/newsfirstlive-kannada/media/media_files/2025/11/26/muruga-math-shivamurthy-swamiji-acquitted-1-2025-11-26-16-31-56.jpg)
ಪೋಕ್ಸೋ ಕೇಸ್ ನಲ್ಲಿ ಶಿವಮೂರ್ತಿ ಸ್ವಾಮೀಜಿ ನಿರಪರಾಧಿ-ಕೋರ್ಟ್
ಚಿತ್ರದುರ್ಗದ 2ನೇ ಹೆಚ್ಚುವರಿ ಜಿಲ್ಲಾ ಕೋರ್ಟ್ ಇಂದು ಮುರುಘಾ ಮಠದ ಪೀಠಾಧಿಪತಿಯಾಗಿದ್ದ ಶಿವಮೂರ್ತಿ ಸ್ವಾಮೀಜಿ ವಿರುದ್ಧದ ದಾಖಲಾಗಿದ್ದ ಮೊದಲ ಪೋಕ್ಸೋ ಕೇಸ್ ನಲ್ಲಿ ಖುಲಾಸೆಗೊಳಿಸಿ ತೀರ್ಪು ನೀಡಿದೆ. ಪ್ರಾಸಿಕ್ಯೂಷನ್ ಸ್ವಾಮೀಜಿ ವಿರುದ್ಧದ ಆರೋಪವನ್ನು ಕೋರ್ಟ್ ನಲ್ಲಿ ಅನುಮಾನಕ್ಕೆ ಅತೀತವಾಗಿ ಸಾಬೀತುಪಡಿಸಲು ವಿಫಲವಾಗಿದೆ. ತಾಂತ್ರಿಕ, ವೈಜ್ಞಾನಿಕ ಸಾಕ್ಷ್ಯಗಳ ಮೂಲಕ ಆರೋಪವನ್ನು ಸಾಬೀತುಪಡಿಸುವ ಹೊಣೆಗಾರಿಕೆ ಪ್ರಾಸಿಕ್ಯೂಷನ್ ಪರ ವಕೀಲರು ಮತ್ತು ಕೇಸ್ ತನಿಖೆ ನಡೆಸಿದ್ದ ಪೊಲೀಸರ ಮೇಲೆ ಇತ್ತು. ಆದರೇ, ಪ್ರಾಸಿಕ್ಯೂಷನ್ ಪರ ವಕೀಲರು ಮತ್ತು ಪೊಲೀಸರು ಆರೋಪ ಸಾಬೀತುಪಡಿಸಲು ವಿಫಲವಾಗಿದ್ದಾರೆ. ಇದರಿಂದಾಗಿ ಮುರುಘಾ ಮಠದ ಶಿವಮೂರ್ತಿ ಸ್ವಾಮೀಜಿ ಮೊದಲ ಪೋಕ್ಸೋ ಕೇಸ್ ನಲ್ಲಿ ನಿರಪರಾಧಿ ಎಂದು ಕೋರ್ಟ್ ತೀರ್ಪು ನೀಡಿದೆ.
ಈಗ ಮುಂದೇನು? ಹೈಕೋರ್ಟ್ ಗೆ ಹೋಗ್ತಾರಾ?
ಈಗ ತೀರ್ಪಿನ ಪ್ರತಿಯನ್ನು ಪಡೆದು ಸಂಪೂರ್ಣವಾಗಿ ಅಧ್ಯಯನ ಮಾಡುವುದಾಗಿ ಸಂತ್ರಸ್ತೆಯರ ಪರ ವಕೀಲ ಶ್ರೀನಿವಾಸ್ ಹೇಳಿದ್ದಾರೆ. ತೀರ್ಪು ಅಧ್ಯಯನ ನಡೆಸಿದ ಬಳಿಕ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸುವ ಬಗ್ಗೆ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದ್ದಾರೆ.
ಹೀಗಾಗಿ ತೀರ್ಪು ಅಧ್ಯಯನ ಮಾಡಿ, ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸುವ ತೀರ್ಮಾನ ಕೈಗೊಳ್ಳಬಹುದು. ಜೊತೆಗೆ ರಾಜ್ಯ ಸರ್ಕಾರವು ಪ್ರಾಸಿಕ್ಯೂಷನ್ ಪರ ವಕೀಲರಿಂದ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಬಹುದು. ಸಂತ್ರಸ್ಥೆಯರಿಗೂ ಮೇಲ್ಮನವಿ ಸಲ್ಲಿಸಲು ಅವಕಾಶ ಇದೆ. ಹೀಗಾಗಿ ಕೇಸ್ ಹೈಕೋರ್ಟ್, ಸುಪ್ರೀಂಕೋರ್ಟ್ ವರೆಗೂ ಹೋಗಲಿದೆ.
