/newsfirstlive-kannada/media/media_files/2025/08/23/mask_man_new-2025-08-23-11-40-49.jpg)
ಎಸ್‌ಐಟಿ ಎದುರು ಸತ್ಯ ಬಾಯಿಬಿಟ್ಟ ಮಾಸ್ಕ್ ಮ್ಯಾನ್!
ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿದ್ದೇನೆ ಎಂದು ಹೇಳಿದ್ದ ಅನಾಮಿಕ ವ್ಯಕ್ತಿಯ ನಿಜಬಣ್ಣ ಈಗ ಬಯಲಾಗಿದೆ. ಅನಾಮಿಕ ಮೊದಲಿಗೆ ಬುರುಡೆಯೊಂದನ್ನು ತೆಗೆದುಕೊಂಡು ಬಂದು ಪೊಲೀಸರಿಗೆ ದೂರು ನೀಡಿದ್ದ. ಇದೇ ರೀತಿ ನೂರಾರು ಶವಗಳನ್ನು ಧರ್ಮಸ್ಥಳದ ವಿವಿಧೆಡೆ ಹೂತಿರುವುದಾಗಿ ಹೇಳಿದ್ದ. ಆದರೇ, ಈ ಮಾಸ್ಕ್ ಮ್ಯಾನ್ ಹೇಳಿಕೆಯೇ ಸುಳ್ಳು ಎಂದು ಗೊತ್ತಾದ ಮೇಲೆ ಎಸ್‌ಐಟಿ ಸುಳ್ಳು ದೂರು ನೀಡಿ ಪೊಲೀಸರನ್ನು ದಿಕ್ಕು ತಪ್ಪಿಸಿದ ಹಾಗೂ ಮೊದಲ ಬುರುಡೆಯನ್ನು ಎಲ್ಲಿಂದ ತಂದಿದ್ದ ಎಂಬುದನ್ನು ಬಾಯಿ ಬಿಡದ ಕಾರಣದಿಂದ ಬಂಧಿಸಿದ್ದಾರೆ.
ಈಗ ಅನಾಮಿಕ ವ್ಯಕ್ತಿಯ ನಿಜ ಬಣ್ಣ ಬಯಲಾಗಿದೆ. ಈತನ ನಿಜವಾದ ಹೆಸರು ಚಿನ್ನಯ್ಯ ಅಲಿಯಾಸ್ ಚೆನ್ನ. ಈತ ಮಂಡ್ಯ ಜಿಲ್ಲೆಯ ಮಂಡ್ಯ ತಾಲ್ಲೂಕಿನ ಚಿಕ್ಕಬಳ್ಳಿ ಗ್ರಾಮದವನು. ಈತನಿಗೆ ಮೂವರು ಹೆಂಡತಿಯರು. ಈ ಹಿಂದೆ ಧರ್ಮಸ್ಥಳದಲ್ಲಿ ಸಫಾಯಿ ಕರ್ಮಚಾರಿ ಕೆಲಸ ಮಾಡಿದ್ದ. ಬಳಿಕ ಅಲ್ಲಿಂದ ತಮಿಳುನಾಡಿನ ಈರೋಡ್‌ಗೆ ಹೋಗಿ ಅಲ್ಲಿ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಈಗ ಈತ ಇದ್ದಕ್ಕಿದ್ದಂತೆ ಬಂದು ಧರ್ಮಸ್ಥಳದ ಬಗ್ಗೆ ಯಾವುದೇ ಆಧಾರ, ಸಾಕ್ಷಿ ಇಲ್ಲದೇ ಸುಳ್ಳು ದೂರು ಕೊಟ್ಟಿದ್ದೇಕೆ ? ಎಂಬ ಪ್ರಶ್ನೆ ಉದ್ಭವವಾಗಿದೆ.
