/newsfirstlive-kannada/media/media_files/2025/12/06/tumkuru-ac-nahida-zum-zum-2025-12-06-17-29-01.jpg)
ತುಮಕೂರು ಉಪವಿಭಾಗಾಧಿಕಾರಿ ನಹೀದಾ ಜಮ್ ಜಮ್ ರಿಂದ ಆದೇಶ
ವೃದ್ಧ ತಂದೆ, ತಾಯಿಯಿಂದ ಅವರ ಸ್ವಯಾರ್ಜಿತ ಆಸ್ತಿಪಾಸ್ತಿಗಳನ್ನು ಮಕ್ಕಳು ದಾನಪತ್ರದ ಮೂಲಕ ಬರೆಸಿಕೊಳ್ಳುತ್ತಾರೆ. ಆದರೇ, ಆಸ್ತಿ ತಮ್ಮ ಹೆಸರಿಗೆ ಬಂದ ಮೇಲೆ ತಂದೆ, ತಾಯಿಯನ್ನೇ ಸರಿಯಾಗಿ ನೋಡಿಕೊಳ್ಳಲ್ಲ. ತಂದೆ, ತಾಯಿಗೆ ಕಿರುಕುಳ ಕೊಡುತ್ತಾರೆ. ಮನೆಯಿಂದಲೂ ಹೊರ ಹಾಕುವ ಘಟನೆಗಳು ನಮ್ಮ ರಾಜ್ಯದಲ್ಲಿ ಸಾಕಷ್ಟು ನಡೆದಿವೆ. ಇಂಥ ಸಂದರ್ಭದಲ್ಲಿ ಹಿರಿಯ ನಾಗರಿಕರ ನೆರವಿಗೆ ಬರೋದು ಹಿರಿಯ ನಾಗರಿಕರ ರಕ್ಷಣೆ ಮತ್ತು ನಿರ್ವಹಣಾ ಕಾಯಿದೆ.
ಈ ಕಾಯಿದೆಯ ಪ್ರಕಾರ, 60 ವರ್ಷ ಮೇಲ್ಪಟ್ಟ ತಂದೆ, ತಾಯಿಯನ್ನು ಮಕ್ಕಳು ಸರಿಯಾಗಿ ನೋಡಿಕೊಳ್ಳಬೇಕು. ಅವರಿಗೆ ಯಾವುದೇ ರೀತಿಯ ತೊಂದರೆ ನೀಡುವಂತಿಲ್ಲ.
ಒಂದು ವೇಳೆ ಮಕ್ಕಳು, ತಂದೆ, ತಾಯಿಯನ್ನು ಸರಿಯಾಗಿ ನೋಡಿಕೊಳ್ಳದೇ ಉಪೇಕ್ಷಿಸಿದ್ದರೇ, ತಂದೆ, ತಾಯಿಗೆ ಕಿರುಕುಳ ಕೊಟ್ಟರೇ, ತಂದೆ, ತಾಯಿಯ ಸ್ವಯಾರ್ಜಿತ ಆಸ್ತಿಪಾಸ್ತಿಗಳನ್ನು ದಾನಪತ್ರದ ಮೂಲಕ ತಮ್ಮ ಹೆಸರಿಗೆ ಬರೆಸಿಕೊಂಡಿದ್ದರೇ, ಅದನ್ನು ರದ್ದುಪಡಿಸುವಂತೆ ತಂದೆ, ತಾಯಿ ಸಂಬಂಧಪಟ್ಟ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಬಹುದು.
ಹೀಗೆ ತಂದೆ, ತಾಯಿಯಿಂದ ದಾನಪತ್ರದ ಮೂಲಕ ಬರೆಸಿಕೊಂಡಿದ್ದ ಆಸ್ತಿಯ ವರ್ಗಾವಣೆಯನ್ನು ತುಮಕೂರು ಉಪವಿಭಾಗಾಧಿಕಾರಿ ರದ್ದುಪಡಿಸಿ ಮತ್ತೆ ತಂದೆ, ತಾಯಿ ಹೆಸರಿಗೆ ಆಸ್ತಿ ವರ್ಗಾವಣೆ ಮಾಡಿ ಆದೇಶ ನೀಡಿದ್ದಾರೆ.
ವೃದ್ದ ತಂದೆಯನ್ನು ಮಗ ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲ. ತಂದೆಯಿಂದ ಅವರ ಸ್ವಯಾರ್ಜಿತ ಆಸ್ತಿಯನ್ನು ಬರೆಸಿಕೊಂಡ ಬಳಿಕ ತಂದೆಗೆ ಕಿರುಕುಳ ನೀಡಿದ್ದರು. ಇದರಿಂದ ತಂದೆ, ಹಿರಿಯ ನಾಗರಿಕರ ರಕ್ಷಣೆ ಮತ್ತು ನಿರ್ವಹಣಾ ಕಾಯಿದೆಯಡಿ ತಮಗೆ ಆಗುತ್ತಿರುವ ಕಿರುಕುಳದ ವಿರುದ್ಧ ಉಪವಿಭಾಗಾಧಿಕಾರಿಗೆ ದೂರು ಸಲ್ಲಿಸಿದ್ದರು. ಜೊತೆಗೆ ತಾವು ದಾನಪತ್ರದ ಮೂಲಕ ಮಗನಿಗೆ ನೀಡಿರುವ 2 ಸ್ವಯಾರ್ಜಿತ ಆಸ್ತಿಗಳನ್ನು ವಾಪಸ್ ತಮ್ಮ ಹೆಸರಿಗೆ ಖಾತೆ ಮಾಡಿಕೊಟ್ಟು ಮರುಸ್ಥಾಪಿಸಬೇಕೆಂದು ಮನವಿ ಮಾಡಿದ್ದರು.
