/newsfirstlive-kannada/media/media_files/2025/12/17/bangalore-turf-club-horses-1-2025-12-17-19-51-35.jpg)
ಟರ್ಫ್ ಕ್ಲಬ್ ಅನ್ನು ಕುಣಿಗಲ್ ಸ್ಟಡ್ ಫಾರಂಗೆ ಸ್ಥಳಾಂತರ
ಬೆಂಗಳೂರಿನ ಹೃದಯ ಭಾಗದಲ್ಲಿರುವ ರೇಸ್ ಕೋರ್ಸ್ ಅನ್ನು ಕುಣಿಗಲ್ ನ ಸ್ಟಡ್ ಫಾರಂಗೆ ಶಿಫ್ಟ್ ಮಾಡಲು ರಾಜ್ಯ ಕ್ಯಾಬಿನೆಟ್ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ರೇಸ್ ಕೋರ್ಸ್ ಜಾಗವು ಸಂಪೂರ್ಣವಾಗಿ ರಾಜ್ಯ ಸರ್ಕಾರಕ್ಕೆ ಸೇರಿದ್ದು. ಹೀಗಾಗಿ ರೇಸ್ ಕೋರ್ಸ್ ಜಾಗವನ್ನು ಹಸಿರುಮಯವಾಗಿಸಿ ನಗರದ ಲಂಗ್ಸ್ ಸ್ಪೇಸ್ ಆಗಿ ಬಳಸಿಕೊಳ್ಳಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಕುಣಿಗಲ್ ನ ಸ್ಟಡ್ ಫಾರಂನಲ್ಲಿ ಬ್ಲಾಕ್ ಎ ನಲ್ಲಿ 101 ಎಕರೆ ಭೂಮಿ ಹಾಗೂ ಬ್ಲಾಕ್ ಬಿ 8.3 ಎಕರೆ ಭೂಮಿ ಇದೆ. ಬ್ಲಾಕ್ ಎ ಮತ್ತು ಬ್ಲಾಕ್ ಬಿ ಭೂಮಿಗಳೆರಡನ್ನೂ ಟರ್ಫ್ ಕ್ಲಬ್‌ಗೆ 29 ವರ್ಷಗಳ ಅವಧಿಗೆ ಲೀಸ್ ಮೇಲೆ ನೀಡಲಾಗುತ್ತಿದೆ. ಒಟ್ಟಾರೆ 110 ಎಕರೆ ಭೂಮಿಯನ್ನು ಟರ್ಫ್ ಕ್ಲಬ್‌ಗೆ ನೀಡಲಾಗುತ್ತಿದೆ. ಮುಂದಿನ 2 ವರ್ಷಗಳಲ್ಲಿ ಟರ್ಫ್ ಕ್ಲಬ್‌ಗೆ ಮಾರ್ಗಸೂಚಿ ದರದ ವಾರ್ಷಿಕ ಶೇ.2.5 ರ ದರದಲ್ಲಿ ಮುಂದಿನ 29 ವರ್ಷಗಳಿಗೆ ಗುತ್ತಿಗೆ ನೀಡಲು ಕ್ಯಾಬಿನೆಟ್ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಟರ್ಫ್ ಕ್ಲಬ್ ಕೂಡ ರೇಸ್ ಕೋರ್ಸ್ ಅನ್ನು ಕುಣಿಗಲ್ ಗೆ ಸ್ಥಳಾಂತರಿಸಲು ಒಪ್ಪಿದೆ.
