/newsfirstlive-kannada/media/media_files/2025/09/29/bng_ullala-2025-09-29-20-39-46.jpg)
ಬೆಂಗಳೂರು: ಹೆಂಡತಿಯ ಜೀವ ತೆಗೆದ ಗಂಡ, ತಾನು ಕೂಡ ಪ್ರಾಣ ಬಿಟ್ಟಿರುವ ಘಟನೆ ಸಿಲಿಕಾನ್ ಸಿಟಿಯ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯ ಉಲ್ಲಾಳ ಮುಖ್ಯ ರಸ್ತೆಯಲ್ಲಿ ನಡೆದಿದೆ.
ಖಾಸಗಿ ಆಸ್ಪತ್ರೆ ನರ್ಸ್ ಮಂಜು (27) ಜೀವ ಬಿಟ್ಟ ಮಹಿಳೆ. ಈಕೆಯ ಗಂಡ ಧರ್ಮ ಶಿಲಾಂ (30) ಸಾವಿಗೆ ಶರಣಾದವರು. ತಮಿಳುನಾಡಿನ ಕಲ್ಲಕುರುಚ್ಚಿಯವರಾದ ಮಂಜು ಹಾಗೂ ಧರ್ಮಶಿಲಾಂ ದಂಪತಿ 3 ವರ್ಷಗಳ ಹಿಂದೆ ಮದುವೆ ಆಗಿದ್ದರು. ಆದರೆ ಈ ದಂಪತಿಗೆ ಮಕ್ಕಳು ಆಗಿರಲಿಲ್ಲ. ಮದುವೆ ನಂತರ ದುಬೈಗೆ ತೆರಳಿ ಅಲ್ಲಿ ಮೇಸ್ತ್ರಿ ಕೆಲಸ ಮಾಡುತ್ತಿದ್ದನು. ಒಂದು ತಿಂಗಳ ಹಿಂದೆ ದುಬೈ ಬಿಟ್ಟು ಬೆಂಗಳೂರಿಗೆ ಬಂದು ಇಲ್ಲಿಯೂ ಮೇಸ್ತ್ರಿ ಕೆಲಸ ಮುಂದುವರೆಸಿದ್ದನು.
ದಂಪತಿ ಉದ್ಯಾನನಗರಿಯ ಉಲ್ಲಾಳ ಮುಖ್ಯರಸ್ತೆಯಲ್ಲಿ ಬಾಡಿಗೆ ಮನೆಯೊಂದರಲ್ಲಿ ಪತ್ನಿ ಹಾಗೂ ಆಕೆ ತಂದೆ ಜೊತೆ ವಾಸವಿದ್ದನು. ಆದರೆ ನಿನ್ನೆ ಮನೆಯಲ್ಲಿ ಯಾವುದೋ ವಿಷಯಕ್ಕೆ ಹಾಲ್‌ನಲ್ಲಿ ಗಂಡ- ಹೆಂಡತಿ ನಡುವೆ ಗಲಾಟೆ ಆಗಿದೆ. ಆಗ ಹೆಂಡತಿಗೆ 7-8 ಬಾರಿ ಚಾಕುವಿನಿಂದ ಚುಚ್ಚಿದ್ದಾನೆ. ಇದರಿಂದ ರಕ್ತದ ಮಡುವಿನಲ್ಲೇ ಪತ್ನಿ ನರಳಾಡಿ ಜೀವ ಬಿಟ್ಟಿದ್ದಾಳೆ.
ಇದರಿಂದ ಭಯಭೀತರಾದ ಧರ್ಮಶಿಲಾಂ, ಹಾಲ್‌ನಲ್ಲಿರುವ ಪ್ಯಾನ್​ಗೆ ನೈಲಾನ್ ಹಗ್ಗದಿಂದ ನೇಣು ಹಾಕಿಕೊಂಡು ಪ್ರಾಣ ಬಿಟ್ಟಿದ್ದಾನೆ. ಈ ಇಬ್ಬರು ಹೀಗೆ ಮಾಡುವಾಗ ಮಹಿಳೆಯ ತಂದೆ ಮನೆಯಲ್ಲಿ ಇರಲಿಲ್ಲ. ಸಂಬಂಧಿಕರ ಮನೆಗೆ ಮಂಜು ತಂದೆ ಪೆರಿಯಾಸ್ವಾಮಿ ಹೋಗಿ, ಸಂಜೆ ಮರಳಿ ಬಂದಿದ್ದರು. ಎಷ್ಟೇ ಬಾಗಿಲು ಬಡಿದರು ತೆಗೆಯಲಿಲ್ಲ. ಆಗ ಓನರ್ ಬಳಿಗೆ ಹೋಗಿ ಇನ್ನೊಂದು ಕೀ ತಂದು ಬಾಗಿಲು ತೆರೆದಾಗ ವಿಷಯ ಬೆಳಕಿಗೆ ಬಂದಿದೆ.
ಹಾಲ್ ನಲ್ಲಿ ಗಂಡ ಹೆಂಡತಿ ಇಬ್ಬರೂ ಜೀವ ಬಿಟ್ಟಿದ್ದರು. ಈ ಸಂಬಂಧ ಮಂಜು ತಂದೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಜ್ಞಾನಭಾರತಿ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದ್ದು ಪೊಲೀಸರ ತನಿಖೆಯಿಂದ ಇದಕ್ಕೆ ಕಾರಣ ತಿಳಿದು ಬರಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