ಆಮಿಷಕ್ಕೆ ಒಳಗಾಗಿ ಸುಳ್ಳು ದೂರು ಕೊಟ್ಟ ಚಿನ್ನಯ್ಯ ಅಲಿಯಾಸ್ ಚಿನ್ನ
ಅಮೀಷಗಳಿಗೆ ಒಳಗಾಗಿ ಸುಳ್ಳು ಹೇಳಿದ್ದಾನೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ನಾನು ಪಾತ್ರಧಾರಿ ಮಾತ್ರ, ಸೂತ್ರಧಾರಿಗಳು ಬೇರೆನೆ ಇದ್ದಾರೆ ಎಂದು ಚಿನ್ನಯ್ಯ ಅಲಿಯಾಸ್ ಚೆನ್ನ ಸ್ಪೋಟಕ ಮಾಹಿತಿಯನ್ನು ಎಸ್‌ಐಟಿ ಅಧಿಕಾರಿಗಳಿಗೆ ನೀಡಿದ್ದಾನೆ. ನನಗೆ ಈ ರೀತಿ ಹೇಳಲು ಹೇಳಿದರು. ನಾನು ಆ ರೀತಿ ಹೇಳಿದೆ. ಬುರುಡೆ ತೆಗೆದುಕೊಂಡು ಕೋರ್ಟ್ ಗೆ ಒಪ್ಪಿಸು ಅಂತ ಹೇಳಿದ್ರು, ಅದರಂತೆ ನಾನು ಬುರುಡೆಯನ್ನು ಕೋರ್ಟ್ ಗೆ ಒಪ್ಪಿಸಿದೆ. ಕೋರ್ಟ್ ಗೆ ಹಾಜರುಪಡಿಸಿದ ಬುರುಡೆ ಎಲ್ಲಿಂದ ಬಂತು ಎಂಬುದು ನನಗೆ ಗೊತ್ತಿಲ್ಲ ಎಂದು ಚಿನ್ನಯ್ಯ ಅಲಿಯಾಸ್ ಚೆನ್ನ ಎಸ್‌ಐಟಿ ಅಧಿಕಾರಿಗಳಿಗೆ ಹೇಳಿದ್ದಾನೆ.
ತಾನು ತಂದಿದ್ದ ಬುರುಡೆ ಕುರಿತು ಎಷ್ಟೇ ವಿಚಾರಣೆ ನಡೆಸಿದರೂ ಅದರ ಮೂಲದ ಬಗ್ಗೆ ಬಾಯಿ ಬಿಡುತ್ತಿಲ್ಲ. ಮೊದಲು ನಾನು ತೋರಿಸಿದ ಜಾಗದಲ್ಲಿ ಸ್ಥಳ ಪರಿಶೋಧನೆ ನಡೆಸಿ ಎಂದು ಪಟ್ಟು ಹಿಡಿದಿದ್ದ. ಅನುಮಾನಕ್ಕೊಳಗಾದ ಎಸ್ ಐ ಟಿ ಯಿಂದ ಚಿನ್ನಯ್ಯನನ್ನು ತೀವ್ರ ವಿಚಾರಣೆ ನಡೆಸಲಾಗಿದೆ. ಈ ವೇಳೆ ಎಲ್ಲಾ ಮಾಹಿತಿಯನ್ನು ದೂರುದಾರ ಹಾಗೂ ಸಾಕ್ಷಿಯಾಗಿದ್ದ ಚಿನ್ನಯ್ಯ ಅಲಿಯಾಸ್ ಚೆನ್ನ ಬಿಚ್ಚಿಟ್ಟಿದ್ದಾನೆ.
ಇನ್ನೂ ಮಾಸ್ಕ್ ಮ್ಯಾನ್ ಇಷ್ಟು ದಿನ ನೂರಾರು ಶವ ಹೂತ್ತಿದ್ದೆ ಎಂದು ಪೊಲೀಸರಿಗೆ ದೂರು ನೀಡಿದ್ದರಿಂದ ದೂರುದಾರ ಹಾಗೂ ಕೇಸ್ ಸಾಕ್ಷಿದಾರನಾಗಿದ್ದ. ಆದರೇ, ಈಗ ಸಾಕ್ಷಿ, ದೂರುದಾರನೇ ಆರೋಪಿಯಾಗಿದ್ದಾನೆ. ಪೊಲೀಸರಿಗೆ ಸುಳ್ಳು ದೂರು ಕೊಡುವುದು ಕೂಡ ಅಪರಾಧ. ಹೀಗಾಗಿ ಚಿನ್ನಯ್ಯ ಅಲಿಯಾಸ್ ಚಿನ್ನನನ್ನು ಎಸ್‌ಐಟಿ ಅಧಿಕಾರಿಗಳು ಬಂಧಿಸಿದ್ದಾರೆ. ಈಗ ಆರೋಪಿಯಾಗಿರುವ ಚಿನ್ನಯ್ಯ ಅಲಿಯಾಸ್ ಚಿನ್ನನಿಗೆ ಸಾಕ್ಷಿ ಸಂರಕ್ಷಣಾ ಕಾಯಿದೆಯಡಿ ರಕ್ಷಣೆ ಸಿಗಲ್ಲ. ಚೆನ್ನಯ್ಯ ಅಲಿಯಾಸ್ ಚೆನ್ನನಿಗೆ SIT ಅಧಿಕಾರಿಗಳು ಈಗ ಗುನ್ನಾ ಇಟ್ಟಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.