ಸದ್ಯ ಕುಣಿಗಲ್ ಸ್ಟಡ್ ಫಾರಂ ರಾಜ್ಯ ಸರ್ಕಾರದ ಪಶುಸಂಗೋಪನಾ ಇಲಾಖೆಯ ಅಧೀನದಲ್ಲಿದೆ. ಈ ಹಿಂದೆ ಉದ್ಯಮಿ ವಿಜಯ ಮಲ್ಯ ಮಾಲೀಕತ್ವದ ಯುನೈಟೆಡ್ ಬ್ರುವರೀಸ್ ಕಂಪನಿಗೆ 25 ವರ್ಷಗಳಿಗೆ ಲೀಸ್ ಗೆ ನೀಡಲಾಗಿತ್ತು. ಆ ಲೀಸ್ ಅವಧಿಯೂ ಮುಕ್ತಾಯವಾಗಿದೆ. ಹೀಗಾಗಿ ಕುಣಿಗಲ್ ಸ್ಟಡ್ ಫಾರಂ ಅನ್ನು ನಡೆಸಿಕೊಂಡು ಹೋಗುವ ಕಂಪನಿಗಳಿಗೆ ಲೀಸ್‌ಗೆ ನೀಡಲು ಬಿಡ್ ಗೆ ಆಹ್ವಾನಿಸಲಾಗಿತ್ತು. ಆದಾರ್ ಪೂನವಾಲಾ ಅವರ ಕಂಪನಿಯು ಕುಣಿಗಲ್ ಸ್ಟಡ್ ಫಾರಂ ಅನ್ನು ಲೀಸ್‌ಗೆ ಪಡೆಯಲು ಆಸಕ್ತಿ ವಹಿಸಿತ್ತು. ಕೆಲ ಬೇರೆ ಕಂಪನಿಗಳು ಕೂಡ ಆಸಕ್ತಿ ವಹಿಸಿದ್ದವು. ಆದರೇ, ಬಿಡ್ ಅಂತಿಮವಾಗಿರಲಿಲ್ಲ. ಈಗ ಅಂತಿಮವಾಗಿ ಬೆಂಗಳೂರಿನ ಟರ್ಫ್ ಕ್ಲಬ್‌ಗೆ ಕುಣಿಗಲ್ ಕುದುರೆ ಫಾರಂ ಅಥವಾ ಸ್ಟಡ್ ಫಾರಂ ಅನ್ನು ಲೀಸ್‌ಗೆ ನೀಡಲು ರಾಜ್ಯ ಸರ್ಕಾರದ ಕ್ಯಾಬಿನೆಟ್ ಸಭೆಯಲ್ಲಿ ನಿರ್ಧಾರವಾಗಿರುವುದು ಮಹತ್ವದ ಬೆಳವಣಿಗೆ.
/filters:format(webp)/newsfirstlive-kannada/media/media_files/2026/02/13/race-course-shift-to-kunigal-2026-02-13-13-03-10.jpg)
ಕುಣಿಗಲ್ ತಾಲ್ಲೂಕಿನಲ್ಲೂ ಜನರು ಕುಣಿಗಲ್ ಕುದುರೆ ಫಾರಂ ಅನ್ನು ಕುದುರೆ ಫಾರಂ ಆಗಿಯೇ ಉಳಿಸಬೇಕು ಎಂದು ಒತ್ತಾಯ ಮಾಡಿದ್ದರು. ಈಗ ಕುಣಿಗಲ್ ಕುದುರೆ ಫಾರಂನಲ್ಲಿ ಕುದುರೆ ರೇಸ್, ಕುದುರೆ ಸಾಕಣೆ ಮುಂದುವರಿಯುವುದು ಕುಣಿಗಲ್ ಜನರಿಗೂ ಸಮಾಧಾನದ ವಿಷಯ. ಮೈಸೂರು ಮಹಾರಾಜರು, ಟಿಪ್ಪು ಸುಲ್ತಾನ್ ಕಾಲದ ಕುಣಿಗಲ್ ಕುದುರೆ ಫಾರಂ ಅನ್ನು ಪರಂಪರೆಗೆ ಅನುಗುಣವಾಗಿ ಮುಂದುವರಿಸಿಕೊಂಡು ಹೋಗಬೇಕು. ಕುಣಿಗಲ್‌ಗೆ ಕುದುರೆ ಫಾರಂ ಹೆಮ್ಮೆ ಇದ್ದಂತೆ. ಕುಣಿಗಲ್ ನೆಲವು ಕುದುರೆ ಸಾಕಣೆಗೆ ಸೂಕ್ತವಾಗಿದೆ. ಹಾಗಾಗಿ ಆ ಪರಂಪರೆಯನ್ನು ಹಾಗೆಯೇ ಉಳಿಸಿ ಬೆಳೆಸಿಕೊಂಡು ಹೋಗಬೇಕು. ಕುದುರೆ ಫಾರಂ ಅಥವಾ ಸ್ಟಡ್ ಫಾರಂ ಜಾಗದಲ್ಲಿ ಟೌನ್ ಷಿಪ್ ಮಾಡುವುದಾಗಲೀ, ಬೇರೆ ವಾಣಿಜ್ಯ ಚಟುವಟಿಕೆ ನಡೆಸುವುದಾಗಲೀ ಬೇಡ ಎಂದು ಜನರು ಪ್ರತಿಭಟನೆಯನ್ನು ನಡೆಸಿದ್ದರು. ಕುಣಿಗಲ್ ಸ್ಟಡ್ ಫಾರಂನಲ್ಲಿ ಸಾಕಿದ ಕುದುರೆಗಳನ್ನು ವಿಶ್ವದ ವಿವಿಧ ದೇಶಗಳಿಗೆ ರಫ್ತು ಮಾಡಲಾಗುತ್ತಿದೆ. ಆಸ್ಟ್ರೇಲಿಯಾ, ಇಂಗ್ಲೆಂಡ್, ಶ್ರೀಲಂಕಾ ಸೇರಿದಂತೆ ವಿವಿಧ ದೇಶಗಳಿಗೆ ರಫ್ತು ಮಾಡಲಾಗುತ್ತಿದೆ. ಕುಣಿಗಲ್ ಕುದುರೆಗಳು ಪ್ರಮುಖ ರೇಸ್ ಗಳಲ್ಲೂ ಭಾಗವಹಿಸಿ ಅನೇಕ ಪ್ರಶಸ್ತಿಗಳನ್ನು ಗೆದ್ದಿವೆ. ಕುಣಿಗಲ್ ಸ್ಟಡ್ ಫಾರಂನಲ್ಲಿ ಕುದುರೆ ಸಾಕಲು ಬೇಕಾದ ಎಲ್ಲ ಮೂಲಸೌಕರ್ಯಗಳೂ ಇವೆ. ಕುದುರೆ ಲಾಯ, ನೀರಿನ ಸೌಲಭ್ಯ, ರಸ್ತೆ, ವಿಶಾಲವಾದ ಮೈದಾನ, ಸಿಬ್ಬಂದಿ ಸೇರಿದಂತೆ ಎಲ್ಲ ಮೂಲಸೌಕರ್ಯಗಳಿವೆ.
ಕುಣಿಗಲ್ ಸ್ಟಡ್ ಫಾರಂನಲ್ಲಿ 200 ಕ್ಕೂ ಹೆಚ್ಚು ಕುದುರೆಗಳಿವೆ. ಸ್ಟಡ್ ಫಾರಂನಲ್ಲಿ 430 ಎಕರೆ ಜಾಗ ಇದೆ. ಇದರ ಪೈಕಿ ಈಗ 101 ಎಕರೆ ಜಾಗವನ್ನು ಮಾತ್ರವೇ ಬೆಂಗಳೂರಿನ ಟರ್ಫ್ ಕ್ಲಬ್‌ಗೆ ಲೀಸ್ ಆಧಾರದ ಮೇಲೆ ನೀಡಲಾಗುತ್ತಿದೆ. ಉಳಿದ ಜಾಗವನ್ನು ಕುದುರೆ ಸಾಕಣಿಕೆಗೆ ಬಳಸಿಕೊಂಡು ಮುಂದುವರಿಸಿಕೊಂಡು ಹೋಗಬಹುದು. ಕುಣಿಗಲ್ ಸ್ಟಡ್ ಫಾರಂಗೆ 400 ವರ್ಷಗಳ ಇತಿಹಾಸ ಇದೆ. ಇದು ಭಾರತದ ಅತ್ಯಂತ ಹಳೆಯ ಕುದುರೆ ಸಂವರ್ಧನಾ ಕೇಂದ್ರ.