ತುಮಕೂರಿನ ಗಾಂಧಿನಗರದ ಟಿ.ಕೆ.ಶಿವಪ್ರಸಾದ್, ಮನೆ ಸಹಿತ 2 ನಿವೇಶನಗಳನ್ನು ತಮ್ಮ ಕಿರಿಯ ಪತ್ರ ಟಿ.ಎಸ್.ಪೃಥ್ವಿಪ್ರಸಾದ್ ಹೆಸರಿಗೆ ನೋಂದಾಯಿತ ದಾನಪತ್ರದ ಮೂಲಕ 2020 ರಲ್ಲಿ ವರ್ಗಾಯಿಸಿದ್ದರು. ಮುಂದೆಯೂ ಮಗ ಪೃಥ್ವಿಪ್ರಸಾದ್ ಚೆನ್ನಾಗಿ ನೋಡಿಕೊಳ್ಳುತ್ತೀಯಾ, ವೈದ್ಯಕೀಯ ವೆಚ್ಚ ಭರಿಸುತ್ತೀಯಾ ಎಂದು ದಾನಪತ್ರದಲ್ಲಿ ಉಲ್ಲೇಖ ಮಾಡಿದ್ದರು.
ಆದರೇ, ಆಸ್ತಿಗಳನ್ನು ತಮ್ಮ ಹೆಸರಿಗೆ ಬರೆಸಿಕೊಂಡ ಮೇಲೆ ಪುತ್ರ ಪೃಥ್ವಿ ಪ್ರಸಾದ್, ತಂದೆಯ ಪಾಲನೆ, ಪೋಷಣೆಯನ್ನು ನಿರ್ಲಕ್ಷಿಸಿದ್ದರು. ತಂದೆಗೆ ಕಿರುಕುಳ ನೀಡಿದ್ದರು. ತಂದೆಯ ಯೋಗಕ್ಷೇಮ ನಿರ್ಲಕ್ಷಿಸಿದ್ದರು. ತಂದೆಯನ್ನು ನಿಂದಿಸಿದ್ದರು. ಆಸ್ತಿ ಸಿಕ್ಕ ಬಳಿಕ ಮಗನ ವರ್ತನೆ ಬದಲಾಗಿತ್ತು. ಇದನ್ನು ತಂದೆ ಶಿವಪ್ರಸಾದ್, ಉಪವಿಭಾಗಾಧಿಕಾರಿಗೆ ಸಲ್ಲಿಸಿದ ದೂರಿನಲ್ಲಿ ತಿಳಿಸಿದ್ದರು. ಜೊತೆಗೆ ಆಸ್ತಿಗಳ ದಾನಪತ್ರ ರದ್ದುಪಡಿಸುವಂತೆ ಉಪವಿಭಾಗಾಧಿಕಾರಿಗೆ ಮನವಿ ಮಾಡಿದ್ದರು.
ಈ ಬಗ್ಗೆ ತುಮಕೂರು ಉಪವಿಭಾಗಾಧಿಕಾರಿ ನಹೀದಾ ಜಮ್ ಜಮ್, ವಿಚಾರಣೆ ನಡೆಸಿದ್ದರು. ಪುತ್ರ ಪೃಥ್ವಿ ಪ್ರಸಾದ್, ತಂದೆಯನ್ನು ನಿಂದಿಸಿದ್ದು , ಸರಿಯಾಗಿ ನೋಡಿಕೊಳ್ಳೋದೇ ಇರೋದು ದೃಢಪಟ್ಟ ಹಿನ್ನಲೆಯಲ್ಲಿ ಆಸ್ತಿಗಳ ದಾನಪತ್ರ ರದ್ದುಪಡಿಸಿ ಉಪವಿಭಾಗಾಧಿಕಾರಿ ಆದೇಶ ಹೊರಡಿಸಿದ್ದಾರೆ. ಆಸ್ತಿಗಳನ್ನು ಮತ್ತೆ ತಂದೆ ಶಿವಪ್ರಸಾದ್ ಹೆಸರಿಗೆ ಮರು ಸ್ಥಾಪಿಸಿ ಆದೇಶ ಹೊರಡಿಸಿದ್ದಾರೆ. ತಂದೆಯ ಹೆಸರಿಗೆ ಖಾತೆ ವರ್ಗಾವಣೆ ಮಾಡಲು ಉಪವಿಭಾಗಾಧಿಕಾರಿ ನಹೀದಾ ಜಮ್ ಜಮ್ ಆದೇಶ ಹೊರಡಿಸಿದ್ದಾರೆ. ತುಮಕೂರು ಮಹಾನಗರ ಪಾಲಿಕೆಯ ಆಯುಕ್ತರಿಗೆ ಮತ್ತೆ ಮನೆ ಸಹಿತ 2 ನಿವೇಶನದ ಖಾತೆಯನ್ನು ತಂದೆ ಶಿವಪ್ರಸಾದ್ ಹೆಸರಿಗೆ ಮಾಡಿಕೊಡುವಂತೆ ನಿರ್ದೇಶನ ನೀಡಿದ್ದಾರೆ.
/filters:format(webp)/newsfirstlive-kannada/media/post_attachments/wp-content/uploads/2024/01/Tumkur-4.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us