/newsfirstlive-kannada/media/media_files/2026/02/24/tumakuru-sira-jewellary-shop-robberry-2026-02-24-17-54-14.jpg)
ಸಿನಿಮಾ ಚಿತ್ರಕಥೆಗೂ ಮೀರಿಸುವಂತಹ ರಣರೋಚಕ ದರೋಡೆ ಪ್ರಕರಣವೊಂದು ತುಮಕೂರು ಜಿಲ್ಲೆಯಲ್ಲಿ ನಡೆದಿದೆ. ರಾಜಸ್ಥಾನಿ ಗ್ಯಾಂಗ್​.. ಹಾಡಹಗಲೇ ಖಾರದ ಪುಡಿ ಎರಚಿ ಚಿನ್ನದಂಗಡಿ ಲೂಟಿ ಮಾಡಿತ್ತು.. ಈ ಕೇಸ್ ಅನ್ನು ಕೈಗೆತ್ತಿಕೊಂಡ ಪೊಲೀಸರು ಕಾಡಿನಲ್ಲಿ ಸಿನಿಮೀಯ ಮಾದರಿಯಲ್ಲಿ ಬೆನ್ನಟ್ಟಿ ಹಿಡಿದಿದ್ದಾರೆ. ಏನಿದು ದರೋಡೆ? ಕಳ್ಳರು ಸಿಕ್ಕಿಬಿದ್ದಿದ್ದು ಹೇಗೆ? ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.
ಸಿನಿಮೀಯ ಸ್ಟೈಲ್​ನಲ್ಲಿ ಚಿನ್ನದಂಗಡಿ ರಾಬರಿ ಮಾಡಿದ್ದ ಗ್ಯಾಂಗ್!
ದರೋಡೆ ನಡೆದ ಜಸ್ಟ್​ 12 ಗಂಟೆಯಲ್ಲಿ ದರೋಡೆ ಟೀಂ ಲಾಕ್​!
ಜಗದಾಂಬ ಜ್ಯುವೆಲರ್ಸ್​ ಅಂಡ್​ ಬ್ಯಾಂಕರ್ಸ್​.. ಇದೇ ಅಂಗಡಿಯಲ್ಲಿ ದರೋಡೆ ನಡೆದಿರೋದು. ಈ ಚಿನ್ನದಂಗಡಿ ಇರೋದು ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ಕಳ್ಳಂಬೆಳ್ಳದ ಬೆಂಚೆಗೇಟ್ ಬಳಿ.. ಇತ್ತೀಚೆಗಷ್ಟೇ ಓಪನ್​ ಮಾಡಲಾಗಿತ್ತು. ಗ್ರಾಮೀಣ ಭಾಗದಲ್ಲಿ ತೆರೆದಿದ್ದ ಜ್ಯುವೆಲರಿಯಲ್ಲಿ ಚಿನ್ನದ ವ್ಯಾಪಾರ ಟೇಕ್ ಆಫ್ ಆಗುವ ಸಮಯದಲ್ಲಿ ಸಿನಿಮೀಯ ರೀತಿಯಲ್ಲಿ ದರೋಡೆ ಮಾಡಲಾಗಿತ್ತು. ಕಳದ ಭಾನುವಾರ ಅಂದ್ರೆ ಮೊನ್ನೆ ಮಧ್ಯಾಹ್ನ ಎಲ್ಲಾ ದಿನದಂತೆಯೇ ಮಾಮೂಲಿಯಾಗಿತ್ತು.. ಆದ್ರೆ ಮಧ್ಯಾಹ್ನ 12:30ರ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ 48ರ ಟೋಲ್‌ನಲ್ಲಿ ಹಾದುಹೋದ ಆ ಒಂದು ಬೊಲೆರೋ ಜೀಪ್ ದೊಡ್ಡದೊಂದು ದರೋಡೆಗೆ ಮುನ್ನುಡಿ ಬರೆದಿತ್ತು.
ಮಟಮಟ ಮಧ್ಯಾಹ್ನ ನೆತ್ತಿ ಸುಡುವ ರಣ ಬಿಸಿಲು.. ರಸ್ತೆಯಲ್ಲಿ ಜನರು ಯಾರು ಓಡಾಡದ ಟೈಂ.. ಅಂಗಡಿಯಲ್ಲಿ ಮಾಲೀಕರು ಒಬ್ಬರೇ ಇದ್ದ ಸಮಯ ನೋಡ್ಕೊಂಡು ಎಂಟ್ರಿ ಕೊಟ್ಟ ಮೂವರು ಖದೀಮರು ಕ್ಷಣಾರ್ಧದಲ್ಲಿ ಮಾಲೀಕನ ಮುಖಕ್ಕೆ ಖಾರದ ಪುಡಿ ಎರಚಿ.. ಕಣ್ಣು ಬಿಡುವಷ್ಟರಲ್ಲಿ ಥಟ್ ಅಂತ 30 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನ ದೋಚಿ ಅಲ್ಲಿಂದ ಪರಾರಿಯಾಗಿದ್ದಾರೆ.
ಆದ್ರೆ ರಾಜಸ್ಥಾನದಿಂದ ಬಂದು​ ಬರೋಬ್ಬರಿ 30 ಲಕ್ಷದಷ್ಟು ದರೋಡೆ ಮಾಡಿ ಎಸ್ಕೇಪ್ ಆಗಿದ್ದ ಗ್ಯಾಂಗ್ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಶಿರಾ ಪೊಲೀಸರು ಅಲರ್ಟ್ ಆಗಿದ್ರು. ದರೋಡೆ ಮಾಡಿ ಪರಾರಿಯಾಗಿದ್ದ ಗ್ಯಾಂಗ್‌ಗಾಗಿ ಶಿರಾ ಉಪವಿಭಾಗದ ಪೊಲೀಸರು ಹದ್ದಿನ ಕಣ್ಣಿಟ್ರು. ದರೋಡೆಗೆ ಬಳಸಿದ್ದ RJ-16-UA-7398 ನಂಬರಿನ ರಾಜಸ್ಥಾನ ನೋಂದಣಿಯ ಬೊಲೆರೋ ವಾಹನ ಸಿಸಿಟಿವಿಯಲ್ಲಿ ಸೆರೆಯಾದ ಮಾಹಿತಿ ಬಂದಿದ್ದೇ ತಡ ಪೊಲೀಸರ ಚೇಸಿಂಗ್​ ಶುರುವಾಗಿತ್ತು. ಎರಡು ದಿನಗಳಿಂದ ಸ್ಕೆಚ್ ಹಾಕಿದ್ದ ಈ ರಾಜಸ್ಥಾನಿ ಗ್ಯಾಂಗ್ ಭಾನುವಾರ ಚಿನ್ನದ ಅಂಗಡಿಯಲ್ಲಿ ರಾಬರಿ ಕೃತ್ಯವೆಸಗಿ ಕಾಡಿನ ಹಾದಿ ಹಿಡಿದಿತ್ತು..
ಇನ್ನು ದರೋಡೆ ಗ್ಯಾಂಗ್ ಎಸ್ಕೇಪ್ ಆಗ್ತಿರೋ ಮಾಹಿತಿ ತಿಳಿದು ಬೊಲೆರೋ ಜೀಪ್​ನಲ್ಲಿ ಪರಾರಿಯಾಗ್ತಿದ್ದ ಕಳ್ಳರನ್ನ ಸ್ಥಳೀಯರೇ ತಮ್ಮ ಕಾರಿನಲ್ಲಿ ಬೆನ್ನಟ್ಟಿದ್ರು. ದರೋಡೆಕೋರರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುತ್ತಲೇ ಚೇಸಿಂಗ್ ಮಾಡ್ತಿದ್ರು. ಕೊನೆಗೆ ಶಿರಾ ಕಡೆ ವೇಗವಾಗಿ ಬರ್ತಿದ್ದರು. ಅಷ್ಟೊತ್ತಿಗಾಗಲೇ ಪೊಲೀಸರು ಕೂಡ ಎಲ್ಲ ಕಡೆ ನಾಕಾಬಂಧಿ ಮಾಡಿದ್ದರು. ಖದೀಮರು ದಾರಿ ಕಾಣದೆ ಶಿರಾ ತಾಲ್ಲೂಕಿನ ಭುವನಹಳ್ಳಿ ಬಳಿ ಸರ್ವಿಸ್ ರಸ್ತೆ ಮೂಲಕ ಜೀಪ್​ನಲ್ಲಿ ಅರಣ್ಯ ಪ್ರವೇಶಿಸಿದ್ರು. ಅಲ್ಲೇ ಅಡಗಿಕೊಂಡಿದ್ರು.. ಈ ಮಾಹಿತಿ ಸಿಗುತ್ತಿದ್ದಂತೆ, ಕಾರ್ಯ ಪ್ರವೃತ್ತರಾದ ಪೊಲೀಸರು ಜೀವದ ಹಂಗು ತೊರೆದು ಕಾಡಿನೊಳಗೆ ನುಗ್ಗಿ ರಣರೋಚಕ ಕಾರ್ಯಾಚರಣೆ ನಡೆಸಿ ನಾಲ್ವರನ್ನ ಬಂಧಿಸಿ 26 ಲಕ್ಷ ಬೆಲೆಬಾಳುವ ಚಿನ್ನಾಭರಣಗಳನ್ನ ವಶಪಡಿಸಿಕೊಂಡಿದ್ದಾರೆ.
ಒಟ್ನಲ್ಲಿ ಚಿನ್ನದಂಗಡಿ ರಾಬರಿ ಮಾಡಿದ ಗ್ಯಾಂಗ್ ಅನ್ನು ಘಟನೆ ನಡೆದ ಕೇವಲ 12 ಗಂಟೆಯಲ್ಲಿ ಬಂಧಿಸುವಲ್ಲಿ ಶಿರಾ ಪೊಲೀಸರು ಯಶಸ್ವಿಯಾಗಿದ್ದಾರೆ. ಹಾಡಹಗಲೇ ದರೋಡೆ ಮಾಡಿ ಪೊಲೀಸರಿಗೆ ಸವಾಲು ಹಾಕಿದ್ದ ಅಂತರರಾಜ್ಯ ಕಳ್ಳರ ಗ್ಯಾಂಗ್ ಈಗ ಪೊಲೀಸರ ಅತಿಥಿಯಾಗಿದೆ. ಸದ್ಯ ಈ ಗ್ಯಾಂಗ್ ರಾಜ್ಯದ ಬೇರೆ ಬೇರೆ ಕಡೆ ಕಳ್ಳತನ ಮಾಡಿರೋ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ತೀವ್ರ ವಿಚಾರಣೆ ನಡೆಸ್ತಿದ್ದಾರೆ.
ಮಧು ಇಂಗಳದಾಳ್, ನ್ಯೂಸ್ ಫಸ್ಟ್ ತುಮಕೂರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us