ಇನ್ನೂ ಬೆಂಗಳೂರಿನ ಹೃದಯ ಭಾಗದಲ್ಲಿ ಟರ್ಫ್ ಕ್ಲಬ್ ಗೆ 1923 ರಲ್ಲಿ ಮೈಸೂರು ಮಹಾರಾಜರು 83 ಎಕರೆ ಜಾಗವನ್ನು ಕುದುರೆ ಓಟದ ಸ್ಪರ್ಧೆ ಹಾಗೂ ತರಬೇತಿ ಉದ್ದೇಶಕ್ಕಾಗಿ ನೀಡಿದ್ದರು. ಬಳಿಕ ಈ ಜಾಗವು ಲೋಕೋಪಯೋಗಿ ಇಲಾಖೆಯ ಅಧೀನಕ್ಕೆ ಬಂದಿತ್ತು. ಆದರೇ, ಟರ್ಫ್ ಕ್ಲಬ್ ರಾಜ್ಯ ಸರ್ಕಾರಕ್ಕೆ ಸರಿಯಾಗಿ ಬಾಡಿಗೆ ದರವನ್ನು ಪಾವತಿಸಿರಲಿಲ್ಲ. ಈ ಬಗ್ಗೆ ಅಡಿಟ್ ನಲ್ಲೂ ಆಕ್ಷೇಪಣೆ ವ್ಯಕ್ತವಾಗಿತ್ತು. ಟರ್ಫ್ ಕ್ಲಬ್ ವಾರ್ಷಿಕ 39.45 ಕೋಟಿ ರೂಪಾಯಿ ಪಾವತಿಸಬೇಕಾಗಿದೆ.
ಟರ್ಫ್ ಕ್ಲಬ್, ಬೆಂಗಳೂರಿನಿಂದ ಕುಣಿಗಲ್ ಗೆ ಸ್ಥಳಾಂತರ ಮಾಡುವುದರಿಂದ ರೇಸ್ ಕೋರ್ಸ್ ರಸ್ತೆಯಲ್ಲಿ ಟ್ರಾಫಿಕ್ ದಟ್ಟಣೆ ಇರಲ್ಲ. ಕುಣಿಗಲ್ ನಲ್ಲೂ ಟ್ರಾಫಿಕ್ ಜಾಮ್ ಆಗಲ್ಲ ಎಂಬ ನಂಬಿಕೆ ರಾಜ್ಯ ಸರ್ಕಾರದ್ದು.
ಆದರೇ, ಕುದುರೆ ಬಾಲಕ್ಕೆ ದುಡ್ಡು ಕಟ್ಟುವವರು, ಕುದುರೆ ರೇಸ್ ಆಡುವವರು 2 ವರ್ಷದ ಬಳಿಕ ಬೆಂಗಳೂರಿನಿಂದ 70 ಕಿ.ಮೀ. ದೂರದ ಕುಣಿಗಲ್ ಗೆ ಹೋಗಬೇಕಾಗುತ್ತೆ. ಉದ್ಯಮಿ, ಸೆಲೆಬ್ರೆಟಿಗಳು, ಸ್ಟಾರ್ ಗಳು, ಕುದುರೆ ರೇಸ್ ಆಸಕ್ತಿ ಇರುವವರು ಕುಣಿಗಲ್ ಗೆ ಹೋಗಿ ರೇಸ್ ನಲ್ಲಿ ಭಾಗವಹಿಸಿ, ರೇಸ್ ಆಡಬಹುದು. ಕುಣಿಗಲ್‌ಗೆ ಟರ್ಫ್ ಕ್ಲಬ್ ಸ್ಥಳಾಂತರವಾಗುವುದರಿಂದ ಕುಣಿಗಲ್ ನಲ್ಲಿ ಪ್ರವಾಸೋದ್ಯಮ ಕೂಡ ಅಭಿವೃದ್ದಿಯಾಗಬಹುದು ಎಂಬ ನಿರೀಕ್ಷೆ ಇದೆ.
/filters:format(webp)/newsfirstlive-kannada/media/media_files/2026/02/13/race-course-shift-to-kunigal-1-2026-02-13-13-07-44.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us