/newsfirstlive-kannada/media/media_files/2026/01/08/mother-dies-with-two-children-at-tumkur-2026-01-08-12-08-22.jpg)
ವಿಜಯಲಕ್ಷ್ಮಿ ಹಾಗೂ ಇಬ್ಬರು ಮಕ್ಕಳು
ಆ ಪುಟಾಣಿಗಳಿಬ್ಬರು ಅವಳಿ ಕಂದಮ್ಮಗಳು, ವಯಸ್ಸಿನ್ನೂ ಐದೇ ವರ್ಷ. ಪ್ರಪಂಚದ ಅರಿವೇ ಇಲ್ಲದೇ ಆಡಿ ನಲಿಯುತ್ತಿದ್ವು, ಅಪ್ಪ ಅಮ್ಮನ ಮುದ್ದಿನ ಮಕ್ಕಳಾಗಿ ಮನೆ ತುಂಬಾ ಓಡಾಡ್ಕೊಂಡು ಇದ್ವು. ಆ ಮುದ್ದುಮಕ್ಕಳ ಮುಖ ನೋಡಿದ್ರೇ ಸಾಕು ಬೆಟ್ಟದಷ್ಟೂ ಧಣಿವಿದ್ರೂ ಕ್ಷಣಾರ್ಧದಲ್ಲಿ ಕರಗಿ ಹೋಗ್ತಿತ್ತು. ಆದ್ರೆ ಅತ್ತೆ ಸೊಸೆಯ ಕೌಟುಂಬಿಕ ಕಲಹ ಅನ್ನೋ ಭೂತ ಇಡೀ ಸುಂದರ ಸಂಸಾರಕ್ಕೆ ಫುಲ್ ಸ್ಟಾಪ್ ಇಟ್ಟಿದೆ.
ನಿನ್ನನ್ನು ಬಿಟ್ಟು ನಾನು ಬದುಕಲ್ಲ ಎನ್ನುತ್ತಿರುವ ವ್ಯಕ್ತಿ, ಹೆಂಡತಿ ಮಕ್ಕಳನ್ನು ನೆನೆದು ಗೋಳಾಟ. ಇದೆಲ್ಲವನ್ನು ನೋಡಿದ್ರೆ ವಿಧಿ ಅದೆಷ್ಟು ನಿರ್ದಯಿ ಅನ್ನಿಸುತ್ತೆ., ಒಮ್ಮೆ ಆ ವಿಧಿ ಇಂಥವರ ಬಾಳಲ್ಲಿ ಇಂಥದ್ದೇ ಆಟ ಆಡ್ಬೇಕು ಅಂದ್ಕೊಂಡ್ರೆ ಮುಗಿತು. ಮಕ್ಕಳಾದ್ರು ಸರಿ, ಮುದುಕರಾದ್ರೂ ಸರಿ ಎಲ್ಲರನ್ನೂ ನಾಶ ಮಾಡಿ ಬಿಡುತ್ತೆ. ಇಲ್ಲಿ ಅತ್ತೆಯ ಮೇಲಿನ ಸಿಟ್ಟಿಗೆ ಸೊಸೆ ತನ್ನ ಅವಳಿ ಮಕ್ಕಳ ಜೊತೆ ಆತ್ಮಹತ್ಯೆಗೆ ಶರಣಾದ ಕರುಳು ಹಿಂಡುವ ಘಟನೆ ಇದು.
