/newsfirstlive-kannada/media/media_files/2025/10/04/pralhad_joshi-2025-10-04-21-50-41.jpg)
ಬೆಳಗಾವಿ: ತುಮಕೂರು- ಚಿತ್ರದುರ್ಗ ಹಾಗೂ ಬಾಗಲಕೋಟೆ- ಕುಡಚಿ ನಡುವಿನ ರೈಲು ಮಾರ್ಗಗಳ ಕಾಮಗಾರಿ ವೇಗವಾಗಿ ಸಾಗುತ್ತಿದ್ದು 2026ರ ಹೊತ್ತಿಗೆ ಬಹುತೇಕವಾಗಿ ಆರಂಭವಾಗಲಿವೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಹೇಳಿದ್ದಾರೆ.
ಈ ಸಂಬಂಧ ಹುಬ್ಬಳ್ಳಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು, ತುಮಕೂರು- ಚಿತ್ರದುರ್ಗ ನಡುವಿನ ರೈಲು ಮಾರ್ಗದ ಕಾಮಗಾರಿ ಕೇವಲ 28 ಕಿಲೋ ಮೀಟರ್ ಅಷ್ಟೇ ಬಾಕಿ ಇದೆ. 2026ರ ಫೆಬ್ರುವರಿ ಒಳಗೆ ಇದರ ಎಲ್ಲ ಕಾಮಗಾರಿ ಮುಗಿಯುವ ಸಾಧ್ಯತೆ ಇದೆ. ಇದರಿಂದ ಧಾರವಾಡ ಹಾಗೂ ಬೆಂಗಳೂರು ನಡುವಿನ ಪ್ರಯಾಣದ ಅವಧಿ 1 ತಾಸು ಕಡಿಮೆ ಆಗಲಿದೆ ಅವರು ಹೇಳಿದ್ದಾರೆ.
ಬಾಗಲಕೋಟೆ- ಕುಡಚಿ ರೈಲು ಮಾರ್ಗದ ನಡುವಿನ ಲೋಕಾಪುರ- ದಾದನಟ್ಟಿ ಮಧ್ಯದ 6.6 ಕಿಲೋ ಮೀಟರ್​ ರೈಲು ಮಾರ್ಗದ ಕಾಮಗಾರಿ 2026 ಮಾರ್ಚ್ ಒಳಗೆ ಮುಗಿಯುತ್ತದೆ. ಇದು ಅಲ್ಲದೇ ವಿಶ್ವದ ಅತಿ ಉದ್ದದ ರೈಲ್ವೆ ಪ್ಲಾಟ್‌ಫಾರ್ಮ್ ಇರುವ ಹುಬ್ಬಳ್ಳಿಯ ಸದ್ಗುರು ಸಿದ್ಧಾರೂಢ ಸ್ವಾಮಿ ರೈಲು ನಿಲ್ದಾಣವನ್ನು ಹೈಟೆಕ್ ನಿಲ್ದಾಣವನ್ನಾಗಿ ಮೇಲ್ದರ್ಜೆಗೆ ಏರಿಸಲು ತೀರ್ಮಾನ ಮಾಡಲಾಗಿದೆ. ಅಧಿಕಾರಿಗಳು ಪ್ರಸ್ತಾವನೆ ಸಿದ್ಧಪಡಿಸಿದ್ದು, 400 ಕೋಟಿ ರೂಪಾಯಿ ಖರ್ಚು ಆಗಲಿದೆ ಎಂದು ಪ್ರಸ್ತಾವವನ್ನ ರೈಲ್ವೆ ಬೋರ್ಡ್‌ಗೆ ಸಲ್ಲಿಸಲಾಗುವುದು. ಇದಕ್ಕೆ ಒಪ್ಪಿಗೆ ನೀಡುವಂತೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮನವಿ ಮಾಡಲಾಗುವುದು ಎಂದು ಹೇಳಿದ್ದಾರೆ.
ಅರಣ್ಯ, ಪರಿಸರ ಹಾಗೂ ವನ್ಯಜೀವಿ ಮಂಡಳಿಯಿಂದ ಹುಬ್ಬಳ್ಳಿ - ಅಂಕೋಲಾ ರೈಲ್ವೆ ಯೋಜನೆಗೆ ಬೇಕಾದ ಅಗತ್ಯವಾಗಿರುವ ಸಲಹೆಗಳನ್ನ ಪಡೆಯಲಾಗಿದೆ. 17,140 ಕೋಟಿ ರೂಪಾಯಿ ವೆಚ್ಚದ ಹೊಸ ಡಿಪಿಆರ್ ಸಲ್ಲಿಸಲಾಗಿದೆ. ಇದಕ್ಕೆ ಕೇವಲ ಸಂಸತ್ತಿನ ಒಪ್ಪಿಗೆ ಮಾತ್ರ ಬಾಕಿ ಇದೆ. ಕ್ಯಾಬಿನೆಟ್​ನಿಂದ ಒಪ್ಪಿಗೆ ಸಿಕ್ಕ ಕೂಡಲೇ ಕಾಮಗಾರಿ ಪ್ರಾರಂಭವಾಗುತ್ತದೆ ಎಂದು ಹೇಳಿದ್ದಾರೆ.
ಈ ಯೋಜನೆಗೆ ಜಾರಿ ಆಗುತ್ತಿದ್ದಂತೆ ಅಂಕೋಲಾದ ಬೇಲೆಕೇರಿ ಸೇರಿ 2 ಕಡೆ ಬಂದರು ನಿರ್ಮಾಣ ಮಾಡುವ ಯೋಜನೆ ರೂಪಿಸಲಾಗಿದೆ. ರೈಲ್ವೆ, ರಸ್ತೆ ಹಾಗೂ ವಾಯು ಮಾರ್ಗಕ್ಕಿಂತ ಬಂದರಿನಿಂದ ವ್ಯಾಪಾರ, ವಹಿವಾಟು ಹೆಚ್ಚಾಗಲಿದೆ. ಉತ್ತರ ಕರ್ನಾಟಕ ಭಾಗದ ಕೈಗಾರಿಕಾ ಬೆಳವಣಿಗೆಗೆ ಅನುಕೂಲ ಅಗಲಿದೆ. ಉತ್ತರ ಕರ್ನಾಟಕದ ಅಭಿವೃದ್ಧಿಯ ಬಾಗಿಲು ತೆರೆದುಕೊಳ್ಳುತ್ತದೆ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