ಇನ್ನೂ ಚಿತ್ರದುರ್ಗದ 2ನೇ ಜಿಲ್ಲಾ ಕೋರ್ಟ್ ನಲ್ಲಿ ಮುರುಘಾ ಮಠದ ಶಿವಮೂರ್ತಿ ಸ್ವಾಮೀಜಿ ಪರವಾಗಿ ಹಿರಿಯ ವಕೀಲ ಸಿ.ವಿ.ನಾಗೇಶ್ ವಾದ ಮಂಡನೆ ಮಾಡಿದ್ದರು. ಸಿ.ವಿ.ನಾಗೇಶ್ ಅವರು ಕ್ರಿಮಿನಲ್ ಕೇಸ್ ಗಳಲ್ಲಿ ವಾದಿಸುವುದರಲ್ಲಿ ನಿಷ್ಣಾತರು. ಕೇಸ್ ನ ವೀಕ್ ಪಾಯಿಂಟ್ ಗಳನ್ನೇ ಹಿಡಿದು ವಾದ ಮಂಡಿಸುವುದರಲ್ಲಿ ಪರಿಣಿತರು. ಜೊತೆಗೆ ತನಿಖೆಯ ಲೋಪ ದೋಷಗಳನ್ನು ಕೂಡ ಪ್ರಮುಖವಾಗಿ ಪ್ರಸ್ತಾಪಿಸಿ ವಾದ ಮಂಡಿಸುವುದರಲ್ಲಿ ಹಿರಿಯ ವಕೀಲ ಸಿ.ವಿ.ನಾಗೇಶ್ ಎಕ್ಸ್ ಫರ್ಟ್. ಹೀಗಾಗಿ ಸಿ.ವಿ.ನಾಗೇಶ್ ಅವರ ವಾದಕ್ಕೆ ಕೌಂಟರ್ ಮಾಡುವಲ್ಲಿ ಪ್ರಾಸಿಕ್ಯೂಷನ್ ಪರ ವಕೀಲರು ಕೂಡ ವಿಫಲವಾಗಿದ್ದಾರೆ.
/filters:format(webp)/newsfirstlive-kannada/media/media_files/2025/11/26/senior-advocate-cv-nagesh-2025-11-26-16-37-03.jpg)
ಶಿವಮೂರ್ತಿ ಸ್ವಾಮೀಜಿ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿ.ವಿ.ನಾಗೇಶ್
ಇನ್ನೂ ಸಿ.ವಿ.ನಾಗೇಶ್ ಆರೋಪಿ ಪರ ವಾದಿಸುವ ವಿಷಯ ಗೊತ್ತಾದ ಬಳಿಕ ರಾಜ್ಯ ಸರ್ಕಾರ, ಮತ್ತೊಬ್ಬ ಹೈ ಪ್ರೊಫೈಲ್ ವಕೀಲರನ್ನು ಪ್ರಾಸಿಕ್ಯೂಷನ್ ಪರ ವಾದ ಮಂಡನೆಗೆ ನೇಮಕ ಮಾಡಬೇಕಾಗಿತ್ತು. ಆದರೇ, ರಾಜ್ಯ ಸರ್ಕಾರ ಪ್ರಾಸಿಕ್ಯೂಷನ್ ಪರ ಹೈ ಪ್ರೊಫೈಲ್ ವಕೀಲರನ್ನು ನೇಮಿಸುವ ಆಸಕ್ತಿ ವಹಿಸಿಲ್ಲ.
ಇನ್ನೂ ಪೋಕ್ಸೋ ಕೇಸ್ ನ ತನಿಖೆಯಲ್ಲೂ ಲೋಪಗಳಾಗಿರಬಹುದು. ಪ್ರಭಾವಿಗಳ ಒತ್ತಡಕ್ಕೆ ಮಣಿದು ಪೊಲೀಸ್ ಅಧಿಕಾರಿಗಳು ತನಿಖೆಯನ್ನು ಸರಿಯಾಗಿ ಮಾಡದೇ, ಸರಿಯಾಗಿ ಸಾಕ್ಷ್ಯ ಸಂಗ್ರಹಿಸದೇ, ತನಿಖೆಯನ್ನೇ ಹಳ್ಳ ಹಿಡಿಸಿರಬಹುದು ಎಂಬ ಅನುಮಾನ ವ್ಯಕ್ತವಾಗುತ್ತಿದೆ.