ಅಂದು ಎಂದಿನಂತೆ ಬೆಳಗ್ಗೆ ಕೆಲಸಕ್ಕೆ ಹೋಗಿದ್ದ ಗಂಡ, ಮಕ್ಕಳೊಂದಿಗೆ ಮನೆಯಲಿದ್ದ ಆಕೆ ಇದ್ದಕ್ಕಿದ್ದಂತೆ ಕಾಣೆಯಾಗಿದ್ದಳು. ಮನೆಗೆ ಬಂದ ಗಂಡ ಎಷ್ಟು ಹುಡುಕಿದರು ಮಕ್ಕಳು ಹೆಂಡತಿ ಕಾಣಲಿಲ್ಲ. ಆದರೆ ಮನೆಯ ಸಂಪಿನಲ್ಲಿ ನೋಡಿದಾಗ ಮೂವರ ಶವ ಕಂಡು ಆತ ಬೆಚ್ಚಿ ಬಿದ್ದಿದ್ದ. ಅಸಲಿಗೆ ಇದು ಅತ್ತೆ ಸೊಸೆಯ ಕೌಟುಂಬಿಕ ಜಗಳಕ್ಕೆ ಮೂವರು ಸಾವನ್ನಪ್ಪಿದ ಘಟನೆ ನಡೆದಿದೆ. ತುಮಕೂರಲ್ಲೊಂದು ಕರುಳು ಹಿಂಡುವ ಘಟನೆ ನಡೆದಿದೆ. ನಿನ್ನೆ ಬೆಳಗ್ಗೆ ತನ್ನ ಅಪ್ಪನಿಗೆ ಬಾಯ್ ಪಪ್ಪಾ ಎಂದು ಕಳಿಸಿದ್ದ ಆ ಮಕ್ಕಳು ಮಧ್ಯಾಹ್ನ ನಾಲ್ಕು ಗಂಟೆಯ ವೇಳೆಗೆ ಬಾರದ ಲೋಕಕ್ಕೆ ಪಯಣಿಸಿದ್ದವು. ಎಲ್ಲಿ ಹೋದವು ಅಂತ ಹುಡುಕಾಡುತ್ತಿರುವಾಗಲೇ ಅವರು ವಾಸವಿದ್ದ ಬಾಡಿಗೆ ಮನೆಯ ಸಂಪ್ ನಲ್ಲೇ ತನ್ನ ತಾಯಿಯೊಂದಿಗೆ ಹಣವಾಗಿ ಪತ್ತೆಯಾಗಿದ್ವು.
ಅತ್ತೆಯ ಕಾಟಕ್ಕೆ ಸೊಸೆ ಅವಳಿ ಮಕ್ಕಳ ಜೊತೆ ಸಾವಿಗೀಡಾಗಿದ್ದು, ತುಮಕೂರು ತಾಲೂಕಿನ ಕ್ಯಾತಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯ ಸಿಂಗನಹಳ್ಳಿಯಲ್ಲಿ ಇಂತಹದೊಂದು ನಡೆಯಬಾರದ ಘಟನೆಯೊಂದು ನಡೆದು ಹೋಗಿದೆ.
/filters:format(webp)/newsfirstlive-kannada/media/media_files/2026/01/08/mother-dies-with-two-children-at-tumkur-1-2026-01-08-12-12-38.jpg)
ಈ ಫೋಟೋದಲ್ಲಿ ಕಾಣಿಸುತ್ತಿರುವ ಇಬ್ಬರು ಮಕ್ಕಳು ಹಾಗೂ ಈ ತಾಯಿ ಸಂಪ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಈಕೆಯ ಹೆಸರು ವಿಜಯಲಕ್ಷ್ಮಿ ವಯಸ್ಸಿನ್ನೂ 26 . ಈ ಮುದ್ದಾದ ಮಕ್ಕಳ ಹೆಸರು ಚೈತನ್ಯ, ಹಾಗೂ ಚೇತನ್ ಅಂತ, ಇಬ್ಬರಿಗಿನ್ನೂ ಐದೇ ವರ್ಷ.. ದುರಂತ ಏನಂದ್ರೆ ಇವರಿಬ್ಬರೂ ಒಂದೇ ದಿನ ಒಟ್ಟಿಗೆ ಹುಟ್ಟಿ ಈಗ ಒಂದೇ ದಿನ ಒಟ್ಟಿಗೆ ಪ್ರಾಣ ಬಿಟ್ಟ ದುರದೃಷ್ಟವಂತ ಅವಳಿ ಮಕ್ಕಳು. ಭೂಮಿ ಮೇಲೆ ಬಾಳಿ ಬದುಕಿ ಕಷ್ಟ ಹೆದರಿಸೋಕೆ ಧೈರ್ಯ ಇರದ ಈ ಪುಣ್ಯಾತಗಿತ್ತಿ ವಿಜಯಲಕ್ಷ್ಮಿ ತನ್ನ ಮತ್ತು ತನ್ನ ಅತ್ತೆಯ ನಡುವಿನ ಕಲಹಕ್ಕೆ ನೊಂದು ಡೆತ್ ನೋಟ್ ಬರೆದಿಟ್ಟು ಮೊದಲು ಮಕ್ಕಳನ್ನ ನೀರಿಗೆ ತಳ್ಳಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ..
