಡು ವಿನೂತನವಾಗಿ ಪ್ರತಿಭಟಿಸಿದ್ದಾರೆ. ಬೆಳಗಾವಿಯ ಗುರ್ಲಾಪುರದಲ್ಲಿ ಬೃಹತ್​ ರೈತ ಹೋರಾಟ ನಡೆಯುತ್ತಿದೆ. ಮೂಡಲಗಿ ಪಟ್ಟಣದ ಸುರೇಶ ತನ್ನ ದೇಹದ ಮೇಲೆ ಕಬ್ಬಿನ ಬೆಳೆ ಹಾಗೂ ಟನ್ ಕಬ್ಬಿಗೆ 3500 ರೂಪಾಯಿ ಎಂದು ಬರೆಸಿಕೊಂಡು ಹೋರಾಟಕ್ಕಿಳಿದಿದ್ದಾರೆ.
/filters:format(webp)/newsfirstlive-kannada/media/media_files/2025/11/05/farmer-protest-3-2025-11-05-14-02-10.jpg)
ಮತ್ತೆ ಕೇಂದ್ರದತ್ತ ಬೊಟ್ಟು ಮಾಡಿ ಜಾರಿಕೊಂಡ ಸಚಿವರು
ಇನ್ನು ವಿಜಯಪುರದ ನಗರದ ಗಗನ್ ಮಹಲ್ ಬಳಿ ರೈತರ ಆಕ್ರೋಶ ಜೋರಾಗಿತ್ತು. ರೈತರು ರಾಜ್ಯ ಹಾಗೂ ಕೇಂದ್ರ ಸರ್ಕಾರ ಮತ್ತು ಸಕ್ಕರೆ ಕಾರ್ಖಾನೆ ಮಾಲೀಕರ ವಿರುದ್ಧ ಧಿಕ್ಕಾರ ಕೂಗಿದ್ರು. ಪ್ರತಿಭಟನೆಗೆ ಮನಗೂಳಿ ಹಿರೇಮಠದ ಸಂಗನ ಬಸವ ಸ್ವಾಮೀಜಿ ಸಾಥ್ ಕೊಟ್ರು. ಇದೇ ವೇಳೆ ರೈತ ಹೋರಾಟ ತೀವ್ರಗೊಂಡ್ರೂ ರಾಜ್ಯ ಸರ್ಕಾರ, ಕೇಂದ್ರದತ್ತ ಬೊಟ್ಟು ಮಾಡ್ತಾ ಜಾರಿಕೊಳ್ತಿದೆ. ಇಂದು ಸಚಿವ ಎಂಬಿ ಪಾಟೀಲ್ ಸತ್ಯಾಗ್ರಹ ಸ್ಥಳಕ್ಕೆ ತೆರಳಿ ರೈತರ ಜೊತೆ ಮಾತನಾಡಿದ್ರು. ನಮ್ಮ ಸರ್ಕಾರ ರೈತ ಪರವಾಗಿದೆ. ಬೆಂಬಲ ಬೆಲೆ ವಿಚಾರದಲ್ಲಿ ಕೇಂದ್ರದ ನಿರ್ಧಾರ ಮಹತ್ವದ್ದು. ಹೀಗಾಗಿ ಪ್ರಧಾನಿ ಬಳಿ ನಿಯೋಗ ಹೋಗಿ ಮಾತಾಡಬೇಕಿದೆ. ನಾಳೆ ಕ್ಯಾಬಿನೆಟ್​ನಲ್ಲಿ ಚರ್ಚಿಸುತ್ತೇವೆ ಅಂತ ಮತ್ತದೇ ಸವಕಲು ಭರವಸೆ ನೀಡಿದ್ದಾರೆ.
ಒಟ್ಟಾರೆ ದಿನೇ ದಿನೇ ರೈತರ ಹೋರಾಟದ ಕಿಚ್ಚು ಭುಗಿಲೇಳುತ್ತಿದೆ. ಆದ್ರೆ ರಾಜ್ಯ ಸರ್ಕಾರ ಕೇಂದ್ರದತ್ತ ಬೊಟ್ಟು ಮಾಡ್ತಿದೆ. ಪಕ್ಕದ ಮಹಾರಾಷ್ಟ್ರಕ್ಕೆ ಆಗೋದಾದ್ರೆ ಕರ್ನಾಟಕಕ್ಕೆ ಯಾಕಾಗಲ್ಲ ಅನ್ನೋದೇ ಪ್ರಶ್ನೆ.. ರಾಜ್ಯವೋ ಕೇಂದ್ರವೋ.. ಎರಡೂ ಸರ್ಕಾರಗಳು ಆದಷ್ಟು ಬೇಗ ರೈತರ ಬೇಡಿಕೆ ಈಡೇರಿಸಬೇಕಿದೆ.
ಚಿಕ್ಕೋಡಿಯಿಂದ ಸಂಜಯ್ ಜೊತೆ ರಾಚಪ್ಪ ನ್ಯೂಸ್​ ಫಸ್ಟ್ ವಿಜಯಪುರ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us