ಪ್ರಬಲವಾದ ಚಾರ್ಜ್ ಷೀಟ್ ಸಲ್ಲಿಸದೇ, ವಕೀಲರು ಮಾತ್ರವೇ ಕೋರ್ಟ್ ನಲ್ಲಿ ಪ್ರಬಲ ವಾದ ಮಂಡನೆ ಮಾಡಲು ಆಗಲ್ಲ. ಪೋಕ್ಸೋ ಕೇಸ್ ನಲ್ಲಿ ಸಂತ್ರಸ್ಥೆಯರ ಹೇಳಿಕೆಯನ್ನು ಕೋರ್ಟ್ ಅನುಮಾನಿಸುವುದಿಲ್ಲ. ಆದರೇ, ಅದಕ್ಕೆ ಪೂರಕವಾದ ಸಾಕ್ಷ್ಯಾಧಾರಗಳು ಕೂಡ ಬೇಕು. ಆ ತಾಂತ್ರಿಕ ಮತ್ತು ವೈಜ್ಞಾನಿಕ ಸಾಕ್ಷ್ಯಗಳನ್ನು ಕೋರ್ಟ್ ಗೆ ನೀಡುವ ಕೆಲಸವನ್ನು ಪ್ರಾಸಿಕ್ಯೂಷನ್ ಟೀಮ್ ಮಾಡಬೇಕಾಗಿತ್ತು. ತಾಂತ್ರಿಕ ಮತ್ತು ವೈಜ್ಞಾನಿಕ ಸಾಕ್ಷ್ಯಗಳನ್ನು ಸರಿಯಾಗಿ ಕೋರ್ಟ್ ಗೆ ಸಲ್ಲಿಸದೇ ಇದ್ದರೇ, ಆರೋಪಿ ನಿರಪರಾಧಿ ಅಂತಾನೇ ಕೋರ್ಟ್ ತೀರ್ಪು ನೀಡುವುದು ಸಹಜ . ಈಗ ಮುರುಘಾ ಮಠದ ಶಿವಮೂರ್ತಿ ಸ್ವಾಮೀಜಿ ವಿರುದ್ಧದ ಕೇಸ್ ನಲ್ಲೂ ತಾಂತ್ರಿಕ ಮತ್ತು ವೈಜ್ಞಾನಿಕ ಸಾಕ್ಷ್ಯಗಳನ್ನು ಸಂಗ್ರಹಿಸಿ ಕೋರ್ಟ್ ಗೆ ಸಲ್ಲಿಸುವ ಕೆಲಸವನ್ನು ಪೊಲೀಸರು ಮತ್ತು ಪ್ರಾಸಿಕ್ಯೂಷನ್ ಟೀಮ್ ಸರಿಯಾಗಿ ಮಾಡದೇ ಇರಬಹುದು ಎಂಬ ಶಂಕೆ ಈಗ ಕೋರ್ಟ್ ತೀರ್ಪಿನ ಬಳಿಕ ವ್ಯಕ್ತವಾಗುತ್ತಿದೆ.
ಆದರೇ, ಜಿಲ್ಲಾ ಕೋರ್ಟ್ ತೀರ್ಪು ಅಂತಿಮವಲ್ಲ. ಈ ತೀರ್ಪಿನ ವಿರುದ್ಧ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸುವ ಅವಕಾಶ ಪ್ರಾಸಿಕ್ಯೂಷನ್ ಪರ ವಕೀಲರು ಮತ್ತು ಸಂತ್ರಸ್ಥೆಯರ ಪರ ವಕೀಲರಿಗೆ ಇದೆ. ಪ್ರಾಸಿಕ್ಯೂಷನ್ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲು ರಾಜ್ಯದ ಗೃಹ ಇಲಾಖೆಯ ಒಪ್ಪಿಗೆ ಬೇಕಾಗುತ್ತೆ. ಸಂತ್ರಸ್ಥೆಯರು ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸುವ ಬಗ್ಗೆ ಸ್ವತಂತ್ರವಾಗಿ ತೀರ್ಮಾನ ಕೈಗೊಳ್ಳಬಹುದು.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us