ಅತ್ತ ಮಕ್ಕಳು ಮತ್ತು ಪತ್ನಿಯನ್ನು ಕಳೆದು ಕೊಂಡು ತುಮಕೂರು ಶವಾಗಾರದ ಮುಂದೆ ಪತಿಯ ಗೋಳಾಟ ಪ್ರತಿಯೊಬ್ಬರ ಕಣ್ಣಲ್ಲೂ ನೀರು ತರಿಸುತ್ತಿತ್ತು.. ಇನ್ನು ನನ್ನ ಮಗಳ ಸಾವಿಗೆ ಅವಳ ಅತ್ತೆ ರೇಣುಕಮ್ಮಳ ಕಿರುಕುಳವೇ ಕಾರಣ ಎಂದು ಮೃತ ವಿಜಯಲಕ್ಷಿ ತಾಯಿ ಆರೋಪಿಸಿದ್ದಾರೆ, ಜೊತೆಗೆ ಅತ್ತೆಯ ಕಿರುಕುಳದ ಬಗ್ಗೆ ಸುದೀರ್ಘವಾದ ದೂರು ನೀಡಿದ್ದು, ಸದ್ಯ ಕ್ಯಾತಸಂದ್ರ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಇನ್ನು ವಿಜಯಲಕ್ಷ್ಮೀ ಗಂಡ ಸಂಪತ್ ಕುಮಾರ್ ನೆಲಮಂಗಲ ಬಳಿ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಕೆಲ ವರ್ಷಗಳಿಂದ ಸಿಂಗೋನಹಳ್ಳಿಯಲ್ಲಿ ನೆಲೆಸಿದ್ದರು. ಮೂಲತಃ ನೆಲಮಂಗಲ ತಾಲ್ಲೂಕು ದಾಬಸಪೇಟೆ ಹೋಬಳಿ ಶಿವಗಂಗೆ ಬಳಿಯ ಕೊಟ್ಟಿಗೆರೆ ಗ್ರಾಮದವರು. ​ಸಾವಿಗೂ ಮುನ್ನ ವಿಜಯಲಕ್ಷ್ಮೀ ಡೆತ್ ನೋಟ್ ಬರೆದಿಟ್ಟಿದ್ದಾರೆ ಎನ್ನಲಾದ ಪತ್ರ ಸ್ಥಳದಲ್ಲಿ ಸಿಕ್ಕಿದೆ.. ನನ್ನ ಗಂಡ ನನ್ನನ್ನು ಚೆನ್ನಾಗಿ ನೋಡಿ ಕೊಳ್ಳುತ್ತಿದ್ದರು. ನನ್ನ ಟೈಮ್ ಸರಿಯಾಗಿಲ್ಲ ಅಂತ ನನ್ನ ತಾಯಿ ಹೇಳುತ್ತಿದ್ದರು. ನಾನು ದುಡುಕಿ ಇಂತಹ ನಿರ್ಧಾರ ತೆಗೆದುಕೊಂಡಿದ್ದೇನೆ I AM SORRY ಎಂಬ ಅಂಶ ಪತ್ರದಲ್ಲಿದೆ ಎನ್ನಲಾಗಿದೆ. ಇನ್ನು ಅವಳಿ ಮಕ್ಕಳೊಂದಿಗೆ ವಿಜಯಲಕ್ಷ್ಮಿ ಸಾವಿಗೆ ಅತ್ತೆಯ ಕಿರುಕುಳವೇ ಕಾರಣ ಎನ್ನುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.
ಇನ್ನು ಸಾವಿನ ಮನೆಗೆ ಬಂದ ಪ್ರತಿಯೊಬ್ಬರೂ ಕೂಡ ಮುದ್ದುಮಕ್ಕಳ ಮೃತ ದೇಹ ಕಂಡು ಕಣ್ಣೀರು ಸುರಿಸಿದ್ರು. ತಂದೆ ಸಂಪತ್ ಕುಮಾರ್ ನನಗ್ಯಾರವ್ವಾ ದಿಕ್ಕು ನಾನ್ಯಾರ ಜೊತೇಲಿ ಆಟ ಆಡಲಿ, ನಾನ್ಯಾರನ್ನ ಮಕ್ಕಳೇ ಅಂತ ಕರೆಯಲಿ ಎನ್ನುವ ಧ್ವನಿ ನೆರೆದಿದ್ದವರ ಕರುಳು ಹಿಂಡುವಂತಿತ್ತು.. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಮಹಿಳಾ ಠಾಣೆ ಪೊಲೀಸರು ಘಟನೆ ಕುರಿತು ತನಿಖೆ ಮುಂದುವರಿಸಿದ್ದಾರೆ. ಇದೆಲ್ಲದರ ನಡುವೆ ಬಾಳಿ ಬದುಕ ಬೇಕಿದ್ದ ಮಕ್ಕಳು ತಾಯಿ ಜೊತೆ ಇಲ್ಲವಾಗಿದ್ದು ಮಾತ್ರ ದುರಂತ.
ಮಧು ಇಂಗಳದಾಳ್,
ನ್ಯೂಸ್ ಫಸ್ಟ್ ತುಮಕೂರು
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us