/newsfirstlive-kannada/media/media_files/2025/10/04/vij_lpg-2025-10-04-16-26-51.jpg)
ವಿಜಯನಗರ: ಹೊಸಪೇಟೆಯ ಗಾದಿಗನೂರು ಗ್ರಾಮದಲ್ಲಿ ಸಿಲಿಂಡರ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಿಬ್ಬರು ಜೀವ ಕಳೆದುಕೊಂಡಿದ್ದಾರೆ. ಸಾವಿನ ಸಂಖ್ಯೆ 4ಕ್ಕೆ ಏರಿಕೆ ಆಗಿದೆ.
ಗಾದಿಗನೂರು ಗ್ರಾಮದ ಕವಿತಾ (30), ಮೈಲಾರಪ್ಪ (45) ಜೀವ ಬಿಟ್ಟವರು. ಜಿಲ್ಲೆಯ ಹೊಸಪೇಟೆ ತಾಲೂಕಿನ ಗಾದಿಗನೂರು ಗ್ರಾಮದಲ್ಲಿ ಸೆಪ್ಟೆಂಬರ್​ 27ರಂದು ಸಿಲಿಂಡರ್ ಸ್ಫೋಟಗೊಂಡು 11 ಜನರು ಗಂಭೀರವಾಗಿ ಗಾಯಗೊಂಡಿದ್ದರು. ಇದರಲ್ಲಿ 7 ಗಾಯಾಳುಗಳನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಸದ್ಯ ಈ 7 ಜನರಲ್ಲಿ ನಾಲ್ವರು ಕೊನೆಯುಸಿರೆಳೆದಿದ್ದಾರೆ.
ಕವಿತಾ ಹಾಗೂ ಮೈಲಾರಪ್ಪಗೆ ಸುಟ್ಟಗಾಯಗಳು ಹೆಚ್ಚಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ತೋರಣಗಲ್ಲು ಸಂಜೀವಿನ ಆಸ್ಪತ್ರೆಯಿಂದ ಆ್ಯಬುಲೆನ್ಸ್​ ಮೂಲಕ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ತಂದು ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಿಸದೇ ಇಬ್ಬರು ಮಧ್ಯರಾತ್ರಿ ನಿಧನರಾಗಿದ್ದಾರೆ. ಇಂದು ಸಂಜೆಯೊಳಗೆ ಮೃತದೇಹಗಳನ್ನು ಸ್ವಗ್ರಾಮಕ್ಕೆ ರವಾನೆ ಮಾಡುವ ಸಾಧ್ಯತೆ ಇದೆ.
ನಿನ್ನೆ ರಾತ್ರಿ ವಿಕ್ಟೋರಿಯಾ ಆಸ್ಪತ್ರೆಯಿಂದ ವಕೀಲ ಹಾಲಪ್ಪ ಹಾಗೂ ತಾಯಿ ಗಂಗಮ್ಮ ಅವರ ಮೃತದೇಹ ಸ್ವಗ್ರಾಮಕ್ಕೆ ರವಾನಿಸಿ ಅಂತಿಮ ಸಂಸ್ಕಾರ ನಡೆಸಲಾಗಿತ್ತು. ಇದರ ಬೆನ್ನಲ್ಲೇ ಮತ್ತಿಬ್ಬರ ಮೃತದೇಹಗಳನ್ನು ಗ್ರಾಮಕ್ಕೆ ರವಾನೆ ಮಾಡಲಾಗುತ್ತದೆ. ಈ ಘಟನೆಯಲ್ಲಿ ಒಟ್ಟು ನಾಲ್ವರು ಕಣ್ಮುಚ್ಚಿದಂತೆ ಆಗಿದ್ದು 11 ಜನರ ಪೈಕಿ ಇನ್ನು 7 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